5 ಬಾರಿ ಲೋಕಸಭೆ, 2 ಬಾರಿ ರಾಜ್ಯಸಭೆ ಪ್ರವೇಶಿಸಿದ್ದ ಆಸ್ಕರ್ ಫರ್ನಾಂಡಿಸ್.. ರಾಜಕೀಯ ಬದುಕು ಹೇಗಿತ್ತು..?

5 ಬಾರಿ ಲೋಕಸಭೆ, 2 ಬಾರಿ ರಾಜ್ಯಸಭೆ ಪ್ರವೇಶಿಸಿದ್ದ ಆಸ್ಕರ್ ಫರ್ನಾಂಡಿಸ್.. ರಾಜಕೀಯ ಬದುಕು ಹೇಗಿತ್ತು..?

ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆ ಫಲಿಸದೇ ನಮ್ಮನ್ನಗಲಿದ್ದಾರೆ. ದೇಶ ಕಂಡ ಸರಳ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾದ ಆಸ್ಕರ್‌ ಫರ್ನಾಂಡಿಸ್‌ ಕೊನೆಯುಸಿರು ಎಳೆದಿರುವುದು ದೇಶಕ್ಕೆ ತುಂಬಲಾರದ ನಷ್ಟ. ಕೇಂದ್ರದಲ್ಲಿ ವಿವಿಧ ಖಾತೆಯ ಸಚಿವರಾಗಿ, ಲೋಕಸಭಾ, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ಇವರು ನಡೆದು ಬಂದ ಹಾದಿಯ ಬಗ್ಗೆ ಒಂದು ನೋಟ.

ಬಾಲ್ಯದಲ್ಲಿಯೇ ಶಿಸ್ತು ಮೈಗೂಡಿಸಿಕೊಂಡಿದ್ದ ಆಸ್ಕರ್‌ ಫರ್ನಾಂಡಿಸ್‌

ರೂಕ್‌ ಫರ್ನಾಂಡಿಸ್‌ ಮತ್ತು ಲಿಯೋನಿಸ್ಸಾ ಎಮ್‌ ಫೆರ್ನಾಂಡಿಸ್‌ ದಂಪತಿಗೆ 27 ಮಾರ್ಚ್‌ 1941 ರಂದು ಆಸ್ಕರ್‌ ಫರ್ನಾಂಡಿಸ್‌ ಜನಿಸುತ್ತಾರೆ. ಆವಾಗ ಇವರ ಮನೆ ಉಡುಪಿಯಲ್ಲಿ ಇರುತ್ತದೆ. ಒಟ್ಟು 12 ಜನ ಮಕ್ಕಳಲ್ಲಿ ಆಸ್ಕರ್‌ ಫರ್ನಾಂಡಿಸ್‌ ಕೂಡ ಒಬ್ಬರಾಗಿರುತ್ತಾರೆ. ರೂಕ್‌ ಫರ್ನಾಂಡಿಸ್‌ ಅವರು ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮುಖ್ಯಸ್ಥರಾಗಿದ್ದವರು. ಆನಂತರ ಮಣಿಪಾಲ ತಾಂತ್ರಿಕ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಲಿಯೋನಿಸ್ಸಾ ಎಮ್‌ ಫೆರ್ನಾಂಡಿಸ್‌ ಅವರು ಮ್ಯಾಜಿಸ್ಟ್ರೇಟ್‌ ಆಗಿ ನೇಮಕಗೊಂಡ ಭಾರತದ ಮೊದಲ ಮಹಿಳೆಯಾಗಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಆಸ್ಕರ್‌ ಫರ್ನಾಂಡಿಸ್‌ ಬಾಲ್ಯದಲ್ಲಿಯೇ ಶಿಸ್ತಿನ ಬಾಲಕನಾಗಿರುತ್ತಾರೆ. ದೊಡ್ಡ ಕುಟುಂಬದಲ್ಲಿ ಬೆಳೆದಿದ್ದರಿಂದ ಒಟ್ಟಿಗೆ ಜೀವನ ಮಾಡುವುದು, ಸಂಘಟನೆ ಮಾಡುವುದು, ಹೊಂದಾಣಿಕೆ ಮಾಡಿಕೊಳ್ಳುವುದನ್ನು ರಕ್ತಗತವಾಗಿಯೇ ಬೆಳೆಸಿಕೊಂಡಿರುತ್ತಾರೆ.

ಕಾಲೇಜು ಮುಗಿದ ಮೇಲೆ ಕಾಂಗ್ರೆಸ್‌ ಸೇರಿದ ಆಸ್ಕರ್‌ ಫರ್ನಾಂಡಿಸ್‌

ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದ ಆಸ್ಕರ್‌ ಫರ್ನಾಂಡಿಸ್‌ ಅವರು ಬಾಲ್ಯದಲ್ಲಿ ಚರ್ಚಿನ ವಿವಿಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ರು. ಸಾಮಾಜಕ್ಕೆ ಸಹಾಯವಾಗುವ ಕೆಲಸವನ್ನು ಮಾಡುತ್ತಿದ್ರು. ಒಂದು ಕಡೆ ಶಾಲಾ ಕಾಲೇಜು ಶಿಕ್ಷಣ ಮಾಡುತ್ತಲೇ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿಕೊಳ್ಳುತ್ತಾರೆ. ಜನರ ನೋವು ನಲಿವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಕಾಲೇಜು ಜೀವನ ಮುಗಿದ ಮೇಲೆ ಇವರನ್ನು ರಾಜಕೀಯ ಕ್ಷೇತ್ರ ಕೈಬೀಸಿ ಕರೆಯುತ್ತದೆ. ಕಾಂಗ್ರೆಸ್‌ ಪಕ್ಷವನ್ನು ಸೇರಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾರೆ. ಪಕ್ಷದ ಕಾರ್ಯಕರ್ತರನ್ನು ಜತೆಯಾಗಿ ಕರೆದುಕೊಂಡು ಹೋಗುತ್ತಾರೆ. ಅನೇಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗಾಗಿ ಮನೆ ಮನೆಗೆ ಹೋಗಿ ಮತಯಾಚನೆ ಮಾಡುತ್ತಾರೆ. ಇವರ ರಾಜಕೀಯ ಚತುರತೆ, ಕಾರ್ಯವೈಖರಿಯನ್ನು ನೋಡಿದ ಕಾಂಗ್ರೆಸ್‌ನಲ್ಲಿ ದೊಡ್ಡ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರುತ್ತವೆ.

1980ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ

1975 ರಿಂದ 1977ರ ವರೆಗೆ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥತಿಯನ್ನು ಹೇರುತ್ತೆ. ಸಾವಿರಾರು ಮಂದಿಯನ್ನು ಜೈಲಿಗೆ ಹಾಕಲಾಗುತ್ತೆ. ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ನೀಡುವುದಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್‌ ವಿರುದ್ಧ ದೇಶಾದ್ಯಂತ ವಿರೋಧಿ ಅಲೆ ಎದ್ದಿರುತ್ತೆ. ಹೀಗಾಗಿ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿ 295 ಸೀಟು ಗೆದ್ದು ಅಧಿಕಾರದ ಗದ್ದುಗೆ ಹಿಡಿಯುತ್ತೆ. ಮೊದಲು ಮೊರಾರ್ಜಿ ದೇಸಾಯಿ ಅನಂತರ ಚರಣ್‌ ಸಿಂಗ್‌ ಪ್ರಧಾನಿಯಾಗುತ್ತಾರೆ. ಜನತಾ ಪಾರ್ಟಿಯ ಸರ್ಕಾರ ಜನತೆಗೆ ತೃಪ್ತಿ ತರುವುದಿಲ್ಲ. ಅವರಲ್ಲಿಯೇ ಭಿನ್ನಾಭಿಪ್ರಾಯಗಳು ಭುಗಿಲೇಳುತ್ತವೆ. ದೇಶಾದ್ಯಂತ ಮತ್ತೆ ಇಂದಿರಾ ಗಾಂಧಿ ಅಲೆ ಎದ್ದಿರುತ್ತೆ. ಹೀಗಾಗಿಯೇ 1980ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಬರುತ್ತೆ ಅನ್ನೋದು ಖಚಿತವಾಗಿ ಬಿಡುತ್ತೆ. ಇತ್ತ ಸಂಘಟನಾ ಚತುರ, ಉತ್ಸಾಹಿ ತರುಣನಾಗಿದ್ದ ಆಸ್ಕರ್‌ ಫರ್ನಾಂಡಿಸ್‌ಗೆ ಉಡುಪಿ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗುತ್ತೆ.

ಆಸ್ಕರ್‌ ಫರ್ನಾಂಡಿಸ್‌ಗೆ ಎದುರಾಳಿಯಾಗಿ ಜನತ ಪಾರ್ಟಿಯಿಂದ ವಿ.ಎಸ್‌.ಆಚಾರ್ಯ ಸ್ಪರ್ಧಿಸುತ್ತಾರೆ. ಇಲ್ಲಿಂದಲೇ ಆಸ್ಕರ್‌ ರಾಜಕೀಯದ ಉಜ್ವಲ ಭವಿಷ್ಯ ಆರಂಭವಾಗುತ್ತದೆ. ಚುನಾವಣಾ ಫಲಿತಾಂಶ ಹೊರಬಿದ್ದಾಗ ಆಸ್ಕರ್‌ ಫರ್ನಾಂಡಿಸ್‌ 159,969 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಆಸ್ಕರ್‌ ಒಟ್ಟು 2,61,738 ಮತಗಳನ್ನು ಪಡೆದಿದ್ದರೆ, ವಿ.ಎಸ್‌.ಆಚಾರ್ಯ 1,01769 ಮತಗಳನ್ನು ಪಡೆದು ಪರಾಭವಗೊಳ್ಳುತ್ತಾರೆ. ಈ ಮೂಲಕ ಸರಳ ಸಜ್ಜನ ವ್ಯಕ್ತಿಯಾಗಿರೋ ಆಸ್ಕರ್‌ ಫರ್ನಾಂಡಿತ್‌ ಸಂಸತ್ತು ಪ್ರವೇಶಿಸುತ್ತಾರೆ.

1984, 1989, 1991, 1996ರಲ್ಲಿಯೂ ಎಂಪಿಯಾಗಿ ಗೆಲುವು

1980ರಲ್ಲಿ ಲೋಕಸಭೆಗೆ ಆಯ್ಕೆಯಾದ ನಂತರ ಆಸ್ಕರ್‌ ಫರ್ನಾಂಡಿಸ್‌ ಉತ್ತಮ ಕೆಲಸ ಮಾಡುತ್ತಾರೆ. ಜನರ ಕೈಗೆ ಸಿಗುವ ರಾಜಕಾರಣಿಯಾಗಿ ಬೆಳೆಯುತ್ತಾರೆ. ಕ್ಷೇತ್ರದ ಜನರ ಜೊತೆ ಆಪ್ತತೆ ಬೆಳೆಸಿಕೊಳ್ಳುತ್ತಾರೆ. ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ತಮ್ಮ ಕ್ಷೇತ್ರದಲ್ಲಿ ಯಾವುದೇ ಭಿನ್ನಮತ ಎದ್ದೇಳದಂತೆ ಕಾಳಜಿ ವಹಿಸುತ್ತಾರೆ. ಅಭಿವೃದ್ಧಿಯ ಕೆಲಸದಲ್ಲಿಯೂ ತೊಡಗಿಕೊಳ್ಳುತ್ತಾರೆ. ಜನರ ನೋವು ನಲಿವಿಗೆ ಸ್ಪಂದಿಸುತ್ತಾರೆ. ಇದೇ ಕಾರಣಕ್ಕೆ ಅನಂತರ ನಡೆದ 1984, 1989, 1991, 1996 ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸುತ್ತಾರೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರಿಗೆ ಆಪ್ತರಾಗಿ ಗುರುತಿಳಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅವರ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಾರೆ. ಅತ್ಯುತ್ತಮವಾಗಿ ಕೆಲಸ ಮಾಡುವ ಮೂಲಕ ಹೆಸರುಗಳಿಸಿಕೊಳ್ಳುತ್ತಾರೆ. ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಬೆಳೆಯುತ್ತಾರೆ.

ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಣೆ

ಅದಾಗಲೇ ಕಾಂಗ್ರೆಸ್‌ನಲ್ಲಿ ಆಸ್ಕರ್‌ ಫರ್ನಾಂಡಿಸ್‌ ದೊಡ್ಡ ನಾಯಕರಾಗಿ ಬೆಳೆದಿರುತ್ತಾರೆ. ಕರ್ನಾಟದಲ್ಲಿ ವಿಧಾನಸಭೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇವರು ಮಾತು ನಡೆಯುತ್ತದೆ. ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆಯುತ್ತಾರೆ. ಹೈಕಮಾಂಡ್‌ ಜೊತೆಗೆ ಉತ್ತಮ ಸಂಬಂಧ ಹೊಂದಿರೋ ಹಿನ್ನೆಲೆಯಲ್ಲಿ 1998ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಹಾಗೇ 2004ರಲ್ಲಿ ಮತ್ತೆ ಕಾಂಗ್ರೆಸ್‌ನಿಂದಲೇ ರಾಜ್ಯಸಭೆಗೆ ಪುನರಾಯ್ಕೆ ಆಗುತ್ತಾರೆ. ಮನಮೋಹನ್‌ ಸಿಂಗ್‌ ಸಚಿವ ಸಂಪುಟದಲ್ಲಿ ಅನೇಕ ಸಚಿವಾಲಯಕ್ಕೆ ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ. ಅದರಲ್ಲಿ ಅಂಕಿ ಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ, ಯುವಜನ ಮತ್ತು ಕ್ರೀಡೆ, ಕಾರ್ಮಿಕ ಸಚಿವಾಲಯ, ಅನಿವಾಸಿ ಭಾರತೀಯರ ಸಚಿವಾಲಯಗಳ ಖಾತೆಯನ್ನೂ ನಿರ್ವಹಿಸಿರುತ್ತಾರೆ.

Source: newsfirstlive.com Source link