700 ಅಡಿಕೆ ಮರಗಳನ್ನು ಕಡಿದುಹಾಕಿದ ದುಷ್ಕರ್ಮಿಗಳು.. ಎದೆಬಡಿದುಕೊಂಡು ಅತ್ತ ರೈತ

700 ಅಡಿಕೆ ಮರಗಳನ್ನು ಕಡಿದುಹಾಕಿದ ದುಷ್ಕರ್ಮಿಗಳು.. ಎದೆಬಡಿದುಕೊಂಡು ಅತ್ತ ರೈತ

ಹಾವೇರಿ: ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಅಂತಾರೆ. ಅದು ನಿಜ. ಅಂತಹ ಹೊಟ್ಟೆಕಿಚ್ಚು ಇಲ್ಲಿ ರೈತನಿಗೆ ಯಾವ ಗತಿ ತಂದಿದೆ ಅಂತಾ ನೀವ್‌ ನೋಡ್ಲೇಬೇಕು. ಕಷ್ಟಪಟ್ಟು ರೈತ ಅಡಿಕೆ ಮರ ಬೆಳೆಸಿದ್ದ. ಇನ್ನೇನು ಫಸಲು ಕೈಗೆ ಬರುತ್ತೆ ಅಂತಾ ಕಾಯ್ತಾ ಕೂತಿದ್ದ. ಆದ್ರೆ, ರಾತ್ರೋರಾತ್ರಿ ಬಂದ ಹೊಟ್ಟೆಕಿಚ್ಚಿನ ಜನ, ಮಕ್ಕಳ ಹಾಗೇ ಬೆಳೆಸಿದ ಮರಗಳನ್ನೇ ಕೊಚ್ಚಿ ಕಡಿದು ಹಾಕಿದ್ದಾರೆ. ಅದನ್ನು ನೋಡಿದ ರೈತನ ಆಕ್ರಂದನ ಹೇಳತೀರದಾಗಿದೆ.

ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಬಾಳಂಬಿಡ ಗ್ರಾಮದ ರೈತ ಕಲೀಲ್‌ನ ಈ ಸ್ಥಿತಿಗೆ ಕಾರಣ ದುಷ್ಕರ್ಮಿಗಳು. ನಿನ್ನೆ ರಾತ್ರಿ ಕಲೀಲ್‌ ತೋಟಕ್ಕೆ ನುಗ್ಗಿದ್ದ ಯಾರೋ ದುಷ್ಕರ್ಮಿಗಳು 1 ಎಕರೆ 25 ಗುಂಟೆ ಜಾಗದಲ್ಲಿ ಬೆಳೆದಿದ್ದ 700 ಅಡಿಕೆ ಮರಗಳಿಗೆ ಕೊಡಲಿ ಹಾಕಿಬಿಟ್ಟಿದ್ದಾರೆ. ಇಂದು ಬೆಳಗ್ಗೆ ಕಲೀಲ್‌ ಬಂದು ನೋಡಿದಾಗ ಎಲ್ಲಾ ಮರಗಳು ಬಿದ್ದಿದ್ದನ್ನು ಕಂಡು ಅವನ ಹೃದಯವೇ ಒಡೆದಂತಾಗಿದೆ. ಬಿದ್ದಿರೋ ಮರಗಳನ್ನೇ ಅಪ್ಪಿ ಗೊಳೋ ಅಂತಾ ಹೊರಳಾಡಿ ಕಲೀಲ್‌ ಅತ್ತುಬಿಟ್ಟಿದ್ದಾನೆ.

blank

ಕಲೀಲ್‌ ಅಳೋದನ್ನ ಕಂಡ ಗ್ರಾಮಸ್ಥರು ಎಷ್ಟೇ ಸಮಾಧಾನ ಮಾಡಿದ್ರೂ ಸಮಾಧಾನವಾಗಲೇ ಇಲ್ಲ. ಲಕ್ಷ ಲಕ್ಷ ಖರ್ಚು ಮಾಡಿ ಇನ್ನೇನು ಫಲ ಕೊಡುತ್ತೆ ಅನ್ನೋ ಮರಗಳು ಬಿದ್ದಿರೋದನ್ನ ನೋಡಿದ್ರೆ ಯಾವ ರೈತ ತಾನೇ ಸುಮ್ಮನಾಗ್ತಾನೆ ಹೇಳಿ. ಅವನ ಗೋಳಾಟ ಕಂಡ ಗ್ರಾಮಸ್ಥರ ಕಣ್ಣಲ್ಲೂ ನೀರು ಬಂತು. ಬಳಿಕ ಸ್ಥಳಕ್ಕೆ ಬಂದು ಆಡೂರು ಪೊಲೀಸರು ಪರಿಶೀಲನೆ ನಡೆಸಿದ್ರು.

ಈ ಮರಗಳು ಮಾಡಿರೋ ತಪ್ಪಾದ್ರೂ ಏನು? ಹೊಟ್ಟೆ ಮೇಲೆ ಹೊಡೆಯೋದು ಅಂದ್ರೆ ಇದೆ ನೋಡಿ. ನೂರಾರು ಮರಗಳು, ಅಡಿಕೆ ಬೆಳೆ ಹೊತ್ತು ನಿಂತಿದ್ವು. ಆದ್ರೆ, ಮನುಷ್ಯತ್ವ ಬಿಟ್ಟ ಹೊಟ್ಟೆಕಿಚ್ಚಿನ ಜನ ಮಣ್ಣು ತಿನ್ನೋ ಕೆಲಸ ಮಾಡಿದ್ದಾರೆ. ದುಷ್ಟರು, ದುರುಳರು ಕೊಡಲಿ ಹಾಕಿದ್ದು ಕೇವಲ ಮರಗಳಿಗಲ್ಲ, ರೈತನ ಜೀವನಕ್ಕೆ. ನೆಲಕ್ಕೆ ಉರುಳಿದ್ದು ಕೇವಲ ಮರಗಳಲ್ಲ, ಈ ಕಲೀಲ್‌ ಅನ್ನೋ ರೈತನ ಜೀವನ. ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಲೇಬೇಕು. ಆ ದುಷ್ಟರಿಗೆ ತಕ್ಕ ಪಾಠ ಕಲಿಸಲೇಬೇಕು.

Source: newsfirstlive.com Source link