ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿದ ಶ್ವಾನಕ್ಕೆ ಐಸಿಸಿ ಪುರಸ್ಕಾರ..!

ದುಬೈ: ಕ್ರಿಕೆಟ್ ಅಂಗಳದಲ್ಲಿ ಆಟಗಾರರ ವಿಶೇಷ ಸಾಧನೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪುರಸ್ಕಾರ ನೀಡುವುದು ನೋಡಿದ್ದೇವೆ. ಇದೀಗ ಐಸಿಸಿ ಕ್ರಿಕೆಟ್ ಆಟದ ವೇಳೆ ಫೀಲ್ಡಿಂಗ್ ಮಾಡಿದ ಶ್ವಾನವೊಂದಕ್ಕೆ ವಿಶೇಷವಾಗಿ ಡಾಗ್ ಆಫ್ ದಿ ಮಂತ್ ಎಂಬ ಬಿರುದು ಕೊಟ್ಟಿದೆ.

ಕ್ರಿಕೆಟ್ ನಡೆಯುತ್ತಿರುವಾಗ ಅಭಿಮಾನಿಗಳು ಕ್ರಿಕೆಟ್ ಅಂಗಳಕ್ಕೆ ಲಗ್ಗೆ ಇಡುವುದನ್ನು ಸಾಕಷ್ಟು ಬಾರಿ ನೋಡಿದ್ದೇವೆ. ಅದರಂತೆ ಉತ್ತರ ಐರ್ಲೆಂಡಿನ ಮಗೇರಮೆಸಾನ್‍ನಲ್ಲಿರುವ ಬ್ರೆಡಿ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಬ್ರೆಡಿ ಮತ್ತು ಸಿಎಸ್‍ಎನ್‍ಐ ಮಹಿಳಾ ತಂಡಗಳ ನಡುವೆ ಆಲ್ ಐರ್ಲೆಂಡ್ ಟಿ20 ಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಅಬ್ಬಿ ಲೆಖಿ ಚೆಂಡನ್ನು ಆಫ್ ಸೈಡ್‍ಗೆ ಬಡಿದಟ್ಟಿದ್ದಾರೆ. ತಕ್ಷಣ ಫೀಲ್ಡರ್ ರನ್ ಔಟ್ ಮಾಡಲು ಚೆಂಡನ್ನು ವಿಕೆಟ್ ಕೀಪರ್ ಕೈಗೆ ಬಿಸಾಡಿದ್ದಾರೆ. ಕೀಪರ್ ರನ್ ಔಟ್ ಮಾಡುವ ಬರದಲ್ಲಿ ಚೆಂಡು ಮಿಸ್ ಆಗಿ ಮೈದಾನದ ಇನ್ನೊಂದು ಭಾಗಕ್ಕೆ ಹೋಗಿದೆ. ಇದನ್ನು ಕಂಡ ಸ್ಟೇಡಿಯಂನಲ್ಲಿದ್ದ ಶ್ವಾನವೊಂದು ಮೈದಾನಕ್ಕೆ ಓಡಿ ಬಂದು ಚೆಂಡನ್ನು ತನ್ನ ಬಾಯಿಯಿಂದ ಹಿಡಿದು ಮೈದಾನದಲ್ಲಿ ಸುತ್ತ ಓಡಲು ಪ್ರಾರಂಭಿಸಿತ್ತು. ಈ ವೇಳೆ ಫೀಲ್ಡರ್ ಗಳು ಮತ್ತು ಶ್ವಾನದ ಮಾಲೀಕನೂ ಅದನ್ನು ಹಿಡಿಯುವ ಪ್ರಯತ್ನ ಮಾಡಿದ್ದರು. ಕೊನೆಗೆ ಶ್ವಾನ ನಾನ್ ಸ್ಟ್ರೈಕರ್ ನಲ್ಲಿದ್ದ ಅಯೋಫೆ ಫಿಶರ್ ಅವರ ಬಳಿ ಬಂದು ಚೆಂಡನ್ನು ಕೈಗೆ ನೀಡಿ ನೋಡುಗರನ್ನು ಮನರಂಜಿಸಿತ್ತು.

ಈ ಸ್ವಾರಸ್ಯಕರ ಘಟನೆಯನ್ನು ಕಂಡು ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದರೆ, ಶ್ವಾನ ಪ್ರಿಯರು ಖುಷಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ್ದ ಐಸಿಸಿ ಮೈದಾನಕ್ಕಿಳಿದು ಅದ್ಭುತವಾದ ಫೀಲ್ಡಿಂಗ್ ನಡೆಸಿದ ಶ್ವಾನಕ್ಕೆ ಐಸಿಸಿ ಡಾಗ್ ಆಫ್ ದಿ ಮಂತ್ ಪುರಸ್ಕಾರ ನೀಡಲಾಗುವುದು ಎಂದು ಟ್ವಿಟ್ಟರ್‍ ನಲ್ಲಿ ಹೇಳಿಕೊಂಡಿದೆ. ಇದನ್ನೂ ಓದಿ: ಎಬಿಡಿ ಸಿಡಿಲಬ್ಬರದ ಶತಕಕ್ಕೆ ಬೆಚ್ಚಿಬಿದ್ದ ಆರ್​ಸಿಬಿ ಬೌಲರ್ಸ್

ಆಟಗಾರರೆ ಐಸಿಸಿ ಪ್ರಶಸ್ತಿಗಾಗಿ ಹಲವು ವರ್ಷ ಶ್ರಮ ಪಟ್ಟರೆ, ಈ ಶ್ವಾನ ಕೇವಲ ಒಂದು ಕ್ಷಣದಲ್ಲಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಸೈ ಎನಿಸಿಕೊಂಡಿದೆ. ಇದನ್ನೂ ಓದಿ:ಎಲ್ಲಾ ಮಾದರಿಯ ಕ್ರಿಕೆಟ್‍ಗೆ ಲಸಿತ್ ಮಾಲಿಂಗ ಗುಡ್ ಬೈ

 

Source: publictv.in Source link