ದೇವಾಲಯ ಕೆಡವಿದ ಸಾಧನೆಗಾಗಿ RSS ಸಮಾವೇಶವೇ?- ರಾಮಲಿಂಗಾ ರೆಡ್ಡಿ ಕಿಡಿ

ದೇವಾಲಯ ಕೆಡವಿದ ಸಾಧನೆಗಾಗಿ RSS ಸಮಾವೇಶವೇ?- ರಾಮಲಿಂಗಾ ರೆಡ್ಡಿ ಕಿಡಿ

ಬೆಂಗಳೂರು: ಐತಿಹಾಸಿಕ ದೇವಾಲಯ ಕೆಡವಿದ ಸಾಧನೆಗಾಗಿ RSS ಸಮಾವೇಶವೇ? ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ. ಈ ಸಂಬಂಧ ಮಾತಾಡಿರುವ ರಾಮಲಿಂಗಾ ರೆಡ್ಡಿ, ಧಾರ್ಮಿಕ ಕ್ಷೇತ್ರ ಮೈಸೂರಿನ ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹಾದೇವಮ್ಮ ದೇವಾಲಯವನ್ನು ಬಿಜೆಪಿಯ ಸರ್ಕಾರ ಅಮಾನುಷವಾಗಿ ಕೆಡವಿಹಾಕಿದೆ. 600 ವರ್ಷಗಳ ವೀರಗಲ್ಲಿನ ಇತಿಹಾಸವಿರೋ ಈ ದೇವಾಲಯದ ನಾಶ ಈ ನೆಲದ ಸಂಸ್ಕೃತಿಯ ನಾಶವಾಗಿದೆ ಎಂದರು.

ಸ್ಥಳೀಯ ಶಾಸಕ, ತಾಲ್ಲೂಕು ಪಂಚಾಯತ್ ಸದಸ್ಯ, ಸಂಸದ, ಸರ್ಕಾರ ಎಲ್ಲವೂ ಬಿಜೆಪಿಯವರೇ ಆಗಿದ್ದಾರೆ. ಧರ್ಮ ರಕ್ಷಕರು ಎಂದು ರಾಜಕಾರಣ ಮಾಡುತ್ತಿದ್ದ ಬಿಜೆಪಿಯವರ ಮುಖವಾಡ ಈ ಪ್ರಕರಣದಿಂದ ಕಳಚಿ ಬಿದ್ದಿದೆ ಎಂದು ತಪರಾಕಿ ಹಾಕಿದರು.

2009ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಾಗಿದ್ದರೂ ಹಿಂದಿನ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ದೇವಾಲಯಗಳನ್ನು ರಕ್ಷಿಸಲು ಹೆಚ್ಚಿನ ಮಹತ್ವ ಕೊಟ್ಟಿತ್ತು. ಇದೀಗ ಬಿಜೆಪಿಯವರ ಬಣ್ಣ ಬಟಾಬಯಲಾಗಿದೆ. ಬದಲಿ ನಿವೇಶನ ನೀಡಲು ಸರ್ಕಾರ ಮುಂದಾದರೂ ಯಾರಿಂದಲೂ ಮಾಡಲು ಅಸಾಧ್ಯವಾದ ದೇವಾಲಯದ ವಾಸ್ತುಶಿಲ್ಪವನ್ನು ಮರು ಸ್ಥಾಪಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ವಿಧಾನಸಭಾ ಅಧಿವೇಶನ; ಪಕ್ಷದ ಸಚಿವರಿಗೆ ಬಿಜೆಪಿ ಮುಖಂಡರು ನೀಡಿದ ಹಲವು ಸಲಹೆಗಳೇನು?

ದೇವಾಲಯವನ್ನು ಕೆಡವಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಜೆಪಿ ಸರ್ಕಾರ ಕೆಡವಿದೆ. ಇನ್ನು ಸಂಘಪರಿವಾರದವರು ಸಪ್ಟೆಂಬರ್ 16ರಂದು ಮೈಸೂರಿನಲ್ಲಿ ಪ್ರತಿಭಟನೆ ಯಾರ ವಿರುದ್ದ ನಡೆಸಲಿದ್ದಾರೆ? ಇದು ಪ್ರತಿಭಟನಾ ಸಮಾವೇಶವೇ ಅಥವಾ ಈ ಸಮಾವೇಶ ದೇವಾಲಯ ಕೆಡವಿದ ಸಾಧನೆಗಾಗಿಯೇ ಎಂದು RSS ಸ್ಪಷ್ಟಪಡಿಸಲಿ. ಇನ್ನಾದರೂ ರಾಜ್ಯದ ಜನ ನಿರ್ಧರಿಸಲಿ ನಿಜವಾದ ಹಿಂದೂ, ದೇವಾಲಯ ಉಳಿಸಿದ ಕಾಂಗ್ರೆಸ್ ಪಕ್ಷವೋ ಅಥವಾ ದೇವಾಲಯ ಕೆಡವಿದ ಬಿಜೆಪಿಯೋ? ಎಂದು ಕೆಂಡಮಂಡಲರಾದರು.

Source: newsfirstlive.com Source link