Palak Muchhal Wedding: ‘ಏನಮ್ಮಿ ಏನಮ್ಮಿ..’ ಗಾಯಕಿ ಪಲಕ್​ ಮುಚ್ಚಲ್​ ಮದುವೆ; ಖ್ಯಾತ ಸಂಗೀತ ನಿರ್ದೇಶಕನ ಕೈ ಹಿಡಿದ ಹೃದಯವಂತೆ – Singer Palak Muchhal ties the knot with music composer Mithoon Sharma in Mumbai


Mithoon Sharma | Palak Muchhal: 2,200ಕ್ಕೂ ಹೆಚ್ಚು ಮಕ್ಕಳಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿದ ಗಾಯಕಿ ಪಲಕ್​ ಮುಚ್ಚಲ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಿಥುನ್​ ಜೊತೆ ಅವರು ಹಸೆಮಣೆ ಏರಿದ್ದಾರೆ.

Palak Muchhal Wedding: ‘ಏನಮ್ಮಿ ಏನಮ್ಮಿ..’ ಗಾಯಕಿ ಪಲಕ್​ ಮುಚ್ಚಲ್​ ಮದುವೆ; ಖ್ಯಾತ ಸಂಗೀತ ನಿರ್ದೇಶಕನ ಕೈ ಹಿಡಿದ ಹೃದಯವಂತೆ

ಮಿಥುನ್​ ಶರ್ಮಾ, ಪಲಕ್​ ಮುಚ್ಚಲ್​

ಗಾಯಕಿ ಪಲಕ್​ ಮುಚ್ಚಲ್​ (Palak Muchhal) ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಬಾಲಿವುಡ್​ನಲ್ಲಿ ಸಾಕಷ್ಟು ಹಿಟ್​ ಗೀತೆಗಳಿಗೆ ಧ್ವನಿ ಆಗಿರುವ ಅವರು ಕನ್ನಡದಲ್ಲೂ ಹಲವು ಹಾಡುಗಳನ್ನು ಹಾಡಿದ್ದಾರೆ. ತಮಿಳು, ತೆಲುಗು, ಮರಾಠಿ, ಭೋಜ್​ಪುರಿ, ಪಂಜಾಬಿ, ಉರ್ದು ಮುಂತಾದ ಭಾಷೆಯ ಹಾಡುಗಳು ಕೂಡ ಪಲಕ್​ ಮುಚ್ಚಲ್​ ಕಂಠದಲ್ಲಿ ಮೂಡಿಬಂದಿವೆ. ಈ ಗಾಯಕಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ, ಖ್ಯಾತ ಸಂಗೀತ ನಿರ್ದೇಶಕ/ಗಾಯಕ, ಗೀತರಚನಕಾರ ಮಿಥುನ್​ ಶರ್ಮಾ (Mithoon Sharma) ಜೊತೆ ಪಲಕ್​ ಮುಚ್ಚಲ್​​ ಮದುವೆ (Palak Muchhal Marriage) ಭಾನುವಾರ (ನ.6) ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ಈ ವಿವಾಹಕ್ಕೆ ಸಾಕ್ಷಿಯಾದರು.

ಹಲವು ವರ್ಷಗಳಿಂದ ಪಲಕ್​ ಮುಚ್ಚಲ್​ ಮತ್ತು ಮಿಥುನ್​ ಶರ್ಮಾ ಪ್ರೀತಿಸುತ್ತಿದ್ದರು. ಬಾಲಿವುಡ್​ನಲ್ಲಿ ಮಿಥುನ್​ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ‘ಆಶಿಕಿ 2’ ಚಿತ್ರದ ‘ತುಮ್​ ಹೀ ಹೋ..’, ‘ಅನ್ವರ್​’ ಸಿನಿಮಾ ‘ಮೌಲಾ ಮೇರೆ..’, ‘ಏಕ್​ ವಿಲನ್​ ಚಿತ್ರದ ‘ಬಂಜಾರ..’ ಸೇರಿದಂತೆ ಹಲವು ಸೂಪರ್​ ಹಿಟ್​ ಗೀತೆಗಳಿಗೆ ಅವರು ಸಂಗೀತ ನೀಡಿದ್ದಾರೆ. ಈ ಪ್ರತಿಭಾವಂತನ ಜೊತೆ ಪಲಕ್​ ಮುಚ್ಚಲ್​ ಅವರು ಮದುವೆ ಆಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಪಲಕ್​ ಮುಚ್ಚಲ್​ ಅವರನ್ನು ಹೃದಯವಂತೆ ಎಂದು ಕರೆದರೆ ಅತಿಶಯೋಕ್ತಿ ಅಲ್ಲ. ಸಾವಿರಾರು ಮಕ್ಕಳಿಗೆ ಅವರು ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಅನೇಕ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ ಪಲಕ್​ ಅವರು, ಅದರಿಂದ ಬಂದ ಹಣದಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುತ್ತಾರೆ. ಈವರೆಗೂ 2,200ಕ್ಕೂ ಹೆಚ್ಚು ಮಕ್ಕಳ ಜೀವ ಉಳಿಸಿದ ಪುಣ್ಯ ಈ ಗಾಯಕಿಗೆ ಸಲ್ಲುತ್ತದೆ. ಸಾವಿರಾರು ಕುಟುಂಬಗಳಿಗೆ ಪಲಕ್​ ಮುಚ್ಚಲ್​ ಅವರು ದೇವರಾಗಿದ್ದಾರೆ.

ಕನ್ನಡದಲ್ಲಿಯೂ ಪಲಕ್​ ಮುಚ್ಚಲ್​ ಅವರಿಗೆ ಸಖತ್ ಡಿಮ್ಯಾಂಡ್​ ಇದೆ. ಅವರು ಧ್ವನಿ ನೀಡಿದ ‘ಅಯೋಗ್ಯ’ ಸಿನಿಮಾದ ‘ಏನಮ್ಮಿ ಏನಮ್ಮಿ..’ ಹಾಡು ಸೂಪರ್​ ಹಿಟ್​ ಆಯಿತು. ‘ಅಧ್ಯಕ್ಷ’ ಸಿನಿಮಾದ ‘ಸುಮ್​ ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ..’, ‘ಮುಕುಂದಾ ಮುರಾರಿ’ ಚಿತ್ರದ ‘ಗೋಪಾಲ ಬಾ..’ ಸೇರಿದಂತೆ ಹಲವು ಹಾಡುಗಳಿಗೆ ಪಲಕ್​ ಮುಚ್ಚಲ್​ ಧ್ವನಿ ನೀಡಿದ್ದಾರೆ.

ಮುಂಬೈನಲ್ಲಿ ಪಲಕ್​ ಮುಚ್ಚಲ್​ ಮತ್ತು ಮಿಥುನ್​ ಅವರ ಮದುವೆ ನೆರವೇರಿತು. ಸೋನು ನಿಗಮ್​, ಕೈಲಾಶ್​ ಖೇರ್​, ಸ್ಮೃತಿ ಮಂದಣ್ಣ, ರುಬೀನಾ ದಿಲೈಕ್​, ಅಭಿನವ್​ ಶುಕ್ಲಾ ಮುಂತಾದ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪಲಕ್​ ಮತ್ತು ವಿಥುನ್​ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

TV9 Kannada


Leave a Reply

Your email address will not be published.