ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?

ಬೆಂಗಳೂರು: ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಅಧಿಕಾರ ತಪ್ಪಿಸಲು ಕೇವಲ ನಾಲ್ಕು ಸ್ಥಾನ ಹೊಂದಿರುವ ಜೆಡಿಎಸ್ ಮುಂದೆ ಕಾಂಗ್ರೆಸ್ ಮಂಡಿಯೂರಲು ಸಜ್ಜಾಗಿದ್ಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಅಗತ್ಯ ಬಿದ್ದರೆ ನಾಲ್ಕು ಸ್ಥಾನ ಹೊಂದಿರುವ ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟು, ಉಪ ಮೇಯರ್ ಹುದ್ದೆಗೆ ತೃಪ್ತಿಪಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ಸಂಬಂಧ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ನೂತನ ಕಾರ್ಪೋರೇಟರ್ ಗಳ ಮನವೊಲಿಸಿದ್ದಾರೆ ಎನ್ನಲಾಗಿದೆ.

ಕೊನೆ ಘಳಿಗೆಯವರೆಗೂ ಮೇಯರ್ ಗಿರಿಗೆ ಪ್ರಯತ್ನಿಸುತ್ತೇವೆ. ಅಕಸ್ಮಾತ್ ಜೆಡಿಎಸ್ ಮೇಯರ್ ಗಿರಿ ಬೇಕೇಬೇಕು ಎಂದು ಪಟ್ಟು ಹಿಡಿದರೆ ಸದ್ಯಕ್ಕೆ ಉಪ ಮೇಯರ್ ಸ್ಥಾನ ಒಪ್ಪಿಕೊಂಡು ಮೈತ್ರಿ ಮಾಡಿಕೊಳ್ಳೋಣ. ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಸದ್ಯಕ್ಕೆ ಬಿಜೆಪಿಗೆ ಅಧಿಕಾರ ಸಿಗದಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿರಬೇಕು. ಇದಕ್ಕೆ ಸಜ್ಜಾಗಿ ಎಂದು ಕಾರ್ಪೋರೇಟರ್ ಗಳಿಗೆ ತಿಳಿಸಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆಗೆ ಕಾರ್ಪೋರೇಟರ್‍ಗಳನ್ನು ಕರೆತಂದ ಪ್ರಿಯಾಂಕ್ ಖರ್ಗೆ, ಇದೇ ವಿಚಾರವನ್ನು ಮನದಟ್ಟು ಮಾಡಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ, ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯತೆ: ಸಚಿವ ಅಶೋಕ್

ಈ ಬೆನ್ನಲ್ಲೇ ಅಲರ್ಟ್ ಆದ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಕಸರತ್ತನ್ನು ತೀವ್ರಗೊಳಿಸಿದೆ. ಸಿಎಂ ಸೂಚನೆ ಮೇರೆಗೆ ಕಂದಾಯ ಸಚಿವ ಆರ್.ಅಶೋಕ್ ಬಿಡದಿಗೆ ದೌಡಾಯಿಸಿ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಬಿಜೆಪಿಗೆ ನಿಮ್ಮ ಬೆಂಬಲ ಬೇಕು ಎಂದು ಕೇಳಿದ್ದಾರೆ. ನೀವು ಜೆಡಿಎಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡುವುದಾದರೆ ಓಕೆ ಎಂದು ಕುಮಾರಸ್ವಾಮಿ ಬಿಜೆಪಿಗೆ ಷರತ್ತು ಹಾಕಿದ್ದಾರೆ ಎನ್ನಲಾಗಿದೆ.

ಸೋಮವಾರ ಜೆಡಿಎಸ್ ತನ್ನ ನಿಲುವನ್ನು ಪ್ರಕಟಿಸುವ ಸಂಭವ ಇದೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ಬೆಂಬಲಿಸಲು ಕುಮಾರಸ್ವಾಮಿ ಒಪ್ಪಿಗೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Source: publictv.in Source link