ತಾಲಿಬಾನಿಗಳ ಪ್ರಮಾಣ ವಚನ ಮುಂದೋಗಿದ್ದೇಕೆ? ಅಂದುಕೊಂಡಂತೆ ಪ್ರಮಾಣ ವಚನ ನಡೆದಿದ್ರೆ ಏನಾಗ್ತಿತ್ತು ಗೊತ್ತಾ?

ತಾಲಿಬಾನಿಗಳ ಪ್ರಮಾಣ ವಚನ ಮುಂದೋಗಿದ್ದೇಕೆ? ಅಂದುಕೊಂಡಂತೆ ಪ್ರಮಾಣ ವಚನ ನಡೆದಿದ್ರೆ ಏನಾಗ್ತಿತ್ತು ಗೊತ್ತಾ?

ಸೆಪ್ಟೆಂಬರ್‌ 11 ರಂದೇ ಪ್ರಮಾಣ ವಚನ ಸಮಾರಂಭ ನಡೆಸಿ ಅಮೆರಿಕಾಗೆ ಟಕ್ಕರ್‌ ಕೊಡಲು ತಾಲಿಬಾನಿಗಳು ಸಿದ್ಧರಾಗಿದ್ರು. ಆದ್ರೆ, ದಿಢೀರ್‌ ಸಮಾರಂಭ ರದ್ದು ಮಾಡಿದ್ದು ಯಾಕೆ ಗೊತ್ತಾ? ತಾಲಿಬಾನಿಗಳು ಪಂಚ್‌ಶೀರ್‌ ಸಿಂಹದ ಸಮಾಧಿ ನಾಶ ಮಾಡಿದ್ದೇಕೆ? ಅಮ್ರುಲ್ಲಾ ಸಲೇಹ್‌ ಸಹೋದರನ ಹತ್ಯೆ ಮಾಡಿದ್ದು ಯಾರು? ಈ ಕುರಿತ ವಿಶೇಷ ವರದಿ ಇಲ್ಲಿದೆ.

ಸೆಪ್ಟೆಂಬರ್‌ 11 ಅನ್ನೋದು ಅಮೆರಿಕಾಗೆ ಕರಾಳದಿನ. ಯಾಕಂದ್ರೆ, 2001 ಸೆಪ್ಟೆಂಬರ್‌ 11 ರಂದು ಅಮೆರಿಕದ ಅವಳಿ ಗೋಪುರಕ್ಕೆ ವಿಮಾನ ನುಗ್ಗಿಸಿ ಬಾಂಬ್‌ ಸ್ಫೋಟ ನಡೆಸಲಾಗಿತ್ತು. ಅಮೆರಿಕದ ನಾಗರಿಕ ವಿಮಾನವನ್ನೇ ಹೈಜಾಕ್‌ ಮಾಡಿದ್ದ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ರು. ಈ ದುರಂತದಲ್ಲಿ ಮೂರು ಸಾವಿರ ಜನ ಸಾವನ್ನಪ್ಪಿ 25 ಸಾವಿರಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ರು. ಇದನ್ನು ಮಾಡಿದ್ದು ಅಲ್‌ಕೈದಾ ಉಗ್ರಗಾಮಿ ಬಿನ್‌ ಲಾಡೆನ್‌ ಅನ್ನೋದು ಜಗತ್ತಿಗೆ ಗೊತ್ತಿರೋ ವಿಚಾರ. ಉಗ್ರಗಾಮಿಗಳ ಈ ಕ್ರೂರ ಕೃತ್ಯ ನಡೆದು ಇಂದಿಗೆ, ಅಂದ್ರೆ, ಸೆಪ್ಟೆಂಬರ್‌ 11ಕ್ಕೆ ಸರಿಯಾಗಿ 20 ವರ್ಷವಾಗಿದೆ. ಆದ್ರೆ, ಇಂದೇ ತಾಲಿಬಾನ್‌ ಉಗ್ರರು ಪ್ರಮಾಣ ವಚನ ಸಮಾರಂಭ ನಡೆಸಿ ಅಮೆರಿಕಾಗೆ ಟಕ್ಕರ್‌ ಕೊಡಲು ಮುಂದಾಗಿದ್ರು. ಆದ್ರೆ, ದಿಢೀರ್‌ ಅಂತ ಸಮಾರಂಭ ಮುಂದೂಡಿಕೆ ಮಾಡಿದ್ದಾರೆ.

ಪ್ರಮಾಣ ವಚನ ಸಮಾರಂಭ ಮುಂದೂಡಿದ್ದು ಯಾಕೆ?

ಅಫ್ಘಾನ್‌ನಲ್ಲಿ ಅಮೆರಿಕ ಸೇನೆ ವಾಪಸ್‌ ಆಗುತ್ತಲೇ ತಾಲಿಬಾನ್‌ ಉಗ್ರರು ಆಕ್ರಮಣ ಆರಂಭಿಸಿ ಆಗಸ್ಟ್‌ 15 ರಂದು ಅಫ್ಘಾನ್‌ ವಶಪಡಿಸಿಕೊಂಡಿದ್ದಾರೆ. ಆದ್ರೆ, ಸರ್ಕಾರ ರಚನೆ ಮಾತ್ರ ಆಗಿಲ್ಲ. ಅಮೆರಿಕ ಸೇನೆ ಅಫ್ಘಾನ್‌ನಿಂದ ಸಂಪೂರ್ಣ ಹೊರಹೋದ ಮೇಲೆಯೇ ಸರ್ಕಾರ ರಚನೆ ಮಾಡುತ್ತೇವೆ ಅಂತ ತಾಲಿಬಾನ್‌ ವಕ್ತಾರರು ಹೇಳಿದ್ರು. ಅಂತೂ ಅಮೆರಿಕ ಸೇನೆ ಆಗಸ್ಟ್‌ 30 ರಂದು ತನ್ನ ನಿಯಂತ್ರಣದಲ್ಲಿ ಇದ್ದ ಕಾಬೂಲ್‌ ವಿಮಾನ ನಿಲ್ದಾಣವನ್ನು ಬಿಟ್ಟು ತೆರಳುತ್ತದೆ. ಆದ್ರೆ, ಇತ್ತ ತಾಲಿಬಾನ್‌ ಉಗ್ರರಿಂದ ಸರ್ಕಾರ ರಚನೆ ಮಾಡೋಕೆ ಇದುವರೆಗೂ ಸಾಧ್ಯವಾಗಿಲ್ಲ. ತಾಲಿಬಾನ್‌ ಮತ್ತು ತಾಲಿಬಾನ್‌ ಸಂಘಟನೆಯಲ್ಲಿಯೇ ಇರುವ ಹಕ್ಕಾನಿ ನೆಟ್ವರ್ಕ್‌ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಮಾತುಕತೆಗಳು ನಡೆಯುತ್ತಲೇ ಇವೆ. ಇದರ ನಡುವೆ ಈಗಾಗಲೇ ಅಂದ್ರೆ, ಸೆಪ್ಟೆಂಬರ್‌ 7 ರಂದು ಪ್ರಧಾನಿ, ಉಪ ಪ್ರಧಾನಿ ಸೇರಿದಂತೆ 33 ಸಚಿವರ ಸಂಪುಟವನ್ನು ಘೋಷಣೆ ಮಾಡಿಯಾಗಿದೆ.

ಮುಲ್ಲಾ ಮೊಹಮ್ಮದ್‌ ಹಸನ್‌ ಅಕುಂದ್‌ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದು, ಉಳಿದಂತೆ ಮುಲ್ಲಾ ಅಬ್ದುಲ್‌ ಘನಿ, ಮೌಲ್ವಿ ಅಬ್ದುಲ್‌ ಸಲಾಂ ಹನಾಫಿ ಉಪಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಸಚಿವ ಸಂಪುಟದಲ್ಲಿ ಮೋಸ್ಟ್‌ ವಾಂಟೆಡ್‌ ಉಗ್ರರಿಗೂ ಸ್ಥಾನ ನೀಡಲಾಗಿದ್ದು, ಅದರಲ್ಲಿಯೂ ಹಕ್ಕಾನಿ ನೆಟ್ವರ್ಕ್‌ನ ಸಿರಾಜುದ್ದಿನ್‌ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದೆ. ವಿಶೇಷ ಅಂದ್ರೆ, ಆತನ ಮಾಹಿತಿಗೆ ನೀಡಿದವರಿಗೆ 36 ಕೋಟಿ ಬಹುಮಾನವೂ ಘೋಷಣೆಯಾಗಿತ್ತು. ಈತ ಅಷ್ಟೇ ಅಲ್ಲದೇ ವಿಶ್ವ ಸಂಸ್ಥೆಯೇ ನಿಷೇಧಿಸಿದ್ದ 14 ಮಂದಿ ಉಗ್ರರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಇಷ್ಟೆಲ್ಲಾ ಸಿದ್ಧತೆಯ ನಡುವೆಯೂ ಪ್ರಮಾಣ ವಚನವನ್ನು ಮುಂದೂಡಿಕೆ ಮಾಡಲಾಗಿದೆ.

blank

ಸೆಪ್ಟೆಂಬರ್‌ 11 ರಂದೇ ಪ್ರಮಾಣ ವಚನ ನಡೆಸುವುದು ಅಮಾನವೀಯ
ಮಿತ್ರ ರಾಷ್ಟ್ರಗಳಿಂದಲೇ ತಾಲಿಬಾನಿಗೆ ಹೋಯ್ತು ಸಂದೇಶ

ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಇಂದು ಅಂದ್ರೆ ಸೆಪ್ಟೆಂಬರ್‌ 11 ಕ್ಕೆ ತಾಲಿಬಾನ್‌ ಸರ್ಕಾರ ಅಧಿಕೃತವಾಗಿ ಕಾರ್ಯಾರಂಭ ಮಾಡಬೇಕಿತ್ತು. ಮೋಸ್ಟ್‌ ವಾಂಟೆಡ್‌ ಉಗ್ರರೆಲ್ಲಾ ತಮ್ಮ ಖಾತೆಯ ಜವಾಬ್ದಾರಿ ಪಡೆಯಬೇಕಿತ್ತು. ವಿಶ್ವ ಸಂಸ್ಥೆಯೇ ನಿಷೇಧಿಸಿದ್ದ 14 ಉಗ್ರರು ಕೂಡ ತಮ್ಮ ಕಾರ್ಯ ಆರಂಭಿಸುವರಿದ್ರು. ಆದ್ರೆ, ತಾಲಿಬಾನ್‌ ಉಗ್ರರಿಗೆ ಮಿತ್ರ ರಾಷ್ಟ್ರಗಳಿಂದ ಸಂದೇಶ ಹೋಗಿತ್ತು. ಅದೇನಂದ್ರೆ, ಸೆಪ್ಟೆಂಬರ್‌ 11 ಅನ್ನೋದು ಅಮೆರಿಕಾಗೆ ಕರಾಳದಿನ, ಇಂದಿಗೆ ಆ ದುರ್ಘಟನೆ ನಡೆದು 20 ವರ್ಷವಾಗುತ್ತದೆ. ಹೀಗಾಗಿ ಇಂದೇ ಪ್ರಮಾಣ ವಚನ ಸಮಾರಂಭ ಮಾಡುವುದು ಅಮಾನವೀಯವಾಗುತ್ತದೆ ಅನ್ನೋ ಸಂದೇಶ ಹೋಗಿತ್ತು. ತಾಲಿಬಾನಿಗಳು ಪ್ರಮಾಣ ವಚನ ಸಮಾರಂಭದಿಂದ ಹಿಂದೆ ಸರಿಯಲು ಇದೂ ಒಂದು ಪ್ರಮುಖ ಕಾರಣವಾಗಿದೆ. ಹಾಗಾದ್ರೆ ಅಂತಹ ಸಂದೇಶ ಕೊಟ್ಟವರು ಯಾರು?

ಕತಾರ್‌ನಿಂದ ತಾಲಿಬಾನ್‌ಗೆ ಹೋಯ್ತು ಸಂದೇಶ
ಯಾವ ಯಾವ ರಾಷ್ಟ್ರಗಳಿಗೆ ಆಹ್ವಾನ ಹೋಗಿತ್ತು ಗೊತ್ತಾ?

ತಾಲಿಬಾನಿಗಳು ಸೆಪ್ಟೆಂಬರ್‌ 11 ರಂದೇ ಪ್ರಮಾಣ ವಚನ ಸಮಾರಂಭ ನಡೆಸಲು ತೀರ್ಮಾನಿಸಿದ್ರು. ಹೀಗಾಗಿಯೇ ಚೀನಾ, ಪಾಕಿಸ್ತಾನ, ಕತಾರ್‌, ರಷ್ಯಾ, ಟರ್ಕಿ, ಇರಾನ್‌….ದೇಶಗಳಿಗೆ ಆಹ್ವಾನ ನೀಡಿದ್ರು. ಅದರಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದು ಫಿಕ್ಸ್‌ ಆಗಿತ್ತು. ಆದ್ರೆ, ಉಳಿದ ದೇಶಗಳಿಂದ ಯಾವುದೇ ನಿರ್ಧಾರವಾಗಿರಲಿಲ್ಲ. ಯಾಕಂದ್ರೆ, ಒಮ್ಮೆ ಸಮಾರಂಭದಲ್ಲಿ ಭಾಗಿಯಾದ್ರೆ ಅಂತಹ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಹೀಗಾಗಿಯೇ ಹಿಂದೇಟು ಹಾಕುತ್ತಿದ್ವು ಎನ್ನಲಾಗಿದೆ. ಈ ನಡುವೆ ಸೆಪ್ಟೆಂಬರ್‌ 11 ರಂದೇ ಪ್ರಮಾಣ ವಚನ ನಡೆಸುವುದು ಅಮಾನವೀಯ ಅಂತ ಕತಾರ್‌ ದೇಶ ತಾಲಿಬಾನಿಗಳಿಗೆ ಸಂದೇಶ ರವಾನಿಸಿದೆ. ಹಾಗಾದ್ರೆ, ಇದೊಂದೇ ಉದ್ದೇಶಕ್ಕೆ ಸಮಾರಂಭ ಕ್ಯಾನ್ಸಲ್‌ ಆಯ್ತಾ?

ತಾಲಿಬಾನ್‌ ಸಂಘಟನೆಗಳ ನಡುವೆ ನಡೆದಿದೆ ಹಗ್ಗ ಜಗ್ಗಾಟ
ಸಮಾರಂಭ ನಡೆಸಲು ಪಟ್ಟು ಹಿಡಿದಿತ್ತು ಅಲ್‌ಖೈದಾ
ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತ

ತಾಲಿಬಾನ್‌ ಸಂಘಟನೆಯಲ್ಲಿ ಅಲ್‌ಕೈದಾ, ಹಕ್ಕಾನಿ ನೆಟ್ವರ್ಕ್‌, ತೆಹ್ರಿಕ್‌ ಇ ತಾಲಿಬಾನ್‌.ಸೇರಿದಂತೆ ಅನೇಕ ಉಗ್ರಗಾಮಿಗಳ ಗುಂಪೇ ಇದೆ. ಇದರಲ್ಲಿ ಹಿಂದೊಮ್ಮೆ ಬಿಲ್‌ ಲಾಡೆನ್‌ ನಾಯಕತ್ವ ವಹಿಸಿದ್ದ ಅಲ್‌ಕೈದಾ ಸಂಘಟನೆ ಸೆಪ್ಟೆಂಬರ್‌ 11 ರಂದೇ ಸಮಾರಂಭ ನಡೆಸಿಲು ಪಟ್ಟು ಹಿಡಿದಿತ್ತು. ಆದ್ರೆ, ತಾಲಿಬಾನ್‌ ಸಂಘಟನೆಯಲ್ಲಿಯೇ ಇರುವ ಕೆಲವು ಉಗ್ರ ಸಂಘಟನೆಗಳು ಸೆಪ್ಟೆಂಬರ್‌ 11 ರಂದು ಸಮಾರಂಭ ನಡೆಸುವುದು ಬೇಡ, ಬೇರೆ ದಿನ ನಡೆಸೋಣ ಅಂತ ಒತ್ತಾಯಿಸಿವೆ. ಇದೇ ವಿಚಾರವಾಗಿ ಹಗ್ಗ ಜಗ್ಗಾಟ ನಡೆದಿದೆ ಅಂತ ಹೇಳಲಾಗುತ್ತಿದೆ. ಅಂತಿಮವಾಗಿ ಸೆಪ್ಟೆಂಬರ್‌ 11 ರಂದು ನಡೆಯಬೇಕಿದ್ದ ಸಮಾರಂಭವನ್ನು ಮುಂದೂಡಿಕೆ ಮಾಡಿದ್ದಾರೆ.

blank

ಒಮ್ಮೆ ಪ್ರಮಾಣ ವಚನ ಸಮಾರಂಭ ಆಗಿದ್ರೆ ಏನಾಗುತ್ತಿತ್ತು?

ತಾಲಿಬಾನ್‌ ಸರ್ಕಾರದ ಪ್ರಮಾಣ ವಚನ ಸರ್ಕಾರ ಏನೋ ಮುಂದೂಡಿಕೆ ಆಗಿದೆ. ಆದ್ರೆ, ಒಮ್ಮೆ ಸಮಾರಂಭ ಆಗಿದ್ರೆ ಏನಾಗುತ್ತಿತ್ತು? ಖಂಡಿತ, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ಕೆಂಗಣ್ಣಿಗೆ ತಾಲಿಬಾನಿಗಳು ಗುರಿಯಾಗುತ್ತಿದ್ರು. ತಾಲಿಬಾನ್‌ ವಿರುದ್ಧ ಮತ್ತಷ್ಟು ಆಕ್ರೋಶ ವ್ಯಕ್ತವಾಗುತ್ತಿತ್ತು. ಅಮೆರಿಕದ ಸ್ವಾಭಿಮಾನವನ್ನೇ ಕೆಣಕಿದಂತೆ ಆಗುತ್ತಿತ್ತು. ಅಷ್ಟೇ, ಅಲ್ಲ ಸಮಯ ಸಾಧಿಸಿ ಅಮೆರಿಕ ಕೂಡ ತಿರುಗೇಟು ನೀಡುತ್ತಿತ್ತು. ಈಗಾಗಲೇ ರಾಜತಾಂತ್ರಿಕವಾಗಿ ತಾಲಿಬಾನ್‌ ಅನ್ನು ಕಟ್ಟಿಹಾಕಲು ಏನು ಮಾಡಬೇಕು ಆ ಎಲ್ಲಾ ಕೆಲಸಗಳು ನಡೆಯುತ್ತಿವೆ. ಈ ನಡುವೆ ಸೆಪ್ಟೆಂಬರ್‌ 11 ರಂದೇ ಪ್ರಮಾಣ ವಚನ ಸಮಾರಂಭ ಮಾಡಿದ್ರೆ ಅಮೆರಿಕ ರೌದ್ರಾವತಾರ ತಾಳುತ್ತಿತ್ತು.

ಒಂದು ಕಡೆ ತಾಲಿಬಾನಿಗಳು ಪ್ರಮಾಣ ವಚನ ಸಮಾರಂಭವನ್ನು ಮುದೂಡಿಕೆ ಮಾಡಿದ್ರೆ ಮತ್ತೊಂದು ಕಡೆ ತಮ್ಮ ಕ್ರೌರ್ಯವನ್ನು ಮುಂದುವರಿಸುತ್ತಿದ್ದಾರೆ. ತಾವು ಮೊದಲಿನಂತೆ ಅಲ್ಲ ಅಂತ ಹೇಳುತ್ತಿದ್ದವರ ಒಂದೊಂದೆ ಪೈಶಾಚಿಕ ಕೃತ್ಯಗಳು ಬಹಿರಂಗವಾಗುತ್ತಿವೆ.

ಪಂಜ್‌ಶೀರ್‌ ಸಿಂಹ ಅಹ್ಮದ್‌ ಶಾ ಸಮಾಧಿ ನಾಶ

ಅಫ್ಘಾನ್‌ನ 34 ಪ್ರಾಂತ್ಯಗಳಲ್ಲಿ ಪಂಜ್‌ಶೀರ್‌ ಪ್ರಾಂತ್ಯ ಕೂಡ ಒಂದಾಗಿದೆ. ಈ ಪ್ರಾಂತ್ಯ 7 ಜಿಲ್ಲೆಗಳನ್ನು ಒಳಗೊಂಡಿದೆ 1.70 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಪಂಚ್‌ಶೀರ್‌ ಜನರಿಗೆ ಅಹ್ಮದ್‌ ಶಾ ಅಂದ್ರೆ ಶೌರ್ಯದ ಸಂಕೇತ. ಮಿಲಿಟರಿ ಅಧಿಕಾರಿಯಾಗಿ, ರಾಜಕಾರಣಿಯಾಗಿ ಸೇವೆ ಸಲ್ಲಿಸಿದವರು ಅಹ್ಮದ್‌ ಶಾ ಆಗಿದ್ದಾರೆ. ಅದರಲ್ಲಿಯೂ ಪಂಜಶೀರ್‌ಗಾಗಿಯೇ ವಿಶೇಷ ಪಡೆ ಕಟ್ಟಿಕೊಂಡು ಸೋವಿಯತ್‌ ಒಕ್ಕೂಟದ ವಿರುದ್ಧ ಹೋರಾಟ ನಡೆಸಿದವರು, ತಾಲಿಬಾನಿಗಳ ವಿರುದ್ಧ ಹೋರಾಟ ನಡೆಸಿದವರು. ಇವರ ಹೋರಾಟದಿಂದಾಗಿಯೇ ಸೋವಿಯತ್‌ ಒಕ್ಕೂಟಕ್ಕೆ ಆಗಲಿ, 1996 ರಿಂದ 2001ರ ವರೆಗೆ ಅಫ್ಘಾನ್‌ನಲ್ಲಿ ಸರ್ಕಾರ ಮಾಡಿದ ತಾಲಿಬಾನ್‌ ಉಗ್ರರಿಗೆ ಆಗಲಿ ಪಂಜ್‌ಶೀರ್‌ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಈಗಲೂ ಕೂಡ ಪಂಜ್‌ಶೀರ್‌ ತಾಲಿಬಾನಿಗಳಿಗೆ ಕಬ್ಬಿಣದ ಕಡಲೆಯಾಗಿತ್ತು. ಅಫ್ಘಾನ್‌ನ 33 ಪ್ರಾಂತ್ಯ ವಶಪಡಿಸಿಕೊಂಡಿದ್ರೂ ಪಂಜ್‌ಶೀರ್‌ ಮಾತ್ರ ತಾಲಿಬಾನಿಗಳ ಹಿಡಿತಕ್ಕೆ ಸಿಕ್ಕಿರಲಿಲ್ಲ. ಪಂಜ್‌ಶೀರ್‌ ಸೇನೆಗೆ ಅಹ್ಮದ್‌ ಶಾ ಪುತ್ರ ಅಹ್ಮದ್‌ ಮಸೂದ್‌ ಮತ್ತು ಅಫ್ಘಾನ್‌ನ ಉಪಾಧ್ಯಕ್ಷನಾಗಿದ್ದ ಅಮ್ರುಲ್ಲಾ ಸಲೇಹ್‌ ಶಕ್ತಿ ತುಂಬಿದ್ರು. ಆದ್ರೆ, ಪಾಕಿಸ್ತಾನ ಮಿಲಿಟರಿ ನೆರವು ಪಡೆದು ತಾಲಿಬಾನಿಗಳು ಪಂಜ್‌ಶೀರ್‌ಗೆ ನುಗ್ಗಿದ್ದಾರೆ. ಪಂಜ್‌ಶೀರ್‌ನ ಬಹುತೇಕ ಭಾಗವನ್ನು ವಶಪಡಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಾಲಿಬಾನಿಗಳು ಪಂಜ್‌ಶೀರ್‌ ಸಿಂಹ ಅಹ್ಮದ್‌ ಶಾ ಸಮಾಧಿಯನ್ನು ನಾಶ ಮಾಡಿದ್ದಾರೆ. ಇಷ್ಟೇ ಅಲ್ಲ, ತಾಲಿಬಾನಿಗಳಿಗೆ ಸವಾಲು ಒಡ್ಡುತ್ತಿದ್ದ ಅಮ್ರುಲ್ಲಾ ಸಲೇಹ್‌ ವಿರುದ್ಧವೂ ಹಗೆತನ ತೀರಿಸಿಕೊಂಡಿದ್ದಾರೆ.

ಅಮ್ರುಲ್ಲಾ ಸಹೋದರನ ಹತ್ಯೆ ಮಾಡಿದ ತಾಲಿಬಾನಿಗಳು
ಪಂಜ್‌ಶೀರ್‌ನ ಕೆಲವೆಡೆ ಮನೆ ಮನೆಗೆ ನುಗ್ಗಿ ಕ್ರೌರ್ಯ

ಪಂಜ್‌ಶೀರ್‌ ಸೈನ್ಯಕ್ಕೆ ಶಕ್ತಿ ತುಂಬಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಂಜ್‌ಶೀರ್‌ಗೆ ಬೆಂಬಲ ವ್ಯಕ್ತವಾಗುವಂತೆ ಅಮ್ರುಲ್ಲಾ ಸಲೇಹ್‌ ಮಾಡ್ತಾ ಇದ್ರು. ಇದೇ ಕಾರಣಕ್ಕೆ ತಾಲಿಬಾನಿ ಉಗ್ರರು ಕೊತ ಕೊತ ಕುದಿಯುತ್ತಿದ್ರು. ಪಂಜ್‌ಶೀರ್‌ಗೆ ನುಗ್ಗಿದವರೆ ಅಮ್ರುಲ್ಲಾ ಸಲೇಹ್‌ಗೆ ಹುಡುಕಾಟ ನಡೆಸಿದ್ದಾರೆ. ಅಮ್ರುಲ್ಲಾ ಸಲೇಹ್‌ ಕೈಗೆ ಸಿಕ್ಕಿಲ್ಲ. ಆದ್ರೆ, ಅಮ್ರುಲ್ಲಾ ಸಲೇಹ್‌ ಸಹೋದರನೊಬ್ಬ ತಾಲಿಬಾನ್‌ ಉಗ್ರರಿಗೆ ಸಿಕ್ಕಿ ಬಿಟ್ಟಿದ್ದಾನೆ. ಆತ ಕೈಗೆ ಸಿಕ್ಕಿದ್ದೇ ತಡ ತಾಲಿಬಾನ್‌ ಉಗ್ರರು ಚಿತ್ರ ಹಿಂಸೆ ಕೊಟ್ಟು ಸಾಯಿಸಿ ಬಿಟ್ಟಿದ್ದಾರೆ. ಇಷ್ಟೇ ಅಲ್ಲ ಪಂಜ್‌ಶೀರ್‌ನ ಕೆಲವು ಭಾಗಗಳಲ್ಲಿ ತಾಲಿಬಾನ್‌ ಉಗ್ರರು ಮನೆ ಮನೆಗೆ ನುಗ್ಗುತ್ತಿದ್ದಾರೆ. ಹಾಗೇ ಅಲ್ಲಿರುವ ಯುವಕರ ಮೇಲೆ ಕ್ರೌರ್ಯ ತೋರಿಸುತ್ತಿದ್ದಾರೆ. ಇದರಿಮಂದಾಗಿ ಮಕ್ಕಳು, ಮಹಿಳೆಯರು ಬೆಜ್ಜಿ ಬಿದ್ದಿದ್ದಾರೆ.

ಕಾಬೂಲ್‌ ವಿಮಾನ ನಿಲ್ದಾಣದ ಹೆಸರು ಬದಲು
ಇನ್ಮೇಲೆ ಹಮೀದ್ ಕರ್ಜಾಯ್‌ ಹೆಸರು ಇರಲ್ಲ

ಪ್ರತಿ ನಿತ್ಯ ಕ್ರೌರ್ಯ ಪ್ರದರ್ಶಿಸುತ್ತಿರೋ ತಾಲಿಬಾನ್‌ ಉಗ್ರರು ಮಹಿಳೆಯರಿಗೆ ಓಡಾಡಲು ಕೊಡುತ್ತಿಲ್ಲ. ಪ್ರತಿಭಟನೆ ನಡೆಸಲು ಅವಕಾಶ ಕೊಡುತ್ತಿಲ್ಲ. ಪ್ರತಿಭಟನೆಯ ವರದಿ ಮಾಡಿದ ಪತ್ರಕರ್ತರಿಗೂ ಛಡಿ ಏಟು ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಒಟ್ಟಿಗೆ ಅಭ್ಯಾಸ ಮಾಡಲು ಬಿಡುತ್ತಿಲ್ಲ. ತಾಲಿಬಾನ್‌ ಉಗ್ರರ ಕ್ರೌರ್ಯ ಒಂದಾ ಎರಡಾ? ಈ ನಡುವೆ ಕಾಬೂಲ್‌ ವಿಮಾನ ನಿಲ್ದಾಣದ ಹೆಸರನ್ನು ಕೂಡ ಬದಲಿಸಿದ್ದಾರೆ.

ಇದಕ್ಕೂ ಮುನ್ನ ಹಮೀದ್ ಕರ್ಜಾಯ್‌ ಏರ್‌ಪೋರ್ಟ್‌ ನಿಲ್ದಾಣ ಅಂತ ಹೆಸರು ಇತ್ತು. ಹಮೀದ್‌ ಕರ್ಜಾಯ್‌ 2001ರಲ್ಲಿ ತಾಲಿಬಾನ್‌ ಸರ್ಕಾರ ಪತನವಾದಾಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ರು. 2001ರಿಂದ 2014 ರವೆಗೆ ಅಫ್ಘಾನ್‌ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ಅಫ್ಘಾನ್‌ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ತಾಲಿಬಾನಿಗಳ ಕ್ರೌರ್ಯದಿಂದ ನೊಂದಿದ್ದ ಜನರಿಗೆ ಉನ್ನತ ಮಟ್ಟದ ಜೀವನ ಮಾಡಲು ಅನುಕೂಲ ಮಾಡಿಕೊಟ್ಟಿದ್ರು. ಹೀಗಾಗಿಯೇ 2014 ರಲ್ಲಿ ಈ ವಿಮಾನ ನಿಲ್ದಾಣಕ್ಕೆ ಹಮೀದ್‌ ಕರ್ಜಾಯ್‌ ಹೆಸರನ್ನು ಇಡಲಾಗಿತ್ತು. ಆ ಮೂಲಕ ಅವರ ಸೇವೆಗೆ ಗೌರವ ನೀಡಲಾಗಿತ್ತು. ಆದ್ರೆ, ಇದೀಗ ಅಧಿಕಾರಕ್ಕೆ ಬಂದಿರೋ ತಾಲಿಬಾನಿಗಳು ಅವರ ಹೆಸರು ಕಿತ್ತಾಕಿ, ಕಾಬೂಲ್‌ ಇಂಟರ್‌ ನ್ಯಾಷನಲ್‌ ಏರ್ಪೋರ್ಟ್‌ ಅಂತ ಮರುನಾಮಕರಣ ಮಾಡಲು ಮುಂದಾಗಿದ್ದಾರೆ. ಇಂತಹ ಕೌರ್ಯಕ್ಕೆ ಯಾವಾಗ ಕಾಲ ಉತ್ತರ ನೀಡುತ್ತೆ ಅನ್ನೋದಕ್ಕೆ ಕಾದು ನೋಡಬೇಕಷ್ಟೆ.

ತಾಲಿಬಾನ್‌ ಉಗ್ರರು ಪ್ರಮಾಣ ವಚನ ಸಮಾರಂಭವನ್ನು ಮುಂದೂಡಿಕೆ ಮಾಡಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗುವುದನ್ನು ಸ್ವಲ್ಪಮಟ್ಟಿಗೆ ತಪ್ಪಿಸಿಕೊಂಡಿದ್ದಾರೆ. ಆದ್ರೆ, ಎಂದೇ ಇದ್ರೂ ತಾಲಿಬಾನ್‌ ಉಗ್ರರು ಜಗತ್ತಿಗೆ ಅಪಾಯ. ಇಡೀ ವಿಶ್ವವೇ ತಾಲಿಬಾನ್‌ ವಿರುದ್ಧ ಯೋಚಿಸಿ ಹೆಜ್ಜೆಯಿಡಬೇಕಿದೆ.

ಇದನ್ನೂ ಓದಿ: ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ಸಿಗುತ್ತಾ?ತಾಲಿಬಾನ್‌ ವಿಚಾರದಲ್ಲಿ ಭಾರತದ ನಿರ್ಧಾರ ಏನು ?

Source: newsfirstlive.com Source link