ಟೀಮ್​​ ಇಂಡಿಯಾ ನಾಯಕತ್ವಕ್ಕೆ ಗುಡ್​ಬೈ ಹೇಳಲು ಕೊಹ್ಲಿ ನಿರ್ಧಾರ? ಮುಂದಿನ ಕ್ಯಾಪ್ಟನ್​​ ಯಾರು?

ಟೀಮ್​​ ಇಂಡಿಯಾ ನಾಯಕತ್ವಕ್ಕೆ ಗುಡ್​ಬೈ ಹೇಳಲು ಕೊಹ್ಲಿ ನಿರ್ಧಾರ? ಮುಂದಿನ ಕ್ಯಾಪ್ಟನ್​​ ಯಾರು?

T20 ವಿಶ್ವಕಪ್​​​ ಬಳಿಕ ಟೀಮ್​ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಪದೆ ಪದೇ ಚರ್ಚೆಯಾಗ್ತಿರೋ ನಾಯಕತ್ವದ ಬದಲಾವಣೆ, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಚುಟುಕು ಕದನ ನಂತರ ವಿರಾಟ್​ ಕೊಹ್ಲಿ, ವೈಟ್​ಬಾಲ್​ ಕ್ರಿಕೆಟ್​ ನಾಯಕತ್ವದಿಂದ ಕೆಳಗಿಳಿತಾರೆ ಅನ್ನೋ ಮಾತಿದೆ.

ಟೀಮ್​ ಇಂಡಿಯಾ ಯಶಸ್ವಿ ನಾಯಕ, ವಿರಾಟ್​ ಕೊಹ್ಲಿ.! ಪ್ರಸ್ತುತ ಮೂರು ಫಾರ್ಮೆಟ್​ಗಳಲ್ಲೂ ಮುನ್ನಡೆಸಿ, ತಂಡವನ್ನ ದಿಗಂತದೆತ್ತರಕ್ಕೆ ಕೊಂಡೊಯ್ದ ಕೀರ್ತಿ, ವಿರಾಟ್​ಗೆ ಸಲ್ಲುತ್ತೆ. ಆಲ್​​ಟೈಮ್​ ಗ್ರೇಟ್​​ ಕ್ಯಾಪ್ಟನ್ MS ಧೋನಿ, ​ಸೌರವ್​ ಗಂಗೂಲಿ ದಾಖಲೆಗಳನ್ನೇ ಧೂಳೀಪಟ ಮಾಡಿರುವ ಕೊಹ್ಲಿ, ನಾಯಕನಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಹಾಗೇ ಆಟಗಾರನಾಗಿಯೂ ಅತ್ಯುತ್ತಮ ಸಾಧನೆ ಮಾಡಿರುವ ಕೊಹ್ಲಿ, ಇದೀಗ ವೈಟ್​​ಬಾಲ್​ ಕ್ರಿಕೆಟ್ ಕ್ಯಾಪ್ಟನ್​ಶಿಪ್​ನಿಂದ, ಕೆಳಗಿಳಿಯಲು ರೆಡಿಯಾಗಿದ್ದಾರೆ.

ಹೌದು.. ಈಗ ನೀವು ಕೇಳಿದ ಮಾತು ನಿಜ. ಕೊಹ್ಲಿ ಟಿ20 ಮತ್ತು ಏಕದಿನ ಕ್ರಿಕೆಟ್​​​​ ನಾಯಕತ್ವದಿಂದ ಕೆಳಗಿಳಿಯುವ ಕರೆ ಕೊಟ್ಟಿದ್ದಾರೆ ಅನ್ನೋದನ್ನ, ಬಿಸಿಸಿಐ ಮೂಲಗಳು ಹೇಳ್ತಿವೆ. ಅದಕ್ಕೆ ನಿಖರವಾದ ಕಾರಣವನ್ನೂ ಕೊಹ್ಲಿ ಹೊರಹಾಕಿದ್ದಾರೆ ಎಂಬ ಮಾಹಿತಿ ಕೂಡ ಸಿಕ್ಕಿದೆ. ಸದ್ಯ ಎಲ್ಲಾ ಫಾರ್ಮೆಟ್​​​ನಲ್ಲಿ ನಾಯಕನಾಗಿ ಕೊಹ್ಲಿ, ಅತ್ಯಂತ ಯಶಸ್ವಿ ಆಗಿದ್ದಾರೆ. ಆದರೆ ಬ್ಯಾಟ್ಸ್​​ಮನ್​​​ ಆಗಿ ಇತ್ತೀಚಿಗೆ, ತೀರಾ ವೈಫಲ್ಯ ಅನುಭವಿಸುತ್ತಿದ್ದಾರೆ. ಆಡುವುದರ ಜೊತೆಗೆ ನಾಯಕತ್ವ ನಿಭಾಯಿಸೋದು ಕೂಡ, ಹೆಚ್ಚು ಒತ್ತಡಕ್ಕೆ ಸಿಲುಕಿಸಿದೆ. ಹಾಗಾಗಿ ಕೊಹ್ಲಿ ಈ ದೊಡ್ಡ ನಿರ್ಧಾರಕ್ಕೆ ಕೊಹ್ಲಿ ಬಂದಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟ್ ಟೀಮ್ ಮುನ್ನಡೆಸಲು ದಿಗ್ಗಜ ಆಟಗಾರರನ್ನು ಕೋಚ್​ ಆಗಿ ನೇಮಿಸಿದ ಬೋರ್ಡ್

ಈ ಹಿಂದಿನಿಂದಲೂ ವಿರಾಟ್,​ ವೈಟ್​ಬಾಲ್ ಕ್ರಿಕೆಟ್​​​ ನಾಯಕತ್ವಕ್ಕೆ​​ ವಿದಾಯ ಹೇಳುವಂತೆ ಮಾಜಿ ಕ್ರಿಕೆಟಿಗರು​ ಒತ್ತಾಯಿಸಿದ್ರು. ಆದರೆ ಮೂರು ಫಾರ್ಮೆಟ್​​ ಕ್ರಿಕೆಟ್ ಆಡ್ತಿರುವ ವಿರಾಟ್​ ಕೊಹ್ಲಿ, ಇತ್ತೀಚೆಗೆ ಅತಿಯಾದ ಒತ್ತಡಕ್ಕೆ ಒಳಗಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಶತಕ ಸಿಡಿಸದಿರೋದೆ, ಇದಕ್ಕೆ ಬೆಸ್ಟ್​​​ ಎಕ್ಸಾಂಪಲ್​. ಇದೆಲ್ಲದರ ಜೊತೆಗೆ, ಮುಂದಿನ ವರ್ಷಗಳಲ್ಲಿ ಎರಡು ವಿಶ್ವಕಪ್​​ಗಳೇ ಇವೆ. ಹಾಗಾಗಿ ಕೊಹ್ಲಿ ಒತ್ತಡ ನಿವಾರಿಸುವ ಸಲುವಾಗಿ, ಟೆಸ್ಟ್​​ಗೆ ಮಾತ್ರ ನಾಯಕತ್ವ ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಈ ಸಮಯದಲ್ಲಿ ಕೊಹ್ಲಿ ಒತ್ತಡಕ್ಕೆ ಒಳಗಾದ್ರೆ, ತಂಡ ಇಕ್ಕಟ್ಟಿಗೆ ಸಿಲುಕೋದು ಖಚಿತ.

ನಾಯಕನಾಗಿ ಕೊಹ್ಲಿ ಟೆಸ್ಟ್​​ನಲ್ಲಿ 65 ಪಂದ್ಯಗಳನ್ನ ಮುನ್ನಡೆಸಿದ್ದು, 38ರಲ್ಲಿ ಗೆಲುವು ದಾಖಲಿಸಿದ್ದಾರೆ. ಹಾಗೇ 16 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಇನ್ನು ಏಕದಿನ ಕ್ರಿಕೆಟ್​ನಲ್ಲಿ 95 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ವಿರಾಟ್, 65ರಲ್ಲಿ ಗೆದ್ದಿದ್ರೆ 27 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಜೊತೆಗೆ 45 ಟಿ20 ಪಂದ್ಯಗಳಿಗೆ ಕ್ಯಾಪ್ಟನ್​ ಆಗಿರುವ ಕೊಹ್ಲಿ, 29 ಪಂದ್ಯಗಳಲ್ಲಿ ಗೆದ್ದಿದ್ರೆ, 14ರಲ್ಲಿ ಸೋಲು ಕಂಡಿದ್ದಾರೆ.

ಒಟ್ನಲ್ಲಿ.. ವೈಟ್​ ಬಾಲ್ ಕ್ರಿಕೆಟ್​ನಲ್ಲೂ ವಿರಾಟ್, ಉತ್ತಮ ರೆಕಾರ್ಡ್ಸ್​ ಹೊಂದಿದ್ದಾರೆ. ಆದ್ರೆ ಒತ್ತಡದ ಕಾರಣ, ಏಕದಿನ ಮತ್ತು ಟಿ-ಟ್ವೆಂಟಿ ನಾಯಕತ್ವಕ್ಕೆ ಗುಡ್​ಬೈ ಹೇಳಲು ಹೊರಟಿದ್ದಾರೆ. ಏನೇ ಇರಲಿ.. ಕೊಹ್ಲಿ ನಂತರ ರೋಹಿತ್ ಶರ್ಮಾಗೆ, ವೈಟ್ ಬಾಲ್ ಕ್ರಿಕೆಟ್ ​​ಸಾರಥ್ಯ ಸಿಗೋದು ಖಚಿತ.

Source: newsfirstlive.com Source link