ಈ ಹಣಕಾಸು ವರ್ಷದಲ್ಲಿ ಒಟ್ಟು 23,796.55 ಕೋಟಿ ರೂ. ಡಿವಿಡೆಂಟ್ ಪಡೆಯಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.

Image Credit source: PTI
ನವದೆಹಲಿ: ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) 5,001 ಕೋಟಿ ರೂ. ಡಿವಿಡೆಂಡ್ (Dividend) ಅಥವಾ ಲಾಭಾಂಶ ನೀಡಿದೆ. ಇದಲ್ಲದೆ, ಸರ್ಕಾರಿ ಸ್ವಾಮ್ಯದ ಕಂಪನಿಗಳು ಒಟ್ಟು 23,797 ಕೋಟಿ ರೂ. ಡಿವಿಡೆಂಡ್ ನೀಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ (DIPAM) ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮಾಹಿತಿ ನೀಡಿದ್ದಾರೆ. ಹೆಚ್ಚು ಲಾಭಾಂಶವನ್ನು ಸರ್ಕಾರಕ್ಕೆ ನೀಡುವ ಸಲುವಾಗಿ ನೀತಿ ರೂಪಿಸಿಕೊಳ್ಳುವಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ 2020ರಲ್ಲಿ ಸೂಚಿಸಿತ್ತು. ಲಾಭ, ನಗದು ಮೀಸಲು, ನಿವ್ವಳ ಮೌಲ್ಯ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಇಲಾಖೆ ಸೂಚಿಸಿತ್ತು.
ನಿಯಮಗಳ ಪ್ರಕಾರ, ತೆರಿಗೆ ಹೊರತುಪಡಿಸಿ ಕನಿಷ್ಠ ಶೇಕಡಾ 30ರಷ್ಟು ಅಥವಾ ನಿವ್ವಳ ಮೌಲ್ಯದ ಶೇಕಡಾ 5ರಷ್ಟು (ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು) ವಾರ್ಷಿಕ ಡಿವಿಡೆಂಡ್ ಅನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳು ಸರ್ಕಾರಕ್ಕೆ ನೀಡಬೇಕು. ಈ ಹಣಕಾಸು ವರ್ಷದಲ್ಲಿ ಒಟ್ಟು 23,796.55 ಕೋಟಿ ರೂ. ಡಿವಿಡೆಂಟ್ ಪಡೆಯಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.