ರಾಮಮಂದಿರದ ​ಬ್ಲೂ ಪ್ರಿಂಟ್​​ ಔಟ್​​; ಪ್ರಾಂಗಣದಲ್ಲಿ ನಿರ್ಮಾಣವಾಗುವ 6 ದೇಗುಲಗಳು ಯಾವು ಗೊತ್ತಾ?

ರಾಮಮಂದಿರದ ​ಬ್ಲೂ ಪ್ರಿಂಟ್​​ ಔಟ್​​; ಪ್ರಾಂಗಣದಲ್ಲಿ ನಿರ್ಮಾಣವಾಗುವ 6 ದೇಗುಲಗಳು ಯಾವು ಗೊತ್ತಾ?

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ. ಮಂದಿರ ನಿರ್ಮಾಣ ಹೇಗಿರಬಹುದು ಅನ್ನೋ ಕುತೂಹಲ ಪ್ರತಿಯೊಬ್ಬರಲ್ಲಿಯೂ ಇದ್ದೇ ಇದೆ. ಈ ನಡುವೆ ಶ್ರೀರಾಮ ಮಂದಿರದ ಅಂತಿಮ ನೀಲ ನಕ್ಷೆಯೊಂದು ಹೊರ ಬಿದ್ದಿದೆ. ಹಾಗಾದ್ರೆ, ನೀಲನಕ್ಷೆಯಲ್ಲಿ ಏನಿದೆ? ರಾಮಮಂದಿರ ಪ್ರಾಂಗಣದಲ್ಲಿ ಎಷ್ಟು ದೇವರ ಮಂದಿರಗಳು ನಿರ್ಮಾಣವಾಗುತ್ತವೆ?

ವೇದಗಳಲ್ಲಿ ಬರುವ ನಾಲ್ಕು ಯುಗಗಳಲ್ಲಿ ಎರಡನೇ ಯುಗವೇ ತೇತ್ರಾಯುಗ, ಈ ಯುಗದಲ್ಲಿಯೇ ವಿಷ್ಟುವಿನ ಏಳನೇ ಅವತಾರವಾಗಿ ಶ್ರೀರಾಮ ಜನ್ಮ ಪಡೆಯುತ್ತಾನೆ. ಆತ ಜನಿಸಿದ ಸ್ಥಳವೇ ಉತ್ತರ ಪ್ರದೇಶದಲ್ಲಿರೋ ಅಯೋಧ್ಯೆ ಆಗಿರುತ್ತೆ. ಇದೇ ಸ್ಥಳದಲ್ಲಿ ರಾಮಮಂದಿರ ಇತ್ತು. ಆದ್ರೆ, ಭಾರತಕ್ಕೆ ಬಂದ ಮೊಘಲರು ತಮ್ಮ ಆಡಳಿತಾವಧಿಯಲ್ಲಿ ರಾಮ ಮಂದಿರವನ್ನು ಕೆಡುವಿ ಬಾಬರಿ ಮಸೀದಿಯನ್ನು ನಿರ್ಮಿಸುತ್ತಾರೆ. ನಂತರದಲ್ಲಿ ಅಂದ್ರೆ, 1992ರಲ್ಲಿ ಬಾಬರಿ ಮಸೀದಿಯನ್ನು ಕೆಡುವುಲಾಗುತ್ತೆ. ಈ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ 2019ರ ವರೆಗೂ ಇರುತ್ತದೆ. ಅಂತಿಮವಾಗಿ 2019ರಲ್ಲಿ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಹೊರಬೀಳುತ್ತದೆ.

ಆ ಪ್ರಕಾರ ಅಯೋಧ್ಯೆಯ ರಾಮಮಂದಿರ ಸ್ಥಳದಲ್ಲಿಯೇ ಮಂದಿರ ನಿರ್ಮಾಣಕ್ಕೆ ಅವಕಾಶ ಸಿಗುತ್ತದೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡುವಂತೆ ಆದೇಶ ನೀಡಲಾಗಿರುತ್ತದೆ..ಇದು ಈ ಹಿಂದಿನ ಬೆಳವಣಿಗೆ, 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಪೂರೈಸಿದ್ದಾರೆ. ಹಾಗಾದ್ರೆ ಮಂದಿರ ಹೇಗೆ ನಿರ್ಮಾಣವಾಗಲಿದೆ? ಅಂತಿಮ ನೀಲ ನಕ್ಷೆಯಲ್ಲಿ ಏನಿದೆ?

ಶ್ರೀರಾಮ ಮಂದಿರದ ಅಂತಿಮ ನೀಲ ನಕ್ಷೆ ಬಹಿರಂಗ

2019 ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಹೊರ ಬೀಳುತ್ತಿದ್ದಂತೆ ಶ್ರೀರಾಮಮಂದಿರ ನೀಲ ನಕ್ಷೆಯೊಂದು ಹೊರಬಂದಿತ್ತು. ಆ ನೀಲ ನಕ್ಷೆಯ ಪ್ರಕಾರ 270 ಅಡಿ ಉದ್ದ, 135 ಅಡಿ ಅಗಲ ಹಾಗೂ 125 ಅಡಿ ಎತ್ತರದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಪ್ರತಿ ಅಂತಸ್ಥಿನಲ್ಲಿ 106 ಕಂಬ, 185 ಬೀಮ್‌ಗಳು ಇರಲಿವೆ. ಅಮೃತ ಶಿಲೆಯ ಚೌಕಟ್ಟು ನಿರ್ಮಾಣ, ನೆಲಮಹಡಿಯಲ್ಲಿ ರಾಮನ ವಿಗ್ರಹ, ಮೊದಲ ಅಂತಸ್ಥಿನಲ್ಲಿ ರಾಮನ ದರ್ಬಾರು, ಮಂದಿರಕ್ಕೆ 5 ದ್ವಾರಗಳ ನಿರ್ಮಾಣ ಇರಲಿದೆ ಎಂದು ತಿಳಿಸಲಾಗಿತ್ತು. ಆದ್ರೆ, ಮಂದಿರದ ಒಳಗೆ ಏನೇನಿರಲಿದೆ ಅನ್ನೋದು ಮಾತ್ರ ಹೊರ ಬಂದಿರಲಿಲ್ಲ. ಇದೀಗ ಅಂತಿಮ ನೀಲ ನಕ್ಷೆ ಬಹಿರಂಗಗೊಂಡಿದೆ. ಹಾಗಾದ್ರೆ ಅದರಲ್ಲಿ ಏನಿದೆ?

ಶ್ರೀರಾಮ ಮಂದಿರದ ಪ್ರಾಂಗಣದಲ್ಲಿ 6 ದೇವಾಲಯ
ಆ ಆರು ದೇವಾಲಯಗಳು ಯಾವ್ಯಾವು ಗೊತ್ತಾ?

ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಇಡೀ ವಿಶ್ವವೇ ತಿರುಗಿ ನೋಡುವಂತಹ ಸುಂದರ ಮಂದಿರ ಅದಾಗಿರುತ್ತದೆ. ಕೋಟ್ಯಂತ ರಾಮಭಕ್ತರ ಬಯಕೆ ಅಂತೂ ಈಡೇರುತ್ತಿದೆ ಅನ್ನೋದು ಗೊತ್ತಿತ್ತು. ಹಾಗೇ ಶ್ರೀರಾಮ ಮಂದಿರದಲ್ಲಿ ಸೀತೆ, ಲಕ್ಷ್ಮಣ, ಹನುಮಂತನಿಗೂ ಪೂಜಾ ಸ್ಥಳಗಳು ನಿರ್ಮಾಣವಾಗುತ್ತವೆ ಅನ್ನೋದು ಗೊತ್ತಿತ್ತು. ಯಾಕಂದ್ರೆ, ರಾಮನ ಜೊತೆ ಸೀತೆ, ಲಕ್ಷ್ಮಣ, ಹನುಮಂತ ಇದ್ದವರು. ಹೀಗಾಗಿ ರಾಮ ಜನ್ಮ ಎತ್ತಿರೋ ಸ್ಥಳದಲ್ಲಿಯೇ ಸೀತೆ, ಲಕ್ಷ್ಮಣ, ಹನುಮಂತನ ಪೂಜೆ ಕೂಡ ನಡೆಯುತ್ತದೆ. ಆದ್ರೆ, ಇದೀಗ ಬಹಿರಂಗಗೊಂಡಿರೋ ರಾಮಮಂದಿರದ ನೀಲ ನಕ್ಷೆಯಲ್ಲಿ ರಾಮ ಮಂದಿರದ ಪ್ರಾಂಗಣದಲ್ಲಿ 6 ದೇವಾಲಯಗಳು ನಿರ್ಮಾಣವಾಗುತ್ತಿವೆ. ಅವು ಯಾವವೆಂದರೆ, ಸೂರ್ಯ ದೇವ ಮಂದಿರ, ಗಣೇಶ ಮಂದಿರ, ಶಿವ ಮಂದಿರ, ದುರ್ಗೆ ಮಂದಿರ, ಬ್ರಹ್ಮ ದೇವ ಮಂದಿರ, ವಿಷ್ಣು ಮಂದಿರವಾಗಿದೆ.

6 ಮಂದಿರ ನಿರ್ಮಾಣ ಯಾಕೆ ಗೊತ್ತಾ?
ಸೂರ್ಯ ದೇವ, ಗಣೇಶ ಮಂದಿರದ ವಿಶೇಷತೆ ಏನು?

ಹಿಂದೂ ಧರ್ಮದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಸೂರ್ಯನು ಏಳು ಕುದುರೆಗಳನ್ನು ಹೊಂದಿರೋ ರಥದಲ್ಲಿ ಸವಾರಿ ಮಾಡುತ್ತಿರುವಂತ ಚಿತ್ರಣ ಹಿಂದೂ ಪುರಾಣಗಳಲ್ಲಿದೆ. ಋಗ್ವೇದದಲ್ಲಿ ಸೂರ್ಯನಿಗೆ ಸಂಬಂಧಿಸಿದ ವಿಶೇಷ ಮಂತ್ರಗಳಿರುವುದನ್ನು ನಾವು ಕಾಣಬಹುದು. ಸೂರ್ಯನಿಗೆ ಸೂಕ್ತ ಪೂಜೆಯನ್ನು ಕೈಗೊಂಡರೆ ದೋಷದಿಂದ ಮುಕ್ತಿ ದೊರೆಯುತ್ತದೆ ಅನ್ನೋ ನಂಬಿಕೆ ಇದೆ. ಐದು ಸರ್ವೋತ್ತಮ ದೇವರುಗಳಲ್ಲಿ ಸೂರ್ಯದೇವ ಕೂಡ ಒಬ್ಬ ಎಂದು ಪೂಜಿಸುತ್ತಾರೆ. ಇದೀಗ ಶ್ರೀರಾಮ ಮಂದಿರದ ಪ್ರಾಂಗಣದಲ್ಲಿಯೇ ಸೂರ್ಯ ದೇವರ ಮಂದಿರ ಕೂಡ ನಿರ್ಮಾಣವಾಗುತ್ತಿದೆ.

blank

ಇನ್ನು ಗಣೇಶ ಮಂದಿರವನ್ನು ಕೂಡ ನಿರ್ಮಿಸಲಾಗುತ್ತೆ. ಹಿಂದೂಗಳು ಏನೇ ಶುಭಕಾರ್ಯ ಮಾಡ್ಬೇಕು ಅಂದ್ರೂ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಿಯೇ ಕಾರ್ಯ ಮಾಡುತ್ತಾರೆ. ವಿವಾಹ, ಉಪನಯನ, ಗೃಹಪ್ರವೇಶ ಏನೇ ಶುಭಕಾರ್ಯ ಇರಲಿ, ಅಲ್ಲಿ ಮೊದಲ ಪೂಜೆಯನ್ನು ಗಣೇಶನಿಗೆ ಸಲ್ಲಿಸಲಾಗಿರುತ್ತದೆ. ಇಷ್ಟೇ ಅಲ್ಲ, ದೇವತಾ ಕಾರ್ಯಗಳನ್ನು ಮಾಡುವಾಗಲು ಕೂಡ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಲಾಗಿರುತ್ತದೆ. ಯಾಕಂದ್ರೆ, ಗಣೇಶ ವಿಘ್ನ ನಿವಾರಕನಾಗಿರುತ್ತಾನೆ. ಯಾವುದೇ ವಿಘ್ನಗಳು ಎದುರಾಗದಿರಲಿ ಅಂತ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಿಯೇ ಮುಂದಿನ ಕಾರ್ಯ ಮಾಡಲಾಗುತ್ತದೆ. ಇದೀಗ ಅಯೋಧ್ಯೆ ರಾಮಮಂದಿರದ ಪ್ರಾಂಗಣದಲ್ಲಿ ಗಣೇಶ ಮಂದಿರ ನಿರ್ಮಾಣವಾಗಲಿದೆ.

ಶಿವ, ದುರ್ಗೆ ಮಂದಿರ ನಿರ್ಮಾಣದ ಮಹತ್ವ ಏನು?

ಹಿಂದೂಗಳಲ್ಲಿ ಶಿವನಿಗೆ ವಿಶೇಷ ಸ್ಥಾನವಿದೆ. ಶಿವನನ್ನು ಮೆಚ್ಚಿಸುವುದು ತುಂಬಾ ಸುಲಭವಾದ್ದರಿಂದ ಅವನನ್ನು ಭೋಲೇನಾಥ ಎಂದು ಕರೆಯಲಾಗುತ್ತದೆ. ಶುದ್ಧ ಹೃದಯದಿಂದ ಶಿವಲಿಂಗಕ್ಕೆ ಒಂದು ಲೋಟ ನೀರನ್ನು ಅರ್ಪಿಸಿದರೂ ಕೂಡ ಇದರಿಂದ ಶಿವನು ಸಂತೋಷಗೊಳ್ಳುವನು. ಶಿವ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯ ಉಂಟಾಗುತ್ತದೆ. ಆರೋಗ್ಯ ಪ್ರಾಪ್ತಿಯಾಗುತ್ತದೆ. ಮಾರಣಾಂತಿಕ ಕಾಯಿಲೆಯಿಂದ ರಕ್ಷಣೆ ಪಡೆಯಲು ಶಿವ ಪೂಜೆ ಮಾಡಲಾಗುತ್ತದೆ ಅನ್ನೋ ನಂಬಿಕೆ ಇದೆ. ಅಯೋಧ್ಯಯಲ್ಲಿ ಶ್ರೀರಾಮನ ದರ್ಶನಕ್ಕೆ ಹೋದವರಿಗೆ ಶಿವನ ದರ್ಶನ ಪಡೆಯುವ ಭಾಗ್ಯವೂ ಸಿಗಲಿದೆ.

ಇನ್ನು ಹಿಂದೂಗಳಿಗೆ ದುರ್ಗಾದೇವಿಯ ಪೂಜೆ ಕೂಡ ಮಹತ್ವದ್ದು. ಅದರಲ್ಲಿಯೂ ಉತ್ತರ ಭಾರತದಲ್ಲಿ ದುರ್ಗಾ ದೇವಿಯ ಪೂಜೆ ಜೋರಾಗಿಯೇ ನಡೆಯುತ್ತದೆ. ದುರ್ಗತಿಗಳ ವಿನಾಶಕ್ಕೆ ದುರ್ಗಾದೇವಿಯನ್ನು ಪೂಜೆ ಮಾಡಬೇಕು ಎನ್ನಲಾಗುತ್ತಿದೆ. ಅದರಲ್ಲಿಯೂ ನವರಾತ್ರಿಗಳಲ್ಲಿ ದುರ್ಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಂಗಣದಲ್ಲಿ ದುರ್ಗಾದೇವಿ ಮಂದಿರ ಕೂಡ ನಿರ್ಮಾಣವಾಗುತ್ತಿದೆ.

ಬ್ರಹ್ಮ, ವಿಷ್ಣು ಮಂದಿರದ ವಿಶೇಷತೆ ಏನು?

ಬ್ರಹ್ಮ, ವಿಷ್ಣು, ಮಹೇಶ್ವರನನ್ನು ತ್ರಿಮೂರ್ತಿಗಳು ಎಂದೇ ಕರೆಯಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಬ್ರಹ್ಮನ್ನು ಸೃಷ್ಟಿಕರ್ತ ಎಂದೇ ಕರೆಯುತ್ತೇವೆ. ಆದ್ರೆ, ವಿಷ್ಣು ಮತ್ತು ಮಹೇಶ್ವರನಿಗೆ ಇರುವಷ್ಟು ದೇವಾಲಯಗಳು ಬ್ರಹ್ಮನಿಗೆ ಇಲ್ಲ. ಬ್ರಹ್ಮ ದೇವಾಲಯಗಳು ಭಾರೀ ವಿರಳ. ಕೇರಳ, ಗೋವಾ, ಹಿಮಾಚಲ ಪ್ರದೇಶ ಸೇರಿದಂತೆ ಕೆಲವೇ ಕೆಲವು ಸ್ಥಳಗಳಲ್ಲಿ ಮಾತ್ರ ಬ್ರಹ್ಮ ದೇವಾಲಯಗಳು ಇವೆ. ಭೂಲೋಕದಲ್ಲಿ ಬ್ರಹ್ಮ ದೇವಾಲಯಗಳು ಯಾಕೆ ವಿರಳ ಅನ್ನೋದಕ್ಕೆ ಪುರಾಣದಲ್ಲಿ ವಿಶೇಷ ಕಥೆಗಳು ಇವೆ. ಇದೀಗ ಶ್ರೀರಾಮ ಮಂದಿರ ಪ್ರಾಂಗಣದಲ್ಲಿಯೂ ಬ್ರಹ್ಮ ದೇವಾಲಯವನ್ನು ನಿರ್ಮಿಸಲು ನೀಲ ನಕ್ಷೆ ಸಿದ್ಧಪಡಿಸಲಾಗಿದೆ.

ಇನ್ನು ಶ್ರೀರಾಮ ಮಂದಿರ ಪ್ರಾಂಗಣದಲ್ಲಿ ವಿಷ್ಣು ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ವಿಷ್ಣು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಸಕಲ ಲೋಕಗಳ ಪಾಲಕ ಎಂದು ಹಿಂದೂ ಧರ್ಮ ನಂಬುತ್ತದೆ. ಭಗವದ್ಗೀತೆಯಲ್ಲಿ ವರ್ಣಿಸಿದಂತೆ ‘ವಿಶ್ವರೂಪಿ’ ನಾರಾಯಣ ಎಂದೂ ಕರೆಯುತ್ತಾರೆ. ಧರ್ಮ ಸಂಸ್ಥಾಪನೆಗಾಗಿ ದಶಾವತಾರ ತಾಳಿ ಭೂಲೋಕವನ್ನು ರಕ್ಷಿಸಿದಾತ ಎಂದು ಪುರಾಣಗಳು ಕೊಂಡಾಡುತ್ತವೆ. ವಿಷ್ಣುವಿನ ಏಳನೇ ಅವತಾರವೇ ಶ್ರೀರಾಮ ಎಂದು ನಂಬಿಕೆ ಇದೆ.

1988 ರಲ್ಲಿಯೇ ಸಿದ್ಧವಾಗಿತ್ತು ರಾಮಮಂದಿರದ ವಿನ್ಯಾಸ
ಸೋಂಪುರ ಕುಟುಂಬದಿಂದ ಶಿಲ್ಪ ಕಲೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ 1988 ರಲ್ಲಿಯೇ ವಿನ್ಯಾಸ ಸಿದ್ಧವಾಗಿತ್ತು. ಆದ್ರೆ, ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದ ಕಾರಣ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ. ಇದೀಗ ಆ ವಿನ್ಯಾಸವನ್ನು ಬದಲಾಯಿಸಿ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದ್ರೆ ಈ ದೇವಸ್ಥಾನದ ಶಿಲ್ಪ ಕಲೆ ಜವಾಬ್ದಾರಿಯನ್ನು ಅಹಮದಾಬಾದ್‌ನ ಸೋಂಪುರ ಕುಟುಂಬದವರು ಹೊತ್ತುಕೊಂಡಿದ್ದಾರೆ. ಸೋಂಪುರ ಕುಟುಂಬದವರು ಇಲ್ಲಿಯವರೆಗೆ 100 ಕ್ಕೂ ಹೆಚ್ಚು ದೇವಾಲಯಗಳಿಗೆ ಶಿಲ್ಪ ಕಲೆ ನಿರ್ಮಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

2023ಕ್ಕೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

ಶ್ರೀರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. 2020 ಆಗಸ್ಟ್‌ 5ನೇ ತಾರೀಖು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಿರ್ವಹಿಸಿದ್ದಾರೆ. ಈಗಾಗಲೇ ನಿರ್ಮಾಣದ ಕಾರ್ಯಗಳು ಬರದಿಂದ ನಡೆಯುತ್ತಿವೆ. 1,20,000 ಚದರ ಅಡಿ ಉದ್ದ ಮತ್ತು 50 ಅಡಿ ಆಳ ಅಗೆದಿರುವ ಅಡಿಪಾಯ ಪ್ರದೇಶದ ಭರ್ತಿ ಕಾರ್ಯ ನಡೆಯುತ್ತಿದೆ. ನವೆಂಬರ್ ಮೊದಲ ವಾರಕ್ಕೆ ಅಡಿಪಾಯದ ಕಾರ್ಯಗಳು ಪೂರ್ಣಗೊಳ್ಳಲಿದೆ. 2023ರ ವೇಳೆಗೆ ಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಶ್ರೀರಾಮ ಮಂದಿರದ ಪ್ರಾಂಗಣದಲ್ಲಿಯೇ 6 ಮಂದಿರಗಳು ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ. ಒಂದೊಂದು ದೇವತೆಗಳಿಗೂ ಹಿಂದೂಗಳಲ್ಲಿ ಒಂದೊಂದು ರೀತಿಯ ವಿಶೇಷ ಸ್ಥಾನವಿದೆ. ಆ ಎಲ್ಲಾ ದೇವರ ದರ್ಶನ ಪಡೆಯುವ ಭಾಗ್ಯ ಶ್ರೀರಾಮ ಭಕ್ತರಿಗೆ ದೊರೆಯಲಿದೆ.

 

Source: newsfirstlive.com Source link