1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

ನವದೆಹಲಿ: ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಾರದು ಎನ್ನುವ ಮಾತುಗಳ ನಡುವೆ ಈಗ 1-10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ವರದಿಗಳು ಲಭ್ಯವಾಗಿದ್ದು, ಈ ಅಂಕಿ ಅಂಶಗಳು ಆತಂಕವನ್ನು ಹೆಚ್ಚು ಮಾಡಿದೆ.

ಮೂರನೇ ಅಲೆಗೂ ಮುನ್ನ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಪ್ರತಿ ನೂರು ಮಂದಿ ಸೋಂಕಿತರ ಪೈಕಿ ಏಳು ಮಕ್ಕಳಿಗೆ ಕೊರೊನಾ ತಗುಲುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

ಕಳೆದ ಮಾರ್ಚ್ ನಲ್ಲಿ 1-10 ವರ್ಷದ ಮಕ್ಕಳಲ್ಲಿ ಶೇ.2.80ರಷ್ಟು ಸೋಂಕು ಕಂಡು ಬಂದಿತ್ತು. ಅಗಸ್ಟ್ ನಲ್ಲಿ ಇದು ಶೇ.7.04ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಗೆ ತಜ್ಞರು ವರದಿ ನೀಡಿದ್ದಾರೆ. 1-10 ವರ್ಷದ ಮಕ್ಕಳಲ್ಲಿ ಸ್ಥಿರವಾಗಿ ಸೋಂಕು ಏರುತ್ತಿದ್ದು, ಮೂರನೇ ಅಲೆ ಹೆಚ್ಚಾದಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

2020 ಜೂನ್ ನಿಂದ 2021 ಪೆಬ್ರವರಿವರೆಗೂ ಅಂದರೆ ಒಂಭತ್ತು ತಿಂಗಳ ಅವಧಿಯಲ್ಲಿ ಶೇ.2.72 ರಿಂದ ಶೇ.3.59ರಷ್ಟು ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. ಆದರೆ ಈ ವರ್ಷ ಐದು ತಿಂಗಳ ಅವಧಿಯಲ್ಲಿ ಶೇ.4, 5ರಷ್ಟು ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವುದು ಹೆಚ್ಚಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಮಟ್ಟದಲ್ಲೂ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಸೆ.17 ರಿಂದ ಕೊಡಗಿನಲ್ಲಿ ಶಾಲಾ-ಕಾಲೇಜು ಆರಂಭ

ಲಭ್ಯವಿರುವ ಮಾಹಿತಿಗಳ ಪ್ರಕಾರ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಆಗಸ್ಟ್ ತಿಂಗಳಲ್ಲಿ ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಮಿಜೋರಾಂನಲ್ಲಿ ಅತಿ ಹೆಚ್ಚು ಅಂದರೆ ಶೇ.16.48ರಷ್ಟು ದಾಖಲಾಗಿವೆ. ದೆಹಲಿಯಲ್ಲಿ ಅತಿ ಕಡಿಮೆ ಅಂದರೆ ಶೇ.2.25ರಷ್ಟು ಪ್ರಕರಣ ದಾಖಲಾಗಿವೆ. ಮೇಘಾಲಯ ಶೇ.9.35, ಮಣಿಪುರ ಶೇ.8.74, ಕೇರಳ ಶೇ.8.62, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ.8.2, ಸಿಕ್ಕಿಂ ಶೇ.8.02, ದಾದ್ರಾ ಮತ್ತು ನಗರ ಹವೇಲಿ ಶೇ.7.69 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ.7.38ರಷ್ಟು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.

ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ.7.04ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ. ಆಗಸ್ಟ್ ನಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಕರಣಗಳು ಪುದುಚೇರಿ ಶೇ.6.95, ಗೋವಾ ಶೇ.6.86, ನಾಗಾಲ್ಯಾಂಡ್ ಶೇ.5.48, ಅಸ್ಸಾಂ ಶೇ.5.04, ಕರ್ನಾಟಕ ಶೇ.4.59, ಆಂಧ್ರ ಪ್ರದೇಶ ಶೇ.4.53, ಒಡಿಶಾ ಶೇ.4.18, ಮಹಾರಾಷ್ಟ್ರ ಶೇ.4.08, ತ್ರಿಪುರ ಶೇ.3.54, ದೆಹಲಿ ಶೇ.2.25ರಷ್ಟು ದಾಖಲಾಗಿವೆ.

Source: publictv.in Source link