ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಆಟೋ ಡ್ರೈವರ್ ಗಳು, ಶಿಕ್ಷಕರು, ಅರ್ಚಕರಿಗೆ ಇಂದು ಕಂದಾಯ ಸಚಿವ ಆರ್.ಅಶೋಕ್ ದಿನಸಿ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೋವಿಡ್ ವ್ಯಾಪಿಸಿದ ಸಂದರ್ಭದಿಂದಲೂ ಕ್ಷೇತ್ರದ ಜನರಿಗೆ ನಿರಂತರವಾಗಿ ನೆರವು ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ಯಾರೂ ಉಪವಾಸ ಇರುವಂತೆ ಆಗಬಾರದು. ಲಾಕ್‍ಡೌನ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಉಚಿತವಾಗಿ ಊಟ ನೀಡಲಾಗಿದೆ. ಹೀಗಾಗಿ ನಾನು ನನ್ನ ಜನರ ಜೊತೆ ಸದಾ ನಿಲ್ಲುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಲಬುರಗಿ, ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಸಾಧ್ಯತೆ: ಸಚಿವ ಅಶೋಕ್

ಎಲ್ಲ ವರ್ಗದ ಜನರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ. ಲಾಕ್ ಡೌನ್ ತೆರವುಗೊಳಿಸಿದ ನಂತರವೂ ಕ್ಷೇತ್ರದ ಜನರಿಗೆ ಸತತವಾಗಿ ನೆರವು ನೀಡಲಾಗುತ್ತಿದೆ. ಇಲ್ಲಿಯವರೆಗೂ ಪೌರಕಾರ್ಮಿಕರಿಗೆ, ಆಟೋ ಡ್ರೈವರ್ ಗಳಿಗೆ, ಕೇಬಲ್, ಗ್ಯಾಸ್, ನ್ಯೂಸ್ ಪೇಪರ್, ಹಾಲು ವ್ಯಾಪಾರಿಗಳಿಗೆ, ಮೆಕ್ಯಾನಿಕ್ ಮತ್ತು ಎಲೆಕ್ಟ್ರಿಷಿಯನ್ ಸೇರಿದಂತೆ ಹಲವು ವರ್ಗದವರಿಗೆ ದಿನಸಿ ಕಿಟ್ ಮತ್ತು ಇನ್ನಿತರೆ ನೆರವು ನೀಡಲಾಗಿದೆ. ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಅವರ ಬಳಿ ಹೋಗುವುದಲ್ಲ. ನಿರಂತರವಾಗಿ ಅವರ ಯೋಗಕ್ಷೇಮ ವಿಚಾರಿಸಬೇಕು. ಆ ಕೆಲಸವನ್ನ ಮಾಡುತ್ತಿದ್ದೇನೆ ಎಂದರು.

ಪದ್ಮನಾಭನಗರ ಕ್ಷೇತ್ರದ 18 ರಿಂದ 25 ವರ್ಷದ ಯುವಕರಿಗೆ ಉಚಿತವಾಗಿ ಲಸಿಕೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂರನೇ ಅಲೆಗೆ ಈಗಾಗಲೇ ಸಿದ್ಧತೆಗಳು ನಡೆದಿವೆ. ಮಕ್ಕಳಿಗಾಗಿ ವಿಶೇಷ ಆಸ್ಪತ್ರೆಯನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ಧಪಡಿಸಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಕ್ಕಳ ಜೊತೆಗೆ ಅವರ ಪಾಲಕರು ಉಳಿದುಕೊಳ್ಳಲು ಸಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Source: publictv.in Source link