ತಿರುಪತಿಯಲ್ಲಿ ಇನ್ಮುಂದೆ ಲಡ್ಡು ಜತೆ ವಿಶೇಷ ವಸ್ತು ನೀಡಲು ಮುಂದಾದ ಟಿಡಿಪಿ; ಏನದು?

ತಿರುಪತಿಯಲ್ಲಿ ಇನ್ಮುಂದೆ ಲಡ್ಡು ಜತೆ ವಿಶೇಷ ವಸ್ತು ನೀಡಲು ಮುಂದಾದ ಟಿಡಿಪಿ; ಏನದು?

ಜಗತ್ತಿನಲ್ಲಿಯೇ ಅತಿ ದೊಡ್ಡ ಹಿಂದೂ ಧಾರ್ಮಿಕ ಸಂಸ್ಥೆ ಅಂದ್ರೆ ಅದು ತಿರುಮಲ ತಿರುಪತಿ ದೇವಸ್ಥಾನಂ.. ಐತಿಹಾಸಿಕವಾಗಿ, ಧಾರ್ಮಿಕವಾಗಿಯೂ ಹಾಗು ಹೆಚ್ಚು ಆದಾಯ ಗಳಿಸುತ್ತಿರೋ ಖ್ಯಾತಿಯನ್ನ ಪಡೆದುಕೊಂಡು ಬಂದಿರೋ ಟಿಟಿಡಿ ಸ್ಥಾಪನೆ ಆಗಿದ್ದು 1843 ರಲ್ಲಿ.. ಭಕ್ತಾಧಿಗಳಿಗಾಗಿ ನಾನಾ ಸೇವೆಗಳನ್ನ ಒದಗಿಸುತ್ತಾ ಬಂದಿರೋ ಟಿಟಿಡಿ ಲಡ್ಡು ಕೌಂಟರ್​​, ಸೇವಾ ಕೌಂಟರ್ ಎಂದು ಹಲವು ಕೌಂಟರ್​​ಗಳನ್ನ ತೆರೆದಿದೆ. ಆ ಸಾಲಿಗೆ ಈಗ ಮತ್ತೊಂದು ಕೌಂಟರ್​ ಸೇರ್ಪಡೆಗೊಂಡಿದೆ. ಹಾಗಾದ್ರೆ ಟಿಟಿಡಿಯಲ್ಲಿ ನಿರ್ಮಾಣ ಆಗಿರೋ ಆ ಹೊಸ ಕೌಂಟರ್​ ಯಾವುದು? ಕೌಂಟರ್​​ನ ವಿಶೇಷತೆಗಳೇನು?

ತಿರುಮಲ ತಿರುಪತಿ ದೇವಸ್ಥಾನಂ ವಿಶ್ವದಲ್ಲೇ ಅತಿ ಹೆಚ್ಚು ಭಕ್ತಾಧಿಗಳನ್ನ ಹೊಂದಿದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಭಾಷಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ಅದನ್ನ ತಿರುಪತಿಯಲ್ಲಿರೋ ಪ್ರತಿಯೊಂದು ಗೋಡೆಗಳು ಸಾರಿ ಸಾರಿ ಹೇಳುತ್ತಿದೆ. 3000 ತಾಮ್ರದ ಫಲಕಗಳ ಒಂದು ಅನನ್ಯ ಸಂಗ್ರಹವೇ ಇಲ್ಲಿದೆ. ಇಂತಾ ಒಂದು ವಿಶ್ವವಿಖ್ಯಾತಿ ಪಡೆದಿರೋ ತಿರುಪತಿಯಲ್ಲಿ ಇಂದಿನವರೆಗೂ ಹಲವು ಸೇವೆಗಳನ್ನ ನಾವೆಲ್ಲರು ನೋಡಿದ್ದೀವಿ, ಆ ಸೇವೆಯನ್ನ ಸಲ್ಲಿಸಿದ್ದೀವಿ ಕೂಡ. ಹೇಳಬೇಕು ಅಂದ್ರೆ ಅದೊಂದು ವಿಸ್ಮಯವೇ.

blank

ಬಾಲಾಜಿ ಭಕ್ತರು ಮನಸ್ಸಿನಲ್ಲಿ ಆಂದುಕೊಳ್ಳೋದು ಒಂದೆ. ಒಂದಲ್ಲ ಒಂದು ದಿನ ಬಾಲಾಜಿಯ ದರ್ಶನವನ್ನ ಮಾಡಬೇಕು ಅಂತಾ. ಅದಕ್ಕಾಗಿ ಇಲ್ಲಿಗೆ ದೇಶದ ಮೂಲೆ ಮೂಲೆಯಿಂದಷ್ಟೆ ಅಲ್ಲದೇ, ವಿದೇಶಗಳಿಂದಲೂ ತಿಮ್ಮಪ್ಪನ ದರ್ಶನಕ್ಕಾಗಿ ಬರುತ್ತಾರೆ. ಭಕ್ತಿಯಿಂದ ಇಲ್ಲಿಗೆ ಬಂದು ಬಾಲಾಜಿಯ ದರ್ಶನ ಪಡೆದು ಗೋವಿಂದಾ ಗೋವಿಂದಾ ಎನ್ನುತ್ತಲೆ ತಿಮ್ಮಪ್ಪನನ್ನ ಕಣ್ತುಂಬಿ ಕೊಂಡು ಪುನೀತರಾಗುತ್ತಾರೆ.

ಆಂಧ್ರದ ಚಿತ್ತೂರಿನಲ್ಲಿರೋ ತಿರುಪತಿಗೆ ಬರೋ ಭಕ್ತಾಧಿಗಳಿಂದಲೇ ವರ್ಷಕ್ಕೆ ಏನಿಲ್ಲ ಅಂದ್ರು ನೂರಾರು ಕೋಟಿ ಆದಾಯ ವಿವಿಧ ರೂಪಗಳಿಂದ ಹರಿದು ಬರುತ್ತಿದೆ. ಪ್ರತಿಯೊಬ್ಬ ಭಕ್ತಾದಿಗಳು ಕೂಡ ಹುಂಡಿಯಲ್ಲಿ ಹಣವನ್ನ ಹಾಕಿ ಹರಕೆ ತೀರಿಸಿಕೊಳ್ಳುತ್ತಾರೆ. ಹುಂಡಿಯಲ್ಲಿಯೇ ಕೋಟಿ ಕೋಟಿ ಆದಾಯ ಬಂದಿರುತ್ತೆ. ಇದನ್ನ ಹೊರತು ಪಡಿಸಿ ಇಲ್ಲಿ ಪ್ರಸಾದ ಸೇವೆ, ತಲೆ ಬೋಳಿಸಿಕೊಳ್ಳುವುದು, ತುಲಾಭಾರ ಸೇವೆ, ಅರ್ಜಿತ ಸೇವೆಗಳು, ಹೀಗೆ ನಾನಾ ಸೇವೆಗಳಿಂದಲೂ ಹೆಚ್ಚಿನ ಆದಾಯ ತಿರುಪತಿಗೆ ಹರಿದು ಬರುತ್ತೆ. ಅದರಲ್ಲಿ ಹೆಚ್ಚಿನ ಆದಾಯ ಅಂತಾ ಬರೋದು ಲಡ್ಡುವಿನಿಂದ.. ತಿರುಪತಿ ಲಾಡು ಅಂದ್ರೆ ಸಾಕು ಭಕ್ತಾಧಿಗಳು ಮುಗಿ ಬಿಳುತ್ತಾರೆ.

blank

ಸದಾ ಪರಿಮಳ ಸುವಾಸನೆಯಿಂದಲೇ ಕೂಡಿರುವ ತಿರುಪತಿಯಲ್ಲಿ ಈಗ ಶ್ರೀವಾರಿ ಅಗರಬತ್ತಿ ಬಾರಿ ಸದ್ದನ್ನ ಮಾಡುತ್ತಿದೆ. ಇದನ್ನ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ತಯಾರು ಮಾಡಲಾಗುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಟಿಟಿಡಿ ಚೇರ್​ಮೆನ್​​​​ ವೈ ವಿ ಸುಬ್ಬಾ ರೆಡ್ಡಿಯವರು ಉದ್ಘಾಟನೆ ಮಾಡಿ ಆ ಮೂಲಕ ಚಾಲನೆ ನೀಡಿದ್ದಾರೆ. ಹಾಗಾಗಿ ಇನ್ನು ಮುಂದೆ ಭಕ್ತಾದಿಗಳಿಗೆ ತಿರುಪತಿಯಲ್ಲಿ ಅಗರ ಬತ್ತಿ ಕೂಡ ಸಿಗಲಿದೆ.

ಸೆಪ್ಟಂಬರ್ ಮೊದಲ ವಾರದಿಂದ ಇಲ್ಲಿ ಅಗರಬತ್ತಿ ತಯಾರು ಮಾಡಲಾಗುತ್ತಿದೆ. ವಿಶೇಷ ಅಂದ್ರೆ ಈ ಅಗರಬತ್ತಿ ತಯಾರು ಆಗ್ತಾಯಿರೋದು ಹೂವಿನಿಂದ.. ಹೌದು,, ತಿಮ್ಮಪ್ಪನ ಮೇಲೆ ಹಾಕುವ ಹೂವಿನಿಂದ ಹಾಗು ಪೂಜಾ ಕೈಂಕರ್ಯಕ್ಕೆ ಬಳಸುವ ಹೂವಿನಿಂದಲೇ ಇಂದು ಅಗರಬತ್ತಿ ತಯಾರು ಮಾಡಿ ಅದನ್ನ ಅಗರಬತ್ತಿ ಕೌಂಟರ್​​​ನಲ್ಲಿ ಮಾರಟ ಮಾಡುತ್ತಿದೆ ಟಿಟಿಡಿ. ಅಲ್ಲದೇ ಈ ಒಂದು ವಿನೂತನ ಮಾದರಿಯನ್ನ ಅಳವಡಿಸಿಕೊಳ್ಳೋ ಮೂಲಕ ಸನಾತನ ಧರ್ಮವನ್ನ ಸಾರಿ ಹೇಳೋ ಪ್ರಯತ್ನಕ್ಕೆ ಟಿಟಿಡಿ ಮುಂದಾಗಿದೆ.

blank

7 ತರಹದ ಅಗರ ಬತ್ತಿ ತಯಾರು ಮಾಡುತ್ತಿದೆ ಟಿಟಿಡಿ
ಬೆಂಗಳೂರು ಮೂಲದ ದರ್ಶನ್ ಇಂಟರ್​​ನ್ಯಾಷನಲ್​ ಸಂಸ್ಥೆ ಸಂಪೂರ್ಣವಾದ ಸಹಕಾರವನ್ನ ಇದಕ್ಕಾಗಿ ನೀಡಿದೆ ಅನ್ನೋದು ಇಲ್ಲಿ ಮತ್ತೊಂದು ವಿಶೇಷ.. ಇನ್ನು ಟಿಟಿಡಿ ಒಟ್ಟು 7 ಬಗೆಯ ಅಗರಬತ್ತಿಗಳನ್ನ ತಯಾರಿಸುತ್ತಿದೆ. ಆ ಎಲ್ಲಾ ಅಗರಬತ್ತಿಗಳನ್ನ ಹೂವಿನಿಂದಲೇ ಮಾಡುತ್ತಿದ್ದಾರೆ. ತಿರುಮಲದ ಸಪ್ತಗಿರಿಯಲ್ಲಿ ನಿನ್ನೆ 7 ಬಗೆ ಬಗೆಯ ಅಗರ ಬತ್ತಿಯನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಆ ಮೂಲಕ ಅಧಿಕೃತವಾದ ಮಾರಾಟಕ್ಕೆ ಚಾಲನೆ ನೀಡಿದ್ದಾರೆ.
7 ಬಗೆಯ ಅಗರಬತ್ತಿಗಳು

ಇನ್ನು ಟಿಟಿಡಿ ತಯಾರಿಸುತ್ತಿರೋ ಅಗರಬತ್ತಿಗಳು ಅಂದ್ರೆ ಅದು ಅಭಯ ಹಸ್ತ, ತಂದನಾನಾ, ದಿವ್ಯಪಾದ, ಆಕೃಷ್ಟಿ, ಸೃಷ್ಟಿ, ತುಷ್ಟಿ ಹಾಗು ದೃಷ್ಟಿ ಹೆಸರಿನಲ್ಲಿ ಅಗರಬತ್ತಿ ತಯಾರಾಗುತ್ತಿದೆ. ವಿವಿದ ಬಗೆಯ 7 ಬ್ರಾಂಡ್​​​​ಗಳನ್ನ ಟಿಟಿಡಿ ತಯಾರು ಮಾಡುತ್ತಿದೆ. ಇನ್ನು ಈ ಏಳು ಬಗೆ ಬಗೆಯ ಅಗರಬತ್ತಿಗಳನ್ನ ತಯಾರು ಮಾಡಿ ವಿಶೇಷವಾಗಿ ಒಂದು ಕೌಂಟರ್​​ನಲ್ಲಿ ಮಾರಾಟ ಮಾಡುತ್ತಿದ್ದಾರೆ.. ಇನ್ನು ಈ 7 ಬಗೆ ಬಗೆಯೆ ಅಗರ ಬತ್ತಿಗಳು ಕೂಡ ಒಂದೊಂದು ವಿಶೇಷತೆಯನ್ನ ಹೊಂದಿದೆ.

ಪ್ರಮುಖವಾಗಿ ಟಿಟಿಡಿ ಎರಡು ಕ್ಯಾಟಗರಿಯನ್ನಾಗಿ ಮಾಡಿಕೊಂಡು ಅಗರಬತ್ತಿಗಳನ್ನ ತಯಾರು ಮಾಡುತ್ತಿದೆ. ಒಂದು ಫ್ಲೋರಾ ಅಗರಬತ್ತಿ. ಹಾಗು ಮತ್ತೊಂದು ಸಾಧಾರಣ ಅಗರಬತ್ತಿ. ಇಲ್ಲಿ ಫ್ಲೋರಾ ಅಗರಬತ್ತಿಗೆ 65 ಗ್ರಾಂ ಗೆ 165 ರೂಪಾಯಿ, ಸಾಧಾರಣಾ ಅಗರಬತ್ತಿ 100 ಗ್ರಾಂ ಗೆ 65 ರೂಪಾಯಿ ನಿಗದಿ ಪಡಿಸಿದೆ. ಹಾಗಾಗಿ ಭಕ್ತಾಧಿಗಳಿಗೆ ಅನುಕೂಲ ಆಗಲಿ ಎಂದು ಎರಡು ಮಾದರಿಯಲ್ಲಿ ಅಗರಬತ್ತಿಗಳನ್ನ ತಯಾರು ಮಾಡುತ್ತಿದೆ. ಹಾಗಾದ್ರೆ ಫ್ಲೋರಾ ಅಗರಬತ್ತಿ ಯಾವುದು, ಸಾಧಾರಣ ಅಗರ ಬತ್ತಿ ಯಾವುದು?

ಫ್ಲೋರಾ ಅಗರಬತ್ತಿ : ದೃಷ್ಟಿ, ತುಷ್ಟಿ, ಆಕೃಷ್ಟಿ, ಸೃಷ್ಟಿ ಈ ನಾಲ್ಕು ಫ್ಲೋರಾ ಅಗರಬತ್ತಿಗಳು ಹಾಗು ಸ್ವಲ್ಪ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರೋ ಅಗರಬತ್ತಿಗಳು.

ಸಾಧಾರಣಾ ಅಗರಬತ್ತಿ : ದಿವ್ಯಪಾದ, ತಂದನಾನ, ಅಭಯಹಸ್ತ ಈ ಮೂರು ಕೂಡ ಸಾಧಾರಣ ಅಗರಬತ್ತಿ ಆಗಿದ್ದು ಇದರ ದರ ಕಡಿಮೆಯಿದೆ.

ಫ್ಲೋರಾ ಹಾಗು ಸಾಧಾರಣ ಎಂದು ಎರಡು ರೀತಿಯಲ್ಲಿ 7 ಬಗೆ ಬಗೆಯ ಅಗರಬತ್ತಿಗಳನ್ನ ತಯಾರಿಸುತ್ತಿದೆ ಟಿಟಿಡಿ. ಒಂದೊಂದು ಅಗರ ಬತ್ತಿಯ ಪ್ಯಾಕೇಟ್​ ಮೇಲೆಯೂ ಒಂದೊಂದು ರೀತಿಯಲ್ಲಿ ಚಿತ್ತಾರಗಳನ್ನ ಹಾಕಲಾಗಿದೆ. ಕುದುರೆ ಸಿಂಬಲ್ ಇರೋದು ಇಲ್ಲಿ ದೃಷ್ಟಿ ಎಂದು, ಹಂಸ ಸಿಂಬಲ್ ಇರೋದು ಸೃಷ್ಟಿ ಎಂದು, ಗರುಡನ ರೆಕ್ಕೆಗಳು ಇರೋದು ತುಷ್ಟಿ ಎಂದು, ನಿಂಬೆ ಹಣ್ಣು ಸಿಂಬಲ್ ಇರೋದು ಆಕೃಷ್ಟಿ ಎಂದು, ಕೈ ಸಿಂಬಲ್ ಇರೋದು ಅಭಯ ಹಸ್ತ ಎಂದು, ನಾರದನ ಸಿಂಬಲ್ ಇರೋದನ್ನ ತಂದನಾನಾ ಎಂದು ಹೀಗೆ ಹೆಸರಿಗೆ ತಕ್ಕಂತೆ ಚಿತ್ರಗಳನ್ನ ಪ್ಯಾಕೆಟ್ ಮೇಲೆ ಹಾಕಲಾಗಿದೆ.

ಇನ್ನು ಒಂದೊಂದು ಅಗರಬತ್ತಿಯಲ್ಲಿಯೂ ಕೂಡ ಒಂದೊಂದು ಹೂವುಗಳನ್ನ ಬಳಸಿಕೊಂಡಿದ್ದಾರೆ. ತುಷ್ಟಿ ಅನ್ನೋ ಅಗರಬತ್ತಿಯಲ್ಲಿ ಗುಲಾಬಿ ಹೂವನ್ನ, ದೃಷ್ಟಿ ಅನ್ನುವಾ ಅಗರಬತ್ತಿಯಲ್ಲಿ ತಾವರೆ ಹೂವನ್ನ, ಸೃಷ್ಟಿ ಯಲ್ಲಿ ಸಾಮಾಂತಿಗೆ, ಆಕೃಷ್ಠಿ ಅಗರ ಬತ್ತಿಯಲ್ಲಿ ಫ್ಲೋರಾ ಹೂವಗಳಾದ ತುಳಸಿ, ಗುಲಾಬಿ, ತಾವರೆ, ಸಾಮಂತಿಕೆ ಸೇರಿ ವಿವಿದ ಬಗೆಯ ಹೂವುಗಳನ್ನ ಮಿಕ್ಸ್​ ಮಾಡಿ ತಯಾರು ಮಾಡುತ್ತಾರೆ. ಇನ್ನು ಇದನ್ನ ತಯಾರು ಮಾಡಬೇಕು ಅಂತಾ ಟಿಟಿಡಿ ಐಡಿಯಾ ಬಂದಿದ್ದು ಹೇಗೆ ಗೊತ್ತಾ?
2012 ರಲ್ಲೇ ಪ್ಲಾನಿಂಗ್ ಮಾಡಿಕೊಂಡಿತ್ತು ಟಿಟಿಡಿ

ಹೌದು.. 2012 ರಲ್ಲಿ ಹೂವಿನಿಂದ ಅಗರಬತ್ತಿ ಮಾಡಬೇಕೆಂದು ಟಿಟಿಡಿ ಪ್ಲಾನಿಂಗ್ ಮಾಡಿಕೊಂಡಿರುತ್ತೆ. ಆದ್ರೆ ಆಗ ಅದು ಸಾಧ್ಯವಾಗಿರಲಿಲ್ಲ. ತದ ನಂತರ ಕೆಲ ತಿಂಗಳ ಹಿಂದೆ ಬೆಂಗಳೂರು ಮೂಲದ ದರ್ಶನ್​​​ ಇಂಟರ್​​​ನ್ಯಾಷನಲ್​​ ಸಂಸ್ಥೆ ಸ್ವತಃ ಮುಂದೆ ಬಂದು ತಾನು ಸಹಾಯ ಮಾಡೋದಾಗಿ ಹೇಳಿ ಅದಕ್ಕೆ ಸಂಬಂಧ ಪಟ್ಟಂತಹ ಯಂತ್ರಗಳನ್ನ ಪೂರೈಕೆ ಮಾಡಿತ್ತು. ಆಮೇಲೆ ನೋಡಿ ಹೂವಿನಿಂದ ಅಗರಬತ್ತಿಯನ್ನ ತಯಾರು ಮಾಡೋದಕ್ಕೆ ಟಿಟಿಡಿ ಮುಂದಾಗೋದು.

ಹೀಗೆ ಅಗರಬತ್ತಿಯನ್ನ ಮಾಡೋಣಾ ಆಂತಾ ಟಿಟಿಡಿ ನಿರ್ಧಾರ ಮಾಡೋದಕ್ಕೆ ಒಂದು ಕಾರಣವಿದೆ. ಅದುವೇ ಪ್ರತಿನಿತ್ಯ ನೂರಾರು ಕೆಜೆ ಹೂವುಗಳನ್ನ ತಿಮ್ಮಪ್ಪನ ಮೈ ಮೇಲಿ ಹಾಕಿ ತೆಗೆಯಲಾಗುತ್ತಿತ್ತು. ನಂತರ ಆ ಹೂವನ್ನ ಹೂವಿನ ಬಾವಿಯಲ್ಲಿ ತಂದು ಹಾಕಲಾಗುತ್ತಿತ್ತು. ಹೀಗೆ ಹಾಕಿದ ಹೂವು ಸಂಪೂರ್ಣವಾಗಿ ಒಣಗಿದ ಬಳಿಕ ಅದನ್ನ ಆಯುರ್ವೇದ ಗಿಡಗಳಿಗೆ ಹಾಕಲಾಗುತ್ತಿತ್ತು. ಅಂದ್ರೆ ಗೊಬ್ಬರದಂತೆ ಬಳಕೆ ಮಾಡಲಾಗುತ್ತಿತ್ತು. ಒಂದು ವಿಚಾರವನ್ನ ಇಲ್ಲಿ ಪ್ರಸ್ತಾಪ ಮಾಡಲೇಬೇಕು. ಅದು ದಕ್ಷಿಣ ಭಾರತದಲ್ಲಿರೋ ಬಹುತೇಖ ಹಿಂದೂ ದೇವಲಾಯಗಳಲ್ಲಿ ಎಲ್ಲಾ ರೀತಿಯ ಹೂವನ್ನ ಅತಿ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹಾಗೇಯೆ ತಿರುಪತಿಯಲ್ಲಿಯೂ ಕೂಡ ಪ್ರತಿ ನಿತ್ಯ ನೂರಾರು ಕೆಜಿ ಹೂವನ್ನ ತಿಮ್ಮಪ್ಪನ ಮೈ ಮೇಲೆ ಹಾಕಿ ಅಲಂಕರಿಸುತ್ತಾರೆ.

ಪ್ರತಿ ನಿತ್ಯ ತಿಮ್ಮಪ್ಪನ ಮೈ ಮೇಲೆ 250 ಕ್ಕೂ ಹೆಚ್ಚು ಕೆಜೆ ಹೂವನ್ನ ಹಾಕಲಾಗುತ್ತದೆ. ಈ ಹೂವನ್ನ ಬೆಳಗ್ಗೆ ಹಾಗು ಸಂಜೆ ಅಲಂಕಾರ ಮಾಡಲಾಗುತ್ತೆ. ಹೇಳಬೇಕು ಅಂದ್ರ ಸುಮಾರು 12 ಬಗೆಯ ಹೂವಿನಲ್ಲಿ ಅಲಂಕಾರವನ್ನ ಶ್ರೀವಾರಿಗೆ ಮಾಡಲಾಗಿರುತ್ತೆ. ಹೀಗೆ ಶ್ರೀವಾರಿ ಮೈಮೇಲಿರೋ ಹೂ ಹಾಗು ಇನ್ನಿತರ ದೇವರುಗಳಿಗೆ ಬಳಸುವ ಹೂವು ಸೇರಿ ಒಟ್ಟು 500 ರಿಂದ 600 ಕೆಜೆ ಹೂವನ್ನ ಬಳಸುತ್ತಾರೆ. ಅದೇ ರೀತಿ ಪ್ರತಿ ನಿತ್ಯ ಅದನ್ನ ಹೂವಿನ ಬಾವಿಗೆ ತಂದು ಸುರಿಯುತ್ತಿದ್ದರು. ಆದ್ರೆ ಇನ್ನು ಮುಂದೆ ಆ ಎಲ್ಲಾ ಹೂವನ್ನ ತಂದು ಅದಕ್ಕಾಗಿಯೆ ಇರುವಂತೆ ವಿಶೇಷವಾದ ಮಿಶಿನ್ ನಲ್ಲಿರಿಸಿ ಸಂಪೂರ್ಣವಾಗಿ ಒಣಗಿಸಲಾಗುತ್ತದೆ. ಹೀಗೆ ಒಣಗಿಸಿ ನಂತರ ಅದನ್ನ ಅಗರಬತ್ತಿ ತಯಾರಿಕೆಗೆ ಬಳಕೆ ಮಾಡಿಕೊಳ್ಳುತ್ತಾರೆ. ನೋಡಿ ಸುಖಾ ಸುಮ್ಮನೆ ವಿಲೇವಾರಿ ಆಗುತ್ತಿದ್ದ ಕೆಜಿ ಗಟ್ಟಲೆ ಹೂವಿನಿಂದ ಇಂದು ಅಗರಬತ್ತಿ ತಯಾರುಗುತ್ತಿದೆ.

ಹೇಳಬೇಕು ಅಂದ್ರ ಪ್ರತಿನಿತ್ಯ ದೇಶದ ನಾನಾ ಕಡೆಯಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೂ ಬರುತ್ತೆ. ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆಯಿಂದ ಇಲ್ಲಿಗೆ ಹೂ ಬರುತ್ತೆ. ಅದನ್ನ ಚಿತ್ತೂರಿನ ನಾನಾ ಭಾಗದಲ್ಲಿ ಸುಮಾರು 26 ಆಲಯಗಳನ್ನಾಗಿ ಮಾಡಿಕೊಂಡಿದ್ದು ಅಲ್ಲಿಗೆ ಬಂದ ಮೇಲೆ ಅಲ್ಲಿಂದ ದೇವಸ್ಥಾನಕ್ಕೆ ತಲುಪಿಸಲಾಗುತ್ತೆ. ಹೀಗೆ ಪ್ರತಿನಿತ್ಯ ಹೂವನ್ನ ಶ್ರೀವಾರಿ ಮೇಲಾಕಿ, ನಂತರ ಅದನ್ನ ತೆಗೆದು ಅಗರಬತ್ತಿ ತಯಾರಿಸುವ ಕೇಂದ್ರಕ್ಕೆ ಕೊಂಡೊಯ್ಯಲಾಗುತ್ತೆ.

ಎಲ್ಲರು ಅಂದುಕೊಂಡಂತೆ ಈಗಾಗಲೆ ಲಡ್ಡು ನಿಂದಲೂ ಕೋಟಿ ಕೋಟಿ ಆದಾಯ ಗಳಿಸುತ್ತಿದೆ ಟಿಟಿಡಿ. ಇನ್ನು ಮುಂದೆ ಇದರಿಂದಲೂ ಉತ್ತಮವಾದ ಆದಾಯ ನಿರೀಕ್ಷೆಯನ್ನ ಇಟ್ಟುಕೊಂಡಿದೆ ಟಿಟಿಡಿ. ಆದ್ರೆ ಅಗರಬತ್ತಿಯಿಂದ ಬರುವ ಹಣವನ್ನ ಸಂಪೂರ್ಣವಾಗಿ ಗೋ ಸಂರಕ್ಷಣೆಗೆ ವ್ಯಯಿಸಲು ನೀಡಲಾಗುವುದು ಎಂದು ಟಿಟಿಡಿ ಚೇರ್​​​ಮೆನ್ ವೈ ವಿ ಸುಬ್ಬಾರೆಡ್ಡಿ ಹೇಳಿದ್ದಾರೆ.. ಒಟ್ಟಿನಲ್ಲಿ ತಿರುಪತಿ ತಿಮ್ಮಪನ ಸನ್ನಿಧಾನದಲ್ಲಿ ಸದಾ ಪರಿಮಳ ಹೇಗೆ ಗಮ ಗಮಸುತ್ತಿರುತ್ತದೋ ಹಾಗೆಯೇ ಅಗರಬತ್ತಿಯಿಂದಲೂ ಮನೆ ಮನೆಯಲ್ಲಿ ಗಮ ಗಮಿಸೋದ್ರಲ್ಲಿ ಎರಡು ಮಾತಿಲ್ಲ..

ತಿರುಪತಿ ತಿರುಮಲ ದೇವಸ್ಥಾನಂ ಹೆಚ್ಚು ಆದಾಯವಿರೋ ದೇವಸ್ತಾನ. ಈಗ ಅದಕ್ಕೆ ಅಗರಬತ್ತಿ ಕೂಡ ಸೇರ್ಪಡೆಗೊಂಡಿದ್ದು ಅದು ಕೂಡ ಉತ್ತಮ ರೀತಿಯಲ್ಲಿ ಆದಾಯ ನೀಡುತ್ತೆ ಅನ್ನೋ ನಿರೀಕ್ಷೆಯಲ್ಲಿದೆ ಟಿಟಿಡಿ. ವಿಶೇಷ ಅಂದರೆ ಆ ಆದಾಯ ಗೋ ರಕ್ಷಣೆಗಾಗಿ ಬಳಕೆಯಾಗುತ್ತಿರೋದು ನಿಜಕ್ಕು ಖುಷಿಯ ವಿಚಾರ.

Source: newsfirstlive.com Source link