ರಾಯಚೂರಲ್ಲಿ ಅಪೌಷ್ಟಿಕತೆ ಬೆನ್ನಲ್ಲೇ ಎಳೆ ಮಕ್ಕಳ ಮೇಲೆ ಕೊರೊನಾ ಹೆಮ್ಮಾರಿಯ ಸವಾರಿ

ರಾಯಚೂರಲ್ಲಿ ಅಪೌಷ್ಟಿಕತೆ ಬೆನ್ನಲ್ಲೇ ಎಳೆ ಮಕ್ಕಳ ಮೇಲೆ ಕೊರೊನಾ ಹೆಮ್ಮಾರಿಯ ಸವಾರಿ

ರಾಯಚೂರು: ಜಿಲ್ಲೆಯಲ್ಲಿ ಅಪೌಷ್ಟಿಕತೆ ತಾಂಡವವಾಡ್ತಿದೆ. ಮಕ್ಕಳು ಸರಿಯಾದ ಆಹಾರ ಇಲ್ಲದೆ ಅಪೌಷ್ಟಿಕತೆಗೆ ಸಿಲುಕುತ್ತಿದ್ದಾರೆ. ಕತ್ತಲ ಕೋಣೆಯಲ್ಲಿ ಜೀವನ ಕಳೆಯುವ ಅದೆಷ್ಟೋ ಕುಟುಂಬಗಳು ಅಪೌಷ್ಟಿಕತೆಯ ಕೂಪಕ್ಕೆ ಸಿಲುಕಿವೆ. ಮಕ್ಕಳ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯದಿಂದ, ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತ್ತಾಗಿದೆ. ಈ ಕುರಿತ ಸ್ಪೆಷಲ್ ವರದಿ ಇಲ್ಲಿದೆ.

ಸಾಕಿ ಸಲಹಬೇಕಿದ್ದ ತಾಯಿ ಭೂಮಿ ಮೇಲೆ ಇಲ್ಲ.. ಒಪ್ಪತ್ತಿನ ಊಟಕ್ಕೂ ಮಕ್ಕಳಿಗೆ ಗತಿಯಿಲ್ಲ. ಸರಿಯಾದ ಆರೈಕೆ ಇಲ್ಲದೆ ಪುಟ್ಟ ಪುಟ್ಟ ಕಂದಮ್ಮಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. 2, 4, 6 ವರ್ಷದ ಮೂರು ಕಂದಮ್ಮಗಳು ಒಂದು ಕಡೆ ತಾಯಿ ಇಲ್ಲದೆ ತಬ್ಬಲಿಯಾಗಿದ್ರೆ, ಮತ್ತೊಂದು ಕಡೆ ಸರಿಯಾದ ಆಹಾರ ಇಲ್ಲದೆ ಅಪೌಷ್ಟಿಕತೆಯಿಂದ ನರಳುತ್ತಿವೆ

ತಾಯಿಯ ನಿಧನದಿಂದ ಮೂರು ಮಕ್ಕಳು ತಬ್ಬಲಿಯಾಗಿದ್ದು,ಬಡ ತಂದೆಯ ಆಸರೆಯಲ್ಲೇ ದಿನದೂಡುತ್ತಿದ್ದಾರೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗೋಪಾಲಪುರ ಗ್ರಾಮದ ಶಿವಕುಮಾರ್ .ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿರುವ ಈ ಶಿವಕುಮಾರ್ ಇದೀಗ ಆಟೋ ಓಡಿಸಿಕೊಂಡೇ ಕುಟುಂಬವನ್ನ ಸಾಗಿಸುತ್ತಿದ್ದಾರೆ.

blank

ಸುಖಸಂಸಾರ ಕಂಡಿದ್ದ ರೇಣುಕಮ್ಮಳ ನಾಲ್ಕನೇ ಹೆರಿಗೆಯಲ್ಲಿ ಕಂಟಕ ಎದುರಾಗಿದೆ. ಹೆರಿಗೆಯ ವೇಳೆಯಲ್ಲಿ ಮಗು ಸಾವಿನ ಮನೆ ಸೇರಿದ್ರೆ, ಮಗು ತೀರಿ ಹೋದ ಎಂಟೇ ದಿನಕ್ಕೆ ತಾಯಿ ಕೂಡ ತನ್ನ ಕರುಳ ಬಳ್ಳಿಯ ಹಾದಿಯನ್ನೇ ಹಿಡಿದು ಬಿಟ್ಟಿದ್ದಾಳೆ. ಹೆರಿಗೆಯಲ್ಲಿ ಮಗುವನ್ನು ಕಳೆದುಕೊಂಡ ಎಂಟುದಿನಕ್ಕೆ ರೇಣುಕಮ್ಮ ರಾಯಚೂರಿನ ಬೆಟ್ಟದೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಆ ಕಂದಮ್ಮಗಳು ಅದೇನ್ ತಪ್ಪು ಮಾಡಿದ್ಯೋ ಆ ದೇವರಿಗೆ ಗೊತ್ತು.. ಒಂದು ಕಡೆ ತಾಯಿಯನ್ನ ಕಳೆದುಕೊಂಡು ಅನಾಥವಾಗಿದ್ರೆ, ಮತ್ತೊಂದು ಕಡೆಯಿಂದ ಅಪೌಷ್ಟಿಕತೆಯಿಂದ ನರಳುತ್ತಿವೆ. ಈ ಈ ಮಕ್ಕಳು ದಿನವಿಡೀ ಯಾರ ಆಸರೆ ಇಲ್ಲದೆ ಅನಾಥವಾಗಿಯೇ ಸಮಯ ದೂಡಬೇಕಾಗಿದೆ.

ವೃತ್ತಿಯಲ್ಲಿ ಆಟೋ ಚಾಲಕನಾದ ಶಿವಕುಮಾರ ಸದ್ಯ ಮಕ್ಕಳ ಲಾಲನೆ ಪಾಲನೆಗೆ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಕ್ಕಳ ಪಾಲನೆಗೆಂದೂ ಮನೆಯಲ್ಲಿ ಕೂತ್ರೆ, ದುಡಿಯೋರು ಯಾರು ಇಲ್ಲದಂತ್ತಾಗಿದೆ. ದುಡಿಯೋಕೆ ಹೊರಟ್ರೆ ಮನೇಲಿ ಮಕ್ಕಳನ್ನ ನೋಡೋರೆ ಇಲ್ಲದಂತ್ತಾಗಿದೆ. ಇದ್ರಿಂದ ಮಕ್ಕಳ ಪೋಷಣೆಗೆ, ಬೆಳವಣಿಗೆಗೆ ತೊಡಕಾಗಿದ್ದು, ಕಂದಮ್ಮಗಳು ನಿಧಾನವಾಗಿ ಅಪೌಷ್ಟಿಕತೆಯ ಕಡೆ ಜಾರುತ್ತಿವೆ. ತಾಯಿಯ ಅಗಲಿಕೆಯ ನಡುವೆ ಅಪೌಷ್ಟಿಕತೆಯ ಪಿಡುಗು ಈ ತಬ್ಬಲಿಗಳ ಪ್ರಾಣ ಹಿಂಡುತ್ತಿದೆ.

blank

ಮುದ್ದಾದ ಎರಡು ಗಂಡು ಒಂದು ಹೆಣ್ಣು ಮಗುವಿನ ಆರೋಗ್ಯ ಸ್ಥಿತಿ ಹಾಗೂ ಶಿವಕುಮಾರನ ಪರಿಸ್ಥಿತಿ ಕಂಡು ಇಡೀ ಊರೇ ಮರಗುತ್ತಿದೆ. ಈ ಮಕ್ಕಳು ನಿಧಾನವಾಗಿ ಅಪೌಷ್ಟಿಕತೆಯತ್ತ ವಾಲುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟ ನಿದ್ದೆಯಿಲ್ಲದೆ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಒಂದು ಕಡೆ ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ಅಪೌಷ್ಟಿಕತೆ ಹೆಚ್ಚುತ್ತಿದೆ. ರಾಯಚೂರಿನ ಅಪೌಷ್ಟಿಕತೆಯ ಕಪ್ಪು ಪಟ್ಟಿಗೆ ಈ ಮಕ್ಕಳು ಸೇರುವುದನ್ನ ತಪ್ಪಿಸಿಬೇಕಾದರೆ ಆದಷ್ಟು ಬೇಗ ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಬೇಕಾಗಿದೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಒಂದೇ ಕುಟುಂಬದ 3 ಮಕ್ಕಳು

ಅದು ಬಡ ಕುಟುಂಬ. ಅನ್ನಕ್ಕಾಗಿ ಪಟ್ಟಣದಲ್ಲಿ ಕೂಲಿ ಮಾಡಿ ಆ ಹೆತ್ತವರು ಕುಟುಂಬವನ್ನ ನಡೆಸುತ್ತಿದ್ದಾರೆ. ಆದ್ರೆ ಕುಟುಂಬದ ಆರು ಮಕ್ಕಳ ಪೈಕಿ ಮೂವರು ಇದೀಗ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆ ಹೆತ್ತವರನ್ನ ನೋವಿನ ಕಡಲಿಗೆ ತಳ್ಳಿದೆ. ರಾಯಚೂರಿನಲ್ಲಿ ನೂರಾರು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬೆಳಿತಾ ಬೆಳಿತಾ ಆರೋಗ್ಯದಲ್ಲಿ ಸದೃಢವಾಗಬೇಕಾದ ಮಕ್ಕಳು ಇಲ್ಲಿ ಮಾತ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಒಂದೇ ಕುಟುಂಬದ ಮೂರು ಮಕ್ಕಳು ಹುಟ್ಟುತ್ತಾ ಆರೋಗ್ಯದಿಂದಲೇ ಇದ್ರು. ಆದ್ರೆ ಬೆಳಿತಾ ಬೆಳಿತಾ ತೀವ್ರ ಅಪೌಷ್ಟಿಕತೆಗೆ ಸಿಲುಕಿದ್ದಾರೆ. ಮಕ್ಕಳ ಈ ರೀತಿಯ ಅನಾರೋಗ್ಯ ಬೆಳವಣಿಗೆ ಕಂಡು ಹೆತ್ತವರು ದಿನನಿತ್ಯ ಮರಗುವಂತಾಗಿದೆ. ಈ ಮೂರು ಮಕ್ಕಳದ್ದು ವಿಚಿತ್ರ ಬೆಳವಣಿಗೆ. ಹುಟ್ಟಿದ ಒಂದೆರಡು ವರ್ಷ ಆರೋಗ್ಯದಿಂದ ಹಾಯಾಗಿದ್ದ ಮೂರು ಮಕ್ಕಳಲ್ಲಿ ಅತಿಯಾದ ಅನಾರೋಗ್ಯ ಇವರ ಜೀವನಕ್ಕೆ ಕೊಳ್ಳಿ ಇಟ್ಟಿದೆ.

ದಿನಗೂಲಿ ಮಾಡಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕು ಅಂತಾ ಪೋಷಕರು ಹಗಲಿರುಳು ಶ್ರಮಿಸುತ್ತಿದ್ದಾರೆ.ದಿನನಿತ್ಯದ ದುಡಿಮೆಯ ಅರ್ಧಕ್ಕರ್ಧ ಹಣ ಮಕ್ಕಳ ಚಿಕಿತ್ಸೆಗೆಂದೇ ವ್ಯಯಿಸಲಾಗುತ್ತಿದೆ. ಆದ್ರೆ ಸತತ ಚಿಕಿತ್ಸೆಯ ನಂತರವೂ ಮಕ್ಕಳು ಅಪೌಷ್ಠಿಕ ಪಿಡುಗಿನಿಂದ ಆಚೆ ಬರಲಾಗುತ್ತಿಲ್ಲ. ಮಲಮೂತ್ರ ವಿಸರ್ಜನೆಯೂ ಪೋಷಕರ ಸಹಾಯದಿಂದಲೇ ಮಾಡಬೇಕಾದ್ದು ಹೆತ್ತವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಕತ್ತಲ ಕೋಣೆಯಲ್ಲಿ ಜೀವನ, ಮಗುವಿಗೆ ಅಪೌಷ್ಟಿಕತೆ

ಆಕೆಯದ್ದು ಬಡ ಕುಟುಂಬ.. ಕಡು ಬಡತನದಲ್ಲೇ ಮಹಿಳೆ ಹೊಲಗದ್ದೆಗಳಿಗೆ ಮಗುವಿನ ಸಮೇತ ತೆರಳಿ, ಕೆಲಸ ಮಾಡ್ತಾಳೆ. ಕಿತ್ತು ತಿನ್ನುವ ಬಡತನ ಹಾಗೂ ಆರೋಗ್ಯ ಕಾಳಜಿ ಇಲ್ಲದ ಆರು ವರ್ಷದ ಮಗು ಸದ್ಯ ತೀವ್ರ ಅಪೌಷ್ಟಿಕತೆಯಿಂದ ಬಳಲುವಂತೆ ಮಾಡಿದೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕರಿಗುಡ್ಡ ಗ್ರಾಮದ ಮಹಾದೇವಮ್ಮ ಎಂಬ ಈ ಮಹಿಳೆಯ ಸ್ಥಿತಿ ಘನಘೋರವಾಗಿದೆ. ಆರು ವರ್ಷದ ಹೆಣ್ಣುಮಗು ಸದ್ಯ ಅನಾಥಳಂತೆ ಬದುಕುತ್ತಿದ್ದಾಳೆ. ಮಳೆ ಅತಿಯಾದ್ರೆ ಗೋಡೆ ನೆನೆದು ಮನೆ ಬೀಳುವ ಸಂಭವವಿದೆ. ಇಂತಹ ಸಮಯದಲ್ಲಿ ಮತ್ತೊಬ್ಬರ ಮನೆಯಲ್ಲೇ ಈ ಮಹಿಳೆ ವಾಸ ಮಾಡುವಂತಾಗಿದೆ.

blank

ಹಗಲೆಲ್ಲಾ ಜಮೀನುಗಳಲ್ಲಿ ದುಡಿಯಲು ಹೋಗಿ ರಾತ್ರಿ ಹೊತ್ತು ಮುರುಕಲು ಮನೆಯಲ್ಲೇ ವಾಸ ಮಾಡುತ್ತಿರುವ ಮಹಾದೇವಮ್ಮಳಿಗೆ ತನ್ನ ಮಗುವಿನ ಆರೋಗ್ಯ ಕಾಳಜಿ ಮಾಡಲಾಗುತ್ತಿಲ್ಲ. ಆರು ವರ್ಷದ ಮಗು ಸರಿಯಾದ ಲಾಲನೆ ಪಾಲನೆ ಇಲ್ಲದೆ ಎರಡು ವರ್ಷದ ಮಗುವಿನ ಥರಾ ಆಗಿದ್ದು, ಬೆಳವಣಿಗೆ ಹಾಗೂ ತೂಕದಲ್ಲಿ ಆತಂಕ ಮೂಡಿಸಿದೆ. ಪರಿಣಾಮ ಅಪೌಷ್ಟಿತೆಯತ್ತ ವಾಲಿದೆ.
ಮಗುವಿನೊಂದಿಗೆ ಬಿಸಿಲಲ್ಲಿ ದುಡಿವ ಮಹಿಳೆಗ ದಿನಗೂಲಿ ಸಿಗೋದು 150 ರೂಪಾಯಿ.

ಇದೇ ಹಣದಲ್ಲಿ ಮಹಿಳೆ ತನ್ನ ದಿನದೂಡಬೇಕು ಹಾಗೂ ಮಗುವಿನ ಪೋಷಣೆ ಮಾಡಬೇಕಿದೆ. ವಿಚಿತ್ರ ಅಂದ್ರೆ ಮಹಾದೇವಮ್ಮಗೆ ಈವರೆಗೂ ಆಧಾರ್ ಕಾರ್ಡ್ ಆಗಲಿ ಅಥವಾ ತಾನು ಕರಿಗುಡ್ಡ ನಿವಾಸಿ ಎಂದು ಹೇಳಿಕೊಳ್ಳಲು ಯಾವುದೇ ಕಾಗದಪತ್ರಗಳಿಲ್ಲ. ಹುಟ್ಟಿದಾಗಿನಿಂದ ಈವರೆಗೂ ಕರಿಗುಡ್ಡ ಗ್ರಾಮದಲ್ಲೇ ವಾಸ ಮಾಡಿದ್ರು ತನ್ನದು ಅಂತಾ ಹೇಳಿಕೊಳ್ಳಲು ಈಕೆ ಹತ್ರ ಯಾವ ದಾಖಲೆಗಳು ಇಲ್ಲ.ಈವರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಈ ಅಪೌಷ್ಠಿಕ ಮಗುವಿಗೆ ಯಾವುದೇ ಸೌಲಭ್ಯ ನೀಡದೇ ಇರೋದು ಅಪೌಷ್ಟಿಕತೆ ಹೆಚ್ಚಲು ಕಾರಣವಾಗಿದೆ. ಈ ನಡುವೆ ವಕ್ಕರಿಸಿದ ಕೊರೊನಾ ಕೂಡ ಮಕ್ಕಳ ಆರೋಗ್ಯಕ್ಕೆ ಕಂಟಕ ಉಂಟು ಮಾಡಿದೆ.

ಮಕ್ಕಳ ಆರೋಗ್ಯದ ಮೇಲೆ ಕೊರೊನಾ ಹೆಮ್ಮಾರಿಯ ಸವಾರಿ

ಕೊರೊನಾ ಹೆಮ್ಮಾರಿ ಮಕ್ಕಳ ಆರೋಗ್ಯದ ಮೇಲೂ ಸವಾರಿ ಮಾಡಿದೆ. ಕೊರೊನಾ ಸಮಯದಲ್ಲಿ ಮಕ್ಕಳ ಅಪೌಷ್ಟಿಕತೆ ಹೆಚ್ಚಾಗಿದೆ. ಕಿತ್ತು ತಿನ್ನುವ ಬಡತನ ಹಾಗೂ ಆರೋಗ್ಯ ಕಾಳಜಿ ಇಲ್ಲದ ಆರು ವರ್ಷದ ಮಗು ಸದ್ಯ ತೀವ್ರ ಅಪೌಷ್ಟಿಕತೆ ಪಿಡುಗಿನತ್ತ ವಾಲುತ್ತಿದೆ. ಅಲ್ಲದೇ ಕೊರೊನಾ ಹೆಮ್ಮಾರಿಯಿಂದ ಕೂಡ ಮಕ್ಕಳ ಆರೋಗ್ಯವನ್ನ ಕಸಿದುಕೊಂಡಿದೆ.

ಇಡೀ ಜಗತ್ತನ್ನ ಇನ್ನಿಲ್ಲದಂತೆ ಕಾಡಿದ್ದ ಕೊರೊನಾ ಹೆಮ್ಮಾರಿ ಮಕ್ಕಳ ಆರೋಗ್ಯಕ್ಕೂ ಕಂಟಕವಾಗಿದೆ. ಮಕ್ಕಳ ಹಾಗೂ ಗರ್ಭಿಣಿ ಬಾಣಂತಿಯರ ಆರೋಗ್ಯ ವೃದ್ಧಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವ್ಯಯಿಸುತ್ತಿರುವ ಕೋಟಿ ಕೋಟಿ ಹಣ ಕೊರೊನಾ ಸಮಯದಲ್ಲಿ ವ್ಯರ್ಥವಾಗುತ್ತಿದೆ. ಪರಿಣಾಮ ಮಕ್ಕಳು ಅಪೌಷ್ಟಿಕತೆಯ ಕೂಪಕ್ಕೆ ಸಿಲುವಂತ್ತಾಗಿದೆ.

ಕೊರೊನಾ ಸಮಯದಲ್ಲಿ ಶಾಲಾ, ಕಾಲೇಜು ಸೇರಿದಂತೆ ಎಲ್ಲಾ ವಲಯಗಳು ಸ್ತಬ್ಧವಾಗಿದ್ದವು. ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ಅಂಗನವಾಡಿ ಬಂದ್ ಮಾಡಿ ಮನೆಮನೆಗೆ ಪೌಷ್ಠಿಕ ಆಹಾರ ಹಾಗೂ ಫಲಾನುಭವಿಗಳಿಗೆ ಬೇಕಾದ ಆಹಾರ ಸಾಮಗ್ರಿ ಒದಗಿಸುವ ವ್ಯವಸ್ಥೆ ಮಾಡಿದ್ರೂ, ಅವು ನೈಜ ಫಲಾನುಭವಿಗಳ ಹೊಟ್ಟೆ ಸೇರಿಲ್ಲ. ಹದಿನೈದು ದಿನಗಳ ಕಾಲ ಮಗು ಅಥವಾ ಗರ್ಭಿಣಿ, ಬಾಣಂತಿ ದಿನ ಒಂದೊಂದು ಮೊಟ್ಟೆ ತಿನ್ನುವಂತೆ ಹದಿನೈದು ಮೊಟ್ಟೆ ನೀಡಲಾಗಿದ್ರೆ ಅದು ಒಂದೇ ಒಪ್ಪತ್ತಿಗೆ ಮನೆ ಮುಂದೆ ಸಿಪ್ಪೆ ಬಿಸಾಡಲಾಗ್ತಿತ್ತು. ಪರಿಣಾಮ ಮಕ್ಕಳ ಸೇವಿಸಬೇಕಿದ್ದ ಆಹಾರಗಳು,ಅದ್ಯಾರದ್ದೋ ಹೊಟ್ಟೆ ಸೇರಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುವಂತ್ತಾದೆ.

ಸರ್ಕಾರ ಅಪೌಷ್ಟಿಕ ಮಗು ಅಥವಾ ಗರ್ಭಿಣಿ ಬಾಣಂತಿಯರಿಗೆ ನೀಡುತ್ತಿರುವ ಆಹಾರ ಮನೆಮಂದಿಯೇ ಖಾಲಿ ಮಾಡುತ್ತಿರುವುದರಿಂದ ಕೂಡ ಈ ಸಮಸ್ಯೆ ಹೆಚ್ಚಾಗಿದೆ. ಗರ್ಭಿಣಿಯರಲ್ಲಿ ರಕ್ತಹೀನತೆ ಸಮಸ್ಯೆಯೂ ಉಲ್ಬಣಿಸುತ್ತಿದೆ. ಸಾಮಾಜಿಕ ಕಳಕಳಿ, ಅನಕ್ಷರತೆಯಿಂದಾಗಿ ಪೋಷಕಕರಲ್ಲಿ ಅಪೌಷ್ಟಿಕ ಮಕ್ಕಳ ಬಗೆಗೆ ಅರಿವು ಇಲ್ಲದಂತಾಗಿದೆ. ಒಟ್ಟಾರೆಯಾಗಿ ಕೊರೊನಾ ಮಹಾಮಾರಿ ಪರೋಕ್ಷವಾಗಿ ಅಪೌಷ್ಟಿಕತೆಗೆ ಕಾರಣವಾಗಿದ್ದು, ಸರ್ಕಾರದ ಟೇಕ್ ಹೋಂ ರೇಷನ್ ವ್ಯವಸ್ಥೆ ಬದಲಿಸಿದ್ರೆ ಅಪೌಷ್ಟಿಕತೆ ಪಿಡುಗು ಕೊಂಚ ಬದಲಾಗಲಿದೆ ಅನ್ನೋ ಅಭಿಪ್ರಾಯಗಳೂ ಕೂಡ ವ್ಯಕ್ತವಾಗಿವೆ.

ಅಪೌಷ್ಟಿಕತೆ ಹೆಚ್ಚಾಗಿರುವ ರಾಯಚೂರು ಜಿಲ್ಲೆಯಲ್ಲಿ ಈ ರೀತಿಯ ಅದೆಷ್ಟೋ ಪ್ರಕರಣಗಳು ನೋಡುತ್ತಲೇ ಇದ್ದೇವೆ. ಸರ್ಕಾರವು ಸಹ ಒಬ್ಬ ಮಗುವಿಗೆ ದಿನಕ್ಕೆ ಎಂಟು ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ ಮಕ್ಕಳ ಆರೋಗ್ಯ ಸಾಧನೆ ಮಾತ್ರ ಶೂನ್ಯ. ಅಪೌಷ್ಟಿಕತೆ ತಡೆಗಟ್ಟುವ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪೌಷ್ಠಿಕ ಆಹಾರ ಮಕ್ಕಳ ಕೈ ಸೇರುತ್ತಿಲ್ಲ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಕೂಡಲೇ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ ಒಂದೇ ಕುಟುಂಬದ ಮೂರು ಮಕ್ಕಳ ಬೆಳವಣಿಗೆಗೆ ಬೇಕಾದ ಅಗತ್ಯ ಸಹಾಯ ಹಾಗೂ ಸಹಕಾರಕ್ಕೆ ಮುಂದಾಗಬೇಕಿದೆ.

Source: newsfirstlive.com Source link