PayCM: ಬೊಮ್ಮಾಯಿಗೆ ಅವಹೇಳನ ಮಾಡಿದ್ದ ಪೇಸಿಎಂ ಪೋಸ್ಟರ್: ಪೊಲೀಸ್ ವಶಕ್ಕೆ ಇಬ್ಬರು, ಠಾಣೆಗೆ ಬಂದ ಡಿಕೆ ಶಿವಕುಮಾರ್ | Police Arrests KPCC Social Media Wing Workers DK Shivakumar in Police Station


ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೊಲೀಸರಿಂದ ಮಾಹಿತಿ ಪಡೆಯುತ್ತಿದ್ದಾರೆ.

PayCM: ಬೊಮ್ಮಾಯಿಗೆ ಅವಹೇಳನ ಮಾಡಿದ್ದ ಪೇಸಿಎಂ ಪೋಸ್ಟರ್: ಪೊಲೀಸ್ ವಶಕ್ಕೆ ಇಬ್ಬರು, ಠಾಣೆಗೆ ಬಂದ ಡಿಕೆ ಶಿವಕುಮಾರ್

ಬೆಂಗಳೂರಿನ ವಿವಿಧೆಡೆ ರಾರಾಜಿಸಿದ್ದ ಪೇಸಿಎಂ ಪೋಸ್ಟರ್​

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಅವಹೇಳನ ಮಾಡಲೆಂದು ‘ಪೇ ಸಿಎಂ’ (PayCM) ಪೋಸ್ಟರ್​​ ಅಭಿಯಾನ ಮಾಡಿದ್ದ ಆರೋಪದ ಮೇಲೆ ಹೈಗ್ರೌಂಡ್ಸ್​ ಪೊಲೀಸರು ಕಾಂಗ್ರೆಸ್ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೆಪಿಸಿಸಿ ಜಾಲತಾಣ ವಿಭಾಗದ ಬಿ.ಆರ್.ನಾಯ್ಡು ಹಾಗೂ ಗಗನ್ ಯಾದವ್ ಬಂಧಿತರು. ಇದೀಗ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ ಬಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಹಿತಿ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪೇಸಿಎಂ ಅಭಿಯಾನವು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ‘ಪೇಸಿಎಂ- ಇಲ್ಲಿ ಶೇ 40 ಸ್ವೀಕರಿಸಲಾಗುವುದು’ ಎಂಬ ಶೀರ್ಷಿಕೆಯಡಿ ಕಾಂಗ್ರೆಸ್​ ಬುಧವಾರ ದೊಡ್ಡ ಅಭಿಯಾನ ನಡೆಸಿತ್ತು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರವಾಗಿ ಖಂಡಿಸಿದ್ದರು. ‘ಇದು ಕರ್ನಾಟಕದ ಹೆಸರು ಕೆಡಿಸುವ ಹುನ್ನಾರ ಇದು’ ಎಂದು ಬೇಸರ ವ್ಯಕ್ತಪಡಿಸಿದ್ದರು. ಕಾಂಗ್ರೆಸ್​ನ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿಯು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಚಿತ್ರಗಳಿದ್ದ ಕ್ಯುಆರ್​ ಕೋಡ್​ ಮಾದರಿಯನ್ನು ಸಿದ್ಧಪಡಿಸಿ, ‘ರಾಜ್ಯವನ್ನು ಲೂಟಿ ಮಾಡಿ ಹಾಳು ಮಾಡಿರುವ ಈ ಭ್ರಷ್ಟ ಜೋಡಿಯನ್ನು ರಾಜ್ಯದಿಂದ ಕಿತ್ತೆಸೆಯಲು ಇದನ್ನು ಸ್ಕ್ಯಾನ್ ಮಾಡಿ’ ಎಂದು ಮತ್ತೊಂದು ಪೋಸ್ಟರ್​ ಬಿಡುಗಡೆ ಮಾಡಿತ್ತು.

ಅಭಿಯಾನವನ್ನು ಸಮರ್ಥಿಸಿಕೊಂಡಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ‘ಪೇಸಿಎಂ ಅಭಿಯಾನ ವೈಯಕ್ತಿಕವಾಗಿ ಮಾಡಿರುವುದಲ್ಲ. ಸಾರ್ವಜನಿಕವಾಗಿ ಚರ್ಚೆ ಆಗಿರುವುದನ್ನು ಪೋಸ್ಟರ್ ಮೂಲಕ ಎಲ್ಲರ ಗಮನಕ್ಕೆ ತಂದಿದ್ದೇವೆ. ಈ ಆರೋಪಗಳಿಗೆ ಉತ್ತರ ಕೊಡಬೇಕಾದವರು ಬಿಜೆಪಿಯವರು. ಆದರೆ ಚರ್ಚೆ ಮಾಡಲು ಬಿಜೆಪಿಯವರು ಹೆದರುತ್ತಿದ್ದಾರೆ’ ಎಂದಿದ್ದರು.

ಪೋಸ್ಟರ್​ ವಿಚಾರವಾಗಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ನಾಯಕ ಸಿ.ಟಿ.ರವಿ, ‘ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್‌ ಟೂಲ್‌ ಕಿಟ್ ತಯಾರು ಮಾಡಿದೆ. 40 ಪರ್ಸೆಂಟ್ ಸರ್ಕಾರ ಎಂದು ಮೂರ್ನಾಲ್ಕು ತಿಂಗಳಿನಿಂದ ಹೇಳುತ್ತಿರುವ ಕಾಂಗ್ರೆಸ್​ ಸಾಕ್ಷಿ ಸಮೇತ ಒಂದಾದರೂ ದೂರು ಕೊಟ್ಟಿಲ್ಲ. ಈಗ ಲೋಕಾಯುಕ್ತ ಸನ್ನದ್ಧವಾಗಿದೆ. ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯ ಮಾಡಲು ಅವರು ಪ್ರಯತ್ನಿಸುತ್ತಿದ್ದಾರೆ’ ಎಂದು ರವಿ ವಾಗ್ದಾಳಿ ನಡೆಸಿದ್ದರು.

ಬೆಂಗಳೂರಿನ ಕ್ವೀನ್ಸ್​ ರೋಡ್, ಜಯಮಹಲ್, ಕಂಟೋನ್​ಮೆಂಟ್ ಸುತ್ತಮುತ್ತ ಗೋಡೆಗಳಿಗೆ ಅಂಟಿಸಿದ್ದ ‘ಪೇಸಿಎಂ’ ಪೋಸ್ಟರ್​ಗಳನ್ನು ಬಿಜೆಪಿ ಕಾರ್ಯಕರ್ತರು ತೆರವುಗೊಳಿಸಿದ್ದರು. ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಭಿಯಾನದ ಕುರಿತು ಪ್ರತಿಕ್ರಿಯಿಸಿ, ‘ಹೈಗ್ರೌಂಡ್ಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದಿದ್ದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.