NIA Raids In Karnataka: ಶಿರಸಿ, ಕೊಪ್ಪಳದಲ್ಲೂ ಎನ್​ಐಎ ದಾಳಿ: 4 ನಗರಗಳ 12 ಸ್ಥಳಗಳಲ್ಲಿ ತಪಾಸಣೆ, ಇಬ್ಬರ ಬಂಧನ | NIA Raid in Bengaluru Mangalore Sirsi Koppal Details of Arrest and Seizer in Kannada


NIA Raids Latest News: ಬೆಂಗಳೂರು, ಮಂಗಳೂರು, ಶಿರಸಿ ಮತ್ತು ಕೊಪ್ಪಳದಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

NIA Raids In Karnataka: ಶಿರಸಿ, ಕೊಪ್ಪಳದಲ್ಲೂ ಎನ್​ಐಎ ದಾಳಿ: 4 ನಗರಗಳ 12 ಸ್ಥಳಗಳಲ್ಲಿ ತಪಾಸಣೆ, ಇಬ್ಬರ ಬಂಧನ

ಎನ್​ಐಎ ಅಧಿಕಾರಿಗಳು (ಸಂಗ್ರಹ ಚಿತ್ರ)


ಬೆಂಗಳೂರು: ಬೆಂಗಳೂರು, ಮಂಗಳೂರು, ಶಿರಸಿ ಮತ್ತು ಕೊಪ್ಪಳದಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್​ಐ, ಎಸ್​ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್​ಐ ಕಚೇರಿಗಳಾಗಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವೆಡೆಯೂ ದಾಳಿ ನಡೆದಿದೆ. ಬೆಂಗಳೂರಿನ ಪಾದರಾಯನಪುರದಲ್ಲಿರುವ ಪಿಎಫ್​ಐ ರಾಜ್ಯ ಘಟಕದ ಕಾರ್ಯದರ್ಶಿ ಅಫ್ಸರ್ ಪಾಷಾ ನಿವಾಸದ ಮೇಲೆ, ಟ್ಯಾನರಿ ರಸ್ತೆಯಲ್ಲಿರುವ ಪಿಎಫ್​ಐ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷಾ ನಿವಾಸ, ರಿಚ್ಮಂಡ್ ಟೌನ್​ನಲ್ಲಿರುವ ಪಿಎಫ್​ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್​ ಮೇಲೆಯೂ ಎನ್​ಐಎ ದಾಳಿ ನಡೆದಿದೆ. ಬೆಂಗಳೂರಿನ ಮತ್ತೊಂದು ಸ್ಥಳದಲ್ಲಿಯೂ ದಾಳಿ ನಡೆದಿದೆ, ಎಂದು ಹೇಳಲಾಗುತ್ತಿದೆ ಆದರೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ರಿಚ್ಮಂಡ್ ಟೌನ್​ನ ಮೊಹಮದ್ ಸಾಕಿಬ್ ನಿವಾಸದ ಬಳಿ ಸೇರಿರುವ ಬೆಂಬಲಿಗರನ್ನು ಸ್ಥಳೀಯ ಪೊಲೀಸರು ದೂರ ಕಳಿಸುತ್ತಿದ್ದಾರೆ. ಪಾದರಾಯನಪುರ ಹಾಗೂ ಟ್ಯಾನರಿ ರಸ್ತೆಗಳಲ್ಲಿ ದಾಳಿ ನಡೆದ ಮನೆಗಳ ಸಮೀಪ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲು ಮುಂದಾಗಿದ್ದಾರೆ. ಮೊಹ್ಮದ್​ ಸಾಕಿಬ್ ನಿವಾಸದಲ್ಲಿ ಎನ್​ಐಎ ದಾಳಿ ಅಂತ್ಯಗೊಂಡಿದ್ದು, ಮನೆಯಲ್ಲಿ ಕೆಲ ದಾಖಲೆಗಳನ್ನ ವಶಕ್ಕೆ ಪಡೆದು ಹೊರನಡೆದಿದ್ದಾರೆ.

ಮಂಗಳೂರಿನಲ್ಲಿ 4 ಕಡೆ ದಾಳಿ

ಎಸ್​ಡಿಐಪಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬುಬಕರ್ ಕುಳಾಯಿ ಸೋದರ ಅಬ್ದುಲ್ ಖಾದರ್ ಕುಳಾಯಿ ಮನೆ ಮೇಲೆಯೂ ಎನ್​ಐಎ ದಾಳಿ ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್​ಐ ಮತ್ತು ಎಸ್​ಡಿಪಿಐ ಜಿಲ್ಲಾ ಕಚೇರಿಯ ಮೇಲೆಯೂ ಎನ್​ಐಎ ದಾಳಿ ನಡೆದಿದೆ. ಕುಳಾಯಿ, ಕಾವೂರು, ಜೋಕಟ್ಟೆ, ಬಜಪೆಯ ಪಿಎಫ್​ಐ ಮತ್ತು ಎಸ್​ಡಿಪಿಐ ನಾಯಕರ ಮನೆಗಳ ಮೇಲೆಯೂ ದಾಳಿ ನಡೆದಿದೆ. ಎನ್‌ಐಎ ದಾಳಿಯ ನಂತರ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ದಾಳಿ ನಡೆಯುವ ಸ್ಥಳದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಭದ್ರತೆ ಒದಗಿಸಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್​ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ ಎನ್​ಐಎ ಅಧಿಕಾರಿಗಳು ಎರಡು ಪುಸ್ತಕ, ಲ್ಯಾಪ್​ಟಾಪ್, 1 ಪೆನ್​ಡ್ರೈವ್, 10ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಭಿತ್ತಿಪತ್ರಗಳು, ಟೀ ಶರ್ಟ್ ವಶಕ್ಕೆ ಪಡೆದು ಅಧಿಕಾರಿಗಳು ಹೊರ ನಡೆದರು.

ಶಿರಸಿ, ಕೊಪ್ಪಳದಲ್ಲಿಯೂ ಎನ್​ಐಎ ದಾಳಿ

ಶಿರಸಿಯ ಎಸ್​ಡಿಪಿಐ ಮುಖಂಡ ಅಬ್ದುಲ್ ಶುಕುರ್ ಹೊನ್ನಾವರ್ ಅವರ ಮನೆಯ ಮೇಲೆ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿ, ಕೆಲವು ದಾಖಲೆಗಳೊಂದು ಅಬ್ದುಲ್ ಶುಕುರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒಂದು ಲ್ಯಾಪ್​ಟಾಪ್, ಎರಡು ಮೊಬೈಲ್, ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ.

ಪಿಎಫ್​ಐ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಫಯಾಜ್ ಅವರನ್ನು ಎನ್​ಐಎ ಅಧಿಕಾರಿಗಳು ಅವರ ಗಂಗಾವತಿ ನಿವಾಸದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಫಯಾಜ್ ಅವರನ್ನು ನಂತರ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆಗೆ ಕರೆದೊಯ್ಯಲಾಯಿತು.

10 ರಾಜ್ಯಗಳಲ್ಲಿ ದಾಳಿ, 100ಕ್ಕೂ ಹೆಚ್ಚು ಪಿಎಫ್​ಐ ಕಾರ್ಯಕರ್ತರು ವಶಕ್ಕೆ

ಭಾರತ 10 ರಾಜ್ಯಗಳಲ್ಲಿ ಎನ್​ಐಎ ಮತ್ತು ಇಡಿ ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಗೆ ಅಡ್ಡಿಪಡಿಸಿದ 100ಕ್ಕೂ ಹೆಚ್ಚು ಪಿಎಫ್​ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕರ್ನಾಟಕಕ್ಕಿಂತಲೂ ಕೇರಳ ಹಾಗೂ ತಮಿಳುನಾಡಿನಲ್ಲಿ ಹೆಚ್ಚಿನ ನಗರ-ಪಟ್ಟಣಗಳಲ್ಲಿ ಕಾರ್ಯಾಚರಣೆ ನಡೆದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.