Omicron in Karnataka: ಒಮಿಕ್ರಾನ್ ಪತ್ತೆಯಾಗಿರುವ 11 ದೇಶಗಳ ಸ್ಥಿತಿ ನೋಡಿಕೊಂಡು ಮುಂದಿನ ಕ್ರಮ; ಸಚಿವ ಅಶ್ವಥ್ ನಾರಾಯಣ ಮಾಹಿತಿ | Omicron Karnataka Minister CN Ashwath Narayan reaction after Indias First two Omicron Cases Detected in Bengaluru


Omicron in Karnataka: ಒಮಿಕ್ರಾನ್ ಪತ್ತೆಯಾಗಿರುವ 11 ದೇಶಗಳ ಸ್ಥಿತಿ ನೋಡಿಕೊಂಡು ಮುಂದಿನ ಕ್ರಮ; ಸಚಿವ ಅಶ್ವಥ್ ನಾರಾಯಣ ಮಾಹಿತಿ

ಅಶ್ವತ್ಥ್ ನಾರಾಯಣ

ಬೆಂಗಳೂರು: ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್​​ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ. ಈಗಾಗಲೇ ಆ ಇಬ್ಬರು ಸೋಂಕಿತರನ್ನು ಐಸೋಲೇಷನ್​ನಲ್ಲಿ ಇರಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತದಲ್ಲಿ ಮೊದಲ ಒಮಿಕ್ರಾನ್ ಕೇಸ್ ಕರ್ನಾಟಕದಲ್ಲೇ ಪತ್ತೆಯಾಗಿರುವುದ ರಾಜ್ಯ ಸರ್ಕಾರಕ್ಕೂ ತಲೆನೋವು ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರ ಜಿನೋಮಿಕ್​ ಸೀಕ್ವೆನ್​ಗೆ ಕಳಿಸಲಾಗಿತ್ತು. ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ಒಮಿಕ್ರಾನ್ ವೈರಸ್​ ಕುರಿತು ಅಧ್ಯಯನ ಮಾಡಲಾಗಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಮಿಕ್ರಾನ್​ ವೇಗವಾಗಿ ಹರಡುತ್ತದೆ. ಅದರಿಂದ ಜೀವಕ್ಕೆ ಅಪಾಯವಿಲ್ಲ. ಒಮಿಕ್ರಾನ್​ ವೈರಸ್​ ಕುರಿತು ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಪತ್ತೆಯಾಗಿರುವ ಒಮಿಕ್ರಾನ್ ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಈ ವೈರಸ್ ಹೇಗೆ ಬರಲಿದೆ ಅಂತ ಅಧ್ಯಯನ ಮಾಡಲಾಗಿದೆ. ಬೇರೆ ಬೇರೆ ದೇಶದಲ್ಲಿ ಈಗಾಗಲೇ ಒಮಿಕ್ರಾನ್ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಇಬ್ಬರಿಗೆ ಒಮಿಕ್ರಾನ್ ವೈರಸ್ ಪತ್ತೆಯಾಗಿದ್ದರೂ ಅವರಲ್ಲಿ ವೈರಸ್​ ತೀವ್ರವಾಗಿಲ್ಲ. ಇಬ್ಬರನ್ನೂ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್​ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕದಲ್ಲಿ ಇಬ್ಬರಿಗೆ ಒಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಒಮಿಕ್ರಾನ್ ದೃಢಪಟ್ಟ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಟಿವಿ9ಗೆ ಲಭ್ಯವಾಗಿದೆ. ನ. 20ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ಏರ್​ಪೋರ್ಟ್​ಗೆ ಬಂದಿದ್ದ ಪ್ರಯಾಣಿಕ ನ. 23ರಂದು ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು. ಏರ್​ಪೋರ್ಟ್​ನಲ್ಲಿ ಟೆಸ್ಟ್ ಮಾಡಿದಾಗ ಕೊವಿಡ್ ಪಾಸಿಟಿವ್ ಬಂದಿತ್ತು. ದಕ್ಷಿಣ ಆಫ್ರಿಕಾ ನಿವಾಸಿಯಾಗಿದ್ದ ಪ್ರಯಾಣಿಕನಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಹೋಟೆಲ್​​ನಲ್ಲಿ ಕ್ವಾರಂಟೈನ್​ ಆಗಿದ್ದರು. ಆರೋಗ್ಯ ಇಲಾಖೆ ಅವರನ್ನು 3 ದಿನ ಮಾತ್ರ ಕ್ವಾರಂಟೈನ್ ಮಾಡಿತ್ತು. 3 ದಿನದ ಬಳಿಕ ಕೊವಿಡ್ ಟೆಸ್ಟ್ ಮಾಡಿಸಿದ್ದ ಪ್ರಯಾಣಿಕನಿಗೆ ಮೂರನೇ ದಿನದ ವರದಿ ನೆಗೆಟಿವ್ ಎಂದು ಬಂದಿತ್ತು. ನೆಗೆಟಿವ್ ಬರುತ್ತಿದ್ದಂತೆ ಅವರನ್ನು ಬಿಟ್ಟು ಕಳುಹಿಸಲಾಗಿತ್ತು.

ಇದಾದ ಬಳಿಕ ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದ ಪ್ರಯಾಣಿಕ ಮೀಟಿಂಗ್​ನಲ್ಲಿ ಭಾಗಿಯಾಗಿದ್ದರು. ಹೋಂ ಕ್ವಾರಂಟೈನ್ ಆಗದೇ ಸೀದಾ ಮೀಟಿಂಗ್​ನಲ್ಲಿ ಭಾಗಿಯಾಗಿದ್ದರು. ದಕ್ಷಿಣ ಆಫ್ರಿಕಾದಿಂದ ಬಂದ 3ನೇ ದಿನಕ್ಕೆ ಬೊಮ್ಮಸಂದ್ರದ ಅಡಾಕಾರ್ ಇಂಗ್ರಾಮ್ ಲಿಮಿಟೆಡ್ ಕಂಪನಿಯಲ್ಲಿ 6 ಜನರೊಂದಿಗೆ ಬೋರ್ಡ್ ಮೀಟಿಂಗ್​ನಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಆ 6 ಜನರಿಗೂ ಕೊವಿಡ್ ತಪಾಸಣೆ ನಡೆಸಿ, ಕ್ವಾರಂಟೈನ್ ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *