ಬಿಜೆಪಿ ನನ್ನ ಮಾತೃ ಪಕ್ಷ, ಕಾಂಗ್ರೆಸ್ ಸೇರುವ ಅನಿವಾರ್ಯತೆ ಬಂದಿಲ್ಲ: ಕುಮಾರಸ್ವಾಮಿ

ಚಿಕ್ಕಮಗಳೂರು: ಬಿಜೆಪಿ ನನ್ನ ಮೂಲ ಪಕ್ಷ. ನಾನು ಕಾಂಗ್ರೆಸ್ ಸೇರುತ್ತೇನೆ ಅನ್ನೋದು ಶುದ್ಧ ಸುಳ್ಳು. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಲ್ಲೂ ಹೋಗಲ್ಲ ಎಂದು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮೂಡಿಗೆರೆಯಲ್ಲಿ ತಮ್ಮ ಕಚೇರಿಯಲ್ಲಿ ವೀಡಿಯೋ ಮಾಡಿ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, ರಾಜ್ಯದ ಬಿಜೆಪಿ ನಾಯಕರು ನನ್ನನ್ನ ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಅದನ್ನ ಸಹಿಸದವರು ಈ ರೀತಿಯ ಕುತಂತ್ರವನ್ನ ಮಾಡುತ್ತಿದ್ದಾರೆ. ಪಕ್ಷ ನನ್ನನ್ನ ಮೂರು ಬಾರಿ ಶಾಸಕನನ್ನಾಗಿ ಮಾಡಿ ರಾಜ್ಯದಲ್ಲಿ ಗುರುತಿಸಿಕೊಳ್ಳುವಂತಹಾ ಅವಕಾಶ ನೀಡಿದೆ. ನಾನು ಕೂಡ ನನ್ನನ್ನ ಇನ್ನೂ ಹೆಚ್ಚು ಗುರುತಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ನಾನು ಬಿಜೆಪಿಯಲ್ಲೇ ಇರುತ್ತೇನೆ, ಎಲ್ಲೂ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನನ್ನ ಸಹಿಸಲಾರದವರು ನನ್ನ ಬಗ್ಗೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಮೂಲ ಪಕ್ಷ ಬಿಜೆಪಿ. ನಾನು ಬೆಳೆದಿದ್ದೇ ಬಿಜೆಪಿ ಪಕ್ಷದಲ್ಲಿ. ನಾನು ಎಲ್ಲೂ ಹೋಗಲ್ಲ. ಕಾಂಗ್ರೆಸ್ಸಿಗೆ ಹೋಗುತ್ತೇನೆ ಅನ್ನುವುದು ಸುಳ್ಳು. ನಾನು ಬಿಜೆಪಿ ತ್ಯಜಿಸುತ್ತೇನೆ ಅನ್ನುವುದು ವದಂತಿ. ಅದನ್ನ ನಮ್ಮ ಪಕ್ಷದ ನಾಯಕರು ಯರೂ ನಂಬಲ್ಲ. ಈ ವಿಚಾರಕ್ಕೆ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಯಾರೂ ತಲೆಕೆಡಿಸಿಕೊಳ್ಳುವುದು ಬೇಡೆ. ಅದು ಶುದ್ಧ ಸುಳ್ಳು. ಕಾಂಗ್ರೆಸ್ ಸೇರುವಂತಹಾ ಅನಿರ್ವಾತೆ ನನಗೆ ಸೃಷ್ಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗೆ ಕುಮಾರಸ್ವಾಮಿ ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಚಾಲ್ತಿಯಲ್ಲಿತ್ತು. ಕುಮಾರಸ್ವಾಮಿಯವರ ಇತ್ತೀಚಿನ ಕೆಲ ನಡೆ ಕೂಡ ಹಾಗೇ ಕಾಣುತ್ತಿದೆ ಎಂದು ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದರು. ಪಕ್ಷದ ನಾಯಕರು ವಿರುದ್ಧ ಅಸಮಾಧಾನ, ಪಕ್ಷದ ವಿರುದ್ಧ ಏಕಾಂಗಿ ಹೋರಾಟ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಇವೆಲ್ಲವನ್ನ ಕಂಡ ಸ್ಥಳಿಯ ನಾಯಕರು ಹಾಗೂ ಕಾರ್ಯಕರ್ತರು ಕೂಡ ಅದೇ ದಾಟಿಯಲ್ಲಿ ಮಾತನಾಡುತ್ತಿದ್ದರು. ಆದರೆ ತಮ್ಮ ಕಚೇರಿಯಲ್ಲಿ ತಾವೇ ವೀಡಿಯೋ ಮಾಡಿ ಬಿಟ್ಟಿರುವ ಕುಮಾರಸ್ವಾಮಿ ನಾನೂ ಎಲ್ಲೂ ಹೋಗಲ್ಲ ಎಂದಿದ್ದಾರೆ. ಆದರೆ, ಅವರ ಮುಂದಿನ ತೀರ್ಮಾನ-ನಡೆ ಏನಿರುತ್ತೋ ಗೊತ್ತಿಲ್ಲ.

Source: publictv.in Source link