ಸದ್ಯದಲ್ಲೇ 1 ರಿಂದ 5ನೇ ತರಗತಿ ಶಾಲೆ ತೆರೆಯುತ್ತೇವೆ: ಬಿ.ಸಿ ನಾಗೇಶ್

ಶಿವಮೊಗ್ಗ: 1 ರಿಂದ 5ನೇ ತರಗತಿಯವರೆಗೆ ಶಾಲೆ ಆರಂಭಿಸುವ ವಿಚಾರವಾಗಿ ತಾಂತ್ರಿಕ ಸಭೆ ಸದ್ಯದಲ್ಲಿಯೇ ಮಾಡುತ್ತಿದ್ದೇವೆ. ತಾಂತ್ರಿಕ ಸಮಿತಿ ಸಭೆ ಅನುಮತಿ ನೀಡಿದ ನಂತರ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, 6, 7, 8ನೇ ತರಗತಿಗಳನ್ನು ನಮ್ಮ ಶಿಕ್ಷಕರು ನಡೆಸಿದಂತಹ ರೀತಿ ನೋಡಿ ತುಂಬ ಸಂತೋಷವಾಗಿದೆ. ಖಂಡಿತ ಸದ್ಯದಲ್ಲೇ 1 ರಿಂದ 5ನೇ ತರಗತಿ ವರೆಗೆ ಶಾಲೆ ತೆರೆಯುವ ಬಗ್ಗೆ ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡ್ತೇವೆ ನಂತರ ಆರಂಭಿಸುತ್ತೇವೆ ಎಂದರು. ಇದನ್ನೂ ಓದಿ: ಸುದೀಪ್ ಒಬ್ಬ ನಟರಾಗುತ್ತಾರೆ ಅಂತ ಅಂದುಕೊಂಡಿರಲಿಲ್ಲ: ಬೊಮ್ಮಾಯಿ

ಪಠ್ಯ ಕಡಿತಗೊಳಿಸುವ ವಿಚಾರವಾಗಿ ಮಾತನಾಡಿ, ಬ್ರಿಡ್ಜ್ ಕೋರ್ಸ್ ಮಾಡುತ್ತಿದ್ದೇವೆ. ಸಿಲೆಬಸ್ ಪೂರ್ತಿ ಮಾಡಿದರೆ ಮಕ್ಕಳಿಗೆ ಲಾಭ. ಒಂದೂವರೆ ವರ್ಷ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಅದನ್ನು ಬ್ರಿಡ್ಜ್ ಕೋರ್ಸ್ ನಲ್ಲಿ ಪೂರ್ಣಗೊಳಿಸಬೇಕಿದೆ. ಈ ವರ್ಷವು ಪಠ್ಯ ಕಡಿತಗೊಳಿಸಿದರೆ ಮುಂದಿನ ತರಗತಿಗಳಿಗೆ ತೊಂದರೆ ಆಗುತ್ತದೆ. ಹೀಗಾಗಿ ಆ ಬಗ್ಗೆ ಯಾವ ನಿರ್ಣಯ ಕೈಗೊಂಡಿಲ್ಲ. ಶಿಕ್ಷಕರ ರಜೆ ಕಡಿಮೆ ಮಾಡಿ ಸಿಲೆಬಸ್ ಪೂರ್ಣಗೊಳಿಸಬಹುದಾ ಎಂಬ ಬಗ್ಗೆ ಯೋಚನೆ ಇದೆ. ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಕರ ಸಹಕಾರ ನೋಡಿ, ಅವಶ್ಯಕತೆ ಬಿದ್ದರೆ ನಿರ್ಣಯ ಕೈಗೊಳ್ಳುತ್ತೇವೆ. ಪಠ್ಯ ಕಡಿತಗೊಳಿಸುವ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಕೇರಳದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಮಂಗಳೂರು, ಉಡುಪಿಯಲ್ಲಿ ಕಡಿಮೆ ಆಗುತ್ತಿದೆ. ಶಾಲೆ ಪ್ರಾರಂಭ ಮಾಡಿರುವ ಸರ್ಕಾರಕ್ಕೆ ಕೋವಿಡ್ ಹೆಚ್ಚಳವಾದರೆ ತಕ್ಷಣ ನಿಲ್ಲಿಸುವ ಅವಕಾಶ ಇದೆ. ಈ ಬಗ್ಗೆ ಕೊರೊನಾ ಹೆಚ್ಚಾದ ಸಂದರ್ಭದಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ಕಳೆದ ಮೂರು ವರ್ಷದಿಂದ ಶಿಕ್ಷಕರ ವರ್ಗಾವಣೆ ನೆನೆಗುದಿಗೆ ಬಿದ್ದಿದೆ. ಮೂರು ವರ್ಷದಿಂದ ಸತತವಾಗಿ ಕೋರ್ಟ್ ಗೆ ಹೋಗಿ ಸ್ಟೇ ತರುತ್ತಿದ್ದಾರೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗುತ್ತಿದೆ. ಸರ್ಕಾರದಿಂದ ಕೋರ್ಟ್‍ಗೆ ಮನವಿ ಸಲ್ಲಿಸುತ್ತೇವೆ. ಸ್ಟೇ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ. ಸ್ಟೇ ತೆರವುವಾಗದಿದ್ದರೆ ಉಳಿದ ವರ್ಗಕ್ಕೆ ವರ್ಗಾವಣೆ ಪ್ರಕ್ರಿಯೆ ಮಾಡುತ್ತೇವೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಭಾರತದಲ್ಲಿ ಬುರ್ಕಾ ನಿಷೇಧಿಸಬೇಕೆಂದ ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ದೂರು

 

Source: publictv.in Source link