ಬೆಳಗಾವಿಗೆ ಶಿಫ್ಟ್ ಆಗುತ್ತಂತೆ ಮಂಡ್ಯ ಮೈಷುಗರ್ ಕಾರ್ಖಾನೆ..? ರೈತರ ಆಕ್ರೋಶ

ಬೆಳಗಾವಿಗೆ ಶಿಫ್ಟ್ ಆಗುತ್ತಂತೆ ಮಂಡ್ಯ ಮೈಷುಗರ್ ಕಾರ್ಖಾನೆ..? ರೈತರ ಆಕ್ರೋಶ

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಮೈಷುಗರ್ ಕಾರ್ಖಾನೆ ಸ್ಥಗಿತಗೊಂಡಿದ್ದು, ಮತ್ತೆ ಕಾರ್ಖಾನೆ ಆರಂಭಿಸಲು ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ. ಅದಾಗಲೇ ಮಂಡ್ಯದ ಕಬ್ಬು ಸಂಶೋಧನಾ ಕೇಂದ್ರ ಹಾಗೂ ಸಕ್ಕರೆ ಆಯುಕ್ತರ ಕಚೇರಿಯನ್ನ ಬೇರೆಡೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದೀಗ ಇದು ಮಂಡ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಡ್ಯ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಮೊದಲೇ ಮೈಷುಗರ್ ಕಾರ್ಖಾನೆ ಸ್ಥಬ್ಧಗೊಂಡು ಹಲವು ವರ್ಷಗಳೆ ಕಳೆದಿದೆ. ಮತ್ತೆ ಕಾರ್ಖಾನೆ ಪುನರಾರಂಭಿಸುವಂತೆ‌ ಹೋರಾಡ್ತಿದ್ದಾರೆ. ಈ ಬೆನ್ನಲ್ಲೇ, ಮಂಡ್ಯದಲ್ಲಿರುವ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನಲ್ಲಿರುವ ಸಂಸ್ಥೆಯ ಆಯುಕ್ತರ ಕಚೇರಿಯನ್ನ ಬೆಳಗಾವಿಗೆ ಸ್ಥಳಾಂತರಿಸಲು ಮುಂದಾಗಿದೆಯಂತೆ.

ರಾಜ್ಯ ಸರ್ಕಾರದ ಈ ತೀರ್ಮಾನ ಇದೀಗ ಮಂಡ್ಯ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಯಾವುದೇ ಕಾರಣಕ್ಕು ಸಂಶೋಧನಾ ಸಂಸ್ಥೆ ಸ್ಥಳಾಂತರಿಸದೆ ಯಥಾಸ್ಥಿತಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕಬ್ಬು ಸಂಶೋಧನಾ ಸಂಸ್ಥೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಲ್ಪನೆಯಂತೆ ಕಳೆದು ಹದಿನೈದು ವರ್ಷದ ಹಿಂದೆ ಪ್ರಾರಂಭವಾಗಿದೆ. ಕಬ್ಬಿನ ಹಲವಾರು ತಳಿಗಳು, ಇಳುವರಿ ನೀಡುವ ವಿವಿಧ ತಳಿ ಕಬ್ಬನ್ನು ರೈತರಿಗೆ ಪರಿಚಯಿಸಿದೆ. ಈ ಕೇಂದ್ರದಿಂದ ಮಂಡ್ಯವಲ್ಲದೇ ಹಳೆ ಮೈಸೂರು ಭಾಗದ ರೈತರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದ್ರೆ ಇದೀಗ ಸ್ಥಳಾಂತರಿಸಿದ್ರೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚಾಗಲಿದೆ.

ಕಬ್ಬು ಸಂಶೋಧನಾ ಸಂಸ್ಥೆ ಉಳಿವಿಗಾಗಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿರುವ ರೈತರು, ಸದನದಲ್ಲಿ ಜಿಲ್ಲೆಯ ಶಾಸಕರು ಧ್ವನಿ ಎತ್ತದಿದ್ರೆ, ಜಿಲ್ಲೆಗೆ ಬಂದಾಗ ಘೇರಾವ್ ಹಾಕುತ್ತೇವೆ‌‌ ಎನ್ನುತ್ತಿದ್ದಾರೆ. ಕಬ್ಬು ಸಂಶೋಧನಾ ಸಂಸ್ಥೆ ಸ್ಥಳಾಂತರದಿಂದ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನಾನೂಕೂಲವಾಗಲಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ನಿಜವಾಗಿಯೂ ಚಿಂತನೆ ಮಾಡ್ಬೇಕಿದೆ.

Source: newsfirstlive.com Source link