ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ.. 30 ಕೆ.ಜಿ. ತೂಕದ ಪಂಚ ಲೋಹದ ಪ್ರಬಾಳೆ ಕಳ್ಳತನ

ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ.. 30 ಕೆ.ಜಿ. ತೂಕದ ಪಂಚ ಲೋಹದ ಪ್ರಬಾಳೆ ಕಳ್ಳತನ

ರಾಮನಗರ: ಕಳ್ಳರು ತಮ್ಮ ಕೈಚಳಕವನ್ನು ದೇವಾಲಯಗಳ ಮೇಲೆ ತೋರಿಸಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಪಟ್ಟಲದಮ್ಮ ದೇವಾಲಯ ಹಾಗೂ ವಡ್ಡರದೊಡ್ಡಿ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದಾರೆ. ಮಹದೇಶ್ವರ ದೇವಾಲಯದ ಬೀಗ ಮುರಿದು ಒಳನುಗ್ಗಿರುವ ಕಳ್ಳರು ದೇವರಿಗೆ ಧರಿಸಿದ್ದ 30 ಕೆ.ಜಿ ತೂಕದ ಪಂಚ ಲೋಹದ ಪ್ರಬಾಳೆ, ನಾಗರ ಸೆಡೆ, ದೀಪಗಳು, ಆರತಿ ತಟ್ಟೆ, ಬಿಂದಿಗೆ ಹುಂಡಿ ಹಾಗೂ ಗಂಟೆಗಳನ್ನ ಕಳ್ಳತನ ಮಾಡಿದ್ದಾರೆ. ಅಂದಾಜು 30 ರಿಂದ 40 ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮಹದೇಶ್ವರ ದೇವಾಲಯ ಕಳ್ಳತನ ಮಾಡಿದ ನಂತ್ರ ಚಕ್ಕೆರೆ ಶಕ್ತಿ ದೇವತೆ ಪಟ್ಟಲದಮ್ಮ ದೇವಾಲಯ‌ ಕಳ್ಳತನ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ. ದೇವಾಲಯಕ್ಕೆ ಅಳವಡಿಸಿದ ಸಿಸಿ ಕ್ಯಾಮರಾಗಳನ್ನ ಬೇರೆ ಕಡೆಗೆ ತಿರುಗಿಸಿದ್ದಾರೆ‌, ಅಲ್ಲದೇ ಕಿಟಕಿ ಗ್ಲಾಸ್ ಕೂಡ ಹೊಡೆದಿದ್ದಾರೆ. ಬಾಗಿಲಿನಲ್ಲಿ ನಿಂತು ಹಕ್ಕಿ ಪಕ್ಷಿಗಳನ್ನ ಹೊಡೆಯುವ ಕ್ಯಾಟರ್ ಬಿಲ್ ಬಳಸಿ ದೇವಾಲಯದ ಒಳಗೆ ಇದ್ದ ಸಿಸಿಟಿವಿಯ ಡಿವಿಆರ್ ಗೆ ಹೊಡೆದಿದ್ದಾರೆ. ನಂತ್ರ ಬಾಗಿಲನ್ನ ಹೊಡೆಯುವ ಪ್ರಯತ್ನ ಮಾಡಿದ್ದಾರೆ ಆದ್ರೆ ಬಾಗಿಲು ಹೊಡೆಯಲು ಸಾಧ್ಯವಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಪಟ್ಟಲದಮ್ಮ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕಳ್ಳರು ದೇವಾಲಯದ ಮುಂದೆ ಇರುವ ಸಿಸಿ ಕ್ಯಾಮರಾಗಳನ್ನು ಮಾತ್ರ ಬೇರೆ ಕಡೆಗೆ ತಿರುಗಿಸಿದ್ದಾರೆ. ಆದರೆ ಬಾಗಿಲನ ಬಲ ಭಾಗದಲ್ಲಿದ್ದ ಸಿಸಿ ಕ್ಯಾಮರಾವನ್ನು ಕಳ್ಳರು ಗಮನಿಸಲಿಲ್ಲ. ಹಾಗಾಗಿ ಇಬ್ಬರು ಕಳ್ಳರು ಬಾಗಿಲು ಹೊಡೆಯುವುದು ಹಾಗೂ ದೇವಾಲಯದ ಒಳಗಿದ್ದ ಸಿಸಿಟಿವಿ ಡಿವಿಆರ್ ನನ್ನ ಕ್ಯಾಟರ್ ಬಿಲ್ ನಿಂದ ಹೊಡೆಯುವ ದೃಶ್ಯ ಸೆರೆಯಾಗಿದೆ.

ದೇವಾಲಯ ಕಳತನ ಮಾಡಿರುವ ಕಳ್ಳರು ಕಳೆದ 5 ದಿನಗಳಿಂದ ಗ್ರಾಮದಲ್ಲೆ ವಾಸ್ತವ್ಯ ಹೂಡಿದ್ರು. ಇಬ್ಬರು ಗಂಡಸರು ಒಬ್ಬಳು ಹೆಂಗಸು ಇಬ್ಬರು ಮಕ್ಕಳು ನಾವು ಜೇನು ಬಿಚ್ಚುವವರು ಎಂದು ಹೇಳಿಕೊಂಡು ಗ್ರಾಮದ ಪಟ್ಟಲದಮ್ಮ ಕಲ್ಯಾಣ ಮಂಟಪದ ಮುಂದೆ ಇದ್ರು. ಇದೀಗ ಸಿಸಿಟಿವಿಯಲ್ಲಿ ಸೆರೆಯಾದವರು ಸಹ ಒದೇ ಇಬ್ಬರು ಜೇನು ಬಿಚ್ಚಲು ಬಂದಿದ್ದವರು ಎಂದು ತಿಳಿದಿದೆ.
ಘಟನೆ ವಿಷಯ ತಿಳಿದ ಗ್ರಾಮಾಂತರ ಪಿಎಸ್ಐ ಶಿವಕುಮಾರ್ ಎರಡು ದೇವಾಲಯದ ಸ್ಥಳಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.‌

Source: newsfirstlive.com Source link