Nimagidu Gotthe : ಮೊದಲ ಸೂರ್ಯ ಮುಳುಗದ ಸಾಮ್ರಾಜ್ಯ: ವಸಾಹತುಶಾಹಿ ಆಡಳಿತ ಆರಂಭಿಸಿದ್ದು, ಕೊನೆಗೊಳಿಸಿದ್ದು ಯಾವ ದೇಶ? | Which country started and ended colonial rule au53


ಜಗತ್ತಿನಲ್ಲಿ ವಸಾಹತುಶಾಹಿ ಆಡಳಿತಕ್ಕೆ ಮುನ್ನುಡಿ ಬರೆದ ಪೋರ್ಚುಗಲ್ ದೇಶವೇ ಆ ಪದ್ಧತಿಯ ಚರಮಗೀತೆಯನ್ನೂ ಹಾಡುವಂತೆ ಆಗಿದ್ದು ಇತಿಹಾಸದ ಮಹತ್ವದ ಸಂಗತಿಗಳಲ್ಲಿ ಒಂದು.

ಮತ್ತೊಂದು ದೇಶದ ಸಾರ್ವಭೌಮತೆಯನ್ನು ಕಿತ್ತುಕೊಂಡು, ಅದನ್ನು ತನ್ನ ಉಪಯೋಗಕ್ಕಿರುವ ಅಧೀನ ದೇಶವಾಗಿ ಬಳಸಿಕೊಳ್ಳುವ ಅತಿಕೆಟ್ಟ ಪದ್ಧತಿಗೆ ನಾಂದಿ ಹಾಡಿದ್ದು ಪೋರ್ಚುಗಲ್. 15ನೇ ಶತಮಾನದಲ್ಲಿ ಸಮುದ್ರ ಮಾರ್ಗಗಳ ಅನ್ವೇಷಣೆಗೆ ಪೋರ್ಚುಗಲ್ ರಾಜಮನೆತನ ಪ್ರೋತ್ಸಾಹ ನೀಡಿತು. ಪೋರ್ಚುಗಲ್ ನಾವಿಕರು ದೂರಗಾಮಿ ನೌಕೆಗಳನ್ನು ತಯಾರಿಸಿಕೊಂಡು, ಹೊಸ ಭೂ ಪ್ರದೇಶಗಳ ಹುಡುಕಾಟ ಶುರು ಮಾಡಿದರು. ಇಂಥ ಹುಡುಕಾಟದಲ್ಲಿ ಪತ್ತೆಯಾದ ಎಲ್ಲ ಭೂ ಪ್ರದೇಶಗಳೂ ಪೋರ್ಚುಗಲ್‌ ಆಡಳಿತಕ್ಕೆ ಸೇರುತ್ತಿದ್ದವು.

1415ರಲ್ಲಿ ಪೋರ್ಚುಗೀಸ್ ಯುವರಾಜ ಹೆನ್ರಿ ದಿ ನ್ಯಾವಿಗೇಟರ್ ಆಫ್ರಿಕಾ ಕಡಲತೀರ ತಲುಪಿ, ಕ್ವೆಟ್ಟಾ ಪಟ್ಟಣ ಗೆದ್ದುಗೊಂಡ. ಇದು ವಿಶ್ವದ ಮೊದಲ ಕಾಲೊನಿಯಾಗಿ, ರಕ್ತಸಿಕ್ತ ಪರಂಪರೆಗೆ, ಕೊನೆಯಿಲ್ಲದ ಶೋಷಣೆಗೆ ಮುನ್ನುಡಿ ಬರೆಯಿತು. ನಂತರ 1446ರಲ್ಲಿ ಆಫ್ರಿಕಾದ ಗಿನಿಯಾ ದೇಶ ಪೋರ್ಚುಗೀಸರ ಸುಪರ್ದಿಗೆ ಬಂತು. ನಂತರದ ದಿನಗಳಲ್ಲಿ ಇದು ಆಫ್ರಿಕಾದಲ್ಲಿ ಗುಲಾಮರ ವ್ಯಾಪಾರದ ಕೇಂದ್ರವಾಯಿತು. ಆಫ್ರಿಕಾದ ಜನರನ್ನು ಬಲೆಹಾಕಿ ಹಿಡಿದು, ಅಪಹರಿಸಿ, ಮಾರುಕಟ್ಟೆಗಳಲ್ಲಿ ಮಾರಿ, ಅವರಿಂದ ಹೊಲ-ತೋಟ-ಗಣಿಗಳಲ್ಲಿ ದುಡಿಸುತ್ತಿದ್ದರು. ಗುಲಾಮರ ರಕ್ತಕಣ್ಣೀರೇ ಸಂಪತ್ತಾಗಿ ಯೂರೋಪ್‌ನ ಸಿರಿತನ ಬೆಳೆಯಿತು. 1498ರಲ್ಲಿ ಮತ್ತೋರ್ವ ಪೋರ್ಚುಗೀಸ್ ನಾವಿಕ ವಾಸ್ಕೊ ಡಾ ಗಾಮ ಭಾರತದ ಕ್ಯಾಲಿಕಟ್ ತಲುಪಿದ.

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಇಂದು ರಾಜ್ಯಸಭಾ ಚುನಾವಣೆ; ರಾಜ್ಯದ 4 ರಾಜ್ಯಸಭಾ ಸ್ಥಾನಗಳಿಗೆ ಮತದಾನ ಆರಂಭ

1500ರಲ್ಲಿ ಬ್ರೆಜಿಲ್ ಗೆದ್ದ ಪೋರ್ಚುಗೀಸರು 1511ರಿಂದ 1534ರ ಅವಧಿಯಲ್ಲಿ ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡರು. 1815ರಲ್ಲಿ ನೆಪೊನಿಲಯನ್ ಫ್ರಾನ್ಸ್‌ನ ಆಡಳಿತಗಾರನಾದ ನಂತರ ವಿಶ್ವ ರಾಜಕಾರಣದಲ್ಲಿ ಪೋರ್ಚುಗೀಸರ ಪ್ರಭಾವ ಕಡಿಮೆಯಾಯಿತು. 2ನೇ ಮಹಾಯುದ್ಧದ ನಂತರ, ಅಂದರೆ 1950ರಿಂದ 70ರ ಅವಧಿಯಲ್ಲಿ ಬಹುತೇಕ ಪೋರ್ಚುಗೀಸ್ ವಸಾಹತು ದೇಶಗಳು ಸ್ವಾತಂತ್ರ್ಯ ಘೋಷಿಸಿಕೊಂಡವು. ಪೋರ್ಚುಗೀಸ್ ಆಡಳಿತದ ನೋವಿನಲ್ಲಿ ನಿರಂತರ ಬೆಂದಿದ್ದ ಭಾರತದ ಗೋವಾ 2ನೇ ಮಹಾಯುದ್ಧದ ನಂತರ ಮೊದಲು ಸ್ವಾತಂತ್ರ್ಯ ಪಡೆದ ಪೋರ್ಚುಗೀಸ್ ಪ್ರಾಂತ್ಯ.

ಜಗತ್ತಿನಲ್ಲಿ ವಸಾಹತುಶಾಹಿ ಆಡಳಿತಕ್ಕೆ ಮುನ್ನುಡಿ ಬರೆದ ಪೋರ್ಚುಗಲ್ ದೇಶವೇ ಆ ಪದ್ಧತಿಯ ಚರಮಗೀತೆಯನ್ನೂ ಹಾಡುವಂತೆ ಆಗಿದ್ದು ಇತಿಹಾಸದ ಮಹತ್ವದ ಸಂಗತಿಗಳಲ್ಲಿ ಒಂದು. 1557ರಲ್ಲಿ ಚೀನಾದ ಮಕೌ ಪ್ರಾಂತ್ಯದಲ್ಲಿ ವಸಾಹತು ಸ್ಥಾಪಿಸಿದ್ದ ಪೋರ್ಚುಗೀಸರು ತೀರಾ ಇತ್ತೀಚೆಗೆ, ಅಂದರೆ 1999ರಲ್ಲಿ ಅಧಿಕಾರ ಹಸ್ತಾಂತರಿಸಿದರು. ಅದರೊಂದಿಗೆ ಸುಮಾರು 5 ಶತಮಾನಗಳ ಅವಮಾನಕಾರಿ ಪರಂಪರೆಯೊಂದು ಜಗತ್ತಿನಲ್ಲಿ ಅಧಿಕೃತವಾಗಿ ಇಲ್ಲವಾಯಿತು. ಇದು ವಿದೇಶಿ ಆಡಳಿತದಿಂದ ಸ್ವಾತಂತ್ರ್ಯ ಪಡೆದ ಕೊನೆಯ ಪ್ರಾಂತ್ಯ.

ಭಾರತದ ಸಾಂಬಾರ ಪದಾರ್ಥಗಳು ಮತ್ತು ಸಂಪತ್ತಿನ ಆಸೆಯಿಂದ ಇಲ್ಲಿಗೆ ಬಂದ ಪೋರ್ಚುಗೀಸರು ಎಂದಿಗೂ ಭಾರತೀಯರನ್ನು ಗೌರವದಿಂದ ಕಾಣಲಿಲ್ಲ. ಹತ್ಯಾಕಾಂಡಗಳು, ಮೋಸ, ಮಸೀದಿ-ಮಂದಿರಗಳನ್ನು ಕೆಡವಿ ಚರ್ಚ್ ಕಟ್ಟುವುದು, ಸಾಮೂಹಿಕ ಮತಾಂತರ, ಹಿಂದೂ-ಮುಸ್ಲಿಮರ ನಡುವೆ ದ್ವೇಷ ಬಿತ್ತಿ ಒಡೆದು ಆಳುವ ಪ್ರಯತ್ನ ಅವ್ಯಾಹತವಾಗಿ ನಡೆಯಿತು. ಭಾರತವನ್ನು ಗೆಲ್ಲಲು ನಂತರದ ದಿನಗಳಲ್ಲಿ ಪ್ರಯತ್ನಿಸಿದ ಡಚ್ಚರು, ಫ್ರೆಂಚರು, ಇಂಗ್ಲಿಷರ ಮನಃಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಭಾರತ ಗೆಲ್ಲುವಲ್ಲಿ ಪೋರ್ಚುಗಿಸರು ವಿಫಲರಾದರೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯ ಲಾಭವನ್ನು ಬ್ರಿಟಿಷರು ಧಾರಾಳವಾಗಿ ಪಡೆದುಕೊಂಡರು. ಭಾರತವನ್ನು ಯಥಾಶಕ್ತಿ ದೋಚಿದರು.

ವಸಾಹತು ಆಡಳಿತದ ನೆಪದಲ್ಲಿ ದುರ್ಬಲ ದೇಶಗಳನ್ನು ಶೋಷಿಸುವ, ಇಡೀ ಜಗತ್ತನ್ನು ತಮ್ಮ ಭೋಗಕ್ಕಿರುವ ವಸ್ತು ಎನ್ನುವಂತೆ ಯೋಚಿಸುವ, ಬಿಳಿಯರಲ್ಲದವರು ಮನುಷ್ಯರೇ ಅಲ್ಲ ಎಂದುಕೊಳ್ಳುವ ಯೂರೋಪ್ ದೇಶಗಳ ಈ ಕೆಟ್ಟ ಕಾಯಿಲೆ ಮೊದಲು ಕಾಣಿಸಿಕೊಂಡಿದ್ದು ಸಹ ಪೋರ್ಚುಗೀಸರಲ್ಲಿಯೇ. ಅಮೆರಿಕ, ಏಷ್ಯಾ ಮತ್ತು ಅಫ್ರಿಕಾ ಖಂಡಗಳ ಸಾಕಷ್ಟು ದೇಶಗಳು ವಸಾಹತು ಆಡಳಿತದಲ್ಲಿ ನಲುಗಿದವು. ಸಾಂಸ್ಕೃತಿಕ ವಿಸ್ಮೃತಿಯಿಂದ ತಮ್ಮ ಮೂಲ ಬೇರುಗಳನ್ನೇ ಮರೆತವು. ಇಂದು ಸಾಮಾಜಿಕ, ಆರ್ಥಿಕವಾಗಿ ಈ ದೇಶಗಳು ಪ್ರಗತಿ ಸಾಧಿಸಿವೆಯಾದರೂ, ಈ ದೇಶಗಳ ಸಾಂಸ್ಕೃತಿಕ ಅಧಃಪತನದ ಪರಿಣಾಮಗಳಿಗೆ ಜಗತ್ತು ಸಾಕ್ಷಿಯಾಗುತ್ತಲೇ ಇದೆ. ಎಷ್ಟೋ ಆಫ್ರಿಕಾದ ದೇಶಗಳಲ್ಲಿ ಸ್ಥಳೀಯ ಭಾಷೆಗಳೇ ನಾಮಾವಶೇಷವಾಗಿವೆ.

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

TV9 Kannada


Leave a Reply

Your email address will not be published.