ಸಿದ್ದರಾಮಯ್ಯ & ಬಿಜೆಪಿ ನಾಯಕರ ಸ್ವಾರಸ್ಯಕರ ಚರ್ಚೆಗೆ ನಗೆಗಡಲಲ್ಲಿ ತೇಲಿದ ಸದನ

ಸಿದ್ದರಾಮಯ್ಯ & ಬಿಜೆಪಿ ನಾಯಕರ ಸ್ವಾರಸ್ಯಕರ ಚರ್ಚೆಗೆ ನಗೆಗಡಲಲ್ಲಿ ತೇಲಿದ ಸದನ

ಬೆಂಗಳೂರು: ಸದಾ ಒಂದಿಲ್ಲೊಂದು ಅಭಿವೃದ್ಧಿ ವಿಚಾರಗಳೇ ಚರ್ಚೆಯಾಗುತ್ತಿದ್ದ ವಿಧಾನಸಭೆ ಇಂದು ಕೆಲಕಾಲ ಹಾಸ್ಯದ ಸಂದರ್ಭಕ್ಕೆ ಸಾಕ್ಷಿಯಾಯಿತು. ಆಡಳಿತ ಪಕ್ಷ, ವಿಪಕ್ಷ ಎನ್ನವ ಭಾವನೆಯಿಲ್ಲದೇ ಸದಸ್ಯರು ಹಾಸ್ಯ ಚಟಾಕಿ ಹಾರಿಸಿದ್ರು. ಆದರೆ ಎಲ್ಲರ ಚರ್ಚೆಗೆ ಕಾರಣವಾಗಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವಿನ ಸ್ವಾರಸ್ಯಕರ ಚರ್ಚೆ.

ಸದನದಲ್ಲಿಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೇಲೆ ಚರ್ಚೆ ನಡೆಯುತ್ತಿದ್ದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲೇ ಇರಬೇಕಾ? ಅಥವಾ ದೆಹಲಿಗೆ ಹೋಗಬೇಕಾ ಎಂದಾಗ ಸಚಿವ ಆರ್​.ಅಶೋಕ್​ ಮಧ್ಯೆ ಪ್ರವೇಶಿಸಿ ‘ಇಲ್ಲ, ಇಲ್ಲ ಸಿದ್ದರಾಮಯ್ಯ ನಮಗೆಲ್ಲ ಹಿರಿಯರು, ಮಾರ್ಗದರ್ಶಕರು ಅವರು ಇಲ್ಲೇ ಇರಬೇಕು, ದೆಹಲಿಗೆ ಹೋಗ ಬಾರದು’ ಎಂದರು.

ಬಳಿಕ ಮಾತಿಗಿಳಿದ ಸಚಿವ ಮಾಧುಸ್ವಾಮಿ ಇದಕ್ಕೆ ವ್ಯತಿರಿಕ್ತವಾಗಿ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಬೇಕು. ಅವರು ರಾಜಕಾರಣದ ಆರಂಭದಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಆಡಳಿತ ಮಾಡಿದವರು. ಈಗ ದೆಹಲಿಗೆ ಹೋಗಿ ಕನ್ನಡ ಕಹಳೆ ಮೊಳಗಿಸಲಿ ಎಂದಾಗ ಸದನ ನಗೆಗಡಲಲ್ಲಿ ತೇಲಿತು.

ಇವರುಗಳ ಸ್ವಾರಸ್ಯಕರ ಚರ್ಚೆಗೆ ಇಂಬು ನೀಡಿದ ಸ್ಪೀಕರ್​ ಕಾಗೇರಿ, ಈ ವೇಳೆ ಈಶ್ವರಪ್ಪನವರ ಅಭಿಪ್ರಾಯ ಏನು ಅಂತ ಕೇಳೋಣ ಎಂದಾಗ. ಈಶ್ವರಪ್ಪಗೆ ಕೇಳಿದರೆ ನಾನು ಇಲ್ಲೂ ಇರಬಾರದು, ಅಲ್ಲೂ ಇರಬಾರದು ಅಂತಾರೆ ಬಿಡಿ ಎಂದು ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ಇದನ್ನೂ ಓದಿ:‘ಮುಂದಿನ 20 ವರ್ಷ ಸಿದ್ದರಾಮಯ್ಯ, ಡಿಕೆಎಸ್​​​ ನಿರುದ್ಯೋಗಿಯಾಗ್ತಾರೆ’ ಕಟೀಲ್​ ವಾಗ್ದಾಳಿ

ಈ ವೇಳೆ ಎದ್ದು ನಿಂತ ಈಶ್ವರಪ್ಪ “ನೀವು ನಿಮ್ಮ ಹೃದಯ ಮುಟ್ಟಿಕೊಂಡು ಹೇಳಿ, ನಾನು ಇಲ್ಲೂ ಇರಬಾರದು, ದೆಹಲಿಗೂ ಹೋಗಬಾರದು ಅಂತೀನಾ..?” ಎಂದಾಗ ನೀನು ಬಹಿರಂಗವಾಗಿ ಇಲ್ಲೂ ಇರಬಾರದು, ದೆಹಲಿಗೂ ಹೋಗಬಾರದು ಅಂತೀಯ. ಆದರೆ ಆಂತರಿಕವಾಗಿ ಹಾಗೆ ಹೇಳಲ್ಲ ಎಂದಾಗ ಸದನ ನಗೆ ಗಡಲಲ್ಲಿ ಮಿಂದಿತ್ತು..

Source: newsfirstlive.com Source link