ದೇಶ-ಧರ್ಮದ ವಿಚಾರದಲ್ಲಿ ನಾನು ಸದಾ ಧ್ವನಿ ಎತ್ತುತ್ತೇನೆ: ಪ್ರತಾಪ್ ಸಿಂಹ

-ನಾನು ಮೂಲತಃ ಆರ್‌ಎಸ್‌ಎಸ್‌ ಕಾರ್ಯಕರ್ತ

ಮೈಸೂರು: ನಾನು ರಾಜಕೀಯಕ್ಕಾಗಿ ಬಿಜೆಪಿಗೆ ಬಂದವನಲ್ಲ. ನಾನು ಮೂಲತಃ ಆರ್‌ಎಸ್‌ಎಸ್‌ ಕಾರ್ಯಕರ್ತ ಹೀಗಾಗಿ, ದೇಶ, ಧರ್ಮದ ವಿಚಾರ ಬಂದಾಗ ನಾನು ಸ್ವಯಂ ಪ್ರೇರಿತವಾಗಿ ಧ್ವನಿ ಎತ್ತುತ್ತೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ನನ್ನ ತಂದೆಯೂ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದರು. ನಾನೂ ಕೂಡ ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ದೇಶ, ಧರ್ಮಕ್ಕೆ ಸೇವೆ ಸಲ್ಲಿಸಿದ್ದೇನೆ. ದೇವಾಲಯ ತೆರವಿನ ವಿರುದ್ಧದ ತಮ್ಮ ಧ್ವನಿಗೆ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ಧ್ವನಿ ಗೂಡಿಸುತ್ತಿಲ್ಲ ನೀವು ಒಂಟಿನಾ ಎಂಬ ಪ್ರಶ್ನೆಗೆ ಉತ್ತರಿಸಿ, ಧರ್ಮ, ದೇಶದ ರಕ್ಷಣೆಗೆ ನಾನು ಯಾವತ್ತಿಗೂ ಬದ್ಧ. ರಾಜಕೀಯಕ್ಕೆ ಬಂದ ಮೇಲೆ ಇದು ಬರಲಿಲ್ಲ. ನಾನು ಹುಟ್ಟುತ್ತಲೇ ಇದು ಬಂದಿದೆ. ಯಾರನ್ನೋ ಕೇಳಿ, ಅಥವಾ ಯಾರನ್ನೋ ನಂಬಿ ನಾನು ಈ ವಿಚಾರದಲ್ಲಿ ಧ್ವನಿ ಎತ್ತುವ ಅವಶ್ಯಕತೆ ಇಲ್ಲ. ನನಗೆ ನನ್ನ ಬದ್ಧತೆ ಬಗ್ಗೆ ಹೆಚ್ಚು ನಂಬಿಕೆ ಇದೆ. ಅದನ್ನು ಇಲ್ಲೂ ಪಾಲಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದೇವಾಲಯ ಏಕಾಏಕಿ ತೆರವಿಗೆ ಇಂದೇ ಅಧಿಕೃತ ಬ್ರೇಕ್ ಹಾಕ್ತಾರಾ ಸಿಎಂ?

ದೇವಸ್ಥಾನ ತೆರವಿನ ವಿರುದ್ಧದ ನನ್ನ ಕೂಗಿಗೆ ರಾಜ್ಯದ ಮುಖ್ಯಮಂತ್ರಿ ನನಗೆ ಸ್ವತಃ ಕರೆ ಮಾಡಿ ಸ್ಪಂದಿಸಿದ್ದಾರೆ. ನನ್ನೊಂದಿಗೆ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದು, ದೇವಾಲಯ ತೆರವು ವಿಚಾರವಾಗಿ ಉತ್ತಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ನಾನು ರಾಜಕೀಯದಲ್ಲಿ ನನಗೆ ಜೈಕಾರ ಹಾಕುವವರು ಇದ್ದಾರೆ ಎಂದು ರಾಜಕೀಯಕ್ಕೆ ಬಂದಿಲ್ಲ. ನಾನು ಉತ್ತಮ ಉದ್ದೇಶ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ ನಾನು ಅದನ್ನು ಮುಂದುವರಿಸುತ್ತೇನೆ ಎಂದರು. ಇದನ್ನೂ ಓದಿ: ಹಿಂದೂ ದೇವಸ್ಥಾನ ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗುತ್ತಿದೆ: ಪ್ರತಾಪ್ ಸಿಂಹ

Source: publictv.in Source link