ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಫೈನಲ್​; 40:40:20 ಫಾರ್ಮುಲಾ ಸೂಚಿಸಿದ ಹೈ ಕಮಾಂಡ್

ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಫೈನಲ್​; 40:40:20 ಫಾರ್ಮುಲಾ ಸೂಚಿಸಿದ ಹೈ ಕಮಾಂಡ್

ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲು ಹೊಸ ಸೂತ್ರ! 40:40:20 ಸೂತ್ರದಡಿ ಬೆಳೆಯುತ್ತಿದೆ ಗಾತ್ರ! ರಾಜ್ಯ ಕಾಂಗ್ರೆಸ್​ನಲ್ಲಿ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಫೈನಲ್ ಮಾಡಲು ಕಡೆಗೂ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ನೀಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿ ಬೇಟಿ ಬೆನ್ನಲ್ಲೇ ಹೊಸ ಸೂತ್ರದಡಿಯಲ್ಲಿ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳಿಸಲು ಹೊಸ ಫಾರ್ಮುಲಾವನ್ನು ಹೈಕಮಾಂಡ್​ ಸೂಚಿಸಿದೆ ಎನ್ನಲಾಗಿದೆ.

ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೆಲ್ಲರಿಗೂ ಸಮಾಧಾನಪಡಿಸಲು ಸೂತ್ರ ಸಿದ್ಧಪಡಿಸಿದ ಕೈ ಹೈಕಮಾಂಡ್ 40:40:20 ಸೂತ್ರದಡಿ ಪದಾಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಆದೇಶ ಮಾಡಿದೆ ಎನ್ನಲಾಗಿದೆ.

ಏನಿದು 40:40:20 ಫಾರ್ಮುಲಾ?
ಈ ಸೂತ್ರದ ಪ್ರಕಾರ ಪದಾಧಿಕಾರಿಗಳ ಪಟ್ಟಿಯಲ್ಲಿ ಶೇ. 40 ರಷ್ಟು ಸ್ಥಾನ ಸಿದ್ಧರಾಮಯ್ಯ ಬೆಂಬಲಿಗರಿಗೆ, ಶೇ. 40 ರಷ್ಟು ಸ್ಥಾನ. ಡಿ.ಕೆ. ಶಿವಕುಮಾರ್ ಬೆಂಬಲಿಗರಿಗೆ, ಹಾಗೂ ಶೇ. 20 ರಷ್ಟು ಸ್ಥಾನ ಉಳಿದ ಹಿರಿಯ ಕಾಂಗ್ರೆಸ್ ನಾಯಕರ ಬೆಂಬಲಿಗರಿಗೆ ನೀಡಬೇಕು ಎಂದು ಸೂಚಿಸುವ ಸೂತ್ರ ಇದಾಗಿದೆ.

ಈ ಹೊಸ ಸೂತ್ರದ ಅಡಿಯಲ್ಲಿ ತಮ್ಮ ತಮ್ಮ ಬೆಂಬಲಿಗರನ್ನು ಪಟ್ಟಿಯಲ್ಲಿ ಸೇರಿಸಲು ನಾಯಕರ ಸಾಲು ಸಾಲು ಪಟ್ಟಿ ರೆಡಿ ಮಾಡ್ತಿದ್ದು, ತಮಗೆ ಕೊಟ್ಟಿರುವ ಶೇಕಡವಾರು ಸ್ಥಾನಗಳ ಪೈಕಿ ಎಲ್ಲಾ ಸ್ಥಾನಗಳಲ್ಲೂ ಬೆಂಬಲಿಗರನ್ನು ಕೂರಿಸಲು ಹರಸಾಹಸ ಪಡ್ತಿದ್ದಾರೆ.
ಇನ್ನೂ ಹಿರಿಯ ನಾಯಕರೆಲ್ಲರಿಗೂ ಸೇರಿಸಿ ಕೊಟ್ಟಿರೋ ಶೇ. 20 ರಷ್ಟು ಸ್ಥಾನಮಾನದ ಪೈಕಿ, ತಮ್ಮ ತಮ್ಮ ಬೆಂಬಲಿಗರಿಗೆ ಸ್ಥಾನ ಕೊಡಿಸಲು ಹಿರಿಯ ನಾಯಕರು ಪ್ರಯತ್ನ ಪಡುತ್ತಿದ್ದು, ಜಿಲ್ಲೆಗಳ ಡಿಸಿಸಿ ಅಧಕ್ಷರ ಬದಲಾವಣೆಯ ಪಟ್ಟಿಗೂ ಇದೇ ಫಾರ್ಮುಲಾ ಅನ್ವಯವಾಗುತ್ತೆ ಎನ್ನಲಾಗಿದೆ.

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಹೆಚ್.ಕೆ. ಪಾಟೀಲ್, ಕೆ.ಹೆಚ್. ಮುನಿಯಪ್ಪ, ಕೃಷ್ಣ ಭೈರೇಗೌಡ ಎಲ್ಲರೂ ಈ ಶೇ. 20 ರಲ್ಲೇ ಬೆಂಬಲಿಗರಿಗೆ ಸ್ಥಾನ ಕೊಡಿಸಲು ಹರಸಾಹಸ ಮಾಡುತ್ತಿದ್ದು, ಹೊಸ ಸೂತ್ರ ನಾಯಕರಿಗೆ ಟೆನ್ಷನ್ ಟೆನ್ಷನ್​ ಎನ್ನುವಂತಾಗಿದೆ.

Source: newsfirstlive.com Source link