ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ

– ಅಪ್ರಾಪ್ತೆ ಡ್ರೆಸ್ ಚೇಂಜ್ ಮಾಡುವ ವೀಡಿಯೋ ಮಾಡಿಕೊಂಡು ಬೆದರಿಕೆ
– ಗಣೇಶ ವಿಸರ್ಜನೆ ಸಂದರ್ಭ ಪ್ರಕರಣ ಬೆಳಕಿಗೆ

ಚಿಕ್ಕಮಗಳೂರು: ಅಪ್ರಾಪ್ತೆ ಬಟ್ಟೆ ಬದಲಿಸುವ ವೀಡಿಯೋ ಮಾಡಿಕೊಂಡು, ಆಕೆಗೆ ಬೆದರಿಸಿ ಎರಡೂವರೆ ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿ ಡ್ರೆಸ್ ಚೇಂಜ್ ಮಾಡುವ ವೀಡಿಯೋ ಮಾಡಿಕೊಂಡು ಅದೇ ಗ್ರಾಮದ ಯುವಕ ಆಕೆಗೆ ವೀಡಿಯೋ ತೋರಿಸಿ, ನಾನು ಕರೆದಾಗಲೆಲ್ಲ ಹೇಳಿದ ಜಾಗಕ್ಕೆ ಬರಬೇಕು. ಇಲ್ಲವಾದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ಕಳೆಯುವುದಾಗಿ ಬೆದರಿಸಿದ್ದಾನೆ. ಇದರಿಂದ ಹೆದರಿದ ಬಾಲಕಿ, ಅವನು ಹೇಳಿದಂತೆ ಕೇಳಿದ್ದಾಳೆ. ಅಪ್ರಾಪ್ತೆಯ ಅಮಾಯಕತೆಯನ್ನು ಬಂಡವಾಳ ಮಾಡಿಕೊಂಡು ಕಳೆದ ಎರಡೂವರೆ ತಿಂಗಳಿಂದ ಅತ್ಯಾಚಾರಗೈದಿದ್ದಾನೆ. ಇದೀಗ ವಿಷಯ ಬೆಳಕಿಗೆ ಬಂದಿದ್ದು, ಪ್ರಮುಖ ಆರೋಪಿ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಗೆ ಅತ್ಯಾಚಾರ ಮಾಡಲು ತನ್ನ ಮನೆಯನ್ನು ಕೊಟ್ಟಿದ್ದ ಇಬ್ಬರು ತಲೆಮರೆಸಿಕೊಂಡಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸ್ನೇಹಿತನ ಮನೆಯಲ್ಲೇ ಅತ್ಯಾಚಾರ: ಅಪ್ರಾಪ್ತ ಬಾಲಕಿ ಡ್ರೆಸ್ ಚೇಂಜ್ ಮಾಡುವ ವೀಡಿಯೋ ಮಾಡಿಕೊಂಡಿದ್ದ ಪ್ರಮುಖ ಆರೋಪಿ, ಅಪ್ರಾಪ್ತೆ ಮೇಲೆ ಅತ್ಯಾಚಾರಗೈಯಲು ತನ್ನ ಸ್ನೇಹಿತನ ಮನೆಯನ್ನೇ ಆರಿಸಿಕೊಂಡಿದ್ದನು. ಆರೋಪಿ ಹೇಳಿದಾಗೆಲ್ಲ ಸ್ನೇಹಿತ ತನ್ನ ಮನೆ ನೀಡುತ್ತಿದ್ದ. ಕಳೆದ ಎರಡೂವರೆ ತಿಂಗಳಿಂದ ಈತನ ಮನೆಯಲ್ಲೇ ಆರೋಪಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರವನ್ನೂ ವೀಡಿಯೋ ಮಾಡಿಕೊಂಡು, ಅದನ್ನು ತೋರಿಸಿಯೂ ಬೆದರಿಸುತ್ತಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಹೋಟೆಲ್‍ನಲ್ಲಿ ಅಗ್ನಿ ಅವಘಡ – 7 ಜನ ಪಾರು, ತಪ್ಪಿತು ಭಾರೀ ಅನಾಹುತ

ಬಾಲಕಿಗೆ ಕೀಟಲೆ: ಅಪ್ರಾಪ್ತೆ ಡ್ರೆಸ್ ಚೇಂಜ್ ಮಾಡುವ ವೀಡಿಯೋ ಮಾಡಿಕೊಂಡಿದ್ದ ಆರೋಪಿ, ಇದನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದ. ಹೀಗಾಗಿ ಬಾಲಕಿ ರಸ್ತೆಯಲ್ಲಿ ಓಡಾಡುವಾಗಲೂ ಆತನ ಸ್ನೇಹಿತರು ಚುಡಾಯಿಸುತ್ತಿದ್ದರು. ನಿನ್ನ ವೀಡಿಯೋ ನೋಡಿದ್ದೇವೆ, ಸೂಪರ್ ಎಂದು ರಸ್ತೆಯಲ್ಲಿ ಓಡಾಡುವಾಗ ಕೀಟಲೆ ಮಾಡುತ್ತಿದ್ದರು. ಆದರೆ ಬಾಲಕಿ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆಂದು ಹೆದರಿ ಯಾರಿಗೂ ಹೇಳಿರಲಿಲ್ಲ.

ಗಣಪತಿ ವಿಸರ್ಜನೆ ವೇಳೆ ವಿಷಯ ಬೆಳಕಿಗೆ: ಇತ್ತೀಚೆಗೆ ಗ್ರಾಮದಲ್ಲಿ ತಮ್ಮ ಹಳ್ಳಿಯ ಗಣಪತಿ ವಿಸರ್ಜನಾ ಕಾರ್ಯಕ್ರಮವಿತ್ತು. ಆದರೆ ಅಂದು ಗಣಪತಿ ವಿಸರ್ಜನೆ ವೇಳೆಯೂ ಅಪ್ರಾಪ್ತೆ ಬಟ್ಟೆ ಬದಲಿಸುವ ವೀಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹುಡುಗರು ಒಬ್ಬರಿಂದ ಒಬ್ಬರು ನೋಡುತ್ತಿದ್ದರು. ವಿಷಯ ತಿಳಿದ ಸ್ಥಳೀಯರು ಬಾಲಕಿಯ ಚಿಕ್ಕಪ್ಪನ ಗಮನಕ್ಕೆ ತಂದಿದ್ದಾರೆ. ಆಗ ಬಾಲಕಿ ಚಿಕ್ಕಪ್ಪ ಕೇಳಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ. ಕೂಡಲೇ ಸಖರಾಯಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. ನೊಂದ ಅಪ್ರಾಪ್ತೆ ದೂರು ನೀಡುತ್ತಿದ್ದಂತೆ ಅತ್ಯಾಚಾರಕ್ಕೆ ಮನೆ ನೀಡಿದ್ದವ ಹಾಗೂ ರಸ್ತೆಯಲ್ಲಿ ಚೇಷ್ಟೆ ಮಾಡುತ್ತಿದ್ದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಮತ್ತೊಬ್ಬನನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಕ-ಪಕ್ಕದ ಬೀದಿಯವರು, ಕಣ್ಣ ಮುಂದೆಯೇ ಬೆಳೆದ ಹುಡುಗಿಯನ್ನು ಪ್ರೀತಿ-ವಿಶ್ವಾಸ ಸಂಬಂಧದ ಅರಿವೇ ಇಲ್ಲದೆ, ಬೆದರಿಸಿ ಬೇಕಾದಂತೆಲ್ಲಾ ಬಳಸಿಕೊಳ್ಳುವ ಇಂತಹ ನಯವಂಚಕರಿಗೆ ಯಾವ ಶಿಕ್ಷೆಯೂ ಕಡಿಮೆ ಎಂದು ಸ್ಥಳೀಯರು ಹೇಳಿದ್ದಾರೆ.

Source: publictv.in Source link