ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಇಂದು ಗಗನ ಮುಟ್ಟಿದೆ. ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.

ಗ್ಯಾಸ್, ಪೆಟ್ರೋಲ್, ಡೀಸೆಲ್, ದಿನಸಿ, ಔಷಧ, ಪ್ರಯಾಣ ದರ ಹೀಗೆ ಎಲ್ಲಾ ಜೀವನಾವಶ್ಯಕ ವಸ್ತುಗಳ, ಸೇವೆಗಳ ಬೆಲೆ ಮಿತಿಮೀರಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಜೀವನ ಮಾಡಲು ಕಷ್ಟಪಡಬೇಕಾಗಿದೆ. ಇದನ್ನೇ ನೀವು ಅಚ್ಚೇದಿನ್ ಎಂದು ಕರೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಬೆಲೆಯೇರಿಕೆ ಕುರಿತು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೊರೊನಾ ಸಾಂಕ್ರಾಮಿಕ ತಡೆ, ಬೆಲೆ ನಿಯಂತ್ರಣ ಮುಂತಾದ ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಆಸಕ್ತಿಯಾಗಲೀ, ಪ್ರತಿಪಕ್ಷಗಳ ಮಾತು ಕೇಳುವ ಸೌಜನ್ಯವಾಗಲೀ ರಾಜ್ಯ ಸರ್ಕಾರಕ್ಕೆ ಇಲ್ಲ. ಸದನ ಕರೆಯಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ. ಆರು ತಿಂಗಳಿಗೊಮ್ಮೆ ಸದನ ಕರೆಯಲು ಅವಕಾಶ ನೀಡಿರುವ ಕಾನೂನನ್ನು ಬಳಕೆ ಮಾಡಿಕೊಂಡು ಆರು ತಿಂಗಳಿಗೆ ಒಂದೇ ಬಾರಿ ಸದನ ನಡೆಸೋದು ಸರಿಯಲ್ಲ. ಕನಿಷ್ಠ 60 ದಿನ ಸದನ ನಡೆಸಬೇಕು ಎಂದು ನಾವೇ ಕಾನೂನು ಮಾಡಿದ್ದೇವೆ, ಆ ಕಾನೂನಿಗೆ ಸರ್ಕಾರ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಕೊರೊನಾದಿಂದಾಗಿ ಸದನ ನಡೆಸಲು ಸರಿಯಾಗಿ ಸಮಯ ಸಿಗುತ್ತಿಲ್ಲ ಎಂಬ ಕುಂಟು ನೆಪವನ್ನು ನಾನು ಒಪ್ಪಲ್ಲ. ಈ ವರ್ಷ ಸದನ ನಡೆದಿರೋದು 20 ದಿನ ಮಾತ್ರ, ಈಗ 10 ದಿನ ಸದನ ನಡೆಸಲು ನೋಟಿಸ್ ನೀಡಿದ್ದೀರಿ, ಇದನ್ನು ಕನಿಷ್ಠ 20 ದಿನಕ್ಕೆ ಹೆಚ್ಚಿಸಬೇಕು ಎಂದು ಕಲಾಪ ಸಲಹಾ ಸಮಿತಿಗೆ ಸಲಹೆ ನೀಡಿದ್ದೇನೆ. ಕೇವಲ ಹತ್ತು ದಿನಗಳಲ್ಲಿ ಯಾವ ಪ್ರಮುಖ ವಿಚಾರಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ ಎಂದರು.

12-11-1973ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಕೇವಲ 7 ಪೈಸೆ ಹೆಚ್ಚಾಗಿದ್ದಕ್ಕೆ ಬಿಜೆಪಿ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿಗೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಈ ಬೆಲೆಯೇರಿಕೆಯನ್ನು ಅವರು ಕ್ರಿಮಿನಲ್ ಲೂಟ್ ಎಂದಿದ್ದರು. ನಾನೀಗ ಅದಕ್ಕಿಂತ ಕೀಳು ಪದ ಬಳಕೆ ಮಾಡದೆ, ಅದೇ ಪದವನ್ನು ಬಳಕೆ ಮಾಡುತ್ತೇನೆ. ಈಗಿನ ಬಿಜೆಪಿ ಸರ್ಕಾರವೂ ‘ಕ್ರಿಮಿನಲ್ ಲೂಟಿ’ ಮಾಡುತ್ತಿದೆ ಎಂದರು.

ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಕ್ಕೆ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ, ಬೆಲೆ ನಿಯಂತ್ರಣ ನಮ್ಮ ಕೈಲಿ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಾರೆ. ಬೆಲೆಯೇರಿಕೆಗೆ ಉತ್ತರ ನೀಡಬೇಕಾದವರು ತೈಲ ಕಂಪನಿಗಳ ಎಂ.ಡಿ.ಗಳೋ ಅಥವಾ ಕೇಂದ್ರ ಸರ್ಕಾರವೋ? ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಜೆಪಿಯವರು ಪೆಟ್ರೋಲ್ ಬೆಲೆ ಏರಿಕೆಯಾದಾಗ ಪ್ರತಿಭಟನೆ ಮಾಡುತ್ತಿದ್ದುದ್ದು ತೈಲ ಕಂಪನಿಯ ವಿರುದ್ಧವೋ ಅಥವಾ ಕೇಂದ್ರ ಸರ್ಕಾರದ ವಿರುದ್ಧವೋ ಎಂದು ನೆನಪಿಸಿಕೊಳ್ಳಲಿ ಎಂದರು.

Source: publictv.in Source link