ಹುಬ್ಬಳ್ಳಿ: ಸ್ವಾತಂತ್ರ್ಯ ಪಡೆದು 74 ವರ್ಷ ಆಯ್ತು. ಇನ್ನೂ ಅದೆಷ್ಟೋ ಕಡೆ ಕಡು ಬಡವರಿಗೆ, ಕೊಳಗೇರಿಯಲ್ಲಿ ಪ್ರತಿ ನಿತ್ಯದ ಜೀವನಕ್ಕೆ ಹೋರಾಡುತ್ತಿರುವವರಿಗೆ ಸೂರು ಇಲ್ಲ. ಅನ್ನ, ಆಹಾರಕ್ಕೂ ಪರದಾಡುವ ಸ್ಥಿತಿ ಇದೆ. ಇದೊಂದು ರೀತಿಯಲ್ಲಿ ನಿಚಿಕೆಗೇಡಿನ ಸಂಗತಿ. ಬಟ್, ಮತ್ತೊಂದೆಡೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವಿರುದ್ಧ ಮಹಾನ್ ಹಗರಣವೊಂದರ ಆರೋಪ ಸ್ಫೋಟವಾಗಿದೆ. ಅದೇನು ಒಂದೆರಡು ಕೋಟಿ ಹಣಗರವಲ್ಲ, ಬರೋಬ್ಬರಿ 6535 ಕೋಟಿ ರೂಪಾಯಿ ಯೋಜನೆಯ ಭ್ರಷ್ಟಾಚಾರದ ಆರೋಪ.
ಕೊಳಗೇರಿಯಲ್ಲಿ ವಾಸಿಸುವ, ತುತ್ತು ಅನ್ನಕ್ಕೂ ಪರದಾಡುತ್ತಿರುವ ಕಡು ಬಡವರಿಗೆ ಸೂರು ಕಲ್ಪಿಸಬೇಕು. ಅವರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಂಡಬೇಕು. ಆ ಮೂಲಕ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು. ಸ್ವಾತಂತ್ರ್ಯ ಬಂದು 75 ವರ್ಷವಾದ್ರೂ ದೇಶದಲ್ಲಿ ಇನ್ನೂ ಕಡು ಬಡತನ ಹೋಗಿಲ್ಲ, ಜನರಿಗೆ ಸೂಕ್ತ ಆಶ್ರಯ ಸಿಕ್ಕಿಲ್ಲ ಅಂದ್ರೆ ಏನು ಅರ್ಥ. ಈ ನಿಟ್ಟಿನಲ್ಲಿ ಫಲಾನುಭವಿಗಳನ್ನು ಹುಡುಕಿ ಸೌಲಭ್ಯವನ್ನು ದೊರಕಿಸಿಕೊಡುವ ಕೆಲಸ ಮಾಡಬೇಕು. ಆದ್ರೆ, ಇಲ್ಲಿ ಆಗ್ತಾ ಇರೋದು ಏನು? ಆಶ್ರಯ ಕಲ್ಪಿಸುವ ಕೆಲಸದಲ್ಲಿಯೂ ಭ್ರಷ್ಟಾಚಾರ. ಹೌದು, ಇದು ಕರ್ನಾಟಕದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೇಲೆ ಕೇಳಿ ಬಂದಿರೋ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ. ಅಷ್ಟಕ್ಕೂ ಅದೇನು ಭ್ರಷ್ಟಾಚಾರ ಅನ್ನೋದನ್ನು ಎಳೆ ಎಳೆಯಾಗಿ ನ್ಯೂಸ್ ಫಸ್ಟ್ ತೆರೆದಿಡುತ್ತಿದೆ ನೋಡಿ.
ಭ್ರಷ್ಟಾಚಾರ ಏನು?
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಹಗರಣ
ಸೂರಿಲ್ಲದವರಿಗೆ ಸೂರು ಕಲ್ಪಿಸುವ ಜವಾಬ್ದಾರಿ ಹೊಂದಿರೋ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ನಡೆದಿರೋ ಹಗರಣ ಇದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದೆ. ಅದೇನು ಒಂದೆರಡು ಕೋಟಿ ರೂಪಾಯಿ ಹಗರಣದ ಆರೋಪವಲ್ಲ ಬರೋಬ್ಬರಿ ₹6,535 ಕೋಟಿ ಯೋಜನೆಯ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ. ಹೌದು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ರೂಲ್ಸ್ಗಳು ಬ್ರೇಕ್ ಮಾಡಿ ಮನೆಕಟ್ಟಲು ಕೆಎಸ್ಡಿಬಿ ಮುಂದಾಗಿದೆ.
ಯೆಸ್, ಇಂತಹವೊಂದು ಮಹಾನ್ ಭ್ರಷ್ಟಾಚಾರದ ಆರೋಪವನ್ನು ಹೊರತೆಗೆದಿರೋದು ಸಾಮಾಜಿಕ ಕಾರ್ಯಕರ್ತ ಹೊನ್ನಪ್ಪ ಎಂಬುವವರು. ಭ್ರಷ್ಟಾಚಾರ ಹೇಗೆ ನಡೆಯುತ್ತಿದೆ. ಹಣ ಹೊಡೆಯಲು ಯಾವ ರೀತಿ ಪ್ಲಾನ್ ಮಾಡಿಕೊಳ್ಳಲಾಗಿದೆ. ಅದರ ಮಾಸ್ಟರ್ಮೈಂಡ್ ಯಾರು ಅನ್ನೋದನ್ನು ಅವರು ತೆರದಿಟ್ಟಿದ್ದಾರೆ.
ಫಲಾನುಭವಿಗಳು ಎಲ್ಲಿ?
ಇಲ್ಲೇ ಇರೋದು ನೋಡಿ ಭ್ರಷ್ಟಾಚಾರದ ಮೂಲ. ಮನೆಕಟ್ಟಲು ಯೋಜನೆ ಅನುಷ್ಠಾನ ಮಾಡುವುದಕ್ಕೂ ಮುನ್ನ ಫಲಾನುಭವಿಗಳ ಆಯ್ಕೆ ನಡೆಯಬೇಕು. ಅನಂತರ ಅಷ್ಟೇ ಟೆಂಡರ್ ಕರೆಯಬೇಕು. ಆದ್ರೆ, ಇಲ್ಲಿ ಫಲಾನುಭವಿಗಳು ಇಲ್ಲದೇ 97,134 ಸಾವಿರ ಮನೆ ಕಟ್ಟಲು ತಯಾರಿಯನ್ನು ಕೆಎಸ್ಬಿಡಿ ಮಾಡಿಕೊಂಡಿದೆ. ಈ ಬಗ್ಗೆ 2020ರ ಆಗಸ್ಟ್ 17 ರಂದು ಟೆಂಡರ್ ಕರೆಯಲಾಗಿತ್ತು. ಮತ್ತೊಂದು ವಿಶೇಷ ಅಂದ್ರೆ ಅದರಲ್ಲಿ 28,089 ಮನೆಗಳ ಟೆಂಡರ್ಗೆ ಸರ್ಕಾರದ ಅನುಮೋದನೆಯೇ ಇಲ್ಲದಿರೋದು ಕಂಡುಬಂದಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಭ್ರಷ್ಟಾಚಾರಕ್ಕೆ ಶ್ರೀಕಾರ ಹಾಕಿದ್ದು ಇಲ್ಲಿಯೇ, ಆರಂಭದಲ್ಲಿಯೇ ನಿಯಮಗಳನ್ನು ಬ್ರೇಕ್ ಮಾಡಿ ಮನೆಗಳನ್ನು ಕಟ್ಟಲು ಮುಂದಾಗಿದೆ. ಫಲಾನುಭವಿಗಳನ್ನು ಹುಡುಕಿ ಅವರ ಅಂಕಿ ಸಂಖ್ಯೆಯನ್ನು ತೆಗೆದುಕೊಂಡು ಅನಂತರ ಕಾಮಗಾರಿಗೆ ಟೆಂಡರ್ ಕರೆಯುವುದು ನಿಯಮ. ಈ ನಿಯಮವನ್ನು ಸಂಪೂರ್ಣವಾಗಿ ತಳ್ಳಿ ಹಾಕಿಲಾಗಿದೆ ಅನ್ನೋ ಆರೋವಿದೆ.
ಏನಿದು ಯೋಜನೆ?
- ವಸತಿ ರಹಿತರಿಗೆ ಮನೆ ಕಲ್ಪಿಸೋ ಮಹತ್ವಾಕಾಂಕ್ಷಿ ಯೋಜನೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 97,134 ಮನೆ ನಿರ್ಮಾಣ
- ಕೇಂದ್ರ, ರಾಜ್ಯ, ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮನೆ ನಿರ್ಮಾಣ
- ಹೌಸಿಂಗ್ ಫಾರ್ ಆಲ್ ಅನ್ನೋ ಉದ್ದೇಶದಡಿ ಎಲ್ಲರಿಗೂ ವಸತಿ ಸೌಲಭ್ಯ
ಭ್ರಷ್ಟಾಚಾರದ ಆರೋಪವನ್ನು ಹೊತ್ತಿರೋ ಈ ಯೋಜನೆ ಏನು ಅನ್ನೋದನ್ನು ನೋಡೋದಾದ್ರೆ, ಇದೊಂದು ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮಹತ್ವಕಾಂಕ್ಷಿ ಯೋಜನೆಯಾಗಿದೆ. ಪ್ರಧಾನಿ ಆವಾಸ್ ಯೋಜನೆ ಅಡಿ 6535 ಕೋಟಿ ರೂಪಾಯಿ ವೆಚ್ಚದಲ್ಲಿ 97,134 ಮನೆ ನಿರ್ಮಾಣಕ್ಕೆ ಪ್ಲಾನ್ ಹಾಕಿಕೊಂಡು ಟೆಂಡರ್ ಕರೆಯಲಾಗಿದೆ. ಇದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾಗುವ ಯೋಜನೆ. ಹೌಸಿಂಗ್ ಫಾರ್ ಆಲ್ ಅನ್ನೋ ಉದ್ದೇಶದಡಿ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.
ಇಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಫಲಾನುಭವಿಗಳನ್ನು ಯಾಕೆ ಹುಡುಕಿಲ್ಲ. ಒಮ್ಮೆ ಭ್ರಷ್ಟಾಚಾರ ಉದ್ದೇಶ ಇಲ್ಲದಿಂದ್ರೆ ನಿಯಮ ಏನು ಇದೆಯೋ ಅದನ್ನು ಫಾಲೋ ಮಾಡಬೇಕಿತ್ತು. ಹಾಗಂತ ಫಲಾನುಭವಿಗಳ ಆಯ್ಕೆ ಇಲ್ಲದೇ ಟೆಂಡರ್ ಕರೆದಿದ್ದು ಅಷ್ಟೇ ಅಲ್ಲ, ಇನ್ನು ಹಲವಾರು ನಿಯಮಗಳನ್ನು ಬೇಕಾಬಿಟ್ಟಿಯಾಗಿ ಗಾಳಿಗೆ ತೂರಲಾಗಿದೆ.
ಟೆಂಡರ್ ಕರೆದಿದ್ದೇ ಕಳ್ಳಾಟ!
- ಕೆಟಿಟಿಪಿ ಆ್ಯಕ್ಟ್ ಪ್ರಕಾರ ಕಾಮಗಾರಿಗಳನ್ನು ಕೆಟಗರಿ ಮಾಡಲಾಗುತ್ತದೆ
- ₹10 ಕೋಟಿವರೆಗಿನ ಕಾಮಗಾರಿಗೆ ಕೆಡಬ್ಲೂ-4 ಕೆಟಗರಿಯಲ್ಲಿ ಟೆಂಡರ್
- ₹10 ಕೋಟಿ ನಂತರದ ಕಾಮಗಾರಿಗಳಿಗೆ ಕೆಡಬ್ಲೂ-5 ಅಥವಾ ಕೆಡಬ್ಲೂ-6
- ₹6,535 ಕೋಟಿ ಯೋಜನೆ ಆಗಿರೋದ್ರಿಂದ ಕೆಡಬ್ಲೂ-5, ಕೆಡಬ್ಲೂ-6 ರಲ್ಲಿ ಟೆಂಡರ್ಕೆ
- ಡಬ್ಲೂ-4 ಕೆಟಗರಿಯಲ್ಲಿ ಟೆಂಡರ್ ಕರೆದು ಕೆಟಿಟಿಪಿ ಕಾಯ್ದೆ ಉಲ್ಲಂಘನೆ
ಹಂತ ಹಂತದಲ್ಲಿ ನಿಯಮಗಳನ್ನು ಬ್ರೇಕ್ ಮಾಡಲಾಗಿದೆ. ಕೆಟಿಟಿಪಿ ಆ್ಯಕ್ಟ್ ಪ್ರಕಾರ ಕಾಮಗಾರಿಗಳನ್ನು ಕೆಟಗರಿ ಮಾಡಲಾಗುತ್ತದೆ. ಅದರಲ್ಲಿ ₹10 ಕೋಟಿ ಒಳಗಿನ ಕಾಮಗಾರಿಯನ್ನು ಕೆಡಬ್ಲೂ-4 ಕೆಟಗರಿಯಲ್ಲಿ ಟೆಂಡರ್ ಕರೆಯಬೇಕು. ಹಾಗೇ, ₹10 ಕೋಟಿ ಮೇಲಿನ ಕಾಮಗಾರಿಯಾಗಿದ್ರೆ ಕೆಡಬ್ಲೂ-5 ಅಥವಾ ಕೆಡಬ್ಲೂ-6 ನಲ್ಲಿ ಟೆಂಡರ್ ಕರೆಯಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 6,535 ಕೋಟಿ ರೂಪಾಯಿ ಯೋಜನೆ ಆಗಿರೋದ್ರಿಂದ ಕೆಡಬ್ಲೂ-5 ಅಥವಾ ಕೆಡಬ್ಲೂ-6 ಕೆಟಗರಿಯಲ್ಲಿ ಟೆಂಡರ್ ಕರೆಯಬೇಕು. ಆದ್ರೆ, ಕೆಡಬ್ಲೂ-4 ಕೆಟಗರಿಯಲ್ಲಿ ಟೆಂಡರ್ ಕರೆದು ಕೆಟಿಟಿಪಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ.
ಹೌದು, ಆರಂಭದಲ್ಲಿ ಫಲಾನುಭವಿಗಳನ್ನು ಗೊತ್ತು ಮಾಡದೇ ಟೆಂಡರ್ ಕರೆದಿದ್ದು ಅಲ್ಲದೇ ಆ ಟೆಂಡರ್ ಪ್ರಕ್ರಿಯೆಯಲ್ಲಿಯೂ ಅಕ್ರಮದ ವಾಸನೆ ಸುಳಿಯುತ್ತಿದೆ. ಅಲ್ಲಿ ಪಾಲಿಸಬೇಕಾದ ನಿಯಮವನ್ನು ಪಾಲಿಸಿಲ್ಲ. ಪ್ರತಿ ಹಂತದಲ್ಲಿಯೂ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ವಿಶೇಷ ಅಂದ್ರೆ ಕೆಡಬ್ಲೂ-4 ಕೆಟಗರಿಯಲ್ಲಿ ಟೆಂಡರ್ ಕರೆದಿದ್ದೇ ತಪ್ಪು. ಮತ್ತೊಂದು ವಿಶೇಷ ಅಂದ್ರೆ ಕೆಡಬ್ಲೂ-4 ರಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ.
ಕೆಡಬ್ಲೂ-4ರಲ್ಲಿ ಉಲ್ಲಂಘನೆ
ಕೆಡಬ್ಲೂ-4 ಕೆಟಗೆರೆಯಲ್ಲಿ ಟೆಂಡರ್ ಕರೆದಿರೋದೇ ತಪ್ಪು. ಅಂತಹದ್ರಲ್ಲಿ ಕೆಡಬ್ಲೂ-4 ರಲ್ಲಿಯೂ ನಿಯಮ ಉಲ್ಲಂಘನೆಯಾಗಿದೆ. ಹೌದು, ಕೆಡಬ್ಲೂ-4 ರಲ್ಲಿ ₹2 ಕೋಟಿವರೆಗಿನ ಕಾಮಗಾರಿಗೆ 1 ತಿಂಗಳು ಅವಧಿ ನಿಗದಿಗೊಳಿಸಬೇಕು. ಇನ್ನು ₹2 ಕೋಟಿಗಿಂತ ಹೆಚ್ಚಿನ ಕಾಮಗಾರಿಗೆ ಟೆಂಡರ್ ಅವಧಿ 2 ತಿಂಗಳಿಗೆ ನಿಗದಿಗೊಳಿಸಬೇಕು. ಆದ್ರೆ, ಕೆಎಸ್ಡಿಬಿ 10 ಹಾಗೂ 14 ದಿನಗಳ ಅವಧಿಗಷ್ಟೇ ಸೀಮಿತಗೊಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾಗಿಳ ಒಪ್ಪಿಗೆಯನ್ನು ಪಡೆದಿಲ್ಲ ಅನ್ನೋದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಟೆಂಡರ್ ಅವಧಿಯನ್ನು ಕಡಿತ ಮಾಡ್ಬೇಕು ಅಂದ್ರೆ, ಅಂತಹ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ವಾಗಿದ್ರೆ, ಅಂತಹ ಸಮಯದಲ್ಲಿ ಮೇಲಧಿಕಾರಿಗಳ ಒಪ್ಪಿಗೆ ಪಡೆದುಕೊಳ್ಳಬೇಕು. ಆದರೆ ಈ ಪ್ರಕರಣದಲ್ಲಿ ಇದರ ಸ್ಪಷ್ಟ ಉಲ್ಲಂಘನೆಯಾಗಿದೆ.
87 ಏಜೆನ್ಸಿಗಳ ಜೊತೆಗೆ ನಡೆದಿತ್ತಾ ಫಿಕ್ಸಿಂಗ್?
ಟೆಂಡರ್ ನಿಯಮಗಳನ್ನು ಉಲ್ಲಂಘಿಸಿದ್ದು ಯಾಕೆ?
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಾಡಳಿ ಮೇಲಿರೋ ಭ್ರಷ್ಟಾಚಾರ ಆರೋಪ ಬಗೆದಷ್ಟು ಹೊರಬರುತ್ತಲೇ ಇದೆ. ಹೌದು, ಟೆಂಡರ್ದಾರರನ್ನ ಮೊದಲೇ ಫಿಕ್ಸಿಂಗ್ ಮಾಡಿದ್ದಾರೆ ಅನ್ನೋ ಅನುಮಾವೂ ವ್ಯಕ್ತವಾಗಿದೆ. ಯಾಕೆಂದ್ರೆ, ಟೆಂಡರ್ ಕರೆಯುವುದಕ್ಕಿಂತ ಮೊದಲೇ 87 ಎಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಏಜೆನ್ಸಿಗಳಿಗೆ ಟೆಂಡರ್ ನೀಡಲು ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೌದು, ಟೆಂಡರ್ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಗುತ್ತಿಗೆದಾರರ 2 ವರ್ಷದ ವಾರ್ಷಿಕ ಹಣಕಾಸು ವಹಿವಾಟು ಸಾಮರ್ಥ್ಯ, 5 ವರ್ಷದ ಬ್ಲಾಕ್ ಅವಧಿಯ ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ದಾಖಲಾತಿ ನೀಡಿದ ಸಂಸ್ಥೆಯ ಯುಡಿಐಎನ್ ನಂಬರ್ ಪಡೆದುಕೊಂಡಿಲ್ಲ. ಭಾಗವಹಿಸಿದ ಗುತ್ತಿಗೆದಾರರು ಕಾಮಗಾರಿಗಳಿಗೆ ಬೇಕಾಗುವ ಯಂತ್ರೋಪಕರಣ, ಸಾಮಾಗ್ರಿ ಸಲಕರಣೆಗಳ ಕುರಿತು ಪ್ರಮಾಣ ಪತ್ರ ನೀಡಿದ ಸಂಸ್ಥೆಯ ದೃಢೀಕರಣ ಪಡೆದುಕೊಂಡಿಲ್ಲ. ಲೈಸನ್ಸ್, ಇಎಸ್ಐ, ಇಪಿಎಫ್ ನೋಂದಣಿ ಪ್ರಮಾಣಪತ್ರವನ್ನೂ ಪಡೆದುಕೊಂಡಿಲ್ಲ ಅನ್ನೋ ಆರೋಪವೂ ಇದೆ.
ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಾದವರೇ ಬ್ರಡ್ಮಾಂಡ ಭ್ರಷ್ಟಾಚಾರಕ್ಕೆ ಶ್ರೀಕಾರ ಹಾಕಿಕೊಂಡಿರುವುದು ದುರಂತ. ಇಲ್ಲಿಯವರೆಗೆ ಆರಂಭಿಕ ಹಂತದ ರೂಲ್ಸ್ ಬ್ರೇಕ್ಗಳನ್ನು ಮಾತ್ರ ನೋಡಿದ್ದೀರಿ. ಆದ್ರೆ, ಇಷ್ಟೇ ಅಲ್ಲ, ಇನ್ನೂ ಎಂಥೆಂಥಾ ಮೋಸ ನಡೆದಿದೆ.
ವಿಶೇಷ ವರದಿ: ಪ್ರಕಾಶ್ ನೂಲ್ವಿ. ಸ್ಪೆಷಲ್ ಕರೆಸ್ಪಾಂಡೆಂಟ್ ನ್ಯೂಸ್ಫಸ್ಟ್.