ಮೈದಾನಕ್ಕಿಳಿದು ಫೀಲ್ಡಿಂಗ್ ಮಾಡಿದ ಶ್ವಾನದ ಆಟಕ್ಕೆ ನೆಟ್ಟಿಗರು ಫಿದಾ!

ಮೈದಾನಕ್ಕಿಳಿದು ಫೀಲ್ಡಿಂಗ್ ಮಾಡಿದ ಶ್ವಾನದ ಆಟಕ್ಕೆ ನೆಟ್ಟಿಗರು ಫಿದಾ!

ಟಿ20 ಕ್ರಿಕೆಟ್‌ ಪಂದ್ಯದ ವೇಳೆ ನಾಯಿಯೊಂದು ಫೀಲ್ಡಿಂಗ್‌ಗೆ ಇಳಿದಿದ್ದು, ಬ್ಯಾಟ್ಸ್‌ಮನ್‌ಗಳು ರನ್‌ ಕದಿಯುತ್ತಿದ್ದಾಗ ಚೆಂಡನ್ನು ಕಚ್ಚಿಕೊಂಡು ವಿಕೆಟ್‌ನತ್ತ ಓಡಿದೆ. ನಾಯಿಯ ಕ್ಷೇತ್ರ ರಕ್ಷಣೆಯ ಆಟವನ್ನು ನೋಡಿದ ಆಟಗಾರರು, ಮೂಕವಿಸ್ಮಿತರಾಗಿದ್ದಾರೆ.

ಬ್ರೀಡಿ ಕ್ರಿಕೆಟ್‌ ಕ್ಲಬ್‌ ಮತ್ತು ಉತ್ತರ ಐರ್ಲೆಂಡ್‌ ಕ್ರಿಕೆಟ್‌ ಕ್ಲಬ್‌ನ ನಾಗರಿಕ ಸೇವಾ ತಂಡದ ನಡುವೆ ನಡೆಯುತ್ತಿದ್ದ ಆಲ್‌-ಐರ್ಲೆಂಡ್‌ ಟಿ20 ಮಹಿಳೆಯರ ಸೆಮಿ-ಫೈನಲ್‌ ಪಂದ್ಯದ ವೇಳೆ, ಈ ಘಟನೆ ನಡೆದಿದೆ. ಸಿಎಸ್ಎನ್‌ಐ ತಂಡದ ಆಟಗಾರ್ತಿ ಅಬ್ಬಿ ಲೆಕ್ಕಿ ಬ್ಯಾಟ್‌ನಿಂದ ಚಿಮ್ಮಿದ ಚೆಂಡನ್ನು ಹಿಡಿಯಲು ನಾಯಿ ಪ್ರೇಕ್ಷಕರ ಗ್ಯಾಲರಿ ಕಡೆಯಿಂದ ಓಡಿ ಬಂದಿದೆ. ಆದರೆ ಫೀಲ್ಡರ್‌ ಕೈಗೆ ಚೆಂಡು ಸಿಕ್ಕಿದ್ದರಿಂದ ಮೊದಲ ಪ್ರಯತ್ನದಲ್ಲಿ ನಾಯಿ ಸೋತಿದೆ.

ಇದನ್ನೂ ಓದಿ:ಮರಳು ಕಲಾವಿದನ ಕೈಚಳಕದಲ್ಲಿ ಮೂಡಿದ ಅದ್ಭುತ ಕಲಾಕೃತಿ..ವಿಶ್ವದ ಮೊದಲ ಚಿಪ್ಪಿನ ಗಣಪ ಹೇಗಿದೆ ಗೊತ್ತಾ?

ಇದೇ ವೇಳೆ ರನ್‌ ಕದಿಯುತ್ತಿದ್ದಾಗ ಔಟ್‌ ಮಾಡಲು ಪ್ರಯತ್ನಿಸಿ ಎಸೆದ ಚೆಂಡು ಕ್ರೀಸ್‌ನಿಂದ ದೂರ ಹೋಗಿದೆ. ತಕ್ಷಣ ವೇಗವಾಗಿ ಓಡಿ ಬಂದ ನಾಯಿ, ಚಾಕಚಕ್ಯತೆಯಿಂದ ಬಾಯಲ್ಲಿ ಚೆಂಡನ್ನ ಹಿಡಿದು ಓಡ ತೊಡಗಿದೆ. ಪಂದ್ಯದ ನಡುವೆ ಎದುರಾದ ಅಡೆತಡೆಗೆ ಆಟಗಾರರು ಕಕ್ಕಾಬಿಕ್ಕಿಯಾದರೂ, ನಾಯಿಯ ತುಂಟಾಟ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದೆ.

ಮಾಲೀಕನ ಕೈಗೆ ಸಿಗದೆ ಓಡುತ್ತಿದ್ದ ನಾಯಿಯನ್ನು ಸಿಎಸ್ಎನ್‌ಐ ತಂಡದ ಆಟಗಾರ್ತಿ ಕೈಚಾಚಿ ಕರೆದಿದ್ದಾರೆ. ನೇರವಾಗಿ ಆಕೆಯತ್ತ ಹೋದ ನಾಯಿ, ಮುದ್ದು ಮಾಡಿಸಿಕೊಳ್ಳುತ್ತ ನಿಂತಿದ್ದಾಗ ಮಾಲೀಕನ ಕೈಸೆರೆಯಾಗಿದೆ. ಪಂದ್ಯದ ನಡುವೆ ನಡೆದ ಈ ಘಟನೆಯ ವಿಡಿಯೋ, ಟ್ವಿಟರ್‌ನಲ್ಲಿ ಹೆಚ್ಚು ಸದ್ದು ಮಾಡ್ತಿದ್ದು, ನಾಯಿಯ ಫೀಲ್ಡಿಂಗ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Source: newsfirstlive.com Source link