ಮೈಸೂರಿನಲ್ಲಿ ದೇವಸ್ಥಾನ ತೆರವು ಕಾರ್ಯಚರಣೆಗೆ ಜಿಲ್ಲಾಡಳಿತ ಬ್ರೇಕ್

– ಕಾರ್ಯಾಚರಣೆಗೆ ಹೋಗದಂತೆ ಜಿಲ್ಲಾಡಳಿತ ಮೌಖಿಕ ಸೂಚನೆ

ಮೈಸೂರು: ದೇವಸ್ಥಾನ ತೆರವು ಕಾರ್ಯಾಚರಣೆಗೆ ಹೋಗದಂತೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಕಾರ್ಯಾಚರಣೆಗೆ ಹೋಗದಂತೆ ಮೈಸೂರು ಜಿಲ್ಲಾಡಳಿತ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದೆ.

ದೇವಸ್ಥಾನಗಳ ತೆರವಿಗೆ ಹೋಗದಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದು, ಇದರಿಂದಾಗಿ ಸದ್ಯಕ್ಕೆ ಮೈಸೂರಿನ 96 ಧಾರ್ಮಿಕ ಕೇಂದ್ರಗಳು ಸೇಫ್ ಆಗಿವೆ. ನಂಜನಗೂಡಿನ ದೇವಸ್ಥಾನವನ್ನು ತರಾತುರಿಯಲ್ಲಿ ತೆರವು ಮಾಡಿದ್ದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಸಹ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ದೇವಸ್ಥಾನ ತೆರವು ವಿರೋಧಿಸಿ ಮೈಸೂರಿನಲ್ಲಿ ಜನಾಂದೋಲನ ಆರಂಭವಾಗಿತ್ತು. ಅಲ್ಲದೆ ಪಬ್ಲಿಕ್ ಟಿವಿ ನಿರಂತರವಾಗಿ ಸುದ್ದಿ ಪ್ರಸಾರ ಮಾಡುವ ಮೂಲಕ ದೇವಸ್ಥಾನ ಉಳಿಸಿ ಅಭಿಯಾನ ನಡೆಸಿತ್ತು. ಇದನ್ನೂ ಓದಿ: ಮೈಸೂರಲ್ಲಿ ದೇಗುಲಗಳೇ ಟಾರ್ಗೆಟ್ಟಾ..?- ಸಿಎಂ ಭೇಟಿಯಾಗಿ ಪ್ರತ್ಯೇಕ ಬೋರ್ಡ್‍ಗೆ ಒತ್ತಾಯ

ದೇವಸ್ಥಾನ ತೆರವಿಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆ ನಂಜನಗೂಡಿನ ದೇವಸ್ಥಾನವನ್ನು ತರಾತುರಿಯಲ್ಲಿ ತೆರವು ಮಾಡಿದ್ದ ಬಗ್ಗೆ ವಿವರಣೆ ಕೇಳಿ ಮೈಸೂರು ಜಿಲ್ಲಾಧಿಕಾರಿ ಹಾಗೂ ನಂಜನಗೂಡು ತಹಶೀಲ್ದಾರ್ ಗೆ ಸರ್ಕಾರದಿಂದ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಈ ವಾರದಲ್ಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಅಧಿಕೃತ ನಿರ್ದೇಶನ ಬರುವ ಸಾಧ್ಯತೆ ಇದೆ.

ದೇವಸ್ಥಾನ ತೆರವು ವಿರೋಧಿಸಿ ಮೈಸೂರಿನಲ್ಲಿ ಜನಾಂದೋಲನ ಆರಂಭವಾಗಿದೆ. ದೇವಸ್ಥಾನ ಉಳಿಸಿ ಹೋರಾಟ ಸಮಿತಿ ಇದೇ ಗುರುವಾರ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ದೇವಸ್ಥಾನಗಳ ತೆರವಿಗೆ ತೆರಳದಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದೆ. ಇದರಿಂದಾಗಿ ಸದ್ಯಕ್ಕೆ ಮೈಸೂರಿನ 96 ಧಾರ್ಮಿಕ ಕೇಂದ್ರಗಳು ಸೇಫ್ ಆಗಿವೆ. ಇದನ್ನೂ ಓದಿ: ದೇಶ-ಧರ್ಮದ ವಿಚಾರದಲ್ಲಿ ನಾನು ಸದಾ ಧ್ವನಿ ಎತ್ತುತ್ತೇನೆ: ಪ್ರತಾಪ್ ಸಿಂಹ

ಅರಮನೆ ನಗರಿಯಲ್ಲಿ ದೇಗುಲ ಪಾಲಿಟಿಕ್ಸ್ ಜೋರಾಗಿದ್ದು, 96 ದೇಗುಲ ತೆರವಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಪ್ರತಾಪ್ ಸಿಂಹ ದೇಗುಲ ಉಳಿಸಿ ಅಭಿಯಾನಕ್ಕೆ ಇಳಿದಿದ್ದಾರೆ. ಮಾತ್ರವಲ್ಲ ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಕೂಡ ಮಾಡಿದ್ದರು. ಕಳೆದ ವಾರ ನಂಜನಗೂಡು ಸಮೀಪದ ಮಹಾದೇವಮ್ಮ ದೇಗುಲವನ್ನು ಜಿಲ್ಲಾಡಳಿತ ನೆಲಸಮ ಮಾಡಿರುವ ಘಟನೆಯಿಂದ ಕೆರಳಿರುವ ಪ್ರತಾಪ್ ಸಿಂಹ, ಜಿಲ್ಲಾಡಳಿತ ಮತ್ತು ಮುಜುರಾಯಿ ಇಲಾಖೆ ವಿರುದ್ಧ ಸಮರ ಸಾರಿದ್ದಾರೆ. ಹಿಂದೂಗಳ ದೇಗುಲಗಳೇ ಟಾರ್ಗೆಟ್ ಎಂದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದೇವಸ್ಥಾನ ಉಳಿಸಿ ಎಂಬ ಅಭಿಯಾನ ಕೈಗೊಂಡಿದ್ದು, ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಕೋರ್ಟ್ ಆದೇಶದಲ್ಲಿ ಎಲ್ಲಿಯೂ ದೇವಸ್ಥಾನ ತೆರವಿಗೆ ಸೂಚಿಸಿಲ್ಲ. ಕೂಡಲೇ ನಂಜನಗೂಡು ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತಕ್ಕೂ ಅಗತ್ಯ ಸೂಚನೆಗಳನ್ನು ನೀಡಬೇಕು. 2009ರ ದೇವಸ್ಥಾನ ತೆರವಿಗೆ ಪರ್ಯಾಯ ಕ್ರಮ ಕೈಗೊಳ್ಳಿ. ದೇವಸ್ಥಾನ ತೆರವು ಬದಲು ಸ್ಥಳಾಂತರ ಮಾಡಿ ಎಂದು ಹೇಳಿದ್ದಾರೆ. ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ

ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಇದು ಕೇವಲ ಮೈಸೂರಿಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ವಕ್ಫ್ ಬೋರ್ಡ್ ಮಾದರಿಯಲ್ಲಿ ರಾಜ್ಯದ ಎಲ್ಲಾ ಹಿಂದೂ ದೇಗುಲಗಳ ಸಂರಕ್ಷಣೆಗೆ ಒಂದು ಪ್ರತ್ಯೇಕ ಬೋರ್ಡ್ ರಚನೆ ಮಾಡಬೇಕು ಎಂದು ಪ್ರತಾಪ್ ಸಿಂಹ ಒತ್ತಾಯಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ, ಮತ್ತೊಮ್ಮೆ ದೇಗುಲ ಧ್ವಂಸವನ್ನು ಖಂಡಿಸಿದ್ದಾರೆ. ಏಕಾಏಕಿ ತೆರವು ಸರಿಯಲ್ಲ ಎಂದಿದ್ದಾರೆ. ಜೊತೆಗೆ ಈಗ ಪ್ರತಾಪ್ ಸಿಂಹ ಹೋರಾಟ ಮಾಡುತ್ತಿರುವುದು ಯಾರ ವಿರುದ್ಧ? ಅಚರದ್ದೇ ಸರ್ಕಾರ ಇದೆ ಅಲ್ವಾ? ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ಮಾಡಲಿ ಎಂದು ಹೇಳಿದ್ದಾರೆ. ಈ ವರ್ಷಾಂತ್ಯದ ಹೊತ್ತಿಗೆ ಕೇವಲ ಮೈಸೂರಿನಲ್ಲಿಯೇ 92 ದೇಗುಲ ತೆರವು ಮಾಡಲು ಜಿಲ್ಲಾಡಳಿತ ಪ್ಲಾನ್ ಮಾಡಿಕೊಂಡಿದೆ. ಹೀಗಾಗಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಾಪ್ ಸಿಂಹ ಕಿಡಿ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಪ್ರತಾಪ್ ಸಿಂಹ, ನಾನು ರಾಜಕೀಯಕ್ಕಾಗಿ ಬಿಜೆಪಿಗೆ ಬಂದವನಲ್ಲ. ನಾನು ಮೂಲತಃ ಆರ್‍ಎಸ್‍ಎಸ್ ಕಾರ್ಯಕರ್ತ ಹೀಗಾಗಿ, ದೇಶ, ಧರ್ಮದ ವಿಚಾರ ಬಂದಾಗ ನಾನು ಸ್ವಯಂ ಪ್ರೇರಿತವಾಗಿ ಧ್ವನಿ ಎತ್ತುತ್ತೇನೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು. ನನ್ನ ತಂದೆಯೂ ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದರು. ನಾನೂ ಕೂಡ ಆರ್‍ಎಸ್‍ಎಸ್ ಕಾರ್ಯಕರ್ತನಾಗಿ ದೇಶ, ಧರ್ಮಕ್ಕೆ ಸೇವೆ ಸಲ್ಲಿಸಿದ್ದೇನೆ. ದೇವಾಲಯ ತೆರವಿನ ವಿರುದ್ಧದ ತಮ್ಮ ಧ್ವನಿಗೆ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳು ಧ್ವನಿ ಗೂಡಿಸುತ್ತಿಲ್ಲ ನೀವು ಒಂಟಿನಾ ಎಂಬ ಪ್ರಶ್ನೆಗೆ ಉತ್ತರಿಸಿ, ಧರ್ಮ, ದೇಶದ ರಕ್ಷಣೆಗೆ ನಾನು ಯಾವತ್ತಿಗೂ ಬದ್ಧ. ರಾಜಕೀಯಕ್ಕೆ ಬಂದ ಮೇಲೆ ಇದು ಬರಲಿಲ್ಲ. ನಾನು ಹುಟ್ಟುತ್ತಲೇ ಇದು ಬಂದಿದೆ. ಯಾರನ್ನೋ ಕೇಳಿ, ಅಥವಾ ಯಾರನ್ನೋ ನಂಬಿ ನಾನು ಈ ವಿಚಾರದಲ್ಲಿ ಧ್ವನಿ ಎತ್ತುವ ಅವಶ್ಯಕತೆ ಇಲ್ಲ. ನನಗೆ ನನ್ನ ಬದ್ಧತೆ ಬಗ್ಗೆ ಹೆಚ್ಚು ನಂಬಿಕೆ ಇದೆ. ಅದನ್ನು ಇಲ್ಲೂ ಪಾಲಿಸುತ್ತಿದ್ದೇನೆ ಎಂದು ಹೇಳಿದ್ದರು.

Source: publictv.in Source link