6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದ ಬಿಜೆಪಿ. ಇದರ ಹಿಂದಿರೋ ತಂತ್ರವೇನು?

6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದ ಬಿಜೆಪಿ. ಇದರ ಹಿಂದಿರೋ ತಂತ್ರವೇನು?

ಇದೇ ಮೊದಲ ಬಾರಿಗೆ ಶಾಸಕರಾಗಿರೋ ಭೂಪೇಂದ್ರ ಪಟೇಲ್‌ ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಒಮ್ಮೆಯೂ ಮಂತ್ರಿಯಾಗದೇ ನೇರವಾಗಿ ಸಿಎಂ ಸ್ಥಾನಕ್ಕೇರಿದ್ದಾರೆ. ಇವರ ಹಿನ್ನೆಲೆ ಏನು? ಬಿಜೆಪಿ ಹೈಕಮಾಂಡ್‌ 6 ತಿಂಗಳಲ್ಲಿ 4 ಮುಖ್ಯಮಂತ್ರಿಗಳನ್ನು ಬದಲಿಸಿದ್ದು ಯಾಕೆ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಕ್ಕೆ ಇಳಿಸುವಾಗ ಜೋರು ಸುದ್ದಿ ಇತ್ತು. ಆದ್ರೆ, ಗುಜರಾತ್‌ನಲ್ಲಿ ವಿಜಯ್‌ ರೂಪಾನಿ ಅವರನ್ನು ಸಿಎಂ ಸ್ಥಾನದಿಂದ ಇಳಿಸುವಾಗ ಒಂದು ಚಿಕ್ಕ ಸುಳಿವೂ ಇರಲಿಲ್ಲ. ಕರ್ನಾಟಕದಲ್ಲಿ ಹೇಗೆ ಯಾರೂ ನಿರೀಕ್ಷೆ ಮಾಡದ ಬಸವರಾಜ್‌ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ರೂ, ಅದೇ ರೀತಿಯಲ್ಲಿ ಭೂಪೇಂದ್ರ ಪಟೇಲ್‌ ಕೂಡ ಸಿಎಂ ಸ್ಥಾನಕ್ಕೆ ಏರಿದ್ದಾರೆ. ಹಾಗಾದ್ರೆ, ಭೂಪೇಂದ್ರ ಪಟೇಲ್‌ ಯಾರು? ಅವರ ರಾಜಕೀಯ ಹಾದಿ ಹೇಗಿದೆ ಗೊತ್ತಾ?

1962 ರಲ್ಲಿ ಜನಿಸಿದ ಭೂಪೇಂದ್ರ ಪಟೇಲ್‌
ಡಿಪ್ಲೋಮಾ ಸಿವಿಲ್‌ ಎಂಜಿನಿಯರ್‌ ಪದವೀಧರ

ಭೂಪೇಂದ್ರ ಪಟೇಲ್‌ ಅವರು 15 ಜುಲೈ 1962 ರಲ್ಲಿ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಜನಿಸಿದವರು. ಇವರದು ಪಟೇಲ್‌ ಜನಾಂಗದ ಸಮುದಾಯ. ಅಹ್ಮದಾಬಾದ್‌ನಲ್ಲಿರೋ ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರ್‌ ಪದವಿ ಪಡೆದಿರುತ್ತಾರೆ. ಹಾಗೇ ವಿದ್ಯಾರ್ಥಿ ಜೀವನದಲ್ಲಿಯೇ ಆರ್‌ಎಸ್‌ಎಸ್‌ ಸಂಘಟನೆ ಸೇರಿಕೊಂಡು ಸಾಮಾಜಿಕ ಕೆಲಸದಲ್ಲಿಯೂ ತೊಡಗಿರುತ್ತಾರೆ. ಸದಾ ಹಸನ್ಮುಖಿಯಾಗಿರೋ ಇವರು ಸಂಘಟನಾ ಚತುರನಾಗಿ ಬೆಳೆಯುತ್ತಾರೆ. ಹಾಗಾದ್ರೆ ಇವರು ರಾಜಕೀಯಕ್ಕೆ ಎಂಟ್ರಿಯಾಗಿದ್ದು ಯಾವಾಗ ಗೊತ್ತಾ?

1995 ರಲ್ಲಿಯೇ ರಾಜಕೀಯ ಜೀವನಕ್ಕೆ ಎಂಟ್ರಿ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ

ಆರ್‌ಎಸ್‌ಎಸ್‌ನಲ್ಲಿ ಇದ್ದವರು ಬಿಜೆಪಿಯ ಚಟುವಟಿಯಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಇವರ ಸಂಘಟನಾ ಚತುರತೆಯನ್ನು ಮೆಚ್ಚಿ ಬಿಜೆಪಿಯಿಂದ 1995 ರಲ್ಲಿ ಮೇಮ್‌ನಗರ ನಗರಸಭೆ ಟಿಕೆಟ್‌ ನೀಡಲಾಗಿರುತ್ತದೆ. ಹಾಗೇ ಮೂರು ಬಾರಿ ನಗರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ. 2015-17 ರಲ್ಲಿ ಅಹ್ಮದಾಬಾದ್‌ ನಗರಾಭಿದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಆ ನಂತರದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಾರೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಾರೆ. ತಳಮಟ್ಟದ ಕಾರ್ಯಕರ್ತರ ಜೊತೆ ಬೆರೆಯುತ್ತಾರೆ. ಅವರನ್ನು ಸಂಘಟಿಸುತ್ತಾರೆ.

2017ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧೆ
1.70 ಲಕ್ಷ ಮತಗಳ ಅಂತರದಲ್ಲಿ ದಾಖಲೆಯ ಜಯ

2017ರ ಚುನಾವಣೆಗೂ ಮುನ್ನ ಘಟ್ಲೋಡಿಯಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಆನಂದಿಬೇನ್‌ ಪಟೇಲ್‌ ಸ್ಪರ್ಧೆ ಮಾಡ್ತಾ ಇದ್ರು. ಸತತವಾಗಿ ಜಯ ಸಾಧಿಸುತ್ತಾ ಇದ್ರು. ಆದ್ರೆ, ಆನಂದಿಬೇನ್‌ ಪಟೇಲ್‌ 2016ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಅನಂತರ ನಡೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಘಟ್ಲೋಡಿಯಾ ಕ್ಷೇತ್ರದಿಂದ ಭೂಪೇಂದ್ರ ಪಟೇಲ್‌ ಅವರಿಗೆ ಟಿಕೆಟ್‌ ನೀಡಲಾಗಿರುತ್ತದೆ. ಫಲಿತಾಂಶ ಬಂದಾಗ ಭೂಪೇಂದ್ರ ಪಟೇಲ್‌ ಇಡೀ ದೇಶದ ಗಮನವನ್ನೇ ಸೆಳೆದಿದ್ರು. ಹೌದು, ಭೂಪೇಂದ್ರ ಪಟೇಲ್‌ ಅವರು ಬರೋಬ್ಬರಿ 1.70 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶವಾಗಿತ್ತು. ಭೂಪೇಂದ್ರ ಪಟೇಲ್‌ ಅವರು ಆನಂದಿಬೇನ್‌ ಪಟೇಲ್‌ ಅವರ ಸಂಬಂಧಿಕರೂ ಹೌದು, ಅವರ ಮಾರ್ಗದರ್ಶನದಲ್ಲಿಯೇ ಬೆಳೆದವರು.

ಭೂಪೇಂದ್ರ ಪಟೇಲ್‌ ಅವರದ್ದು ಕ್ಲೀನ್‌ ಇಮೇಜ್‌
ತಳ ಮಟ್ಟದ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯ

ಭೂಪೇಂದ್ರ ಪಟೇಲ್ ಅವರು ಆರ್‌ಎಸ್‌ಎಸ್‌ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ನಗರಸಭೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಆದ್ರೆ, ಎಲ್ಲಿಯೂ ಭ್ರಷ್ಟಾಚಾರದ ಕಳಂಕ ಇಲ್ಲ. ಯಾವುದೇ ಮುಖಂಡರ ವಿರುದ್ಧ ಹಗೆತನವೂ ಇಲ್ಲ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಇವರು ಪಕ್ಕಾ ಕ್ಲೀನ್‌ ಇಮೇಜ್‌. ಗುಜರಾತ್‌ನಲ್ಲಿ ಬಿಜೆಪಿ ಪ್ರಭಾವ ನಿಧಾನಕ್ಕೆ ಕುಗ್ಗುತ್ತಿದೆ. ವಿಜಯ್‌ ರೂಪಾನಿ ಮಾಸ್‌ ಲೀಡರ್‌ ಆಗಿ ಬೆಳೆಯುತ್ತಿಲ್ಲ. ಪಟೇಲ್‌ ಸಮುದಾಯದ ಮತವೂ ಕೈತಪ್ಪುತ್ತದೆ. ಹೀಗಾಗಿ ಬಿಜೆಪಿ ಹೈಕಮಾಂಡ್‌ ಭೂಪೇಂದ್ರ ಪಟೇಲ್‌ಗೆ ಮಣೆ ಹಾಕಿದೆ.

6 ತಿಂಗಳಲ್ಲಿ 4 ಸಿಎಂಗಳಿಂದ ರಾಜೀನಾಮೆ ಪಡೆದ ಬಿಜೆಪಿ
ಎಲ್ಲಿಯೂ ಬಂಡಾಯವಿಲ್ಲ, ಭಿನ್ನಮತ ಸ್ಫೋಟವಿಲ್ಲ
ಸಿಎಂ ಬದಲಾವಣೆಯ ಹಿಂದಿರೋ ತಂತ್ರ ಏನು?

ನರೇಂದ್ರ ಮೋದಿ ಪ್ರಧಾನಿ ಮತ್ತು ಅಮಿತ್‌ ಶಾ ಕೇಂದ್ರವನ್ನು ಪ್ರವೇಶಿಸಿದ ಮೇಲೆ ಎಲ್ಲವೂ ಗೌಪ್ಯವಾಗಿಯೇ ನಡೆಯುತ್ತಿದೆ. ಅದು ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆಯಿಂದ ಹಿಡಿದು ಸಿಎಂ ಸ್ಥಾನದ ವರೆಗೂ ಎಲ್ಲವೂ ಗೌಪ್ಯ. ಕೊನೆಯ ಕ್ಷಣದವರೆಗೂ ಸುಳಿವನ್ನು ಬಿಟ್ಟುಕೊಂಡುವುದಿಲ್ಲ. ಅದೇ ರೀತಿಯಾಗಿ ಬಿಜೆಪಿ ಇತ್ತೀಚಿನ 6 ತಿಂಗಳಲ್ಲಿ 4 ಮುಖ್ಯಮಂತ್ರಿಗಳನ್ನು ಬದಲಿಸಿದೆ. ಆದ್ರೆ, ಎಲ್ಲಿಯೂ ಬಂಡಾಯವಿಲ್ಲ, ಸ್ವಲ್ಪವೂ ಭಿನ್ನಮತ ಸ್ಫೋಟವಿಲ್ಲ. ಟಿಕೆಟ್‌ ಕೊಟ್ಟಿಲ್ಲ ಅಂದ್ರೆ, ಭಿನ್ನಮತ ಸ್ಫೋಟವಾಗುವುದನ್ನು ನೋಡುತ್ತೇವೆ. ಅಂತದ್ರದಲ್ಲಿ ಸಿಎಂ ಸ್ಥಾನ ಬದಲಿಸಿದ್ರೂ ಭಿನ್ನಮತವಿಲ್ಲ ಅಂದ್ರೆ, ಬಿಜೆಪಿ ಹೈಕಮಾಂಡ್‌ ಎಷ್ಟೊಂದು ಪ್ರಭಾವಶಾಲಿ ಅನ್ನೋದನ್ನು ತೋರಿಸುತ್ತಿದೆ.

ಆರು ತಿಂಗಳಲ್ಲಿ ರಾಜೀನಾಮೆ ನೀಡಿದ ಮುಖ್ಯಮಂತ್ರಿಗಳು ಅಂದ್ರೆ ಉತ್ತರ ಖಂಡದಲ್ಲಿ ತ್ರಿವೇಂದ್ರ ಸಿಂಗ್‌ ರಾವತ್‌, ತೀರಥ್‌ ಸಿಂಗ್‌ ರಾವತ್‌, ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ, ಗುಜರಾತ್‌ನಲ್ಲಿ ವಿಜಯ್‌ ರೂಪಾನಿ.ಅವರಾಗಿದ್ದಾರೆ. ಹಾಗಾದ್ರೆ ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಿಸಿದ್ದು ಯಾಕೆ?

ಸಿಎಂ ಬದಲಾವಣೆ ಹಿಂದಿದೆ ಟಾರ್ಗೆಟ್‌ 2024

ಬಿಜೆಪಿ ಹೈಕಮಾಂಡ್‌ ಏನೇ ಮಾಡಿದ್ರೂ ತುಂಬಾ ಯೋಚಿಸಿ ಹೆಜ್ಜೆ ಇಡ್ತಾ ಇದೆ. ಮುಖ್ಯಮಂತ್ರಿಗಳ ಕೊರೊನಾ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ಹೀಗಾಗಿ ಅದು ಸಹಜವಾಗಿ ಬಿಜೆಪಿ ಮೇಲೆ ಪರಿಣಾಮ ಬೀರುತ್ತಿದೆ. ಕೇವಲ ನರೇಂದ್ರ ಮೋದಿ ಅಲೆಯ ಮೇಲೆ 2024 ರ ಲೋಸಭಾ ಚುನಾವಣೆಯನ್ನು ಎದುರಿಸುವುದು ಸಾಧ್ಯವಿಲ್ಲ ಅನ್ನೋದು ಅರ್ಥವಾಗಿದೆ. ಹೀಗಾಗಿಯೇ ಎಲ್ಲೆಲ್ಲಿ ಬಿಜೆಪಿ ವೋಟ್‌ ಬ್ಯಾಂಕ್‌ಗೆ ಸಮಸ್ಯೆ ಆಗುತ್ತಿದೇ ಅನ್ನೋದು ಅರ್ಥಿಸಿಕೊಂಡಿದ್ದಾರೆ. ಅಲೆಲ್ಲಾ ಸಿಎಂ ಸ್ಥಾನ ಬದಲಿಸುತ್ತಿದ್ದಾರೆ. ಈ ಮೂಲಕ ನಷ್ಟವನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಅವರ ಮುಖ್ಯ ಉದ್ದೇಶ ಟಾರ್ಗೆಟ್‌ 2014 ಚುನಾವಣೆ.

ಮೂಲಗಳ ಪ್ರಕಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೆಸರು ಕೂಡ ಸಿಎಂ ಚೇಂಜ್‌ ಹೆಸರಲ್ಲಿ ಕೇಳಿ ಬಂದಿತ್ತು. ಬಿಜೆಪಿ ಹೈಕಮಾಂಡ್‌ ಬದಲಾವಣೆಗೆ ಮನಸ್ಸು ಮಾಡಿತ್ತು. ಆದ್ರೆ, ಆರ್‌ಎಸ್‌ಎಸ್‌ ಮುಖಂಡರು ಯೋಗಿ ಬದಲಾವಣೆಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಯೋಗಿಯನ್ನು ಸಿಎಂ ಸ್ಥಾನದಲ್ಲಿಯೇ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಾಗೆ 2024ರ ಲೋಕಸಭಾ ಚುನಾವಣೆಯನ್ನು ಟಾರ್ಗೆಟ್‌ ಇಟ್ಟುಕೊಂಡು ಬಿಜೆಪಿ ಸಿಎಂ ಬದಲಾವಣೆ ಕಾರ್ಯಕ್ಕೆ ಮುಂದಾಗಿದೆ. ಆದ್ರೆ, ಹೊಸದಾಗಿ ಸಿಎಂ ಆದವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಅನ್ನೋದರ ಮೇಲೆ ಬಿಜೆಪಿಯ ಯಶಸ್ಸು ನಿಂತಿದೆ.

Source: newsfirstlive.com Source link