ಇಂದು ದೇಶದಾದ್ಯಂತ ನೀಟ್ ಪರೀಕ್ಷೆ

-ಮೊದಲ ಡೋಸ್ ಲಸಿಕೆ ಕಡ್ಡಾಯ

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಕೋರ್ಸ್‍ಗಳ ಕಾಲೇಜು ಪ್ರವೇಶಕ್ಕೆ ಇರುವ 2020-21ನೇ ಸಾಲಿನ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ದೇಶದಾದ್ಯಂತ ಇಂದು ನಡೆಯಲಿದೆ.

ನೀಟ್ ಪ್ರವೇಶ ಪರೀಕ್ಷೆ ಇಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ದೇಶಾದ್ಯಂತ 201 ಪ್ರಮುಖ ನಗರಗಳಲ್ಲಿ ಹಾಗೂ ಕರ್ನಾಟಕದ ಒಟ್ಟು 9 ನಗರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಮೈಸೂರು, ಮಂಗಳೂರು, ಉಡುಪಿಯಲ್ಲಿ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆಗಾಗಿ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಒಟ್ಟು 180 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 4 ಅಂಕಗಳಿರಲಿವೆ. ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ ಪ್ರಶ್ನೆಯ ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಕಡಿತವಾಗುತ್ತದೆ. 3 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತಿದ್ದು, ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ವಿಷಯಗಳಿಗೆ ತಲಾ 45 ಪ್ರಶ್ನೆಗಳಿರಲಿವೆ. ಇದನ್ನೂ ಓದಿ: ನಾಳೆ ನೀಟ್ ಪರೀಕ್ಷೆ- ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ

ನೀಟ್ ಪರೀಕ್ಷೆಗೆ ಮಾರ್ಗಸೂಚಿ
ನೀಟ್ ಪರೀಕ್ಷೆ ಬರೆಯುವ ಪರೀಕ್ಷಾರ್ಥಿಗಗೆ ಮೊದಲ ಡೋಸ್ ಲಸಿಕೆ ಕಡ್ಡಾಯವಾಗಿದ್ದು, ಕೊರೊನಾ ವ್ಯಾಕ್ಸಿನ್ ರಿಪೋರ್ಟ್, ಮೆಸೇಜ್ ಪರಿಶೀಲನೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನಿರಾಕರಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಸೋಂಕಿನ ಲಕ್ಷಣವಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಪೆನ್ ಕೊಂಡೊಯ್ಯುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಕೊಡುವ ಪೆನ್ ಬಳಸಬೇಕು. ವಾಚ್, ಫುಲ್ ಸ್ಲೀವ್ ಡ್ರೆಸ್, ಶೂ, ಬ್ಯಾಗ್, ಪರ್ಸ್ ನಿಷೇಧಿಸಲಾಗಿದೆ. ಇದನ್ನೂ ಓದಿ: ಗುಜರಾತ್ ಮುಂದಿನ ಸಿಎಂ ಯಾರು?- ಪಟೇಲ್ ಸಮುದಾಯಕ್ಕೆ ಮಣೆ ಹಾಕುವ ಚಿಂತನೆ

Source: publictv.in Source link