ಕರ್ನಾಲ್ ರೈತ ಪ್ರತಿಭಟನೆಗೆ ಮಣಿದ ಸರ್ಕಾರ – ಐಎಎಸ್ ಅಧಿಕಾರಿಯ ವಿರುದ್ಧ ತನಿಖೆಗೆ ಅಸ್ತು

ಕರ್ನಾಲ್: ಹರಿಯಾಣದ ಕರ್ನಾಲ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ರೈತ ಮುಖಂಡರು ವಾಪಸ್ ಪಡೆದಿದ್ದಾರೆ. ರೈತ ಮುಖಂಡರು ಮತ್ತು ರಾಜ್ಯ ಸರ್ಕಾರದ ನಡುವೆ ನಡೆದ ನಾಲ್ಕನೇ ಸುತ್ತಿನ ಮಾತುಕತೆ ಬಳಿಕ ಸರ್ಕಾರ ಹಲವು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಕೈ ಬಿಡಲು ನಿರ್ಧರಿಸಲಾಗಿದೆ.

ಬಸ್ತಾರಾ ಟೋಲ್ ಪ್ಲಾಜಾದಲ್ಲಿ ಆಗಸ್ಟ್ 28 ರಂದು ಪೊಲೀಸರು ನಡೆಸಿದ ಲಾಠಿಚಾರ್ಜ್‍ನಲ್ಲಿ ರೈತ ಸುಶೀಲ್ ಕಾಜಲ್ ಸಾವನ್ನಪ್ಪಿದರು. ಈ ಘಟನೆಯಲ್ಲಿ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಪಾತ್ರ ಇದೆ, ಪ್ರತಿಭಟನಾ ನಿರತ ರೈತರ ತಲೆ ಒಡೆಯಿರಿ ಎಂದು ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿವಾದಾತ್ಮಕ ಆದೇಶ ನೀಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: 46 ವರ್ಷದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ

ವಿವಾದಿತ ಹೇಳಿಕೆ ನೀಡಿದ್ದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇಂದು ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಹಿರಿಯ ಐಎಎಸ್ ಅಧಿಕಾರಿ ದೇವೇಂದ್ರ ಸಿಂಗ್ ಭಾಗಿಯಾಗಿದ್ದರೇ, ರೈತ ಒಕ್ಕೂಟದ ನಾಯಕ ಗುರ್ನಾನಾಮ್ ಸಿಂಗ್ ಚಧುನಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ರೈತರ ಬೇಡಿಕೆಗೆ ಸರ್ಕಾರ ಒಪ್ಪಿರುವುದಾಗಿ ಹಿರಿಯ ಐಎಎಸ್ ಅಧಿಕಾರಿ ದೇವೇಂದ್ರ ಸಿಂಗ್ ತಿಳಿಸಿದರು. ಕರ್ನಾಲ್ ಲಾಠಿಚಾರ್ಜ್ ಪ್ರಕರಣದ ಕುರಿತು ಸಮಗ್ರ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಡೆಸಲಾಗುವುದು ಮತ್ತು ಮೃತ ರೈತ ಸುಶೀಲ್ ಕಾಜಲ್ ಕುಟುಂಬದ ಇಬ್ಬರು ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ಅವರು ನೀಡಿದರು. ತನಿಖೆ ನಡೆಯುವವರೆಗೂ ವಿವಾದಾತ್ಮಕ ಹೇಳಿಕೆ ನೀಡಿದ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ರಜೆಯಲ್ಲಿ ಇರಳಿದ್ದಾರೆ ಎಂದು ದೇವೇಂದ್ರ ಸಿಂಗ್ ತಿಳಿಸಿದರು. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

Source: publictv.in Source link