ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾತಾಡಲ್ಲ: ರೇಣುಕಾಚಾರ್ಯ

ದಾವಣಗೆರೆ: ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಬಂದಿದೆ, ಮೈತ್ರಿ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ, ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಜಿಲ್ಲಾ ಉಸ್ತುವಾರಿಗಳು ನಿರ್ಣಯ ಮಾಡುತ್ತಾರೆ. ಕಲಬುರಗಿಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮುರುಗೇಶ್ ನಿರಾಣಿಯವರು ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಾನು ಮಾತನಾಡುವುದಿಲ್ಲ, ರಾಜ್ಯ, ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಮೈತ್ರಿ ಬಗ್ಗೆ ಮಾತನಾಡುವುದಿಲ್ಲ ಎಂದರು.

ಬಿಜೆಪಿ ಸೇರಲು ಹಣದ ಅಫರ್ ಕೊಟ್ಟಿದ್ದರು ಎಂಬ ಶ್ರೀಮಂತ್ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಕಾಂಗ್ರೆಸ್, ಜೆಡಿಎಸ್ ಶಾಸಕರು ಯಡಿಯೂರಪ್ಪನವರ ನಾಯಕತ್ವ ನಂಬಿ ಬಂದಿದ್ದು. ಅಮಿತ್ ಶಾ ಬಂದಾಗ ನಾವೆಲ್ಲರೂ ಸ್ವಾಗತ ಮಾಡಿದ್ದೆವು, ಆ ಸಂದರ್ಭದಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿಲ್ಲ. ಐದು ಜನ ಶಾಸಕರು ಇದ್ದಾರೆ, ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಮೊದಲಿನಿಂದಲೂ ಕೇಳಿದ್ದೇವೆ ಎಂದರು. ಇದನ್ನೂ ಓದಿ: ಅಭಯ್ ಪಾಟೀಲ್ ಡ್ರೈವಿಂಗಲ್ಲಿ ಗೋವಿಂದ ಕಾರಜೋಳ ಹೋಗಿದ್ದೆಲ್ಲಿಗೆ..?

ಗಣೇಶ ಹಬ್ಬದ ನಂತರ ಯಡಿಯೂರಪ್ಪನವರ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪ ಒಬ್ಬ ಮೇರು ನಾಯಕ, ಪಕ್ಷವನ್ನು ಕಟ್ಟಿ ಬೆಳೆಸಿದವರು. ರಾಜ್ಯ ಪ್ರವಾಸ ಮಾಡಿದರೆ ರಾಜ್ಯ, ರಾಷ್ಟ್ರೀಯ ನಾಯಕರು ಸ್ವಾಗತ ಮಾಡುತ್ತಾರೆ. ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿದರೆ ಪಕ್ಷಕ್ಕೆ ಲಾಭ, ಕರ್ನಾಟಕದಲ್ಲಿ 150 ಸ್ಥಾನ ಬರಬೇಕು ಎನ್ನುವುದು ಯಡಿಯೂರಪ್ಪನವರ ಸಂಕಲ್ಪವಾಗಿದೆ. ಹೀಗಾಗಿ ಪಕ್ಷದ ಪರವಾಗಿ ರಾಜ್ಯ ಪ್ರವಾಸ ಮಾಡುತ್ತಾರೆ, ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿದರೆ ಬಿಜೆಪಿಗೇ ಲಾಭ, ಕುಟುಂಬಕ್ಕೆ ಅಲ್ಲ ಎಂದರು.

ಸಿ.ಪಿ.ಯೋಗೇಶ್ವರ್ ದೆಹಲಿ ಪ್ರವಾಸದ ಬಗ್ಗೆ ರೇಣುಕಾಚಾರ್ಯ ಟಾಂಗ್ ನೀಡಿದ್ದು, ನಾನು ಪಕ್ಷದ ಶಿಸ್ತಿನ ಸಿಪಾಯಿ, ಕ್ಷೇತ್ರ ಹಾಗೂ ಜನರ ಬಗ್ಗೆ ಮಾತ್ರ ಯೋಚಿಸುತ್ತೇನೆ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚಿಸೋದಿಲ್ಲ. ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗೋದು ಬಿಡೋದು ಪಕ್ಷದ ವಿಚಾರ ಎಂದರು.

Source: publictv.in Source link