ರಾಜ್ಯ ಕಾಂಗ್ರೆಸ್‍ನಲ್ಲಿ ಶುರುವಾಯ್ತಾ ಜಾತಿ ರಾಜಕಾರಣದ ಮತ್ತೊಂದು ಸಮರ..?

– ಕೂಡು ಒಕ್ಕಲಿಗ, ಲಿಂಗಾಯತ ಹೊಸ ಗೊಂದಲ

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಕೂಡು ಒಕ್ಕಲಿಗ ಸಮುದಾಯ ಒಕ್ಕಲಿಗರೋ? ಲಿಂಗಾಯತರೋ? ಎಂಬ ಹೊಸ ಗೊಂದಲ ರಾಜ್ಯ ಕಾಂಗ್ರೆಸ್‍ನಲ್ಲಿ ಹೊಸ ಜಾತಿ ರಾಜಕಾರಣದ ಜಟಾಪಟಿಗೆ ಕಾರಣವಾಗಿದೆ.

ಶನಿವಾರ ಡಿ.ಕೆ.ಶಿವಕುಮಾರ್ ಉತ್ತರ ಕರ್ನಾಟಕ ಭಾಗದ ಕೂಡು ಒಕ್ಕಲಿಗ ಮುಖಂಡರನ್ನು ಭೇಟಿ ಮಾಡಿದ್ದರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕೂಡು ಒಕ್ಕಲಿಗ ಮುಖಂಡರನ್ನು ಡಿಕೆಶಿ ಬಳಿ ಕರೆದುಕೊಂಡು ಹೋಗಿದ್ದರು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ನಮ್ಮನ್ನು ಒಕ್ಕಲಿಗ 3ಂ ಸೇರಲು ಸಹಕಾರ ನೀಡುವಂತೆ ಡಿಕೆಶಿಗೆ ನಿಯೋಗ ಮನವಿ ಮಾಡಿತ್ತು. ಇದರ ಮಾಹಿತಿ ತಿಳಿಯುತ್ತಿದ್ದಂತೆ ಪ್ರಿಯಾಂಕ್ ಖರ್ಗೆಗೆ ಕರೆ ಮಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಡಿಕೆಶಿ ಬಳಿ ಕೂಡು ಒಕ್ಕಲಿಗರ ನಿಯೋಗ ಕರೆದೊಯ್ದಿದ್ದೇಕೆ? ಉತ್ತರ ಕರ್ನಾಟಕ ಭಾಗದಲ್ಲಿ 15 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಕೂಡು ಒಕ್ಕಲಿಗರು ಲಿಂಗಾಯತರ ಉಪ ಪಂಗಡ ಎಂದು ಎಂಬಿಪಿ ಪ್ರಿಯಾಂಕ ಖರ್ಗೆ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ವ್ಯಾಕ್ಸಿನೇಟ್ ಕರ್ನಾಟಕ ಸ್ಪರ್ಧೆಯ ವಿಜೇತರಿಗೆ ಕೆಪಿಸಿಸಿಯಿಂದ ಬಹುಮಾನ ವಿತರಣೆ

ಈ ಹಿನ್ನೆಲೆಯಲ್ಲಿ ಇಂದು ಕೂಡು ಒಕ್ಕಲಿಗ ಮುಖಂಡರ ನಿಯೋಗವನ್ನು ಪ್ರಿಯಾಂಕ್ ಖರ್ಗೆ ಎಂ.ಬಿ.ಪಾಟೀಲ್ ನಿವಾಸಕ್ಕೆ ಕರೆತಂದಿದ್ದಾರೆ. ಕೂಡು ಒಕ್ಕಲಿಗರು ಲಿಂಗಾಯತ ಸಮುದಾಯದ ಜೊತೆ ಗುರುತಿಸಿಕೊಂಡರೆ ಮುಂದೆ 2ಂ ಮೀಸಲಾತಿ ಸಿಕ್ಕಾಗ ಸಹಾಯವಾಗಲಿದೆ ಎಂದು ಮುಖಂಡರ ಮನವೊಲಿಸುವ ಪ್ರಯತ್ನವನ್ನು ಎಂಬಿಪಿ ಮಾಡಿದ್ದಾರೆ. ಕೂಡು ಒಕ್ಕಲಿಗ ಸಮುದಾಯದ ಐಡೆಂಟಿಟಿ ಗೊಂದಲದ ನಡುವೆ ಡಿಕೆಶಿ ವರ್ಸಸ್ ಎಂ.ಬಿ.ಪಾಟೀಲ್ ನಡುವೆ ಶೀತಲ ಸಮರ ಆರಂಭವಾದಂತಿದೆ.

ಕೂಡು ಒಕ್ಕಲಿಗರನ್ನು ಒಕ್ಕಲಿಗರ ಪಟ್ಟಿಗೆ ಸೇರಿಸಲು ಡಿಕೆಶಿ ಕಸರತ್ತು ನಡೆಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಕೂಡು ಒಕ್ಕಲಿಗರು ಲಿಂಗಾಯತರ ಉಪ ಪಂಗಡ ಎಂದು ಎಂ.ಬಿ.ಪಾಟೀಲ್ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಆಂತರಿಕ ವಲಯದಲ್ಲಿ ಇದೀಗ ಒಕ್ಕಲಿಗ, ಲಿಂಗಾಯತ ಹೊಸ ರಾಜಕೀಯ ಜಟಾಪಟಿ ಆರಂಭವಾಗಿದೆ.

Source: publictv.in Source link