ರಾಜ್ಯದಲ್ಲಿ 6,500ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರ ತೆರವಿಗೆ ಪ್ಲಾನ್ – ಈಗಾಗ್ಲೇ 2,500ಕ್ಕೂ ಹೆಚ್ಚು ದೇಗುಲಗಳು ನೆಲಸಮ

– ಕಸದ ರಾಶಿ ಸೇರಿದ್ದ ನೆಲಮಂಗಲದ ಹನುಮಂತ

ಬೆಂಗಳೂರು: ಕೇವಲ ಮೈಸೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅನಧಿಕೃತ ಎಂಬ ನೆಪ ಹೇಳಿ ದೇವಾಲಯಗಳು ಸೇರಿ 6 500 ಸಾವಿರಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಈಗಾಗಲೇ 2,500ಕ್ಕೂ ಹೆಚ್ಚು ಧಾರ್ಮಿಕ ಮಂದಿರ ತೆರವು ಮಾಡಿದೆ.

ನೆಲಮಂಗಲದ ತಪಸ್ವಿ ವೀರಾಂಜನೇಯ ದೇಗುಲವನ್ನು ಆಗಸ್ಟ್ ನಲ್ಲಿ ತೆರವು ಮಾಡಿದ್ದ ತಾಲೂಕಾಡಳಿತ, ಹನುಮನ ಮೂರ್ತಿಯನ್ನು ನಗರಸಭೆಯ ಕಸದ ರಾಶಿಗೆ ಎಸೆದಿತ್ತು. ಈ ಬಗ್ಗೆ ಈಗಲೂ ಆಕ್ರೋಶ ವ್ಯಕ್ತವಾಗ್ತಿದೆ. ಆದರೆ ಪಬ್ಲಿಕ್ ಅಭಿಯಾನದ ನಂತ್ರ ಸರ್ಕಾರ, ದೇಗುಲ ತೆರವು ಕಾರ್ಯಚರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.

ಬೆಂಗಳೂರಿನ ಪೀಣ್ಯದ ಸಿದ್ಧಾರೂಢ ಮಠದ ಶಿವಲಿಂಗ, ಶ್ರೀರಾಂಪುರದ ಅಯ್ಯಪ್ಪ ದೇಗುಲ, ವರಸಿದ್ಧಿ ವಿನಾಯಕ ದೇಗುಲ, ಬೆನ್ಸನ್ ಟೌನ್‍ನ ವೆಲಂಕಣಿ ಚರ್ಚ್, ಶಿವಾಜಿನಗರದ ಅಖ್ಸಾ ಮಸೀದಿ ಸೇರಿ ಬೆಂಗಳೂರಿನ 6406 ಅನಧಿಕೃತ ಪ್ರಾರ್ಥನಾ ಮಂದಿರಗಳನ್ನು ಗುರುತಿಸಲಾಗಿತ್ತು. ಈ ಪೈಕಿ 436ನ್ನು ತೆರವು ಮಾಡಲಾಗಿದೆ. 5389 ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಲಾಗಿದೆ. ಇನ್ನುಳಿದ 132 ಮಂದಿರಗಳನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳ ತೆರವಿಗೆ ಸರ್ಕಾರದಿಂದ್ಲೇ ಆದೇಶ – ಸಿಎಸ್ ಸೂಚನೆಯಂತೆ ಆಪರೇಷನ್ ಟೆಂಪಲ್!

blank

ಬಳ್ಳಾರಿಯಲ್ಲಿ 410ಕ್ಕೆ 410, ಗದಗದಲ್ಲಿ 242ಕ್ಕೆ 242, ಚಿಕ್ಕಬಳ್ಳಾಪುರದಲ್ಲಿ 198ಕ್ಕೆ 198 ಮಂದಿರಗಳನ್ನು ಸದ್ದಿಲ್ಲದೇ ತೆರವು ಮಾಡಲಾಗಿದೆ. ಧಾರವಾಡದಲ್ಲಿ 324 ಪ್ರಾರ್ಥನಾ ಮಂದಿರ ಪೈಕಿ 43ನ್ನು ತೆರವುಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1579 ಧಾರ್ಮಿಕ ಕಟ್ಟಡಗಳನ್ನು ಮಾರ್ಕ್ ಮಾಡಲಾಗಿದ್ದು, ಈಗಾಗಲೇ 356 ಮಂದಿರ ತೆರವಾಗಿವೆ. ಕಲಬುರಗಿಯಲ್ಲಿ 148 ಧಾರ್ಮಿಕ ಕಟ್ಟಡ ಗುರುತಿಸಲಾಗಿದೆ. ಆದ್ರೆ ಸ್ಥಳೀಯರ ವಿರೋಧದಿಂದ ಈವರೆಗೂ ಯಾವುದೇ ಮಂದಿರ ತೆರವಾಗಿಲ್ಲ.

blank

ತೆರವಿಗೆ ಗುರುತಿಸಿದ ದೇಗುಲಗಳು:
700 ವರ್ಷಗಳ ಮಂಗಳೂರಿನ ವೈದ್ಯನಾಥ ದೇಗುಲ, 300 ವರ್ಷಗಳ ಹಾಸನದ ಆದಿಆಂಜನೇಯ ದೇಗುಲ, (ದೇಗುಲ ಉಳಿವಿಗಾಗಿ ಶಾಂತಿಗ್ರಾಮ,ಹೊಂಗೆರೆ ಗ್ರಾಮಸ್ಥರಿಂದ ಹೋರಾಟ, ಹೈಕೋರ್ಟ್‍ನಿಂದ ತಡೆಯಾಜ್ಞೆ), ತುಮಕೂರಿನ ಟೌನ್‍ಹಾಲ್ ಬಳಿಯ ದರ್ಗಾ, ದೇಗುಲ ತೆರವಿಗೆ ಮಾರ್ಕ್ (ದೇಗುಲ ತೆರವಿಗೆ ಹಿಂದೂಗಳ ಷರತ್ತುಬದ್ಧ ಒಪ್ಪಿಗೆ.. ದರ್ಗಾ ತೆರವು ಮಾಡಿದಲ್ಲಿ ದೇಗುಲ ತೆರವಿಗೆ ತಕರಾರು ಇಲ್ಲ ಎಂದ ಹಿಂದೂಗಳು.. ಆದ್ರೆ ಕೋರ್ಟ್‍ಗೆ ಹೋಗಲು ಮುಸ್ಲಿಮರ ತೀರ್ಮಾನ) ಮಾಡಲಾಗಿದೆ.

Source: publictv.in Source link