ದೆಹಲಿಯಲ್ಲಿ ಮಳೆರಾಯನ ರೌದ್ರಾವತಾರ..46 ವರ್ಷಗಳಲ್ಲೇ ಕಂಡು ಕೇಳರಿಯದ ಮಳೆಗೆ ದೆಹಲಿ ಸ್ತಬ್ಧ

ದೆಹಲಿಯಲ್ಲಿ ಮಳೆರಾಯನ ರೌದ್ರಾವತಾರ..46 ವರ್ಷಗಳಲ್ಲೇ ಕಂಡು ಕೇಳರಿಯದ ಮಳೆಗೆ ದೆಹಲಿ ಸ್ತಬ್ಧ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಹುತೇಕ ನಗರವೇ ಮುಳುಗಿ ಹೋಗಿದೆ. ಮಳೆರಾಯನ ಅವಾಂತರಕ್ಕೆ ದೆಹಲಿಯ ಜನರು ರೋಸಿ ಹೋಗಿದ್ದಾರೆ. ರಸ್ತೆಗಳೆಲ್ಲಾ ಮಳೆ ನೀರಿನಿಂದ ಹೊಳೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.

ಭಾರೀ ಮಳೆಗೆ ರಾಷ್ಟ್ರ ರಾಜಧಾನಿ ತತ್ತರಿಸಿ ಹೋಗಿದೆ. ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ವರುಣನ ಅವಕೃಪೆಗೆ ತುತ್ತಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳೆಲ್ಲಾ ಮಳೆ ನೀರು ತುಂಬಿ ನದಿಗಳಂತಾಗಿವೆ.

blank

ರಾಷ್ಟ್ರ ರಾಜಧಾನಿಯಲ್ಲಿ ಮಳೆರಾಯನ ರೌದ್ರಾವತಾರ
ದೆಹಲಿಯ ರಾಮಲೀಲಾ ಮೈದಾನ ಪ್ರದೇಶ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆಗಳಲ್ಲಿ ಜಲಾವೃತವಾಗಿ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿತ್ತು. ಮಧು ವಿಹಾರ್ ಪ್ರದೇಶದಲ್ಲಿ ಬಸ್‌ಗಳು ನೀರಿನಲ್ಲಿ ಸಿಲುಕಿಕೊಂಡಿದ್ವು. ಮೋತಿ ಬಾಗ್, ಆರ್‌ಕೆ ಪುರಂ ಸೇರಿದಂತೆ ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ವು, ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಹಲವು ವಾಹನಗಳು ರಸ್ತೆ ಮಧ್ಯೆಯೇ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಇನ್ನು ಮಿಂಟೋ ಸೇತುವೆಯ ಸುತ್ತಮುತ್ತಲಿನ ಪ್ರದೇಶವು ನೀರಿನ ಸಂಗ್ರಹದಿಂದಾಗಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿ ನೀರು ಮೊಣಕಾಲಿನವರೆಗೂ ನೀರು ನಿಂತಿರುವುದು ಕಂಡು ಬಂತು.

ದಾಖಲೆ ಮಳೆಗೆ ಮುಳುಗಿ ಹೋದ ವಿಮಾನ ನಿಲ್ದಾಣ
ದೆಹಲಿಯಲ್ಲಿ ಸರಿಸುಮಾರು 1,000 ಮಿ.ಮೀ ಮಳೆಯಾಗಿದ್ದು, ಕಳೆದ 46 ವರ್ಷಗಳಲ್ಲೇ ಇದು ದಾಖಲೆ ಮಳೆ ಎನ್ನಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಂದಿರಾಗಾಂಧಿ ವಿಮಾನ ನಿಲ್ದಾಣದ ರನ್‌ ವೇ ಕೆರೆಯಂತಾಗಿತ್ತು. ಅಲ್ಲದೇ ಭಾರೀ ಮಳೆಯಿಂದ ವಿಮಾನ ಸಂಚಾರ ರದ್ದುಗೊಂಡಿದೆ. 4 ದೇಶೀಯ ವಿಮಾನಗಳನ್ನ ಜೈಪುರ ಮತ್ತು 1 ಅಂತಾರಾಷ್ಟ್ರೀಯ ವಿಮಾನವನ್ನ ಅಹಮದಾಬಾದ್‌ನಲ್ಲಿ ಲ್ಯಾಂಡ್‌ ಮಾಡಲಾಗಿದೆ.

blank

ಇನ್ನು ದೆಹಲಿಯಲ್ಲಿ ಅಧಿಕ ಮಳೆಯಾಗುವ ಸೂಚನೆಯಿಂದ ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಿತ್ತು. ಆದ್ರೆ, ನಿರೀಕ್ಷೆಗೂ ಮೀರಿ ಭಾರೀ ಮಳೆ ಸುರಿದಿದೆ ಅಂತಾ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಕ್ಷರಧಾಮ, ಶಹಾದ್ರಾ, ಪ್ರೀತ್ ವಿಹಾರ್, ಎನ್​ಸಿಆರ್​ನ ನೊಯ್ಡಾ, ಗ್ರೇಟರ್ ನೊಯ್ಡಾ, ಗಾಜಿಯಾಬಾದ್ ಸೇರಿದಂತೆ ಹಲವು ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಮಳೆಯ ತೀವ್ರತೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇತ್ತ ಉತ್ತರಾಖಂಡ್‌ನಲ್ಲಿ ಗುಡ್ಡಕುಸಿತ ಮುಂದುವರಿದಿದೆ. ರುದ್ರಪ್ರಯಾಗ್​ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಒಟ್ಟಾರೆ, ದೆಹಲಿಯಲ್ಲಿ ನಾಲ್ಕು ದಶಕಗಳ ಬಳಿಕ ಕಂಡು ಕೇಳರಿಯದ ರೀತಿಯಲ್ಲಿ ಮಳೆರಾಯ ತನ್ನ ಪ್ರಲಾಪ ತೋರಿಸಿದ್ದಾನೆ. ಇನ್ನೂ ತನ್ನ ಪರಾಕ್ರಮವನ್ನ ಮುಂದುವರಿಸುತ್ತಾನೆ ಅಂತಾ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನೂ ನೀಡಿದೆ.

Source: newsfirstlive.com Source link