ಸದನ ಕದನವಾಗಿಸಿದ ತೈಲ ಬಾಂಡ್- ಯುಪಿಎ ಸರ್ಕಾರದ ಆಯಿಲ್ ಬಾಂಡ್ ಸಾಲವೆಷ್ಟು?

ಬೆಂಗಳೂರು: ಬಿಜೆಪಿಯವರು ಆಯಿಲ್ ಬಾಂಡ್‍ಗೂ ನಮಗೂ ಏನ್ರೀ ಸಂಬಂಧ ಅಂತಾರೆ. ಆದರೆ ಯುಪಿಎ ಅವಧಿಯ ಆಯಿಲ್ ಬಾಂಡ್ ಕಡೆ ಕೈತೋರಿಸಿ ತೈಲ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎನ್ನುವ ಮೂಲಕ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡು ಪರಸ್ಪರ ಕಾದಾಡಿಕೊಂಡವು.

ಅಸಲಿಗೆ ತೈಲ ಬಾಂಡ್ ಎಂದರೇನು? ಯುಪಿಎ ಆಯಿಲ್ ಬಾಂಡ್ ಮೇಲೆ ಎಷ್ಟು ಸಾಲ ಮಾಡಿತ್ತು. ಆಯಿಲ್ ಬಾಂಡ್ ಹೆಸರಲ್ಲಿ ಕಳೆದ ಏಳು ವರ್ಷಗಳಲ್ಲಿ ಎನ್‍ಡಿಎ, ಹೆಚ್ಚೆಚ್ಚು ಸುಂಕ ವಿಧಿಸಿ ಗಳಿಸಿದ್ದೆಷ್ಟು ಎಂಬುದರ ಸಮಗ್ರ ಚಿತ್ರಣ ಇಲ್ಲಿದೆ. ಇದನ್ನೂ ಓದಿ: ವಾಜಪೇಯಿ ಬಳಸಿದ್ದ ಕ್ರಿಮಿನಲ್ ಲೂಟ್ ಸರ್ಕಾರ್ ಪದ ಬಳಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಏನಿದು ಆಯಿಲ್ ಬಾಂಡ್?
ಆಯಿಲ್ ಬಾಮಡ್ ಎಂದರೆ ತೈಲ ಕಂಪನಿಗಳು, ರಸಗೊಬ್ಬರ ಸಂಸ್ಥೆಗಳು, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಗಳಿಗೆ ಬಾಂಡ್ ಜಾರಿ ಮಾಡುವ ಹಕ್ಕು ಕೇಂದ್ರಕ್ಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದ್ದರೂ, ಅದರ ಭಾರ ದೇಶದ ಜನರಿಗೆ ಬೀಳಬಾರದೆಂದು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಅಂದರೇ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಎಷ್ಟೇ ಇದ್ದರೂ, ದೇಶದಲ್ಲಿ ತೈಲ ಬೆಲೆ ನಿಯಂತ್ರಣ ಕೇಂದ್ರದ ಕೈಯಲ್ಲಿ ಇರುತ್ತಿತ್ತು. ನಗದು ಸಬ್ಸಿಡಿ ಬದಲಿಗೆ ಕೇಂದ್ರ ಸರ್ಕಾರ ಮೂರು ತೈಲ ಕಂಪನಿಗಳಿಗೆ ಬಾಂಡ್‍ಗಳನ್ನು ವಿತರಿಸುತ್ತಿತ್ತು. ಈ ಬಾಂಡ್‍ಗಳು ಸುಧೀರ್ಘ ಅವಧಿಗೆ ಇರುತ್ತವೆ. ಬಾಂಡ್‍ಗಳ ಮೇಲೆ ತೈಲ ಕಂಪನಿಗಳಿಗೆ ಕೇಂದ್ರ ಕಾಲಕಾಲಕ್ಕೆ ಬಡ್ಡಿ ನೀಡುತ್ತದೆ. ವಾಜಪೇಯಿ ಸರ್ಕಾರ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತೈಲ ಬಾಂಡ್‍ಗಳನ್ನು ವಿತರಿಸಿತ್ತು. ಯುಪಿಎ ಸರ್ಕಾರ ತನ್ನ ಬೊಕ್ಕಸದ ಮೇಲೆ ಭಾರ ಬೀಳದಿರಲು 2005ರಿಂದ 2010ರ ಅವಧಿಯಲ್ಲಿ ಬಾಂಡ್ ವಿತರಿಸಿತ್ತು. ಆರ್ಥಿಕ ಬಿಕ್ಕಟ್ಟಿನ ಬಳಿಕ 2010ರಲ್ಲಿ ಪೆಟ್ರೋಲ್ ದರ ನಿಯಂತ್ರಣದಿಂದ ಯುಪಿಎ ಹಿಂದೆ ಸರಿಯಿತು. ಅಲ್ಲಿಗೆ ತೈಲ ಬಾಂಡ್ ವಿತರಣೆ ನಿಂತಿತ್ತು. 2014ರ ಅಕ್ಟೋಬರ್‍ನಲ್ಲಿ ಡೀಸೆಲ್ ಮೇಲಿನ ಕೇಂದ್ರದ ನಿಯಂತ್ರಣವನ್ನು ಮೋದಿ ಸರ್ಕಾರ ತಪ್ಪಿಸಿತ್ತು. ಈ ಮೂಲಕ ಆಯಿಲ್ ಬಾಂಡ್ ಕೇಂದ್ರ ಸರ್ಕಾರಕ್ಕೆ ಹೊರೆ ಆಗುವಂತಾಯಿತು.

ಕೇಂದ್ರದ ಮೇಲೆ ಆಯಿಲ್ ಬಾಂಡ್ ಹೊರೆ ಎಷ್ಟು?
ಯುಪಿಎ ಅವಧಿಯಲ್ಲಿ ಜಾರಿಯಾದ ತೈಲ ಬಾಂಡ್ ಮೊತ್ತ ಬರೋಬ್ಬರಿ 1.31 ಲಕ್ಷ ಕೋಟಿ ರೂ. ಆಗಿದ್ದು, 1.31 ಲಕ್ಷ ಕೋಟಿಗೆ ಬಡ್ಡಿ ಸೇರಿ 2.62 ಲಕ್ಷ ಕೋಟಿಯನ್ನು 2026ರ ಮಾರ್ಚ್ ಹೊತ್ತಿಗೆ ಕೇಂದ್ರ ಪಾವತಿಸಬೇಕು. ಸಿಸಿಐಎಲ್ ಪ್ರಕಾರ, 2014ರಿಂದ ಇಲ್ಲಿಯವರೆಗೆ 70 ಸಾವಿರ ಕೋಟಿ ಪಾವತಿಸಲಾಗಿದ್ದು, ಪ್ರಸಕ್ತ ವರ್ಷ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿದೆ. 2023ಕ್ಕೆ 26,15 ಕೋಟಿ ರೂ., 2024ಕ್ಕೆ 5 ಸಾವಿರ ಕೋಟಿ ಪಾವತಿ ಮಾಡಬೇಕು. ತೈಲ ಬೆಲೆ ಏರಿಕೆ ಮೂಲಕ 20-21 ಆರ್ಥಿಕ ವರ್ಷದ ಮೊದಲ 10 ತಿಂಗಳಲ್ಲಿ ಗಳಿಸಿದ್ದು 2.94 ಲಕ್ಷ ಕೋಟಿ ಆಗಿದೆ. ಈ ಹೊರೆಯನ್ನು ಸರಿದೂಗಿಸಲು ಸರ್ಕಾರ ತೈಲ ದರ ಏರಿಕೆಯ ಮೂಲಕ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

Source: publictv.in Source link