ಎಸ್‍ಬಿಐ ಸೋಗಿನಲ್ಲಿ ಕರೆ- ವೈದ್ಯ ಸೇರಿ ಪ್ರತ್ಯೇಕ 2 ಪ್ರಕರಣಗಳಲ್ಲಿ 1 ಲಕ್ಷ ವಂಚನೆ

– ಕೆವೈಸಿ ಅಪ್ಡೇಟ್ ನೆಪದಲ್ಲಿ ದೋಖಾ

ಹುಬ್ಬಳ್ಳಿ: ನಿಮ್ಮ ಎಸ್‍ಬಿಐ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ವೈದ್ಯರೊಬ್ಬರಿಗೆ ಸಂದೇಶ ಕಳುಹಿಸಿ 65,000 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದ್ದು, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕುಲ ರಸ್ತೆಯ ಡಾ.ಫಕೀರೇಶ ನೇಕಾರ ಅವರಿಗೆ ಸೆಪ್ಟೆಂಬರ್ 11ರಂದು ಅಪರಿಚಿತರು ಸಂದೇಶ ಕಳುಹಿಸಿದ್ದರು. ನಂತರ ಕರೆ ಮಾಡಿ, ಎಸ್‍ಬಿಐ ಕೆವೈಸಿ ಅಪ್ಡೇಟ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಸಂದೇಶ ಕಳುಹಿಸಿ, ಲಿಂಕ್ ಕ್ಲಿಕ್ ಮಾಡುವಂತೆ ಸೂಚಿಸಿದ್ದರು. ಬ್ಯಾಂಕ್‍ನವರ ಸಂದೇಶ ಇರಬಹುದು ಎಂದು ನಂಬಿದ ಡಾ.ಫಕೀರೇಶ ಅವರು ಲಿಂಕ್ ಕ್ಲಿಕ್ ಮಾಡಿದ್ದರು. ಮೊಬೈಲ್‍ಗೆ ಬಂದ ಒಟಿಪಿಗಳನ್ನು ಹಾಕಿ ಸಬ್ಮಿಟ್ ಮಾಡಿದ್ದರು. ಬಳಿಕ ವಂಚಕರು ಎಸ್‍ಬಿಐ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಇದನ್ನೂ ಓದಿ: ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ

39 ಸಾವಿರ ವಂಚನೆ
24 ಗಂಟೆಯೊಳಗೆ ಕೆವೈಸಿ ಅಪ್ಡೇಟ್ ಮಾಡದಿದ್ದರೆ ನಿಮ್ಮ ಎಸ್‍ಬಿಐ ಬ್ಯಾಂಕ್ ಖಾತೆ ಬಂದ್ ಆಗುತ್ತದೆ ಎಂದು ವ್ಯಕ್ತಿಯೊಬ್ಬರಿಗೆ ಸಂದೇಶ ಕಳುಹಿಸಿ ಡೆಬಿಟ್ ಕಾರ್ಡ್ ಮಾಹಿತಿ ಪಡೆದು, 39,234 ರೂಪಾಯಿ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕೆವೈಸಿ ಅಪ್ಡೇಟ್ ಮಾಡದಿದ್ದರೆ ಖಾತೆ ರದ್ದಾಗುತ್ತದೆ. ಕಸ್ಟಮರ್ ಕೇರ್ ಮೊಬೈಲ್ ಸಂಖ್ಯೆ 6204189969 ಗೆ ಸಂಪರ್ಕಿಸಿ ಎಂದು ಸಂದೇಶದಲ್ಲಿತ್ತು. ಇದನ್ನು ನಂಬಿ ಕರೆ ಮಾಡಿದ್ದರು. ವಂಚಕರು ಡೆಬಿಟ್ ಕಾರ್ಡ್ ಮಾಹಿತಿ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಕೇಶ್ವಾಪುರದ ಶಶಿಕಾಂತ ಗುಡಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Source: publictv.in Source link