ಮಂಡ್ಯದಲ್ಲಿ ಭಾರತಾಂಬೆಯ ದೇಗುಲ- ಮಕ್ಕಳಲ್ಲಿ ದೇಶಾಭಿಮಾನ ತುಂಬುವ ಕೆಲಸ

ಮಂಡ್ಯ: ಗ್ರಾಮಗಳಲ್ಲಿ ದೇವಾಲಯಗಳನ್ನು ಕಟ್ಟಿಸುವುದು, ಪೂಜೆ ಮಾಡೋದು ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ದೇಶದ ಮಹನೀಯರ ಮೂರ್ತಿ ಪ್ರತಿಷ್ಠಾಪಿಸಿ, ಭಾರತಾಂಬೆ ದೇವಾಲಯ ನಿರ್ಮಾಣ ಮಾಡಿ, ಗ್ರಾಮದ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ವಿನೂತನ ಕೆಲಸ ಮಾಡಲಾಗುತ್ತಿದೆ.

ಹಿಂದೂ ಧರ್ಮಕ್ಕೆ ಮುಕ್ಕೋಟಿ ದೇವರು ಎಂಬ ನಂಬಿಕೆ ಇದೆ. ಒಂದೊಂದು ಊರಿನಲ್ಲೂ ಹತ್ತಾರು ಹೆಸರಿನ ದೇವರ ಮೂರ್ತಿಗಳು ಪೂಜಿಸಲ್ಪಡುತ್ತವೆ. ಆದರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಉಪ್ಪಿನಕೆರೆ ಗ್ರಾಮದಲ್ಲಿನ ಜನರು ದೇವರ ಜೊತೆ ಭಾರತಾಂಬೆ ಹಾಗೂ ಮಹನೀಯ ವ್ಯಕ್ತಿಗಳ ಪೂಜೆಯನ್ನು ಮಾಡುತ್ತಿದ್ದಾರೆ. ನಾಡು, ನುಡಿಗಾಗಿ ತಮ್ಮ ಬದುಕು ಸವೆಸಿದ ಮಹಾನ್ ವ್ಯಕ್ತಿಗಳಿಗೆ ಮಂದಿರ ಕಟ್ಟಿ ಅವರ ಜೀವನ ಚರಿತ್ರೆಯನ್ನ ಮುಂದಿನ ಪೀಳಿಗೆಗೆ ತಿಳಿಸಲು ಮುಂದಾಗಿದ್ದಾರೆ.

ಇಲ್ಲಿನ ಗ್ರಾಮಸ್ಥರು ವಿವಿಧ ಹೆಸರಿನ ಹಲವು ದೇವಾಲಯಗಳಿದ್ದರೂ ಅದರೊಂದಿಗೆ ಮಹಾನ್ ಚೇತನಗಳ ಪೂಜೆಗಾಗಿಯೇ ಮಂದಿರ ನಿರ್ಮಿಸಿ, ಜೈ ಭಾರತ್ ಮಾತಾ ಮಂದಿರ ಎಂದು ಹೆಸರಿಟ್ಟಿದ್ದಾರೆ. ಜೈ ಜವಾನ್, ಜೈ ಕಿಸಾನ್ ಘೋಷಣೆಯೊಂದಿಗೆ ಯೋಧನ ಹಾಗೂ ರೈತನ ಮೂರ್ತಿಯು ಮಂದಿರದಲ್ಲಿ ಆಕರ್ಷಣೀಯವಾಗಿದೆ. ಇದನ್ನೂ ಓದಿ: ಕೋವಿಡ್ ಭೀತಿ ಮರೆತು ಕೋಟೆನಾಡಲ್ಲಿ ಮಟನ್ ಖರೀದಿಸಲು ಮುಗಿಬಿದ್ದ ಮಾಂಸ ಪ್ರಿಯರು

ಈ ಮಂದಿರದಲ್ಲಿ ನಾಡಪ್ರಭು ಕೆಂಪೇಗೌಡರು, ಸ್ವಾಮಿ ವಿವೇಕಾನಂದರು, ರಾಷ್ಟ್ರಪಿತ ಮಹಾತ್ಮ ಗಾಂಧಿ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಷ್ಟ್ರಕವಿ ಕುವೆಂಪು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಿರುವ ಗ್ರಾಮಸ್ಥರು, ಭಾರತಾಂಬೆಯ ಮಡಿಲಲ್ಲಿ ಹುಟ್ಟಿ, ನೆಲದ ಏಳಿಗೆಗಾಗಿ ಶ್ರಮಿಸಿದ ಈ ಸಾಧಕರನ್ನು ಪೂಜಿಸುತ್ತಿದ್ದಾರೆ. ಸುಮಾರು 10 ಲಕ್ಷ ರೂ. ಖರ್ಚು ಮಾಡಿ, ಮಂದಿರ ನಿರ್ಮಾಣ ಮಾಡಲಾಗಿದ್ದು, ಉಪ್ಪಿನಕೆರೆ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನೀಡಿರುವ ದೇಣಿಗೆ ಹಣದಿಂದ ಈ ಸುಂದರವಾದ ಮಂದಿರ ನಿರ್ಮಾಣವಾಗಿದೆ.

blank

ಉಪ್ಪಿನಕೆರೆ ಗ್ರಾಮಸ್ಥರು ಮಹಾನ್ ವ್ಯಕ್ತಿಗಳ ಮಂದಿರ ಸ್ಥಾಪಿಸಲು ಕಾರಣವಿದೆ. ಮುಂದಿನ ಪೀಳಿಗೆ ಮಕ್ಕಳಿಗೆ ಸಮಾಜದ ಒಳಿತಿಗಾಗಿ ಶ್ರಮಿಸಿದ ಈ ಮಹಾನ್ ಸಾಧಕರ ಪರಿಚಯವಾಗಬೇಕು ಹಾಗೂ ಅವರು ಬದುಕಿದ ರೀತಿ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಶಾಲೆಯ ಮುಂಭಾಗದಲ್ಲೆ ಮಂದಿರ ಕಟ್ಟಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Source: publictv.in Source link