ದೊಣ್ಣೆಯಿಂದ ಹೊಡೆದು ಅಪ್ಪನನ್ನೇ ಕೊಂದ ಮಗ!

ಶಿವಮೊಗ್ಗ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಜಗಳವಾಗಿದ್ದು, ದೊಣ್ಣೆಯಿಂದ ಹೊಡೆದು ಮಗನೇ ಅಪ್ಪನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪದಲ್ಲಿ ನಡೆದಿದೆ.

ಕೊಲೆಯಾದವರನ್ನು ಕುಮಾರನಾಯ್ಕ (55) ಎಂದು ಗುರುತಿಸಲಾಗಿದೆ. ಇವರನ್ನು ಮಗ ಮಧು (28) ಕೊಲೆ ಮಾಡಿದ್ದಾನೆ. ಭಾನುವಾರ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆರೋಪಿ ಮಧು ತನ್ನ ತಂದೆಗೆ ದೊಣ್ಣೆಯಿಂದ ಹೊಡೆದಿದ್ದಾನೆ.

ದೊಣ್ಣೆಯಿಂದ ಹೊಡೆದ ರಭಸಕ್ಕೆ ಕುಮಾರನಾಯ್ಕನ ಕಿವಿಯಲ್ಲಿ ರಕ್ತಸ್ರಾವ ಆಗಿತ್ತು. ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಕುಮಾರನಾಯ್ಕನಿಗೆ ಇದು ಗೊತ್ತಾಗಿರಲಿಲ್ಲ. ಗಲಾಟೆಯಾದ ನಂತರ ಕುಮಾರನಾಯ್ಕ ಮನೆಯಿಂದ ಹೊರಗೆ ಹೋಗಿದ್ದಾನೆ. ತಡರಾತ್ರಿ ಮನೆಗೆ ವಾಪಸ್ಸಾಗಿ ಮನೆಯ ಜಗುಲಿ ಮೇಲೆ ಮಲಗಿಕೊಂಡಿದ್ದ. ಮಲಗಿದ್ದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಇದನ್ನೂ ಓದಿ: ಕಟ್ಟಡ ಕುಸಿತ- ಹಲವರು ನಾಪತ್ತೆ

ತನ್ನ ತಂದೆಯ ಪ್ರಾಣ ಹೋಗಿದ್ದರಿಂದ ಮೃತ ಕುಮಾರನಾಯ್ಕನ ಪುತ್ರ, ಆರೋಪಿ ಮಧು ಯಾರಿಗೂ ತಿಳಿಸದೇ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದ. ತನ್ನ ತಂದೆ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಮನೆಯ ಬಳಿ ಬಂದ ಕುಮಾರನಾಯ್ಕನ ಪುತ್ರಿ ಶಿಲ್ಪಾಬಾಯಿ ನನ್ನ ತಂದೆಗೆ ಸಹೋದರ ಮಧು ಹಲ್ಲೆ ಮಾಡಿ ಕೊಲೆಗೈದಿದ್ದಾನೆ ಎಂದು ಆರೋಪಿಸಿ, ತುಂಗಾನಗರ ಠಾಣೆಗೆ ದೂರು ನೀಡಿದ್ದಾಳೆ.

blank

ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಧುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

Source: publictv.in Source link