ತಾಲಿಬಾನ್​​ಗೆ ಆದಾಯದ ಮೂಲ ಏನು? ಉಗ್ರರು ಹುಡುಕಿಕೊಂಡ ಪಂಚ ಸೂತ್ರಗಳೇನು ಗೊತ್ತಾ?

ತಾಲಿಬಾನ್​​ಗೆ ಆದಾಯದ ಮೂಲ ಏನು? ಉಗ್ರರು ಹುಡುಕಿಕೊಂಡ ಪಂಚ ಸೂತ್ರಗಳೇನು ಗೊತ್ತಾ?

ಉಗ್ರರಾಗಿದ್ದ ತಾಲಿಬಾನಿಗಳ ಮೇಲೆ ಈಗ ಸರ್ಕಾರ ನಡೆಸಬೇಕಾದ ಜವಾಬ್ದಾರಿ ಎದುರಾಗಿದೆ. 20 ವರ್ಷಗಳ ಹಿಂದಿನ ಅಫ್ಘಾನಿಸ್ತಾನಕ್ಕೂ, ಇಂದಿನ ಅಫ್ಘಾನಿಸ್ತಾನಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಇಂದು ದೇಶ ನಡೆಸಲು ದೊಡ್ಡ ಮೊತ್ತದ ಹಣದ ಅವಶ್ಯಕತೆ ಎದುರಾಗಿದೆ. ಜನಸಂಖ್ಯೆ ವಿಚಾರದಲ್ಲೂ ಅಫ್ಘಾನಿಸ್ತಾನದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು, ಜನರ ಆಶೋತ್ತರಗಳನ್ನು ಪೂರೈಸ ಬೇಕಾದ ಒತ್ತಡಕ್ಕೆ ಉಗ್ರ ಸಂಘಟನೆ ಕೂಡ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಈ ಉಗ್ರರು ಐದು ಸೂತ್ರಗಳನ್ನು ರಚಿಸಿದ್ದು, ಆ ಮೂಲಕ ಆದಾಯ ಗಳಿಸುವ ವಿಶ್ವಾಸವನ್ನ ಹೊಂದಿದ್ದಾರೆ

ತಾಲಿಬಾನಿಗಳಿಗೆ ಆದಾಯದ ಮೂಲ ಏನಾಗಲಿದೆ?
ಸರ್ಕಾರ ಇಲ್ಲದಿದ್ದಾಗ ಸುಮಾರು ₹12 ಸಾವಿರ ಕೋಟಿ ಆದಾಯ
ಕಳೆದ ವರ್ಷ ಬರೋಬ್ಬರಿ ₹12 ಸಾವಿರ ಕೋಟಿ ಗಳಿಸಿದ್ದ ಉಗ್ರರು

ಸರ್ಕಾರ ರಚನೆಗೂ ಮುನ್ನವೇ ಸಾವಿರಾರು ಕೋಟಿ ಆದಾಯ ಹೊಂದಿದ್ದ ತಾಲಿಬಾನಿಗಳು, ಕಳೆದ ವರ್ಷವೇ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.6 ಬಿಲಿಯನ್ ಡಾಲರ್ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ 12 ಸಾವಿರ ಕೋಟಿ ರೂಪಾಯಿ ಆದಾಯ ಗಳಿಸಿದ್ದರು ಎನ್ನಲಾಗಿದೆ. ಇದ್ರಲ್ಲಿ ಪ್ರಮುಖವಾಗಿ ಬರೀ ಓಪಿಯಂ ಮಾರಾಟದಿಂದಲೇ ಸುಮಾರು 416 ಮಿಲಿಯನ್ ಡಾಲರ್ ಅನ್ನು ಉಗ್ರರು ಗಳಿಸಿದ್ದರೆ, ಗಣಿಗಾರಿಕೆ ಮೂಲಕ ಸುಮಾರು 400 ಮಿಲಿಯನ್ ಡಾಲರ್​ಗೂ ಅಧಿಕ ಹಾಗೂ ಸುಮಾರು 240 ಮಿಲಿಯನ್​ ಡಾಲರ್​ಗಳನ್ನು ಇತರೆ ದೇಶಗಳ, ಸಂಸ್ಥೆಗಳ ಹಾಗೂ ಖಾಸಗೀ ವ್ಯಕ್ತಿಗಳಿಂದ ಡೊನೇಶನ್​ ರೂಪದಲ್ಲಿ ಪಡೆದುಕೊಂಡಿದ್ದರು. ಇದೇ ಹಣದಿಂದ ಸಾಖಷ್ಟು ಶಸ್ತ್ರಾಸ್ತ್ರಗಳನ್ನ ಕೂಡ ತಾಲಿಬಾನಿಗಳು ಖರೀದಿಸಲು ಸಾಧ್ಯವಾಗಿತ್ತು. ಆದ್ರೆ, ಸದ್ಯದ ಮಟ್ಟಿಗೆ ಹೇಳುವುದಾದರೆ ಉಗ್ರ ಸಂಘಟನೆಯೇ ಬೇರೆ, ಸರ್ಕಾರ ನಡೆಸುವುದೇ ಬೇರೆ.. ಇದಕ್ಕೆ ಇನ್ನೂ ಸಾಕಷ್ಟು ಹಣಕಾಸು ಬೇಕೇ ಬೇಕಾಗುತ್ತದೆ. ಈ ಕಾರಣದಿಂದಾಗಿ ಉಗ್ರರು ಐದು ದಾರಿಗಳ ಬಗ್ಗೆ ಚಿಂತಿಸುತ್ತಿದ್ದಾರೆ.

ತಾಲಿಬಾನಿಗಳು ಹುಡುಕಿಕೊಂಡಿರುವ ಪಂಚ ಸೂತ್ರಗಳೇನು?

ಹಾಗಿದ್ದರೆ ತಾಲಿಬಾನಿಗಳು ಹುಡುಕಿಕೊಂಡಿರುವ ಪಂಚ ಸೂತ್ರಗಳೇನು ಅಂತಾ ನೋಡುವುದಾದರೆ..

1) ಕಸ್ಟಮ್ಸ್​ ಮತ್ತು ತೆರಿಗೆ ವ್ಯವಸ್ಥೆ ಮೂಲಕ ಆದಾಯ

ಈಗ ತಾಲಿಬಾನಿಗಳು ಸರ್ಕಾರದಲ್ಲಿಯೇ ಇರೋದ್ರಿಂದ ಜನರ ಆದಾಯಕ್ಕೆ ತೆರಿಗೆ ವಿಧಿಸುವುದು, ಗೂಡ್ಸ್​ ಮತ್ತು ಮಟಿರಿಯಲ್​ಗಳ ಮೇಲೆ ತೆರಿಗೆ.. ಜೊತೆಗೆ ಕಸ್ಟಮ್ಸ್​​​ ಶುಲ್ಕಗಳ ಮೂಲಕ ಆದಾಯ ಗಳಿಸುವುದು

2) ಗಣಿಗಾರಿಕೆ ಮೂಲಕ ಆದಾಯ ವೃದ್ಧಿಗೆ ಪ್ಲಾನ್

ಈಗಾಗಲೇ ಅಫ್ಘಾನಿಸ್ತಾನದಲ್ಲಿ ಸುಮಾರು 75 ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುವ ಖನಿಜಗಳು ಇವೆ ಎನ್ನಲಾಗಿದ್ದು, ಗಣಿಗಾರಿಕೆ ನಡೆಸಬೇಕಿದೆ. ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಸಲು ಆರಂಭಿಸಿದರೆ ಊಹೆಗೂ ಮೀರಿದ ಆದಾಯವನ್ನ ತಾಲಿಬಾನಿಗಳು ಗಳಿಸಬಹುದು. ಇದಕ್ಕೆ ಸಹಾಯ ಮಾಡುವ ನೆಪದಲ್ಲಿ ಗಣಿಗಾರಿಕೆಯಲ್ಲಿ ಸಿಂಹ ಪಾಲು ಪಡೆಯಲು ಈಗಾಗಲೇ ಚೀನಾ ಸಿದ್ಧವಾಗಿದೆ ಎನ್ನಲಾಗಿದೆ.

blank

3) ಪಾಶ್ಚ್ಯಾತ್ಯವಲ್ಲದ ರಾಷ್ಟ್ರಗಳಿಂದ ಧನ ಸಹಾಯದ ನಿರೀಕ್ಷೆ

ಅಮೆರಿಕಾದ ಗುಪ್ತಚರ ಮೂಲಗಳ ಮಾಹಿತಿ ಪ್ರಕಾರ ತಾಲಿಬಾನಿಗಳಿಗೆ ಪಾಶ್ಚ್ಯಾತ್ಯವಲ್ಲದ ಹಲವು ರಾಷ್ಟ್ರಗಳು ಧನ ಸಹಾಯ ನೀಡುತ್ತಿವೆಯಂತೆ. ಅದ್ರಲ್ಲೂ ಪ್ರಮುಖವಾಗಿ ಪಾಕಿಸ್ತಾನ, ಚೀನಾ, ರಷ್ಯಾ ಹಾಗೂ ಕತಾರ್​​ನಿಂದ ಸಾಕಷ್ಟು ಹಣ ಹರಿದು ಬರುತ್ತಿದೆ ಎನ್ನಲಾಗಿದೆ.

4) ಪಾಶ್ಚ್ಯಾತ್ಯ ರಾಷ್ಟ್ರಗಳ ಅನುದಾನದ ಪಡೆಯುವ ವಿಶ್ವಾಸ

ಒಂದು ವೇಳೆ ತಾಲಿಬಾನ್ ಸರ್ಕಾರಕ್ಕೆ ಪಾಶ್ಚ್ಯಾತ್ಯ ರಾಷ್ಟ್ರಗಳಿಂದ ಮಾನ್ಯತೆ ಸಿಕ್ಕರೆ, ಅನುದಾನ ರೂಪದಲ್ಲಿಯೇ ದೊಡ್ಡ ಮೊತ್ತದ ಹಣ ಹರಿದು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ, ತನ್ನ ಸಾಫ್ಟ್ ಮುಖವನ್ನ ಮಾರ್ಕೆಟಿಂಗ್ ಮಾಡಿ ಮಾನ್ಯತೆ ಪಡೆಯಲು ಉಗ್ರರ ತಂಡ ತುದಿಗಾಲ ಮೇಲೆ ನಿಂತಿದೆ.

5) ಮಾನ್ಯತೆ ದೊರೆಯದಿದ್ದರೆ ಡ್ರಗ್ಸ್​ ಮೂಲಕ ಆದಾಯ

ಒಂದು ವೇಳೆ ಅಂತಾರಾಷ್ಟ್ರೀಯವಾಗಿ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ದೊರೆಯದಿದ್ದ ಪಕ್ಷದಲ್ಲಿ ಹಿಂಬಾಗಿಲ ಮೂಲಕ ಆದಾಯ ಗಳಿಸರು ಈ ಧೂರ್ತರು ಯತ್ನಿಸಬಹುದಾದ ಸಾಧ್ಯತೆ ಇದೆ. ಹಾಗೆ ನೋಡಿದಾರೆ ಈಗಾಗಲೇ ಹಲವು ಬಾರಿ ತಾಲಿಬಾನಿಗಳು, ಅಫ್ಘಾನಿಸ್ತಾನದ ಡ್ರಗ್ಸ್​ ಎಕಾನಮಿಗೆ ಬ್ರೇಕ್ ಹಾಕುವುದಾಗಿ ಹೇಳಿಕೊಂಡಿದ್ದಾರೆ. ಆದ್ರೆ ಒಂದು ವೇಳೆ ತಾಲಿಬಾನಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಯದಿದ್ದ ಪಕ್ಷದಲ್ಲಿ, ಇವರು ಮತ್ತೆ ಓಪಿಯಮ್​ ಸೇರಿದಂತೆ ಡ್ರಗ್ಸ್​​ ಅನ್ನು ಬೇರೆ ಬೇರೆ ದೇಶಗಳಿಗೆ ಸ್ಮಗಲ್ ಮಾಡಿ, ಆ ಮೂಲಕ ಕೂಡ ಹಣ ಗಳಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗಿದೆ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

Source: newsfirstlive.com Source link