ವಾಜಪೇಯಿ ಬಳಸಿದ್ದ ಕ್ರಿಮಿನಲ್ ಲೂಟ್ ಸರ್ಕಾರ್ ಪದ ಬಳಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲಿ ಸಂಪೂರ್ಣವಾಗಿ ರಣತಂತ್ರ ಬದಲಿಸಿರುವ ವಿಪಕ್ಷ ಕಾಂಗ್ರೆಸ್, ಗದ್ದಲದ ಬದಲಿಗೆ ಚರ್ಚೆಯ ಮೂಲಕ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಅಂದು ವಾಜಪೇಯಿ ಬಳಸಿದ್ದ ಕ್ರಿಮಿನಲ್ ಲೂಟ್ ಸರ್ಕಾರ್ ಎಂಬ ಪದ ಬಳಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಅಧಿವೇಶನದ ಮೊದಲ ದಿನ ಎತ್ತಿನ ಬಂಡಿಯಲ್ಲಿ ವಿಧಾನಸೌಧಕ್ಕೆ ಬರುವ ಮೂಲಕ ತೈಲ ಬೆಲೆ ಏರಿಕೆಯನ್ನು ಕಾಂಗ್ರೆಸ್ ಖಂಡಿಸಿತ್ತು. ಅಂದು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಂತ್ರಿಗಳು, ಸದನದಲ್ಲಿ ಉತ್ತರ ನೀಡೋದಾಗಿ ಹೇಳಿದ್ರು. ಆದರೆ, ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ತೈಲ ಬೆಲೆ ಏರಿಕೆಯ ಕಾಂಡವನ್ನು ಇಡಿ ಇಡಿಯಾಗಿ ಬಿಡಿಸಲು ಶುರು ಮಾಡುತ್ತಲೇ, ಅಂದು ಸದನದಲ್ಲಿ ಚರ್ಚೆ ಮಾಡ್ತೀವಿ ಎಂದಿದ್ದವರೇ ಇಂದು ಉಲ್ಟಾ ಹೊಡೆದ್ರು. ತೈಲ ಬೆಲೆ ಏರಿಕೆ ಬಗ್ಗೆ ಇಲ್ಲಿ ಚರ್ಚೆಯೇ ಅಪ್ರಸ್ತುತ, ಇದಕ್ಕೂ ನಮಗೇನು ಏನ್ರೀ ಸಂಬಂಧ ಎಂದರೆ, ಸಿಎಂ ಬೊಮ್ಮಾಯಿ ಮೌನವೇ ಆಭರಣ ಎಂಬಂತೆ ಕುಳಿತಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

ನಿಯಮ 69ರ ಅಡಿ ಚರ್ಚೆ ಶುರು ಮಾಡಿದ ಸಿದ್ದರಾಮಯ್ಯ, ತೈಲ ಬೆಲೆ ಏರಿಕೆಯಿಂದ ಜನರ ಬದುಕು ಹೇಗೆಲ್ಲಾ ದುಸ್ತರವಾಗಿದೆ ಎಂಬುದನ್ನು ವಿವರಿಸಿದರು. ಪದೇ ಪದೇ ಆಯಿಲ್ ಬಾಂಡ್ ಬಗ್ಗೆ ಪ್ರಸ್ತಾಪ ಮಾಡಿ ಯುಪಿಎ ಮೇಲೆ ಆರೋಪ ಮಾಡುವ ಬಿಜೆಪಿ ನಾಯಕರಿಗೆ ಅಂಕಿ ಅಂಶ ಸಮೇತ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ರು. 1973ರಲ್ಲಿ ವಾಜಪೇಯಿ ಎತ್ತಿನಬಂಡಿಯಲ್ಲಿ ಸಂಸತ್‍ಗೆ ಎಂಟ್ರಿ ಕೊಟ್ಟಿದ್ದನ್ನು ಪ್ರಸ್ತಾಪಿಸಿ ಮೊನ್ನೆ ಎತ್ತಿನ ಬಂಡಿಯಲ್ಲಿ ಬಂದಿದ್ದನ್ನು ಸಮರ್ಥನೆ ಮಾಡಿಕೊಂಡರು.

ಈ ಸರ್ಕಾರವನ್ನು, ಅಂದು ವಾಜಪೇಯಿ ಬಳಸಿದ್ದ ಕ್ರಿಮಿನಲ್ ಲೂಟ್ ಸರ್ಕಾರ್ ಎಂಬ ಪದ ಬಳಸಿ ಬಿಜೆಪಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ತಮಿಳುನಾಡಂತೆ ಸೆಸ್ ಇಳಿಸಿ ಎಂದು ಒತ್ತಾಯಿಸಿದರು. ಆಗ ಅಂಬಾನಿ, ಅದಾನಿ ಬೆಳೆಸಿದ್ದು ಯಾರು ಎನ್ನುತ್ತಾ ಸಿದ್ದರಾಮಯ್ಯಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ಬಳಿಕ ಸಿದ್ದರಾಮಯ್ಯ ಭಾಷಣ ಮುಮದುವರಿಸಿದರು. ಈ ವೇಳೆ ಪದೇ ಪದೇ ಸಚಿವ ಸುಧಾಕರ್, ಮಾಧುಸ್ವಾಮಿ ಅಡ್ಡಿಪಡಿಸಲು ನೋಡಿದ್ರು. ಸಿದ್ದರಾಮಯ್ಯ ಭಾಷಣವನ್ನು ಸಂಸತ್ ಭಾಷಣ ಎಂದು ಕೂಡ ಕಾಲೆಳೆದರು. ಮಧ್ಯೆ ಮಧ್ಯೆ ಉಭಯ ಪಕ್ಷಗಳ ನಡುವೆ ಹಲವು ಬಾರಿ ವಾಕ್ಸಮರ ನಡೆಯಿತು.  ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಭ್ರಷ್ಟಾಚಾರ ಆರೋಪ – ಚರ್ಚೆಗೆ ಆಗ್ರಹಿಸಿ ಸಾರಾ ಮಹೇಶ್ ಪ್ರತಿಭಟನೆ

Source: publictv.in Source link