‘RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ.. ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ’- ಹೆಚ್​ಡಿಕೆ

‘RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ.. ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ’- ಹೆಚ್​ಡಿಕೆ

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮಾತನಾಡಿ ಪಕ್ಷವನ್ನು ಉಳಿಸಿಕೊಳ್ಳಲು ಈ ಹಿಂದೆ ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು ಎಂದಿದ್ದಾರೆ.

ಕಳೆದ 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಹಲವಾರು ರೀತಿಯ ಒತ್ತಡಗಳನ್ನು ಹಾಕಿದ್ರೂ ಬಿಜೆಪಿ ಜೊತೆ ಹೋಗಿರಲಿಲ್ಲ. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಬೇರ್ಪಡಿಸುವ ಕುತಂತ್ರಗಳನ್ನು ಕಾಂಗ್ರೆಸ್ ಮಾಡಿತು. ಹಾಗಾಗಿ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು. ಇದೊಂದು ನಾವು ಮಾಡಿದ ತಪ್ಪು ಎಂದು ಹೇಳಿದ್ದಾರೆ.

ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು‌ ಕಾಂಗ್ರೆಸ್​ನವರೇ ಕಾರಣ..

ಕರ್ನಾಟಕದಲ್ಲಿ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು‌ ಕಾಂಗ್ರೆಸ್​ನವರೇ ಕಾರಣ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗಲೂ ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿರಲಿಲ್ಲ. ದೇವೇಗೌಡರು ಪ್ರಧಾನಿ ಆಗಿದ್ದಾಗ ಅಲ್ಪಸಂಖ್ಯಾತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ತಂದಿದ್ದರು. ಇಂದಿಗೂ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಅಂತಾ ಅಪಪ್ರಚಾರ ಮಾಡ್ತಿದಾರೆ. ಹಾಗಾಗಿ ಮುಸಲ್ಮಾನರು ನಮ್ಮ ಪಕ್ಷವನ್ನ ಅನುಮಾನದಿಂದ ನೋಡುವಂತಾಯಿತು. ಹಾಗಾಗಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಕಾರಣವಾಯಿತು.

ನಾವೆಲ್ಲಾ ಎಚ್ಚರಿಕೆ ಹೆಜ್ಜೆ ಇಡಬೇಕು. ಎಚ್ಚೆತ್ತುಕೊಳ್ಳದೇ ಹೋದರೆ ಅಪಾಯ ಕಾದಿದೆ..

ಆರ್ ಎಸ್ ಎಸ್ ಮೂಲಕ ಬಿಜೆಪಿ ತಮ್ಮ ಸಂಘಟನೆ ಮಾಡ್ತಿದೆ. ನಾವೆಲ್ಲಾ ಎಚ್ಚರಿಕೆ ಹೆಜ್ಜೆ ಇಡಬೇಕು. ಎಚ್ಚೆತ್ತುಕೊಳ್ಳದೇ ಹೋದರೆ ಅಪಾಯ ಕಾದಿದೆ. ಕಾಂಗ್ರೆಸ್ ನಮಗೆ ಎಷ್ಟೆಲ್ಲಾ ತೊಂದರೆ ಕೊಟ್ಟರೂ ನಾವು ಅವರ ಜೊತೆಯೇ ಸರ್ಕಾರ ಮಾಡಬೇಕಾಯಿತು. ಆಗಲೂ ಸರ್ಕಾರ ಹೋಗಲು ಕಾರಣ ಯಾರು ? ಕಾಂಗ್ರೆಸ್ ನಾಯಕರ ಪಿತೂರಿಯಿಂದಲೇ ಮೈತ್ರಿ ಸರ್ಕಾರ ಪತನವಾಯ್ತು.

ಕಲಬುರಗಿ ಪಾಲಿಕೆಯಲ್ಲಿ ನಾವು ಗೆದ್ದಿದ್ದೇ ನಾಲ್ಕು ಸ್ಥಾನಗಳು. ನಮಗೆ ಹತ್ತರಿಂದ ಹನ್ನೆರಡು ಸ್ಥಾನಗಳು ಬರಬೇಕಿತ್ತು. ಆದರೆ ಕಾಂಗ್ರೆಸ್ ನಡವಳಿಕೆಯಿಂದ ನಮಗೆ ಹಿನ್ನಡೆ ಆಗಿದೆ. ನಾವು ಗೆದ್ದಿದ್ದು ನಾಲ್ಕೇ ಸ್ಥಾನ ಆದರೂ ನಿರ್ಣಾಯಕ ಸ್ಥಾನದಲ್ಲಿ ಇದ್ದೇವೆ. ಜೆಡಿಎಸ್ ಶಕ್ತಿ ಕುಂದಿಲ್ಲ. ಅಲ್ಪಸಂಖ್ಯಾತರು ನಮ್ಮ ಬೆಂಬಲಕ್ಕೆ ಇದ್ದರೆ ಬಿಜೆಪಿಯನ್ನು ಸಂಪೂರ್ಣ ಕಿತ್ತು ಹಾಕಲು ಸಿದ್ಧರಿದ್ದೇವೆ.

ಸಿದ್ದರಾಮಯ್ಯ ಆಗಲಿ, ಶಿವಕುಮಾರ್ ಆಗಲಿ ಮಾತಾಡಲು ಬರಲಿಲ್ಲ

ನಾವೇನೂ ಬಿಜೆಪಿ ಪಕ್ಷದ ಅಡಿಯಾಳುಗಳಲ್ಲ.. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಜೊತೆ ಮಾತಾಡಿದ್ದಾರೆ. ಬಿಜೆಪಿ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದು ಮಾತಾಡಿದ್ದಾರೆ. ಆದರೆ ಸಿದ್ದರಾಮಯ್ಯ ಆಗಲಿ, ಶಿವಕುಮಾರ್ ಆಗಲಿ ಮಾತಾಡಲು ಬರಲಿಲ್ಲ ಎಂದು ಹೇಳಿವ ಮೂಲಕ ಕಾಂಗ್ರೆಸ್ ನವರು ಕೇಳಿದ್ರೆ ನಾವು ಬೆಂಬಲ ಕೊಡಲು ಸಿದ್ಧ ಎಂಬ ಸಂದೇಶವನ್ನ ಈ ಮೂಲಕ ಹೆಚ್​ಡಿ ಕುಮಾರಸ್ವಾಮಿ ರವಾನಿಸಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಸಹಕಾರ ಬಹಳ ಅಗತ್ಯವಿದೆ

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬರಲು ಕಾರಣ ಅವರು ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಿರೋದು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಸಹಕಾರ ಬಹಳ ಅಗತ್ಯವಿದೆ. ಪ್ರಾದೇಶಿಕ ಪಕ್ಷವಾಗಿ ನಾವು ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಸರ್ಕಾರ ಮಾಡಿ ನೋಡಿದ್ದೇವೆ. ಯಾವುದೇ ಕಾರಣಕ್ಕೂ ಬಿಜೆಪಿ ಬೆಳೆಯಲು ಬಿಡಬಾರದು. 2023ರಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಿದರೆ ಕೇಂದ್ರದಲ್ಲೂ ಕೂಡಾ ಕಟ್ಟಿ ಹಾಕಬಹುದು. ಕಾಂಗ್ರೆಸ್ ನಾಯಕರ ಕುತಂತ್ರದ ಮಾತುಗಳಿಗೂ ಬಲಿಯಾಗಬೇಡಿ ಎಂದರು.
ಇಡೀ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಜನರ ಭಾವನೆ ಬದಲಾಗುತ್ತಿದೆ. ನಮ್ಮ ಪಕ್ಷವನ್ನು ಮುಗಿಸಲು ಕಾಯುತ್ತಿರುವವರಿಗೆ ಜನತೆ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಸರ್ಕಾರದ ವೈಫಲಗಳ ಬಗ್ಗೆ ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ. ಸರ್ಕಾರ ಕೊರೊನಾ, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಇದರ ಬಗ್ಗೆ ಸದನದಲ್ಲಿ ನಮ್ಮ ಶಾಸಕರ ಜೊತೆ ಹೋರಾಡುತ್ತೇವೆ ಎಂದು ಹೆಚ್​ಡಿಕೆ ಹೇಳಿದ್ರು.

ನಮಗೆ ಕಲಬುರಗಿ ಮೇಯರ್ ಸ್ಥಾನ ಮುಖ್ಯ ಅಲ್ಲ

ಕಲಬುರಗಿ ಮೈತ್ರಿ ಬಗ್ಗೆ ನಾಳೆ ಸಭೆ ಕರೆದಿದ್ದೇವೆ. ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಆರ್.ಅಶೋಕ್ ನಿನ್ನೆ ನನ್ನನ್ನ ಭೇಟಿ ಮಾಡಿದ್ದರು. ಅವರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡಿದ್ದೇವ. ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ತಾರೋ ಅದಕ್ಕೆ ಬದ್ಧರಾಗಿ ಇರ್ತೇವೆ. ನಮಗೆ ಕಲಬುರಗಿ ಮೇಯರ್ ಸ್ಥಾನ ಮುಖ್ಯ ಅಲ್ಲ. ಅದಕ್ಕಿಂತ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಷ್ಟೇ ಮುಖ್ಯ. 2023ರ ಚುನಾವಣೆಯನ್ನ ಗುರಿಯಾಗಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ತೇವೆ ಎಂದು ಇದೇ ವೇಳೆ ಹೆಚ್​ಡಿಕೆ ಹೇಳಿದ್ದಾರೆ.

Source: newsfirstlive.com Source link