ಪ್ರಾರ್ಥನಾ ಮಂದಿರಗಳ ತೆರವಿಗೆ ಸರ್ಕಾರದಿಂದ್ಲೇ ಆದೇಶ – ಸಿಎಸ್ ಸೂಚನೆಯಂತೆ ಆಪರೇಷನ್ ಟೆಂಪಲ್!

ಬೆಂಗಳೂರು: ಅನಧಿಕೃತ ದೇಗುಲ ತೆರವು ವಿಚಾರದಲ್ಲಿ ರಾಜ್ಯ ಸರ್ಕಾರದ ಬೃಹನ್ನಾಟಕ ಬಟಾಬಯಲಾಗಿದೆ. ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರವೇ ಆದೇಶ ನೀಡಿರುವ ವಿಚಾರ ಬಹಿರಂಗಗೊಂಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜುಲೈ 1ರಂದೇ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ ತುರ್ತು ಆದೇಶ ಹೊರಡಿಸಿದ್ದಾರೆ. 2009ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪಾಲಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಮುಂದಿಟ್ಟುಕೊಂಡು ಈ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರವೇ ಡಿಸಿಗಳು ತರಾತುರಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅದರ ಒಂದು ಭಾಗವೇ ಕಳೆದ ವಾರ ನಂಜನಗೂಡಿನ ಮಹಾದೇವಮ್ಮ ದೇವಾಲಯ ಧ್ವಂಸ ಪ್ರಕರಣ. ಆದರೆ ದೇಗುಲ ತೆರವಿಗೆ ಹಿಂದೂ ಸಂಘಟನೆಗಳು, ಸ್ವಪಕ್ಷೀಯ ನಾಯಕರು, ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ತಮಗೆ ಏನು ಗೊತ್ತಿಲ್ಲ ಎಂಬಂತೆ ರಾಜ್ಯ ಸರ್ಕಾರ ವರ್ತಿಸಿದೆ. ಇದನ್ನೂ ಓದಿ: ಸೆ.17ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

ಡಿಸಿಗಳಿಗೆ ಸಿಎಸ್ ಪತ್ರದಲ್ಲಿ ಏನಿದೆ..?
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ 2021ರ ಜುಲೈ 1ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. 2009ರ ಸುಪ್ರೀಂಕೋರ್ಟ್ ಆದೇಶ ಪಾಲನೆಗೆ 2020ರ ಡಿಸೆಂಬರ್ 14ರಂದು ಹೈಕೋರ್ಟ್ ನಿರ್ದೇಶನ ನೀಡಿದೆ. ನಿಮ್ಮ ವ್ಯಾಪ್ತಿಯಲ್ಲಿ 2009ರ ಸೆ.29 ರ ನಂತರ ನಿರ್ಮಾಣವಾಗಿರುವ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಪಟ್ಟಿ ಮಾಡಿ ಎಂದಿದ್ದಾರೆ. ದೇಗುಲ/ಮಸೀದಿ/ಚರ್ಚ್.. ಇತರೆ ಮಂದಿರಗಳ ಧ್ವಂಸ/ತೆರವು/ಸ್ಥಳಾಂತರ/ಅಕ್ರಮ ಸಕ್ರಮಕ್ಕೆ ಕ್ರಮ ತೆಗೆದುಕೊಳ್ಳಿ. ಜುಲೈ 15ರಿಂದ ಪ್ರತಿ ತಾಲೂಕಿನಲ್ಲಿ ಪ್ರತಿವಾರ ಕನಿಷ್ಠ 1 ಅನಧಿಕೃತ ಮಂದಿರ ನೆಲಸಮ ಮಾಡಲು ಯೋಜನೆ ರೂಪಿಸಿ. ಜುಲೈ 15ರಿಂದ ನಗರದಲ್ಲಿ ವಲಯವಾರು ಕನಿಷ್ಠ ವಾರಕ್ಕೆ 1ರಂತೆ ಅನಧಿಕೃತ ಪ್ರಾರ್ಥನಾ ಮಂದಿರ ತೆರವು ಮಾಡಿ. ಪ್ರತಿ ತಿಂಗಳು ರಾಜ್ಯ ಸರ್ಕಾರಕ್ಕೆ ಅನಧಿಕೃತ ಪ್ರಾರ್ಥನಾ ಮಂದಿರಗಳ ತೆರವಿನ ಕುರಿತು ವರದಿ ನೀಡಿ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

blank

2009ರ ತೀರ್ಪಿನಲ್ಲಿ ಸುಪ್ರೀಂ ಏನು ಹೇಳಿತ್ತು..?
ರಸ್ತೆ, ಫುಟ್‍ಪಾತ್, ಪಾರ್ಕ್‍ಗಳಲ್ಲಿನ ಅನಧಿಕೃತ ಪ್ರಾರ್ಥನಾ ಮಂದಿರ ಗುರುತಿಸಿ. ಮೊದಲ ಆದ್ಯತೆಯಾಗಿ ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಸಕ್ರಮ ಮಾಡಿ. ಸಕ್ರಮ ಮಾಡಲು ಸಾಧ್ಯವಾಗದಿದ್ದರೇ ಪ್ರಾರ್ಥನಾ ಮಂದಿರಗಳನ್ನು ಸ್ಥಳಾಂತರಿಸಿ. ಸಕ್ರಮ-ಸ್ಥಳಾಂತರ ಆಗದೇ ಇದ್ದಲ್ಲಿ ಪ್ರಾರ್ಥನಾ ಮಂದಿರಗಳನ್ನು ತೆರವು ಮಾಡಿ ಎಂದು ಕೊರ್ಟ್ ಹೇಳಿತ್ತು.

Source: publictv.in Source link