ರಾಯಚೂರಿನಲ್ಲಿ ಅಪೌಷ್ಟಿಕತೆ ತಾಂಡವ; ಕಡು ಬಡತನವೇ ಆವರಿಸಿರುವ ಇವರ ಕುಟುಂಬಗಳಲ್ಲಿ ಕರಿ ಛಾಯೆ

ರಾಯಚೂರಿನಲ್ಲಿ ಅಪೌಷ್ಟಿಕತೆ ತಾಂಡವ; ಕಡು ಬಡತನವೇ ಆವರಿಸಿರುವ ಇವರ ಕುಟುಂಬಗಳಲ್ಲಿ ಕರಿ ಛಾಯೆ

ರಾಯಚೂರು: ಅನಕ್ಷರತೆ, ನಿರುದ್ಯೋಗ, ಬಡತನದಿಂದ ಬಿಸಿಲ ನಾಡಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿವೆ. ಕಡು ಬಡತನದಲ್ಲೇ ಬೆಳೆದು ಬಂದಿರುವ ಕುಟುಂಬಗಳು ಹೊಲ ಗದ್ದೆಗಳಿಗೆ ಮಗುವಿನ ಸಮೇತ ತೆರಳುತ್ತಿರುವುದು ಕೂಡ ಮಕ್ಕಳ ಆರೋಗ್ಯಕ್ಕೆ ಪೆಟ್ಟುಕೊಟ್ಟಿದೆ. ದುಡಿಮೆಗಾಗಿ ಪೋಷಕರು ಗುಳೆ ಹೋಗುತ್ತಿರುವುದು ಮಕ್ಕಳ ಆರೋಗ್ಯದ ಮೇಲೆ ಹೊಡೆತ ಬೀಳುವಂತ್ತಾಗಿದ್ದು, ಅಪೌಷ್ಟಿಕತೆ ಹೆಚ್ಚಾಗಲು ಕಾರಣವಾಗಿದೆ.

ರಾಯಚೂರು ಇಡೀ ರಾಜ್ಯಕ್ಕೆ ಬೆಳಕು ನೀಡುವ ಶಕ್ತಿ ಕೇಂದ್ರ. ಇಡೀ ರಾಜ್ಯದಲ್ಲೇ ಚಿನ್ನ ಉತ್ಪಾದಿಸುವ ಏಕೈಕ ಹಟ್ಟಿ ಚಿನ್ನದ ಗಣಿ ಹೊಂದಿರುವ ಜಿಲ್ಲೆ. ಇದೇ ರಾಯಚೂರು ಜಿಲ್ಲೆಯಲ್ಲಿ ಬಡತನ ರುದ್ರತಾಂಡವವಾಡ್ತಿದೆ. ಜಿಲ್ಲೆಯ ಲಕ್ಷ ಲಕ್ಷ ಬಡ ಜನ ಈಗಲೂ ಬಡವರಾಗೇ ಇದ್ದಾರೆ. ಪರಿಣಾಮ ಜಿಲ್ಲೆಯಲ್ಲಿ ಅಪೌಷ್ಟಿಕತೆ ಕೂಡ ಹೆಚ್ಚಾಗಿದೆ.

blank

ನಾಲ್ಕೈದು ವರ್ಷದ ಮಕ್ಕಳಂತೆ ಓಡಾಡ್ತಾ, ಆಟ ಆಡ್ತಾ, ಕೂತ್ಕೊಂಡು ಅಭ್ಯಾಸ ಮಾಡ್ತಿರೋ ಮಕ್ಕಳು ಅಪೌಷ್ಟಿಕ ಎಂಬ ಮಹಾ ಪಿಡುಗಿಗೆ ತುತ್ತಾಗಿದ್ದಾರೆ. ಈ ಕುಟುಂಬದ ಒಟ್ಟು 8 ಜನ ಮಕ್ಕಳ ಪೈಕಿ 4 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 15, 11 ಹಾಗೂ 4 ವರ್ಷದ ಹೆಣ್ಣುಮಕ್ಕಳು ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಾಗಿಲ್ಲ. ಮತ್ತೊಬ್ಬಳು ಈಗಾಗಲೇ ಅಪೌಷ್ಟಿಕತೆಯಿಂದ ಸಾವನಪ್ಪಿದ್ದಾಳೆ.

ಕಡು ಬಡತನವನ್ನೇ ಮೈ ತುಂಬಾ ಹೊದ್ದುಕೊಂಡಿರುವ ಕುಟುಂಬ ಇದು. ಅಂದಿನ ದುಡಿಮೆ ಅಂದಿಗೆ ಖಾಲಿ, ಅಂದು ದುಡಿದ್ರೆ ಮಾತ್ರ ಊಟ. ಇದು ಈ ಕುಟುಂಬದ ಪರಿಸ್ಥಿತಿ. ಇದೇ ಕುಟುಂಬದ ಮಕ್ಕಳು ಇದೀಗ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಅಪೌಷ್ಟಿಕತೆ ತಾಂಡವವಾಡ್ತಿದೆ ಅನ್ನೋದಕ್ಕೆ ಇದು ಮತ್ತೊಂದು ಎಕ್ಸಾಂಪಲ್ ಅಷ್ಟೇ. ಇಂತಹ ನೂರಾರು ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ

ಮಕ್ಕಳ ಆರೋಗ್ಯದ ಬಗ್ಗೆ ಸದ್ಯ ಯಾರೂ ಗಮನ ನೀಡದೇ ಇದ್ರಿಂದ ಈ ಮೂರು ಮಕ್ಕಳ ಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಮನೆ ಮಠ ಬಿಟ್ಟು ಎಲ್ಲೂ ಹೋಗದಂತಹ ಸ್ಥಿತಿಯಲ್ಲಿ ಪೋಷಕರಿದ್ದಾರೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕುಟುಂಬಸ್ಥರನ್ನ ಮುಖದಲ್ಲಿ ನಗುವನ್ನ ಮರೆಮಾಚಿದೆ.

ಕಂದಮ್ಮಗಳನ್ನು ಮನೆಯಲ್ಲೇ ಬಿಟ್ಟು ಗುಳೆ ಹೋಗುತ್ತಿರುವ ಹೆತ್ತವರು

ಬಿಸಿಲ ನಾಡು ಅಂದ್ರೆ ಮೊದ್ಲಿಗೆ ನೆನೆಪಾಗುವುದೇ ರಾಯಚೂರು. ಮಳೆರಾಯ ಕೃಪೆ ತೋರಿದರೆ ಒಂದು ಬೆಳೆ, ಇಲ್ಲವಾದ್ರೆ ನೀರಿಗೆ ಹಾಹಾಕಾರ, ಹೊಟ್ಟೆಗೆ ಬೆಂಕಿ.. ಊರಿಗೆ ಊರೇ ವಲಸೆ.. ತುತ್ತು ಅನ್ನಕ್ಕಾಗಿ ಪಟ್ಟಣದಲ್ಲಿ ಕೂಲಿ ನಾಲಿ. ಸದಾ ಬರದ, ಬಡತನದ ನೆರಳಿನಲ್ಲಿಯೇ ಬೆಳೆದು ಬಂದಿರುವ ರಾಯಚೂರಿನ ಪರಿಸ್ಥಿತಿ. ಗ್ರಾಮೀಣ ಭಾಗದ ಸಾವಿರಾರು ಜನರು ಬೆಂಗಳೂರು, ಮುಂಬೈ ಅಂತಾ ಗುಳೆ ಹೋಗುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಗುಳೆ ಹೋಗುವ ವೇಳೆ ಪೋಷಕರು ಎಳೆ ಕಂದಮ್ಮಗಳನ್ನು ಮನೆಯಲ್ಲೇ ಬಿಟ್ಟು ದುಡಿಮೆಗೆ ಹೋಗ್ತಿರೋದು ಕೂಡ ಮಕ್ಕಳಲ್ಲಿ ಅಪೌಷ್ಟಿಕ ಹೆಚ್ಚಾಗುವಂತೆ ಮಾಡಿದೆ.

blank

ತುತ್ತಿನ ಚೀಲ ತುಂಬಿಸಿಲು ಪ್ರತಿ ವರ್ಷ ಕೂಡ ಸುಡು ಬೇಸಿಗೆಯಲ್ಲಿ ಇಡೀ ಊರಿಗೆ ಊರೇ ಖಾಲಿ ಮಾಡಿ ವಿವಿಧ ನಗರಳಿಗೆ ವಲಸೆ ಹೋಗುವುದು ಒಂದು ವಾಡಿಕೆಯಾಗಿ ಬಿಟ್ಟಿದೆ. ಈ ರೀತಿಯಾಗಿ ಗುಳೆ ಹೋಗುವಾಗ ಚಿಕ್ಕ ಮಕ್ಕಳನ್ನ ಅಜ್ಜ ಅಜ್ಜಿಯಂದಿರ ಆಶ್ರಯದಲ್ಲೇ ಬಿಟ್ಟು ಗುಳೆ ಹೋಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಇವು ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳ್ತಿವೆ. ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗದ ಕಾರಣ ಮಕ್ಕಳು ಇಂದು ಅಪೌಷ್ಟಿಕತೆಗೆ ಸಿಲುಕುವಂತಾಗಿದೆ.

ಪೋಷಕರು ದುಡಿಮೆಯ ಭರದಲ್ಲಿ ಮಕ್ಕಳನ್ನು ಒಬ್ಬಂಟಿ ಮಾಡಿ ಗುಳೆ ಹೋಗುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ವಿದ್ಯಾವಂತರಿಗೂ ಕೆಲಸ ಇಲ್ಲದಂತಾಗಿದೆ. ಕೆಲಸ ಸಿಕ್ಕರೂ ಕಡಿಮೆ ಕೂಲಿಗೆ ರಣ ಬಿಸಿಲಲ್ಲಿ ದುಡಿಯುವಂತಹ ಪರಿಸ್ಥಿತಿ ಇದೆ. ಹೀಗಾಗಿ ಮಹಾನಗರಗಳತ್ತ ಗ್ರಾಮೀಣ ಭಾಗದ ಜನರು ಗುಳೆ ಹೋಗುವುದು ಸರ್ವೇ ಸಾಮಾನ್ಯವಾಗಿದ್ದು, ವಲಸೆ ಓಡಾಟದ ನಡುವೆ ಕಂದಮ್ಮಗಳ ಆರೋಗ್ಯ ಸ್ಥಿತಿ ಹದಗೆಡುತ್ತಿದೆ.

ದುಡಿದು ತಿನ್ನುವ ಜನ ಒಂದೆಡೆ ನೆಲೆಯೂರದ ಕಾರಣ ಸರ್ಕಾರದ ಪೌಷ್ಠಿಕ ಆಹಾರವೂ ಮಕ್ಕಳ ಮೈ ಸೇರುತ್ತಿಲ್ಲ. ಇದ್ರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ. ಗುಳೆ ಹೋಗುವ ಗ್ರಾಮೀಣ ಭಾಗದಲ್ಲಿ ಅಪೌಷ್ಠಿಕ ಹೆಚ್ಚಾಗುತ್ತಿದೆ.

ರಕ್ತ ಸಂಬಂಧದ ಮದುವೆಗಳಿಂದ ಅನುವಂಶೀಯ ಖಾಯಿಲೆಗಳು

ರಾಯಚೂರು ಜಿಲ್ಲೆಯಲ್ಲಿ ಸಂಬಂಧದೊಳಗಿನ ಮದುವೆಗಳು ಹೆಚ್ಚಾಗುತ್ತಿವೆ. ಇದು ಕೂಡ ಬಿಸಿಲ ನಾಡಲ್ಲಿ ಅಪೌಷ್ಟಿಕತೆ ಹೆಚ್ಚಾಗಲು ಕಾರಣವಾಗಿವೆ. ಗ್ರಾಮೀಣ ಭಾಗದಲ್ಲಿ ತೀರಾ ಹತ್ತಿರದ ರಕ್ತ ಸಂಬಂಧದ ಮದುವೆಗಳಿಂದ ಅನುವಂಶೀಯ ಖಾಯಿಲೆಗಳು ಹೆಚ್ಚುತ್ತಿರೋದು, ಇದು ಅಪೌಷ್ಠಿಕ ಮಕ್ಕಳ ಜನನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ತೀರಾ ಹತ್ತಿರದ ಸಂಬಂಧದ ಜೊತೆ ಮತ್ತೆ ಹೊಸ ಸಂಬಂಧ ಬೆಸೆಯುವ ಪದ್ಧತಿ ಇಲ್ಲಿ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದೆ.

ತಳಿ ವಿಜ್ಞಾನ ಹೇಳುವಂತೆ ಸಂಬಂಧದೊಳಗೆ ಬೆಸೆದುಕೊಂಡ ವಿವಾಹಗಳಿಂದಾಗಿ ಹುಟ್ಟುವ ಅನೇಕ ಮಕ್ಕಳಲ್ಲಿ ನಾನಾ ರೀತಿಯ ನ್ಯೂನ್ಯತೆಗಳು ಕಾಣುತ್ತಿವೆ. ಪ್ರಮುಖವಾಗಿ ಹೃದಯ ಸಂಬಂಧಿ ಖಾಯಿಲೆಗಳು, ಅಂಗವಿಕಲತೆ ಹಾಗೂ ಅಪೌಷ್ಠಿಕತೆ ಮಕ್ಕಳು ಹೆಚ್ಚಾಗೇ ಜನಸುತ್ತಿವೆ. ಇದ್ರಿಂದಾಗಿ ಆದಷ್ಟು ರಕ್ತ ಸಂಬಂಧದ ಮದುವೆಗಳಿಂದ ದೂರ ಇರೋದೆ ಒಳ್ಳೆಯದು ಎಂಬುದನ್ನ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

blank

ಬಡತನ ಅಥವಾ ಹಿರಿಯರು ನಿಶ್ಚಿಯಿಸಿದ್ದು ಅಂತಾ ರಕ್ತ ಸಂಬಂಧದಲ್ಲೇ ತರಾತುರಿಯಲ್ಲಿ ಗ್ರಾಮೀಣ ಭಾಗದಲ್ಲಿ ಮದುವೆಗಳು ನಡೆಯುತ್ತಿವೆ. ಹಲವೆಡೆ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಆದ್ರೆ ಮದುವೆ ಮಾಡುವುದು ಕರ್ತವ್ಯ ಎಂದು ಭಾವಿಸುವ ಪೋಷಕರು ಅವರ ನಿಜವಾದ ಜವಾಬ್ದಾರಿ ಮರೆತಿದ್ದಾರೆ. ಇವು ಮಕ್ಕಳ ಮೇಲೆ ದುಷ್ಪರಿಣಾಮ ಅರಿಯದೇ ಹೋಗಿದ್ದಾರೆ. ಇವು ಮಕ್ಕಳ ಅಪೌಷ್ಟಿಕತೆಗೂ ಕಾರಣವಾಗಿದೆ.

ಒಂದು ಕಡೆ ಅನಕ್ಷರತೆ, ಮತ್ತೊಂದು ಕಡೆ ನಿರುದ್ಯೋಗ, ಮಗದೊಂದು ಕಡೆ ಬಡತನ.. ಹೀಗೆ ವಿವಿಧ ಕಾರಣಗಳಿಂದ ರಾಯಚೂರಿನಲ್ಲಿ ಅಪೌಷ್ಟಿಕತೆ ಹೆಚ್ಚಲು ಕಾರಣವಾಗಿದೆ. ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ನಿದ್ದೆಯಿಲ್ಲದೆ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಪೌಷ್ಟಿಕ ಆಹಾರ ಸಿಗದ ಕಾರಣ ದಿನದಿಂದ ದಿನಕ್ಕೆ ಅಪೌಷ್ಟಿಕತೆ ಹೆಚ್ಚಾಗುವಂತ್ತಾಗಿದೆ.

ಒಟ್ಟಿನಲ್ಲಿ ಅಪೌಷ್ಟಿಕತೆಯ ಕಪ್ಪುಮಟ್ಟಿಗೆ ಇನ್ನಷ್ಟು ಮಕ್ಕಳು ಸೇರುವುದನ್ನ ತಪ್ಪಿಸಿಬೇಕಾದರೆ ಮಕ್ಕಳ ಕಲ್ಯಾಣ ಇಲಾಖೆ ಈ ಮಕ್ಕಳ ಕಡೆ ಕಣ್ಣು ಬಿಡಬೇಕಾಗಿದೆ. ಅದ್ಯಾವಾಗ ಮಕ್ಕಳ ಕಲ್ಯಾಣ ಇಲಾಖೆಯು ಈ ಕಂದಮ್ಮಗಳ ಕಡೆ ಕಣ್ಣು ಬಿಡ್ತಾರೋ ಕಾದು ನೋಡಬೇಕಾಗಿದೆ.
ದುಡಿಮೆಯ ಅನಿವಾರ್ತೆಗೆ ಬಿದ್ದ ಕೆಲ ಕುಟುಂಬಗಳು ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವಲ್ಲಿ ವಿಫಲವಾಗಿದೆ. ಪರಿಣಾಮ ಮಕ್ಕಳ ಆರೋಗ್ಯ ಬೆಳವಣಿಗೆ ಕಾಣದೆ ಅಪೌಷ್ಟಿಕತೆಗೆ ತುತ್ತಾಗುವಂತ್ತಾಗಿದೆ. ಪೋಷಕರು ದುಡಿಮೆಯ ಜೊತೆಗೆ ಮಕ್ಕಳ ಇನ್ನಾದ್ರು ಮಕ್ಕಳ ಆರೋಗ್ಯ ಕಡೆ ಗಮನ ಹರಿಸಬೇಕಾಗಿದೆ. ಕಲ್ಯಾಣ ಇಲಾಖೆಯು ಈ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಬೇಕಾದ ಅಗತ್ಯವಿದೆ.

Source: newsfirstlive.com Source link