ಜೀವನದಲ್ಲಿ ತಮ್ಮ ಕಾರ್ಯಸಿದ್ಧಿಯಾಗದೇ ಕಷ್ಟಪಡುತ್ತಿದ್ದಾರೋ, ಯಾರು ವಿದ್ಯಾಪ್ರಾಪ್ತಿಗಾಗಿ ಪರಿತಪಿಸುತ್ತಿರುವರೋ, ವಿವಾಹ ಇತ್ಯಾದಿ ತಾಪತ್ರಯಗಳಿಂದ ಸಮಸ್ಯೆ ಅನುಭವಿಸುತ್ತಿರುವರೋ ಅಂತಹವರು ಈ ಕ್ಷೇತ್ರಕ್ಕೆ ಹೋಗಿ ದರ್ಶನಪಡೆದರೆ ಅವರ ಇಷ್ಟಕಾರ್ಯ ಧರ್ಮಸಮ್ಮತವಾಗಿದ್ದರೆ ಸಿದ್ಧಿಯಾಗುವುದು ನಿಶ್ಚಿತ.

Image Credit source: enidhi.net
ಸಮಸ್ತ ಜೀವರಾಶಿಗಳಲ್ಲಿ ಮಾನವ ಜನ್ಮ ಎನ್ನುವುದು ಅತ್ಯಂತ ಉತ್ತಮವಾದ ಮತ್ತು ಬಹುಕಾಲದ ಪುಣ್ಯದ ಫಲದಿಂದ ಲಭ್ಯವಾಗುವುದು. ಈ ಜನ್ಮದ ಸಾರ್ಥಕ್ಯವೆನ್ನುವುದು ಸುಲಭದ ಮಾತಲ್ಲ. ಇದಕ್ಕಾಗಿ ನಾವು ತುಂಬಾ ಎಚ್ಚರವಹಿಸಿ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಅವುಗಳಲ್ಲಿ ವಿದ್ಯೆಯ ಅರ್ಜನೆ, ಅದರಿಂದ ಉತ್ತಮ ಕೆಲಸದ ಪ್ರಾಪ್ತಿ, ಅದರಿಂದ ಧನಾರ್ಜನೆ, ಆ ಧನದಿಂದ ಧರ್ಮಸಮ್ಮತವಾದ ಜೀವನ. ಎಂದು ನಾಲ್ಕು ಮುಖ್ಯ ಸ್ತರಗಳು. ಕಾಣಲು ಕೇಳಲು ಇವು ಸುಲಭದಂತೆ ಕಂಡರೂ ಆ ಸ್ತರಕ್ಕೆ ಬಂದಾಗ ಅದರ ಗಾಢವಾದ ಕಠಿಣತೆ ತಿಳಿಯುತ್ತದೆ ಅಲ್ಲವೇ ? ಈ ಸಮಯದಲ್ಲಿ ನಾವು ನಮ್ಮ ಭಕ್ತಿ, ಧರ್ಮಕ್ಕನುಸಾರ ಅಲೌಕಿಕವಾದ ಒಂದು ಶಕ್ತಿಯ ಮೊರೆ ಹೋಗುವುದು ಸಹಜ. ಕೆಲವೊಂದು ಸಲ ಕೆಲವೊಬ್ಬರಿಗೆ ಅರಿವಿನ ಅಥವಾ ಸೂಕ್ತ ಮಾರ್ಗದರ್ಶನದ ಅಭಾವದಿಂದ ಏನು ಮಾಡಬೇಕೆಂಬುದು ತಿಳಿಯದೇ ಏನೇನೋ ಮಾಡುತ್ತಾರೆ. ಜೀವನದಲ್ಲಿ ಹತಾಶರಾಗಿಬಿಡುತ್ತಾರೆ.
ಇಂತಹ ಸಂದರ್ಭದಲ್ಲಿ ನಿಮ್ಮ ಕೈಹಿಡಿಯುವುದೇ ಈ ಕ್ಷೇತ್ರ. ಹಾಗೆಯೇ ಕಾರ್ಯಾರಂಭದ ಆದಿಯಲ್ಲೂ ಈ ಕ್ಷೇತ್ರದಲ್ಲಿ ಪ್ರಾರ್ಥಿಸಿ. ನಿಮ್ಮ ಕಾರ್ಯಸಿದ್ಧಿಯಾಗುತ್ತದೆ. ಆ ಕ್ಷೇತ್ರ ಯಾವುದೆಂದು ತಿಳಿಯುವ ಮೊದಲು ಅಲ್ಲಿನ ಪೌರಾಣಿಕ ಹಿನ್ನಲೆಯನ್ನು ತಿಳಿಯೋಣ. ಲೋಕಕಂಟಕರಾದ ತ್ರಿಪುರಾಸುರರು ದೇವಲೋಕವನ್ನು ಆಕ್ರಮಿಸಿ ಸೃಷ್ಟಿಯ ಸಮಸ್ತ ವ್ಯವಸ್ಥೆಯನ್ನು ಮತ್ತು ಧಾರ್ಮಿಕತೆ ಹಾಳುಗೆಡವುತ್ತಿರುವಾಗ ದಾರಿ ಕಾಣದ ಸಮಸ್ತ ಋಷಿಗಳು ಬ್ರಹ್ಮನ ಮೊರೆ ಹೋಗುತ್ತಾರೆ. ಬ್ರಹ್ಮನು ಸಮಸ್ತ ದೇವತೆಗಳನ್ನೊಳಗೂಡಿ ವಿಷ್ಣುವಿನ ಬಳಿ ಹೋಗಿತ್ತಾರೆ. ವಿಷ್ಣುವು ಅವರೆಲ್ಲರೊಂದಿಗೆ ಶಿವನ ಬಳಿ ಹೋಗಿ ವಿಷಯದ ಗಂಭೀರತೆಯ ಬಗ್ಗೆ ಚಿಂತನೆ ನಡೆಸುತ್ತಾರೆ.
ತಾಜಾ ಸುದ್ದಿ
ಈ ಸಂದರ್ಭದಲ್ಲಿ ಲೋಕಕಂಟಕರಾದ ತ್ರಿಪುರಾಸುರರನ್ನು ಸಂಹರಿಸವುದಾಗಿ ಶಿವನು ಸಂಕಲ್ಪ ಮಾಡಿ ಕಾರ್ಯೊನ್ಮುಖನಾಗುತ್ತಾನೆ. ಸತತ ಎರಡು ಸಲ ಶಿವನಿಗೆ ಅವರಿಂದ ಸೋಲಾಗುತ್ತದೆ. ಕಾರಣವೇನೆಂದು ವಿವರ್ಶಿಸುವಾಗ ಗಣಪತಿಯ ಪೂಜೆಯನ್ನು ಮಾಡದೇ ಕಾರ್ಯಾರಂಭ ಮಾಡಿದ್ದು ಸೋಲಿಗೆ ಕಾರಣ ಎಂದು ತಿಳಿದುಬರುತ್ತದೆ.
ಇದನ್ನರಿತ ಬ್ರಹ್ಮಾದಿಗಳು ಅಗ್ರಪೂಜೆಯ ಅಧಿಪತಿಯಾದ ಗಣಪನನ್ನು ಅರಸುತ್ತಾ ಬರುತ್ತಾರೆ. ಅಷ್ಟೊತ್ತಿಗಾಗಲೇ ಗಣಪನು ಕುಪಿತನಾಗಿ ಹಲವಾರು ಕೊಡ ಜೇನನ್ನು ಕುಡಿದು ಉಷ್ಣಗೊಂಡವನಾಗಿ ಬಂಡೆಗಳ ಮಧ್ಯವಾಸವಾಗಿದ್ದಾನೆ ಎಂದು ತಿಳಿದುಬರುತ್ತದೆ. ಅವನ ಕೋಪವನ್ನು ಮತ್ತು ಅವನಿಗಾದ ಉಷ್ಣವನ್ನು ಶಾಂತಿಗೊಳಿಸಿದಲ್ಲಿ ಕಾರ್ಯಸಿದ್ಧಿಯಾಗುತ್ತದೆ ಎಂದು ತಿಳಿದು. ಅವನ ಕೋಪ ಶಮನಕ್ಕಾಗಿ ಅವನಿರುವ ಸ್ಥಳವನ್ನು ಹುಡುಕಿ ಅವನಿಗೆ ಒಂದೊಂದೇ ಕೊಡ ನೀರು ಹಾಕಲು ಆರಂಭಿಸುತ್ತಾರೆ. ಹಾಗೇ ಒಂದು ಸಾವಿರ ಕೊಡ ನೀರು ಹೊಯಿದಾಕ್ಷಣ ಗಣಪನು ನಕ್ಕುಬಿಡುತ್ತಾನೆ. ತದನಂತರ ಅವನನ್ನು ವಿಜಯಕ್ಕಾಗಿ ಪ್ರಾರ್ಥಿಸಿ ತ್ರಿಪುರಾಸುರರ ಸಂಹಾರವನ್ನು ಶಿವ ಮಾಡುತ್ತಾನೆ.