‘ಸುಧಾಕರ್ ನಮ್ಮ ಪಕ್ಷದವರಾ..?’ ಶಾಸಕಾಂಗ ಸಭೆಯಲ್ಲಿ ರೇಣುಕಾಚಾರ್ಯ ಕೆಂಡಾಮಂಡಲ

‘ಸುಧಾಕರ್ ನಮ್ಮ ಪಕ್ಷದವರಾ..?’ ಶಾಸಕಾಂಗ ಸಭೆಯಲ್ಲಿ ರೇಣುಕಾಚಾರ್ಯ ಕೆಂಡಾಮಂಡಲ

ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ನಡವಳಿಕೆ ವಿರುದ್ಧ ಕೆಂಡಾಮಂಡಲರಾಗಿದ್ದರಂತೆ.

ಮಾನ್ಯ ಶಾಸಕಾಂಗ ಪಕ್ಷದ ನಾಯಕರೇ, ಸುಧಾಕರ್ ನಮ್ಮ ಪಕ್ಷದವರಾ? ನಾವು ಶಾಸಕರಾಗಿ, ಅವರು ಸಚಿವರಾಗಿದ್ದಾರೆ. ನಾವು ಹೇಳಿದ ಕೆಲಸಗಳನ್ನು ಅವರು ಮಾಡಿ ಕೊಡುವುದಿಲ್ಲ. ವರ್ಗಾವಣೆ ವಿಚಾರದಲ್ಲಿ ಎಷ್ಟೇ ಪತ್ರಗಳನ್ನು ಶಾಸಕರು ಕೊಟ್ಟರೂ, ಅದನ್ನು ತೆಗೆದು ಓದುವ ಸೌಜನ್ಯವನ್ನು ಸಚಿವರು ಬೆಳೆಸಿಕೊಂಡಿಲ್ಲ. ಬರೀ ಯಾವಾಗಲೂ ಪ್ರವಾಸದಲ್ಲಿಯೇ ಇರುತ್ತಾರೆ. ಹೀಗೆ ಅದ್ರೆ, ನಮ್ಮ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ? ಇನ್ನು ಈವರೆಗೂ ಒಂದೇ ಒಂದು ಪತ್ರಕ್ಕೂ ಸಕಾರಾತ್ಮಕವಾದ ಪ್ರತಿಕ್ರಿಯೆ ಅವರ ಕಡೆಯಿಂದ ಬಂದಿಲ್ಲ. ಇದನ್ನು ನಾನೊಬ್ಬ ಆಡಳಿತ ಪಕ್ಷದ ಶಾಸಕನಾಗಿ ಖಂಡಿಸುತ್ತೇನೆ. ನೀವೇ ಅವರಿಗೆ ಕಿವಿ ಹಿಂಡಿ ಬುದ್ಧಿ ಹೇಳಿ ಎಂದು ಸಭೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಎಂ.ಪಿ.ರೇಣುಕಾಚಾರ್ಯರ ಸರದಿ‌ ಮುಗಿಯುತ್ತಿದ್ದಂತೆ ಎದ್ದು ನಿಂತ ಸಾಲು ಸಾಲು ಶಾಸಕರು ಸುಧಾಕರ್ ನಡೆಯ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ಇತ್ತ ರೇಣುಕಾಚಾರ್ಯರಿಂದ ಪ್ರೇರೇಪಣೆ ಪಡೆದು ಎದ್ದು ನಿಲ್ಲುತ್ತಿದ್ದ ಶಾಸಕರನ್ನು ಕೂರಿಸಿದ ಸಿಎಂ ಬಸವರಾಜ ಬೊಮ್ಮಾಯಿ.. ಎಲ್ಲವನ್ನೂ ಸರಿಪಡಿಸೋಣ ಎಂದಷ್ಟೇ ಹೇಳಿದರು ಎನ್ನಲಾಗಿದೆ. ಇದೆಲ್ಲ ಮುಗಿದ ಬಳಿಕ ನಳಿನ್‌ಕುಮಾರ್ ಕಟೀಲ್‌ರನ್ನು ಭೇಟಿ ಮಾಡಿದ ಡಾ.ಕೆ.ಸುಧಾಕರ್‌.. ಸಭೆಯ ಬಳಿಕ ಒಬ್ಬೊಬ್ಬ ಶಾಸಕರು ಇಷ್ಟೆಲ್ಲಾ ಪತ್ರಗಳನ್ನು ಕೊಡುತ್ತಾರೆ. ಸುಖಾಸುಮ್ಮನೆ ವರ್ಗಾವಣೆ ಅಂತಾ ಬರುತ್ತಾರೆ. ಅದನ್ನೆಲ್ಲಾ ನೋಡುತ್ತಿದ್ರೆ, ಇಲಾಖೆಯ ಕೆಲಸ ಯಾವಾಗ ಮಾಡಲಿ? ಎಂದು ಪಕ್ಷದ ರಾಜ್ಯಾಧ್ಯಕ್ಷರ ಮುಂದೆ ಹೇಳಿಕೊಂಡಿದ್ದಾರಂತೆ.

Source: newsfirstlive.com Source link