ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ- ಹೆಚ್​ಡಿಕೆ ಹೀಗಂದಿದ್ದೇಕೆ..?

ಕಾಂಗ್ರೆಸ್ ನಾಯಕರಿಗೆ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ- ಹೆಚ್​ಡಿಕೆ ಹೀಗಂದಿದ್ದೇಕೆ..?

ಬೆಂಗಳೂರು: ರಾಜ್ಯಮಟ್ಟದ ಕಾಂಗ್ರೆಸ್ ನಾಯಕರಿಗೆ ಜಾತ್ಯಾತೀತ ಶಕ್ತಿಗಳು ಒಟ್ಟುಗೂಡಬೇಕೆಂಬ ಅಭಿಲಾಷೆಯೇ ಇಲ್ಲ.. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗೆ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ನಮ್ಮ ವಿರುದ್ಧ ಕುತಂತ್ರ ಮಾಡಿದರೂ ಕೈಜೋಡಿಸಿದೆವು. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ನಮಗೆ ಗೌರವ ಇದೆ. ದೇವೇಗೌಡರು ಹಾಗೂ ಖರ್ಗೆ ಅವರು ಮಾತ್ರ ಚರ್ಚಿಸಿದ್ದಾರೆ. ಉಳಿದ ಯಾವ ನಾಯಕರೂ ನಮ್ಮ ಬಳಿ ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೆಡಿಎಸ್​ನ್ನ ಬಿಜೆಪಿಯ ಬಿ ಟೀಂ ಎಂದು ನಿರೂಪಿಸುವ ಉದ್ದೇಶ ಹೊಂದಿದ್ದಾರೆ. ನಮ್ಮ ಪಕ್ಷದ ಶಕ್ತಿಯನ್ನ ಕುಂದಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರಿಗೂ ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಇಷ್ಟವೇ ಇಲ್ಲ. ಇದನ್ನ ಮೈಸೂರು ಮೇಯರ್ ಚುನಾವಣೆ ವೇಳೆಯೇ ನೋಡಿದ್ದೇವೆ. ಆಗ ರಾಜ್ಯಮಟ್ಟದ ಯಾವ ನಾಯಕರೂ ನಮ್ಮನ್ನ ಸಂಪರ್ಕ ಮಾಡಲೇ ಇಲ್ಲ. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಹೈಕಮಾಂಡ್ ರಾಜ್ಯ ನಾಯಕರಿಗೆ ಮೈತ್ರಿಗೆ ಸೂಚಿಸಲಿ. ಇಲ್ಲವೇ ಹೈಕಮಾಂಡ್ ನಮಗೆ ಮನವಿ ಮಾಡಲಿ. ಆಗ ಕಲಬುರಗಿ ಮಹಾನಗರ ಪಾಲಿಕೆಗೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಬಿಜೆಪಿ ಪಕ್ಷ ನಮ್ಮ ಜೊತೆ ಮಾತುಕತೆ ಮಾಡಿದ್ದಾರೆ. ಬಿಜೆಪಿ ನಾಯಕರೂ ಕೂಡ ಅವಶ್ಯಕತೆ ಇದ್ದಾಗ ಬಳಸಿಕೊಂಡು ನಂತರ ನಮ್ಮ ವಿರುದ್ಧ ಮಾತನಾಡುತ್ತಾರೆ. ಹೀಗಾಗಿ ನಾವು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ಕೈನಾಯಕರ ಎತ್ತಿನ ಗಾಡಿ ಚಲೋ ವಿಚಾರವಾಗಿ ಪ್ರತಿಕ್ರಿಯಿಸಿ.. ಕಾಂಗ್ರೆಸ್​ನವ್ರು ಇಂದು ಎತ್ತಿನಗಾಡಿಯಲ್ಲಿ ಬಂದ್ರು. ಇಂದು ಪೆಟ್ರೋಲ್ ಬೆಲೆ ಏರಿಕೆಯಾಗಿರುವುದಕ್ಕೆ ಕಾಂಗ್ರೆಸ್ ಕೊಡುಗೆಯೂ ಇದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಕಲಬುರಗಿ ಮಹಾನಗರ ಪಾಲಿಕೆ ತೀರ್ಮಾನ ಮಾಡಲು ಇನ್ನೂ ಸಮಯ ಇದೆ. ನಾವೆಲ್ಲ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇವೆ. ಸದನದಲ್ಲಿ ಕಾಂಗ್ರೆಸ್ ನವ್ರು ಭಾಷಣ ಮಾಡುವುದರಲ್ಲಿ ನಿಸ್ಸೀಮರು. ನಮಗೆ ಅವಕಾಶ ಸಿಕ್ಕರೆ ಖಂಡಿತಾ ನೀರಾವರಿ ಯೋಜನೆ ಜೊತೆಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕಲಾಪ ವ್ಯರ್ಥವಾಗದಂತೆ ಚರ್ಚೆ ನಡೆಸಲಿ ಎಂದು ಹೇಳಿಕೆ ನೀಡಿದ್ದಾರೆ.

Source: newsfirstlive.com Source link