Omicron in Karnataka: ದೇಶದಲ್ಲಿ ನಾವು ವೇಗವಾಗಿ ಒಮಿಕ್ರಾನ್ ಸೋಂಕನ್ನು ಪತ್ತೆ ಹಚ್ಚಿದ್ದೇವೆ; ಆರೋಗ್ಯ ಸಚಿವ ಸುಧಾಕರ್ | Omicron in Karnataka Health Minister Dr K Sudhakar Pressmeet after Firs Omicron Virus Detected in Bengaluru


Omicron in Karnataka: ದೇಶದಲ್ಲಿ ನಾವು ವೇಗವಾಗಿ ಒಮಿಕ್ರಾನ್ ಸೋಂಕನ್ನು ಪತ್ತೆ ಹಚ್ಚಿದ್ದೇವೆ; ಆರೋಗ್ಯ ಸಚಿವ ಸುಧಾಕರ್

ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ಬೆಂಗಳೂರಿನ ಇಬ್ಬರಿಗೆ ಒಮಿಕ್ರಾನ್ ವೈರಸ್​ (Omicron Virus) ತಗುಲಿದೆ. ಭಾರತದಲ್ಲಿ ಮೊದಲ ಒಮಿಕ್ರಾನ್ ಕೇಸ್ ಕರ್ನಾಟಕದಲ್ಲೇ (Omicron Case in Karnataka) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಸುಧಾಕರ್​ (Dr K Sudhakar) ಸುದ್ದಿಗೋಷ್ಠಿ ನಡೆಸಿದ್ದಾರೆ. ಒಮಿಕ್ರಾನ್ ಬಂದಿರುವ ಇಬ್ಬರಿಗೂ 2 ಡೋಸ್ ಕೊರೊನಾ ಲಸಿಕೆ ಆಗಿದೆ. ಮೂರು ದಿನದಿಂದ ಅವರಿಬ್ಬರ ರಿಪೋರ್ಟ್ ಗೆ ಕಾಯುತ್ತಿದ್ದೆವು. ಕೇಂದ್ರ ಸರ್ಕಾರ ಎರಡೂ ಸ್ಯಾಂಪಲ್ ಗಳಲ್ಲಿ ಒಮಿಕ್ರಾನ್ ಪ್ರಬೇಧ ಇದೆ ಎಂದು ದೃಢಪಟ್ಟಿದೆ. ಕರ್ನಾಟಕದಲ್ಲಿ ವಿದೇಶದಿಂದ ಬಂದವರಿಗೆ ಬಹಳ ತುರ್ತಾಗಿ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಒಮಿಕ್ರಾನ್ ಸೋಂಕನ್ನು ನಾವು ಬೇಗ ಕಂಡು ಹಿಡಿದಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಒಮಿಕ್ರಾನ್ ಬಗ್ಗೆ ಅಧ್ಯಯನ ಮಾಡುತ್ತಿದೆ. ಅಧ್ಯಯನ ಮಾಡಿ ಹೇಳುವವರೆಗೂ ನಾವು ಏನೂ ಹೇಳಲು ಸಾಧ್ಯವಿಲ್ಲ. ಇಡೀ ದೇಶದಲ್ಲಿ ನಾವು ಮೊದಲು ಒಮಿಕ್ರಾನ್ ಸೋಂಕನ್ನು ಕಂಡು ಹಿಡಿದಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆಗೂ ಸಿಎಂ ಮಾತಾಡಿದ್ದಾರೆ. ನಾಳೆ ಸಿಎಂ ಬಂದ ಬಳಿಕ ತುರ್ತು ಸಭೆ ನಡೆಸಲಿದ್ದಾರೆ. ಆರೋಗ್ಯ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ನಾಳೆಯ ಸಭೆಯ ನಂತರ ವಿಧಾನಸಭಾ ಅಧಿವೇಶನ ನಡೆಸಬೇಕೇ? ಬೇಡವೇ? ಎಂಬುದನ್ನು ಕೂಡ ನಿರ್ಧರಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಒಮಿಕ್ರಾನ್ ಬಗ್ಗೆ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ. ಅನಗತ್ಯವಾಗಿ ಗೊಂದಲ, ಆತಂಕ, ಊಹಾಪೋಹ ಸೃಷ್ಟಿಸಬೇಡಿ. ಒಂದಲ್ಲ ಒಂದು ದಿನ ಒಮಿಕ್ರಾನ್ ಭಾರತಕ್ಕೆ ಬರಬೇಕಿತ್ತು. ಭಾರತಕ್ಕೆ ಪ್ರತೀ ದಿನ 1 ಲಕ್ಷ ಜನ ವಿದೇಶಿಗರು ಬರುತ್ತಿದ್ದಾರೆ. ಇಡೀ ದೇಶದಲ್ಲಿ ನಾವು ಮೊದಲ ಬಾರಿಗೆ ವೇಗವಾಗಿ ಒಮಿಕ್ರಾನ್ ಅನ್ನು ಪತ್ತೆ ಹಚ್ಚಿದ್ದೇವೆ. ಆರು ಪ್ರಕರಣಗಳಲ್ಲಿ ಯಾರಿಗೂ ಯಾವುದೇ ಗಂಭೀರ ಸಮಸ್ಯೆಗಳಿಲ್ಲ. ಡೆಲ್ಟಾದಲ್ಲಿ ಸಮಸ್ಯೆ ಜಾಸ್ತಿ ಇತ್ತು, ಇಲ್ಲಿ ಇದ್ಯಾವುದೂ ಕಂಡು ಬಂದಿಲ್ಲ. ಇಲ್ಲಿಯವರೆಗೂ ಗಮನಿಸಿರುವಂತೆ 11 ದೇಶಗಳಲ್ಲಿನ ನೋಟಿಫಿಕೇಷನ್ ಪ್ರಕಾರ ಯಾವುದೇ ಸಮಸ್ಯೆ ಇಲ್ಲ ಅಂತ ಕಂಡು ಬಂದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಕೆಲಸ ಮಾಡುವ 46 ವರ್ಷದ ವೈದ್ಯರಿಗೆ ಒಮಿಕ್ರಾನ್ ದೃಢ ಪಟ್ಟಿದೆ. ಅವರು ಸ್ವಯಂ ಐಸೋಲೇಟ್​ ಆಗಿದ್ದಾರೆ. ನಮಗೆ ಅನುಮಾನ ಬಂದು ಜಿನೋಮಿಕ್ ಸೀಕ್ವೆನ್ಸಿಂಗ್​ಗೆ ಕಳಿಸಿದ್ದೆವು. ಇವತ್ತು ಬಂದ ವರದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದೆ. 46 ವರ್ಷದ ವೈದ್ಯರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಾದ ಐವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದಿರುವ ಐವರೂ ಕೂಡ ವೈದ್ಯರಾಗಿದ್ದಾರೆ. ಐವರಿಗೂ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐವರಿಗೆ ರೋಗಲಕ್ಷಣ ತೀವ್ರವಾಗಿಲ್ಲದಿರುವುದು ಸಮಾಧಾನ ತಂದಿದೆ ಎಂದು ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ಟೆಸ್ಟಿಂಗ್​ ಮಾಡಲಾಗುವುದು. ಎಲ್ಲರೂ ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕು. 2 ಡೋಸ್ ಲಸಿಕೆಯನ್ನು ಆದಷ್ಟು ಶೀಘ್ರವಾಗಿ ತೆಗೆದುಕೊಳ್ಳುವುದು ಉತ್ತಮ. ಅನಗತ್ಯವಾಗಿ ಗುಂಪು ಸೇರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಡಿ. ಒಮಿಕ್ರಾನ್​ ಬಗ್ಗೆ ನಾವು ಯಾರೂ ಆತಂಕಪಡಬೇಕಿಲ್ಲ. ಈಗ ಒಮಿಕ್ರಾನ್ ಬಂದಿರುವವರಿಗೆ ಸೋಂಕು ತೀವ್ರವಾಗಿಲ್ಲ. ಸೋಂಕಿನ ಲಕ್ಷಣ ಲಘುವಾಗಿರುವುದರಿಂದ ಆತಂಕ ಬೇಡ. ಡೆಲ್ಟಾದಂತೆ ಉಸಿರಾಟ ಸಮಸ್ಯೆಯಂತಹ ಗಂಭೀರವಾಗಿಲ್ಲ. ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿದ್ದ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢವಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *